ನೋಡಿದ ತಕ್ಷಣ ಇಷ್ಟವಾಗಬೇಕು...

7

ನೋಡಿದ ತಕ್ಷಣ ಇಷ್ಟವಾಗಬೇಕು...

Published:
Updated:
ನೋಡಿದ ತಕ್ಷಣ ಇಷ್ಟವಾಗಬೇಕು...

‘ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆ ದಿನವೇ ನನ್ನ ಮದುವೆ. ದೇಶದಲ್ಲೇ ಅಲ್ಲೋಲ ಕಲ್ಲೋಲ. ಮನೆಯಿಂದ ಹೊರಗೆ ಯಾರೂ ಕಾಲಿಡುವಂತಿಲ್ಲ. ಮದುಮಗಳಿಗೆ ಮೇಕಪ್‌ ಮಾಡಲು ಗೊತ್ತು ಮಾಡಿದ್ದ ಬ್ಯೂಟಿಷಿಯನ್‌ ಬರಲೇ ಇಲ್ಲ. ಮುಖಕ್ಕೆ ಬರಿ ಪೌಡರ್‌, ತಲೆಗೆ ಹೂವಿನ ದಂಡೆ ಮುಡಿದುಕೊಂಡು ಮಂಟಪದಲ್ಲಿ ಕುಳಿತವಳಿಗೆ ಮದುವೆಗೆ ಚೆನ್ನಾಗಿ ಮೇಕಪ್‌ ಮಾಡಿಕೊಳ್ಳಲಾಗಲಿಲ್ಲವಲ್ಲ ಎಂಬ ಚಿಂತೆ. ಆಗಲೇ ಮನದಲ್ಲಿ ಬ್ಯೂಟಿಷಿಯನ್‌ ಆಗಲೇಬೇಕೆಂದು ನಿರ್ಧಾರ ಮಾಡಿದ್ದು...’ – ಇದು ಸೆಲೆಬ್ರಿಟಿ ಮೇಕಪ್‌ ಆರ್ಟಿಸ್ಟ್‌ ಮಂಗಳಾ ಬನ್ಸೋಡೆ ಅವರ ಕತೆ.

ಬಾಲ್ಯದಿಂದಲೇ ಸೌಂದರ್ಯದ ಬಗ್ಗೆ ವಿಪರೀತ ಕಾಳಜಿ ಹೊಂದಿದ್ದ ಮಂಗಳಾ ಅವರಿಗೆ ಮನೆಯಲ್ಲಿ ಬ್ಯೂಟಿಷಿಯನ್‌ ಕೋರ್ಸ್‌ ಮಾಡಲು ಅಪ್ಪ ಒಪ್ಪಿಗೆ ನೀಡಿರಲಿಲ್ಲ. ಆದರೆ ಮದುವೆಯಲ್ಲಿ ನಡೆದ ಸಂಗತಿಯಿಂದ ಬ್ಯೂಟಿಷಿಯನ್‌ ಆಗಲೇಬೇಕೆಂದು ನಿರ್ಧರಿಸಿ ಬಾಲಿವುಡ್‌ ಮೇಕಪ್‌ ಆರ್ಟಿಸ್ಟ್‌ ಬಾಬಾ ಮಿರ್‌ ಅವರ ಬಳಿ ಸಹಾಯಕಿಯಾಗಿ ಸೇರಿಕೊಂಡರು. ನಂತರ ‘ಬಾಲಿವುಡ್‌ ಕಿಂಗ್‌ ಆಫ್‌ ಮೇಕಪ್‌ಮನ್’ ಎಂದೇ ಹೆಸರುವಾಸಿಯಾದ, ಬಾಲಿವುಡ್‌ನ ಪ್ರಖ್ಯಾತ ನಟರಿಗೆ ಮೇಕಪ್‌ ಮಾಡಿರುವ ಪಂಡರಿದಾದ ಅವರಿಂದಲೂ ಮೇಕಪ್‌ ಬಗ್ಗೆ ಕಲಿತುಕೊಂಡರು.

18 ವರ್ಷಗಳಿಂದ ಈ ಕ್ಷೇತ್ರದಲ್ಲಿ ಅನುಭವ ಇರುವ ಮಂಗಳಾ ಅವರು, ನಟಿಯರಾದ ಶುಭಾಪೂಂಜ, ದೀಪಿಕಾ ದಾಸ್‌, ಪ್ರಿಯಾಮಣಿ, ಪ್ರೇಮಾ ಮೊದಲಾದವರಿಗೆ ಮೇಕಪ್‌ ಮಾಡಿದ್ದಾರೆ. ಕೆಲ ಸಿನಿಮಾಗಳ ಹಾಡುಗಳಲ್ಲಿ ಕೆಲಸ ಮಾಡಿರುವ ಅವರು ಕತ್ರಿಗುಪ್ಪೆಯಲ್ಲಿ ‘ಮಂಗಳಾ ಬನ್ಸೋಡೆ ಇಂಟರ್‌ ನ್ಯಾಷನಲ್ ಹೇರ್‌ ಆಂಡ್‌ ಬ್ಯೂಟಿಪಾರ್ಲರ್‌’ ನಡೆಸುತ್ತಿದ್ದಾರೆ.

ಮಂಗಳಾ ಬನ್ಸೋಡೆ ಅವರ ವೈಶಿಷ್ಟ್ಯವೆಂದರೆ ನಟಿಯರ ಫೋಟೊಶೂಟ್‌ ಥೀಮ್‌ಗಳಿಗೆ ತಕ್ಕಂತೆ ಅಲಂಕಾರ ಮಾಡುವುದು. ಸಾಮಾನ್ಯವಾಗಿ ನಟಿಯರು ತಮ್ಮ ಇಮೇಜ್‌ ಬದಲಾವಣೆಗಾಗಿ ಫೋಟೊಶೂಟ್‌ ಮೊರೆ ಹೋಗುತ್ತಾರೆ. ಬೋಲ್ಡ್‌ ಪಾತ್ರಗಳ ಮೂಲಕ ಮಿಂಚುತ್ತಿರುವ ಶುಭಾ ಪೂಂಜ ಇತ್ತೀಚೆಗೆ ಜರತಾರಿ ಸೀರೆ ಉಟ್ಟುಕೊಂಡು ಸಾಂಪ್ರದಾಯಿಕವಾಗಿ ಕಾಣಿಸಿಕೊಂಡಿದ್ದರು. ನಟಿ ದೀಪಿಕಾ ಹೂವಿನ ವಿನ್ಯಾಸದ ಬಟ್ಟೆ ಹಾಗೂ ಅಲಂಕಾರದಿಂದ ಗಮನಸೆಳೆದಿದ್ದರು. ಇವೆಲ್ಲವೂ ಮಂಗಳಾ ಕೈಚಳಕ.

ಮಂಗಳಾ ಅವರು ಫೋಟೊಶೂಟ್‌ಗಾಗಿ ನಟರನ್ನು ವೈಲ್ಡ್‌ ಹಾಗೂ ಸಾಫ್ಟ್‌ ಎನ್ನುವು ಎರಡು ಬಗೆಗಳಲ್ಲಿ ಸಿಂಗರಿಸಿ ಫೋಟೊಶೂಟ್‌ ಮಾಡಿಸುತ್ತಾರೆ. ಫೋಟೊಶೂಟ್‌ ಅಥವಾ ಸಿನಿಮಾಗಳಿಗೆ ವಸ್ತ್ರವಿನ್ಯಾಸವನ್ನೂ ಮಾಡುತ್ತಾರೆ. ಸದ್ಯದಲ್ಲಿ ನಟಿ ಸ್ನೇಹಾ ನಾಯರ್‌ ಫೋಟೊಶೂಟ್‌ಗೆ ತಯಾರಾಗುತ್ತಿದ್ದೇನೆ ಎನ್ನುತ್ತಾರೆ ಮಂಗಳಾ.

‘ಆಂತರಿಕ ಸೌಂದರ್ಯ ಮುಖ್ಯ ಎಂದು ಹೇಳಿದರೂ ಬಾಹ್ಯ ಸೌಂದರ್ಯವೇ ಮೊದಲ ಇಂಪ್ರೆಷನ್‌. ನೋಡಿದ ತಕ್ಷಣ ಜನರಿಗೆ ಇಷ್ಟವಾಗುವಂತೆ ಇರಬೇಕು. ಈಗ ಮೇಕಪ್‌ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚಾಗಿದೆ. ಗೃಹಿಣಿಯರೂ ಈಗ ಮೇಕಪ್‌ ಬಗ್ಗೆ ಒಲವು ತೋರಿಸುತ್ತಿದ್ದಾರೆ. ಮೇಕಪ್, ಸೌಂದರ್ಯದಿಂದ ನಮ್ಮ ಬಗ್ಗೆ ನಮ್ಮೊಳಗೆ ಪ್ರೀತಿ, ಗೌರವ ಜಾಸ್ತಿ ಆಗುತ್ತದೆ’ ಎಂಬ ವಿವರಣೆ ಮಂಗಳಾ ಅವರದು.

‘ಭಾರತದಲ್ಲಿ ಕಪ್ಪುಬಣ್ಣ ಶ್ರೇಷ್ಠ. ಆದರೆ ಸೌಂದರ್ಯದ ವಿಷಯಕ್ಕೆ ಬಂದರೆ ಕಪ್ಪುಬಣ್ಣದವರನ್ನು ಹೀಯಾಳಿಸುತ್ತಾರೆ. ನನ್ನ ಅನುಭವಕ್ಕೆ ಬಂದಂತೆ ಬೇರೆ ದೇಶದಲ್ಲಿ ಕಪ್ಪು ಆಗಬೇಕೆಂದೇ ಸಮುದ್ರದ ದಂಡೆಯಲ್ಲಿ ಅಡ್ಡಾಡುವವರಿದ್ದಾರೆ. ಕಪ್ಪು ಸೌಂದರ್ಯ ಅನ್ನುವವರಿದ್ದಾರೆ. ಮೇಕಪ್‌ ಮಾಡುವಾಗ ಕಪ್ಪು ಅಥವಾ ಗೋಧಿ ಬಣ್ಣದವರು ಮುಖ ಹೆಚ್ಚು ಬಿಳುಪು ಮಾಡಲು ಹೇಳುತ್ತಾರೆ. ಆಗ ಮುಖ ಹಾಗೂ ದೇಹದ ಬಣ್ಣಕ್ಕೆ ಒಂದಕ್ಕೊಂದು ಹೋಲಿಕೆ ಇರುವುದಿಲ್ಲ. ಇದನ್ನು ವಿವರಿಸಿ ಹೇಳಿದರೂ ಕೆಲವರು ಒಪ್ಪುವುದಿಲ್ಲ’ ಎಂದು ಸೌಂದರ್ಯ ಕುರಿತ ಮಿಥ್ಯೆಗಳನ್ನು ವಿವರಿಸುತ್ತಾರೆ.

ಮಂಗಳಾ ಅಂತರರಾಷ್ಟ್ರೀಯ ಮೇಕಪ್‌ ಟ್ರೆಂಡ್‌ಗಳನ್ನು ಅನುಕರಣೆ ಮಾಡಿ, ಅದನ್ನು ಭಾರತೀಯ ಸಂಸ್ಕೃತಿಗೆ ಮಾರ್ಪಾಡು ಮಾಡಿ ಕೊಳ್ಳುತ್ತಾರೆ. ರಿಸೆಪ್ಷನ್‌, ಪಾರ್ಟಿಗಳಲ್ಲಿ ಗ್ಲಾಮರಸ್‌ ಆಗಿ ಕಾಣಿಸುವಂತೆ ಅಲಂಕಾರಕ್ಕೆ ಗಮನ ನೀಡುತ್ತೇವೆ ಎನ್ನುತ್ತಾರೆ ಅವರು.

ಮಂಗಳಾ ಸಂಪರ್ಕಕ್ಕೆ ಮೊ 99006 14456

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry