ಜನರ ಮೇಲೆ ಹೇರಿರುವ ‘ವಿದ್ಯುನ್ಮಾನ ಹಿಡಿತ’

7

ಜನರ ಮೇಲೆ ಹೇರಿರುವ ‘ವಿದ್ಯುನ್ಮಾನ ಹಿಡಿತ’

Published:
Updated:
ಜನರ ಮೇಲೆ ಹೇರಿರುವ ‘ವಿದ್ಯುನ್ಮಾನ ಹಿಡಿತ’

ನವದೆಹಲಿ: ಆಧಾರ್‌ ವ್ಯವಸ್ಥೆಯನ್ನು ಜನರ ಮೇಲೆ ಹೇರಲಾಗಿರುವ ‘ವಿದ್ಯುನ್ಮಾನ ಹಿಡಿತ’ (ಎಲೆಕ್ಟ್ರಾನಿಕ್‌ ಲೀಷ್‌) ಎಂದು ಕರೆದಿರುವ ಹಿರಿಯ ವಕೀಲ ಶ್ಯಾಮ್‌ ದಿವಾನ್‌, 12 ಸಂಖ್ಯೆಗಳ ವಿಶಿಷ್ಟ ಗುರುತಿನ ಸಂಖ್ಯೆಯನ್ನು ರದ್ದುಗೊಳಿಸುವ ಮೂಲಕ ಸರ್ಕಾರ ಒಬ್ಬ ವ್ಯಕ್ತಿಯನ್ನು ಸಂಪೂರ್ಣವಾಗಿ ನಾಶಪಡಿಸಬಹುದು ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.

ಆಧಾರ್‌ ಯೋಜನೆಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ವಿವಿಧ ಅರ್ಜಿಗಳ ವಿಚಾರಣೆಯನ್ನು ಆರಂಭಿಸಿದ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ನ್ಯಾಯಪೀಠದ ಮುಂದೆ ಅವರು ಈ ರೀತಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ದೇಶದಲ್ಲಿರುವ ಶಾಲೆಗಳು, ಮಕ್ಕಳು ಅಥವಾ ಕಲ್ಯಾಣ ಯೋಜನೆಯೊಂದರ ಫಲಾನುಭವಿಗಳ ಸಂಖ್ಯೆ ಮತ್ತು ತಾನು ವೆಚ್ಚ ಮಾಡುವ ಭಾರಿ ಮೊತ್ತ ನಿಜವಾದ ಫಲಾನುಭವಿಗಳಿಗೆ ತಲುಪುತ್ತಿದೆಯೇ ಎಂಬುದನ್ನು ಪರಿಶೀಲಿಸಲು ತನಗೆ ಎಲ್ಲ ಹಕ್ಕಿದೆ. ಅದಕ್ಕೆ ತನಗೆ ಆಧಾರ್‌ ಸಂಖ್ಯೆ ಬೇಕು ಎಂದು ಸರ್ಕಾರ ಹೇಳಬಾರದೇ’ ಎಂದು ದಿವಾನ್‌ ಅವರನ್ನು ಪ್ರಶ್ನಿಸಿತಲ್ಲದೇ, ‘ಇದು ನಿಜಕ್ಕೂ ತರ್ಕಬದ್ಧ ವಾದ’ ಎಂದು ಹೇಳಿದೆ.

‘ಆಧಾರ್‌ ಕಾಯ್ದೆಗೂ ಮುನ್ನ ಜನರಿಂದ ಸಂಗ್ರಹಿಸಿದ ಬಯೊಮೆಟ್ರಿಕ್‌ ವಿವರಗಳೆಲ್ಲ ಏನಾಗುತ್ತವೆ’ ಎಂದು ಕೇಳಿದ ನ್ಯಾಯಪೀಠ, ‘ಒಂದು ವೇಳೆ ಆಧಾರ್‌ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿದಾರರು ಗೆದ್ದರೆ, ಈ ಮಾಹಿತಿಗಳನ್ನೆಲ್ಲ ನಾಶ ಮಾಡಲಾಗುತ್ತದೆಯೇ’ ಎಂದು ಅದು ಪ್ರಶ್ನಿಸಿದೆ.

‘ಆಧಾರ್‌ ಕಾಯ್ದೆಯನ್ನು ಹಣಕಾಸು ಮಸೂದೆ ಎಂದು ಲೋಕಸಭಾ ಸಭಾಧ್ಯಕ್ಷರು ಒಮ್ಮೆ ಘೋಷಿಸಿದ್ದರು. ಆದರೂ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದೇ’ ಎಂದೂ ನ್ಯಾಯಪೀಠ ಕೇಳಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಹಿರಿಯ ವಕೀಲ ಪಿ. ಚಿದಂಬರಂ, ‘ಹಾಗಿದ್ದರೂ ಪರಿಶೀಲಿಸುವ ಅಧಿಕಾರ ನ್ಯಾಯಾಂಗಕ್ಕೆ ಇದ್ದೇ ಇದೆ. ಸಂಸತ್‌ ಸದಸ್ಯರು ಅದನ್ನು ಪ್ರಶ್ನಿಸುವ ಹಾಗಿಲ್ಲ’ ಎಂದು ಹೇಳಿದರು.

ಬಿಕ್ಕಟ್ಟು: ನಡೆಯದ ಸಭೆ

ನವದೆಹಲಿ: ಸುಪ್ರೀಂ ಕೋರ್ಟ್‌ನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಶಮನಗೊಳಿಸುವ ಯತ್ನವಾಗಿ ಮುಖ್ಯನ್ಯಾಯಮೂರ್ತಿ (ಸಿಜೆಐ) ದೀಪಕ್‌ ಮಿಶ್ರಾ ಮತ್ತು ನಾಲ್ವರು ಹಿರಿಯ ನ್ಯಾಯಮೂರ್ತಿಗಳ ನಡುವೆ ಬುಧವಾರ ಸಭೆ ನಡೆಯಲಿಲ್ಲ.

ಸಿಜೆಐ ವಿರುದ್ಧ ಬಹಿರಂಗವಾಗಿ ಅತೃಪ್ತಿ ಹೊರಹಾಕಿದ್ದ ನಾಲ್ವರು ನ್ಯಾಯಮೂರ್ತಿಗಳಲ್ಲಿ ಒಬ್ಬರಾಗಿರುವ ಜೆ. ಚಲಮೇಶ್ವರ್‌ ಅವರು ಅನಾರೋಗ್ಯದ ಕಾರಣಕ್ಕೆ ಬುಧವಾರ ಸುಪ್ರೀಂ ಕೋರ್ಟ್‌ಗೆ ಬಂದಿರಲಿಲ್ಲ.

ನ್ಯಾಯಮೂರ್ತಿ ಎನ್‌.ವಿ. ರಮಣ ಅವರು ಎಲ್ಲ ನ್ಯಾಯಮೂರ್ತಿಗಳಿಗೆ ಬುಧವಾರ ವಾಡಿಕೆಯಂತೆ ಭೋಜನ ವ್ಯವಸ್ಥೆ ಮಾಡಿದ್ದರು. ಹಲವು ನ್ಯಾಯಮೂರ್ತಿಗಳು ಭೋಜನಕ್ಕೆ ಬಂದಿದ್ದರಾದರೂ ನಾಲ್ವರು ನ್ಯಾಯಮೂರ್ತಿಗಳು ಪ್ರಸ್ತಾಪಿಸಿದ ವಿಷಯಗಳ ಬಗ್ಗೆ ಅಲ್ಲಿ ಚರ್ಚೆಯಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.

ದೀಪಕ್‌ ಮಿಶ್ರಾ ಮಂಗಳವಾರ ನಾಲ್ವರು ಹಿರಿಯ ನ್ಯಾಯಮೂರ್ತಿಗಳ ಜೊತೆಗೆ ವೈಯಕ್ತಿಕವಾಗಿ ಮಾತುಕತೆ ನಡೆಸಿದ್ದರು. ಬುಧವಾರ ಮತ್ತೆ ಮಾತುಕತೆ ನಡೆಸುತ್ತಾರೆ ಎಂಬ ನಿರೀಕ್ಷೆ ಇತ್ತು.

ಸಲಹೆ ಹಸ್ತಾಂತರ: ಈ ನಡುವೆ, ಬಿಕ್ಕಟ್ಟು ಬಗೆಹರಿಸುವ ನಿಟ್ಟಿನಲ್ಲಿ 15 ಅಂಶಗಳ ಸಲಹಾ ಪಟ್ಟಿಯನ್ನು ಸುಪ್ರೀಂ ಕೋರ್ಟ್‌ ವಕೀಲರ ಒಕ್ಕೂಟದ ಅಧ್ಯಕ್ಷ ವಿಕಾಸ್‌ ಸಿಂಗ್‌, ಸಿಜೆಐ ಅವರಿಗೆ ಬುಧವಾರ ಹಸ್ತಾಂತರಿಸಿದ್ದಾರೆ.

ನಿರ್ದಿಷ್ಟ ನ್ಯಾಯಪೀಠಗಳಿಗೆ ಪ್ರಕರಣಗಳನ್ನು ಹಂಚಿಕೆ ಮಾಡುವುದಕ್ಕೆ ಸಂಬಂಧಿಸಿದ ವಿಧಾನವನ್ನು ಬಹಿರಂಗಪಡಿಸಬೇಕು ಎಂದು ವಿಕಾಸ್‌ ಸಿಂಗ್‌ ಹೇಳಿದ್ದಾರೆ.

ಅಲ್ಲದೇ, ತುರ್ತು ವಿಚಾರಣೆ ಕೋರಿ ಸಲ್ಲಿಕೆಯಾಗುವ ಅರ್ಜಿಗಳನ್ನು ಆಲಿಸಲು ಪ್ರತ್ಯೇಕ ಸಮಯ ನಿಗದಿ ಮಾಡುವ ಬಗ್ಗೆಯೂ ಅವರು ಒಲವು ತೋರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry