ಗಾಂಧಿ ನಾಡಲ್ಲಿ ನೆತನ್ಯಾಹು ದಂಪತಿ ವಿಹಾರ!

7
ಗಾಳಿಪಟದೊಂದಿಗೆ ಸಂಭ್ರಮ

ಗಾಂಧಿ ನಾಡಲ್ಲಿ ನೆತನ್ಯಾಹು ದಂಪತಿ ವಿಹಾರ!

Published:
Updated:
ಗಾಂಧಿ ನಾಡಲ್ಲಿ ನೆತನ್ಯಾಹು ದಂಪತಿ ವಿಹಾರ!

ಅಹಮದಾಬಾದ್‌: ಭಾರತ ಪ್ರವಾಸದಲ್ಲಿರುವ ಇಸ್ರೇಲ್‌ ಪ್ರಧಾನಿ ಬೆಂಜಾಮಿನ್‌ ನೆತನ್ಯಾಹು ಮತ್ತು ಅವರ ಪತ್ನಿ ಸಾರಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ತವರು ರಾಜ್ಯ ಗುಜರಾತ್‌ನಲ್ಲಿ ಬುಧವಾರ ಅದ್ಧೂರಿ ಸ್ವಾಗತ ನೀಡಿದರು.

ಇಲ್ಲಿನ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ವಿಮಾನನಿಲ್ದಾಣದಿಂದ ಸಾಬರಮತಿ ಆಶ್ರಮದವರೆಗೆ ಎಂಟು ಕಿ.ಮೀ ದೂರ ಇಬ್ಬರೂ ನಾಯಕರು ರೋಡ್‌ ಶೋ ನಡೆಸಿದರು. ದಾರಿಯುದ್ಧಕ್ಕೂ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.

ರೋಡ್‌ ಶೋ ಸಾಗಿದ ಮಾರ್ಗದ ವಿವಿಧ ಕಡೆಗಳಲ್ಲಿ 50 ವೇದಿಕೆ ನಿರ್ಮಿಸಲಾಗಿತ್ತು. ಇಲ್ಲಿ ವಿವಿಧ ರಾಜ್ಯಗಳ ಕಲಾ ತಂಡಗಳು ಸಾಂಸ್ಕೃತಿಕ ಪ್ರದರ್ಶನ ನೀಡಿ ಅತಿಥಿಗಳಿಗೆ ಸ್ವಾಗತ ಕೋರಿದರು.

ರಸ್ತೆಯ ಇಕ್ಕೆಲಗಳಲ್ಲಿ ಇಸ್ರೇಲ್‌ ಮತ್ತು ಭಾರತದ ಧ್ವಜ ಹಿಡಿದಿದ್ದ ಸಾವಿರಾರು ಜನರು ನಾಯಕರಿಗೆ ಶುಭಾಶಯ ಕೋರಿದರು. ಅಂತಿಮವಾಗಿ ಸಾಬರಮತಿ ಆಶ್ರಮದ ಬಳಿ ರೋಡ್‌ಶೋಗೆ ತೆರೆ ಬಿತ್ತು.

ಚರಕದಲ್ಲಿ ಕೈಚಳಕ

ಆ ಬಳಿಕ ಮೋದಿ ಅವರು ನೆತನ್ಯಾಹು ದಂಪತಿಯನ್ನು ಸಾಬರಮತಿ ಆಶ್ರಮಕ್ಕೆ ಕರೆದುಕೊಂಡು ಹೋದರು. ಅಲ್ಲಿರುವ ಮಹಾತ್ಮ ಗಾಂಧೀಜಿ ಮನೆ ‘ಹೃದಯ ಕುಂಜ್‌’ನಲ್ಲಿ ಗಾಂಧಿ ಅವರ ಕೋಣೆ ಮತ್ತು ಅವರು ಬಳಸುತ್ತಿದ್ದ ವಸ್ತುಗಳ ಬಗ್ಗೆ ಅತಿಥಿಗಳಿಗೆ ವಿವರಿಸಿದರು.

ನೆತನ್ಯಾಹು ದಂಪತಿ ನೆಲದ ಮೇಲೆ ಕುಳಿತು ಗಾಂಧೀಜಿ ಅವರ ಚರಕದ ಮೇಲೆ ಕೈಯಾಡಿಸಿದರು. ಚರಕದಲ್ಲಿ ಹತ್ತಿಯಿಂದ ನೂಲು ತಯಾರಿಸುವ ವಿಧಾನವನ್ನೂ ಮೋದಿ ವಿವರಿಸಿದರು. ನಂತರ ದಂಪತಿ ಗಾಳಿಪಟ ಹಾರಿಸಿ ಸಂಭ್ರಮಿಸಿದರು.

ಈ ಮೊದಲು, ಮೋದಿ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಮತ್ತು ಜಪಾನ್‌ ಪ್ರಧಾನಿ ಶಿಂಜೋ ಅಬೆ ಕೂಡ ಇಲ್ಲಿಗೆ ಭೇಟಿ ನೀಡಿದ್ದರು.

‘ಗಾಂಧೀಜಿ ಮನುಕುಲದ ಮಹಾನ್‌ ಸಂತ’

‘ಮಹಾತ್ಮ ಗಾಂಧೀಜಿ ಅವರು ಮನುಕುಲದ ಶ್ರೇಷ್ಠ ಸಂತರಲ್ಲಿ ಒಬ್ಬರು’ ಎಂದು ಬೆಂಜಾಮಿನ್‌ ನೆತನ್ಯಾಹು ಬಣ್ಣಿಸಿದ್ದಾರೆ.

ಸಾಬರಮತಿ ಆಶ್ರಮದ ಸಂದರ್ಶಕರ ಪುಸ್ತಕದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪುಸ್ತಕದಲ್ಲಿ ಅವರು ನಾಲ್ಕು ಸಾಲುಗಳನ್ನು ಬರೆದಿದ್ದು, ಅದಕ್ಕೆ ಅವರ ಪತ್ನಿ ಸಾರಾ ಕೂಡ ಸಹಿ ಹಾಕಿದ್ದಾರೆ. ‘ಭೇಟಿಯು ಸ್ಫೂರ್ತಿದಾಯಕವಾಗಿತ್ತು’ ಎಂದು ಅವರು ಬರೆದಿದ್ದಾರೆ.

ಇಂದು ಮುಂಬೈಗೆ

ಭಾರತ ಪ್ರವಾಸದ ಕೊನೆಯ ಹಂತವಾಗಿ ನೆತನ್ಯಾಹು ಮುಂಬೈಗೆ ಭೇಟಿ ನೀಡಲಿದ್ದು, ಗುರುವಾರ ದಿನಪೂರ್ತಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಬೆಳಗ್ಗೆ ಆಯ್ದ ಉದ್ಯಮಿಗಳೊಂದಿಗೆ ಉಪಾಹಾರ ಸೇವಿಸಲಿದ್ದಾರೆ. ಆನಂದ ಮಹೀಂದ್ರಾ, ಅಜಯ್‌ ಪಿರಾಮಲ್‌, ಆದಿ ಗೋದ್ರೆಜ್‌ ಮತ್ತು ಚಂದಾ ಕೊಚ್ಚಾರ್‌ ಸೇರಿದಂತೆ ಹಲವರು ಇದರಲ್ಲಿ ಭಾಗವಹಿಸಲಿದ್ದಾರೆ.

ನಂತರ ತಾಜ್‌ ಹೋಟೆಲ್‌ನಲ್ಲಿ ಭಾರತ–ಇಸ್ರೇಲ್‌ ವ್ಯಾಪಾರ ಶೃಂಗಸಭೆಯನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ಹೇಳಲಿವೆ.

ಮಧ್ಯಾಹ್ನದ ನಂತರ 26/11ರ ಉಗ್ರರ ದಾಳಿ ಸಂತ್ರಸ್ತರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಅವರು ನಾರಿಮನ್‌ ಹೌಸ್‌ಗೆ ತೆರಳಿ ಉಗ್ರರ ದಾಳಿಯ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡವರ ಸ್ಮರಣಾರ್ಥ ನಿರ್ಮಿಸಲಾದ ಸ್ಮಾರಕ ಅನಾವರಣಗೊಳಿಸಲಿದ್ದಾರೆ. ಈ ದಾಳಿಯಲ್ಲಿ ತಂದೆ–ತಾಯಿಯನ್ನು ಕಳೆದುಕೊಂಡಿದ್ದ ಬಾಲಕ ಮೊಶೆಯನ್ನು ಭೇಟಿಯಾಗಲಿದ್ದಾರೆ.

ಆ ಬಳಿಕ ತಾಜ್‌ ಹೋಟೆಲ್‌ನಲ್ಲಿ ಯಹೂದಿ ಸಮುದಾಯದ 25ರಿಂದ 30 ಜನರೊಂದಿಗೆ ಅವರು ಸಂವಾದ ನಡೆಸಲಿದ್ದಾರೆ. ಸಂಜೆ ತಾಜ್‌ ಹೋಟೆಲ್‌ನಲ್ಲೇ ನಡೆಯಲಿರುವ ‘ಶಾಲೋಮ್‌ ಬಾಲಿವುಡ್‌’ ಕಾರ್ಯಕ್ರಮದಲ್ಲೂ ಪಾಲ್ಗೊಳ್ಳಲಿದ್ದಾರೆ.

‘ನಮಸ್ತೆ ಶಾಲೋಮ್‌’:

ಭಾರತ ಮತ್ತು ಇಸ್ರೇಲ್‌ ನಡುವಣ ದ್ವಿಪಕ್ಷೀಯ ಸಂಬಂಧದ ಕುರಿತಾಗಿ ಪ್ರತಿ ತಿಂಗಳೂ ಪ್ರಕಟಗೊಳ್ಳಲಿರುವ ’ನಮಸ್ತೆ ಶಾಲೋಮ್‌’ ಮಾಸ ಪತ್ರಿಕೆಯು ನೆತನ್ಯಾಹು ಉಪಸ್ಥಿತಿಯಲ್ಲಿ ಗುರುವಾರ ಬಿಡುಗಡೆಗೊಳ್ಳಲಿದೆ.

ಅಮೆರಿಕ ರಾಯಭಾರ ಕಚೇರಿ ಜೆರುಸಲೇಂಗೆ ಶೀಘ್ರ ಸ್ಥಳಾಂತರ: ನೆತನ್ಯಾಹು

‘ಟೆಲ್‌ ಅವಿವ್‌ನಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಒಂದು ವರ್ಷದ ಒಳಗೆ ಜೆರುಸಲೇಂಗೆ ಸ್ಥಳಾಂತರವಾಗುವುದು ಖಚಿತ’ ಎಂದು ನೆತನ್ಯಾಹು ತಿಳಿಸಿದ್ದಾರೆ.

ಪ್ರಸ್ತುತ ಭಾರತ ಪ್ರವಾಸದಲ್ಲಿರುವ ನೆತನ್ಯಾಹು ಅವರು ಇಸ್ರೇಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ 6ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಜೆರುಸಲೇಂ ಅನ್ನು ಇಸ್ರೇಲ್‌ ರಾಜಧಾನಿಯನ್ನಾಗಿ ಘೋಷಿಸಿದ್ದರು. ಅಲ್ಲದೆ, ಇಸ್ರೇಲ್‌ನ ಅಮೆರಿಕ ರಾಯಭಾರ ಕಚೇರಿಯನ್ನು ಜೆರುಸಲೇಂಗೆ ಸ್ಥಳಾಂತರಿಸುವುದಾಗಿ ತಿಳಿಸಿದ್ದರು.

ಆದರೆ, ಕನಿಷ್ಠ ಎರಡು ವರ್ಷಗಳವರೆಗೆ ರಾಯಭಾರ ಕಚೇರಿಯನ್ನು ಸ್ಥಳಾಂತರಿಸುವುದಿಲ್ಲ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟಿಲ್ಲರ್‌ಸನ್‌ ಡಿಸೆಂಬರ್‌ನಲ್ಲಿ ತಿಳಿಸಿದ್ದರು. ಹೀಗಾಗಿ, ನೆತನ್ಯಾಹು ಅವರ ಈ ಹೇಳಿಕೆ ಮಹತ್ವ ಪಡೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry