ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸ್ಸೆಂಬ ಹೂವು

Last Updated 17 ಜನವರಿ 2018, 19:30 IST
ಅಕ್ಷರ ಗಾತ್ರ

ಆಚಾರ್ಯ ಶಂಕರರ ಹೆಸರಿನಲ್ಲಿರುವ ಸ್ತೋತ್ರಗುಚ್ಛದಲ್ಲಿ ‘ಶಿವಾನಂದಲಹರಿ’ಯೂ ಒಂದು. ನೂರು ಶ್ಲೋಕಗಳಲ್ಲಿ ಶಿವನನ್ನು ಸ್ತುತಿಸಲಾಗಿದೆ. ಭಕ್ತಿಕಾವ್ಯದಲ್ಲಿ ಶಿವಾನಂದಲಹರಿ ಅನನ್ಯಸ್ಥಾನವನ್ನು ಪಡೆದಿದೆ. ಅದರ ಒಂದು ಪದ್ಯ ಹೀಗಿದೆ:

ಗಭೀರೇ ಕಾಸಾರೇ ವಿಶತಿ ವಿಜನೇ ಘೋರವಿಪಿನೇ
ವಿಶಾಲೇ ಶೈಲೇ ಚ ಭ್ರಮತಿ ಕುಸುಮಾರ್ಥಂ ಜಡಮತಿಃ |
ಸಮರ್ಪ್ಯೈಕಂ ಚೇತಃ ಸರಸಿಜಮುಮಾನಾಥ ಭವತೋ
ಸುಖೇನಾವಸ್ಥಾತುಂ ಜನ ಇಹ ನ ಜಾನಾತಿ ಕಿಮಹೋ ||

‘ನಿನ್ನ ಪೂಜೆಗೆ ಹೂವನ್ನು ತರಲು ಆಳವಾದ ಸರೋವರವನ್ನೋ ನಿರ್ಜನವಾದ ಕಾಡನ್ನೋ ವಿಶಾಲವಾದ ಬೆಟ್ಟವನ್ನೋ ಹೊಕ್ಕು ತಿಳಿಗೇಡಿಗಳು ಅಲೆಯುತ್ತಾರೆ. ಎಲೈ, ಪಾರ್ವತೀಪತಿಯೇ! ಅಂಥವರಿಗೆ ತಮ್ಮ ಮನಸ್ಸು ಎಂಬ ಅದ್ವಿತೀಯವಾದ ಕಮಲವನ್ನು ನಿನಗೆ ಸಮರ್ಪಿಸಿ ಸುಖವಾಗಿರಲು ತಿಳಿಯುವುದಿಲ್ಲವಲ್ಲ, ಎಂಥ ಆಶ್ಚರ್ಯವಿದು!!’ ಇದು ಮೇಲಣ ಪದ್ಯದ ಸಾರಾಂಶ.

ನಿಜವಾದ ಭಕ್ತಿಗೆ ಬೇಕಾದ ಅರ್ಹತೆಯ ಬಗ್ಗೆ ಈ ಪದ್ಯ ಮಾತನಾಡುತ್ತಿದೆ. ದೇವರಿಗೂ ನಮಗೂ ಏರ್ಪಡುವ ಭಾವತಾದಾತ್ಮ್ಯವನ್ನೇ ಭಕ್ತಿ ಎಂದು ಕರೆಯಲಾದೀತು. ನಮ್ಮಲ್ಲಿ ಯಾವುದಾದರೊಂದು ವಸ್ತು ಅಥವಾ ವ್ಯಕ್ತಿಯ ಬಗ್ಗೆ ಭಾವನೆಯೊಂದು ಮೂಡಬೇಕಾದರೆ ಆ ವಸ್ತು/ವ್ಯಕ್ತಿಯ ಭೌತಿಕ ಅಸ್ತಿತ್ವ ಮುಖ್ಯವಾಗುತ್ತದೆ. ನಮ್ಮ ಕಣ್ಣೆದುರಿಗೆ ಇರುವ ವಸ್ತುವನ್ನು ಇಷ್ಟಪಡಬಹುದು; ಅಂತೆಯೇ ನಮ್ಮ ಕಣ್ಣಳತೆಯಲ್ಲಿರುವವರನ್ನು ಪ್ರೀತಿಸಬಹುದು, ದ್ವೇಷಿಸಬಹುದು. ಒಟ್ಟಿನಲ್ಲಿ ಹೇಳುವುದಾದರೆ, ಯಾರನ್ನು ನಮ್ಮ ಕಣ್ಣು ನೋಡಿರುತ್ತದೆಯೋ ಅಂಥವರನ್ನಷ್ಟೇ ನಮ್ಮ ಮನಸ್ಸು ಕೂಡ ಮುಟ್ಟಬಲ್ಲದ್ದು.

ಹೀಗಾಗಿ ದೇವರ ಬಗ್ಗೆ ಭಕ್ತಿಭಾವ ಮೂಡಬೇಕಾದರೆ ನಾವು ‘ಅವನ’ ಇರವನ್ನು ನಮ್ಮ ಕಣ್ಣಿಂದ ಕಂಡಿರಬೇಕು. ಆಗ ಮಾತ್ರವೇ ಅವನ ಬಗ್ಗೆ ಭಾವನೆಯೊಂದು ಮೂಡಲು ಸಾಧ್ಯವಾಗುವುದು. ಎಂದರೆ ಭಕ್ತಿಯ ಬಗ್ಗೆ ಮಾತನಾಡುವವರು, ಭಕ್ತಿಯ ಆಚರಣೆಯಲ್ಲಿರುವವರು ದೇವರನ್ನು ಕಂಡಿದ್ದಾರೆ ಎಂದಾಗುತ್ತದೆಯಲ್ಲವೆ? ಹಾಗಾದರೆ ನಾವು ದೇವರನ್ನು ಕಂಡಿದ್ದೇವೆಯೆ? ಈ ಪ್ರಶ್ನೆಗೆ ಉತ್ತರ ಸುಲಭವಲ್ಲ. ನಮ್ಮ ದೃಷ್ಟಿಯಲ್ಲಿ ‘ದೇವರು’ ಎಂದರೆ ಏನು? ಯಾರು? ಈ ಪ್ರಶ್ನೆಗೆ ಉತ್ತರ ಸ್ಪಷ್ಟವಾಗದ ಹೊರತು ಆ ಪ್ರಶ್ನೆಗೆ ಉತ್ತರ ಲಭಿಸದು.

ನಮಗಿಂತಲೂ ಹೆಚ್ಚು ಶಕ್ತನೂ ಜಗತ್ತನ್ನು ಸೃಷ್ಟಿಸಿದವನೂ ಎಲ್ಲೆಲ್ಲೂ ಇರುವವನೂ ಎಂದೆಂದಿಗೂ ಉಳಿದಿರುವವನೂ ಯಾವನೋ ಅವನೇ ದೇವರು – ಎನ್ನುವುದು ದೇವರನ್ನು ಕುರಿತಂತೆ ನಮ್ಮೆಲ್ಲರ ಸಹಜ ಕಲ್ಪನೆ. ಹೌದು ತಾನೆ? ಇಲ್ಲಿ ದೇವರನ್ನು ‘ಗಂಡು’ ಎಂದಷ್ಟೆ ಕಲ್ಪಿಸಿಕೊಳ್ಳುತ್ತಿದ್ದೇವೆ ಎಂದೇನಲ್ಲ; ಸ್ತ್ರೀರೂಪದಲ್ಲೂ ದೈವವನ್ನು ಪರಿಭಾವಿಸಿಕೊಂಡಿದ್ದೇವೆಯೆನ್ನಿ. ಹೀಗಿದ್ದರೂ ನಾವು ದೇವರನ್ನು ನೇರವಾಗಿ, ಹೊರಗೆ ಮರವನ್ನೋ ಪರ್ವತವನ್ನೋ ಮನುಷ್ಯನನ್ನೋ ಪ್ರಾಣಿಯನ್ನೋ ನೋಡಿದಂತೆ, ನಮ್ಮ ಹೊರಗಿನ ಕಣ್ಣಿಗೆ ಕಾಣಲಾಗುತ್ತಿಲ್ಲ ಎನ್ನುವುದು ಸುಳ್ಳಲ್ಲ. ಹಾಗಾದರೆ ನಮ್ಮ ಭಕ್ತಿಯ ಪಾಡೇನು? ಶಂಕರಾಚಾರ್ಯರು ಇದೇ ಪ್ರಶ್ನೆಯನ್ನು ಬೇರೊಂದು ರೀತಿಯಲ್ಲಿ ಕೇಳುತ್ತಿದ್ದಾರೆ ಎನಿಸುತ್ತದೆ.

ನಮ್ಮ ಕಲ್ಪನೆಯಲ್ಲಿ ಸೃಷ್ಟಿಸಿಕೊಂಡಿರುವ ದೇವರನ್ನು ಸಂತೋಷ ಪಡಿಸಲು ನೂರೆಂಟು ದಾರಿಗಳನ್ನು ಕೂಡ ನಾವೇ ಕಂಡುಕೊಂಡಿದ್ದೇವೆ. ಈ ವಿಧಿ–ವಿಧಾನಗಳಿಗೂ ಹತ್ತಾರು ಹೆಸರುಗಳನ್ನು ಕೊಟ್ಟಿದ್ದೇವೆ. ಅಂಥದ್ದರಲ್ಲಿ ಒಂದು ಪೂಜೆ; ಅದಕ್ಕೆ ಮುಖ್ಯವಾಗಿ ಬೇಕಾಗಿರುವುದು ಹೂವು. ಇದಕ್ಕಾಗಿ ನಾವು ಎಲ್ಲೆಲ್ಲೋ ಅಲೆಯುತ್ತೇವೆ – ನದಿ, ಪರ್ವತ, ಕಾಡು – ಹೀಗೆ ಸಂಗ್ರಹಿಸಿ ‘ದೇವರ’ ವಿಗ್ರಹಕ್ಕೆ ಅರ್ಪಿಸಿ, ಆ ಮೂಲಕ ಅವನಿಗೆ ಸಂತೋಷವಾಯಿತು ಎಂದು ಸಂಭ್ರಮಿಸುತ್ತೇವೆ. ಆದರೆ ನಾವಿಲ್ಲಿ ಒಂದು ಮುಖ್ಯವಾದ ಸಂಗತಿಯನ್ನೇ ಮರೆತುಬಿಡುತ್ತೇವೆ.

ಯಾವುದೋ ಹೊರಗಿನ ವಸ್ತುಗಳನ್ನು ಶ್ರಮದಿಂದ ತಂದು ಅವನ್ನು ದೇವರಿಗೆ ಅರ್ಪಿಸುತ್ತಿದ್ದೇವೆ, ದಿಟ. ಆದರೆ ಆ ವಸ್ತುಗಳು ನಿಜವಾಗಿಯೂ ನಮಗೆ ಸೇರಿದಂಥವೇ? ಈ ಪ್ರಶ್ನೆಯನ್ನು ನಾವು ಕೇಳಿಕೊಳ್ಳುತ್ತಿದ್ದೇವೆಯೆ? ವಾಸ್ತವವಾಗಿ ಈ ವಸ್ತುಗಳನ್ನು ಮಾಡಿರುವವರು ನಾವಲ್ಲ. ಎಂದರೆ ಅವು ದಿಟವಾಗಿ ನಮಗೆ ಸೇರಿದಂಥವು ಅಲ್ಲ. ನಮಗೆ ಸೇರದ ವಸ್ತುಗಳನ್ನು, ನಮ್ಮದೆಂದು ಭಾವಿಸುವುದೇ ಮೊದಲನೆಯ ತಪ್ಪು. ಹೀಗೆಂದುಕೊಳ್ಳುವುದು ಕಳ್ಳತನವೇ ಆಗುತ್ತದೆಯೆನ್ನಿ! ಕಳ್ಳಮಾಲುಗಳಿಂದ ದೇವರನ್ನು ಪೂಜಿಸಿದರೆ ಅವನು ಪ್ರಸನ್ನನಾಗುತ್ತಾನೆಯೆ?

ಹಾಗಾದರೆ ನಾವು ದೇವರನ್ನು ನಿಜವಾಗಿ ಪೂಜಿಸುವ ವಿಧಾನ ಹೇಗೆ? ಉತ್ತರ ಸುಲಭ. ನಮಗೆ ಸೇರಿದ ವಸ್ತುವನ್ನು ಅವನಿಗೆ ಸಮರ್ಪಿಸಬೇಕು. ನಮ್ಮ ಮನಸ್ಸು ನಮಗೆ ಸೇರಿದ ವಸ್ತು. ಅದನ್ನು ದೇವರಿಗೆ ಅರ್ಪಿಸುವುದೇ ದಿಟವಾದ ಪೂಜೆ. ನಮ್ಮ ಮನಸ್ಸೇ ದೇವರ ಅರ್ಚನೆಗೆ ಒದಗುವ ನಿಜಪುಷ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT