ಅನಿಶ್ಚಿತ ಸ್ಥಿತಿಯಲ್ಲಿ ಸೇವಾ ಭವಿಷ್ಯ ಕೆ.ಎ.ಎಸ್‌ ಅಧಿಕಾರಿಗಳ ವಾದ

7

ಅನಿಶ್ಚಿತ ಸ್ಥಿತಿಯಲ್ಲಿ ಸೇವಾ ಭವಿಷ್ಯ ಕೆ.ಎ.ಎಸ್‌ ಅಧಿಕಾರಿಗಳ ವಾದ

Published:
Updated:

ನವದೆಹಲಿ: ನಾನಾ ಹುದ್ದೆಗಳಲ್ಲಿ ಈಗಾಗಲೇ ಹತ್ತು ವರ್ಷಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ತಮ್ಮ ನೌಕರಿಯ ಭವಿಷ್ಯವನ್ನು ರಾಜ್ಯ ಹೈಕೋರ್ಟ್ ಪಣಕ್ಕೆ ಒಡ್ಡಿದೆ ಎಂದು 1998, 1999 ಹಾಗೂ 2004ರ ಬ್ಯಾಚ್‌ಗೆ ಸೇರಿದ ಕರ್ನಾಟಕ ಆಡಳಿತ ಸೇವಾ ಅಧಿಕಾರಿಗಳ ತಂಡವೊಂದು ಸುಪ್ರೀಂ ಕೋರ್ಟ್ ಮುಂದೆ ವಾದಿಸಿದೆ.

ಹೈಕೋರ್ಟ್ ತಮ್ಮ ನೇಮಕಾತಿ ಪ್ರಕ್ರಿಯೆಯನ್ನು ಮರುವಿಮರ್ಶೆಗೆ ತೆರೆದಿರುವ ಕಾರಣ ತಮ್ಮ ಭವಿಷ್ಯ ಅತಂತ್ರಕ್ಕೆ ಸಿಲುಕಿದೆ ಎಂದು ಅವರು ದೂರಿದ್ದಾರೆ.

ಹೈಕೋರ್ಟ್ ಆದೇಶದ ಕಾರಣ, ಈ ಅಧಿಕಾರಿಗಳು ಕೆ.ಎ.ಎಸ್ ಪರೀಕ್ಷೆಯಲ್ಲಿ ಪಡೆದಿದ್ದ ಅಂಕಗಳು ಇದೀಗ ಬದಲಾವಣೆಗೆ ಒಳಗಾಗಲಿದ್ದು, ಈ ಅಂಕಗಳ ಆಧಾರದ ಮೇಲೆ ಮಾಡಲಾಗಿರುವ ನೇಮಕಾತಿಗಳಲ್ಲಿ ವ್ಯತ್ಯಾಸವಾಗಲಿದೆ ಎಂದು ಅಧಿಕಾರಿಗಳ ತಂಡದ ಪರ ವಾದ ಮಂಡಿಸಿದ ಹಿರಿಯ ವಕೀಲ ಕೆ.ವಿ.ವಿಶ್ವನಾಥನ್ ಅವರು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠಕ್ಕೆ ನಿವೇದಿಸಿಕೊಂಡರು.

ಈ ಮೂರು ವರ್ಷಗಳ ಆಯ್ಕೆ ಪಟ್ಟಿಯನ್ನು ಮರುವಿಮರ್ಶೆಗೆ ಒಳಪಡಿಸುವಂತೆ 2016ರ ಜೂನ್ 21ರಂದು ಹೈಕೋರ್ಟ್ ನೀಡಿದ ಆದೇಶವು ಆಯ್ಕೆ ಪಟ್ಟಿಯನ್ನು ಅನಿಶ್ಚಿತತೆಗೆ ಸಿಲುಕಿಸಿದೆ. ಅಷ್ಟೇ ಅಲ್ಲದೆ, 2005ರಲ್ಲಿ ಸುಪ್ರೀಂ ಕೋರ್ಟ್ ಈ ಸಂಬಂಧ ನೀಡಿದ್ದ ತೀರ್ಪನ್ನು ಬದಲಾಯಿಸಿದಂತಾಗಿದೆ ಎಂದು ಅವರು ವಾದಿಸಿದರು.

ವಿವಾದದ ಹಲವು ಮುಖಗಳನ್ನು ಪರಿಶೀಲಿಸುವ ಅಗತ್ಯವಿದೆ. ಸಂಬಂಧಪಟ್ಟ ಮೂರು ವರ್ಷಗಳ ಕೆ.ಎ.ಎಸ್ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ಅಭ್ಯರ್ಥಿಗಳ ರಿಟ್ ಅರ್ಜಿಗಳನ್ನು ಹೈಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನಾಗಿ ಪರಿವರ್ತಿಸಿದೆ. ಅನುತ್ತೀರ್ಣ ಅಭ್ಯರ್ಥಿಗಳ ಮನವಿಯನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿ ತಿರಸ್ಕರಿಸಿದ್ದ ಅಂಶವನ್ನು ಅದು ಗಣನೆಗೆ ತೆಗೆದುಕೊಂಡಿಲ್ಲ ಎಂದು ಅಧಿಕಾರಿಗಳ ತಂಡದ ಪರ ಮತ್ತೊಬ್ಬ ಹಿರಿಯ ವಕೀಲ ಬಸವಪ್ರಭು ಪಾಟೀಲ ದೂರಿದರು.

'ಆಧಾರ್' ಕುರಿತ ವಿಚಾರಣೆಯ ನಡುವೆ ತುಸು ಹೊತ್ತು ಮಾತ್ರವೇ ನಡೆದ, ಕೆ.ಎ.ಎಸ್ ಅಧಿಕಾರಿಗಳಿಗೆ ಸಂಬಂಧಿಸಿದ ಈ ಪ್ರಕರಣದ ವಿಚಾರಣೆಯನ್ನು ಫೆಬ್ರುವರಿ ಎರಡಕ್ಕೆ ಮುಂದೂಡಲಾಯಿತು. ಕೆ.ಎ.ಎಸ್ ಪರೀಕ್ಷೆಗಳಲ್ಲಿ ದೊಡ್ಡ ಸಂಖ್ಯೆಯ ಅಕ್ರಮಗಳು ಜರುಗಿವೆಯೆಂದು ರಾಜ್ಯ ಸರ್ಕಾರದ ಅಂದಿನ ಮುಖ್ಯ ಕಾರ್ಯದರ್ಶಿ ಕೆ.ಕೆ.ಮಿಶ್ರಾ ಅಧ್ಯಕ್ಷತೆಯ ಸಮಿತಿಯೊಂದು ವರದಿ ಸಲ್ಲಿಸಿತ್ತು. ಸಿಐಡಿ ವರದಿ ಕೂಡ ಅಕ್ರಮಗಳ ಕಡೆಗೆ ಬೆರಳು ಮಾಡಿ ತೋರಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry