ಹಜ್ ಯಾತ್ರೆ ಸಬ್ಸಿಡಿ ರದ್ದು: ಕೋರ್ಟ್ ಆದೇಶದ ಪಾಲನೆ ಸ್ವಾಗತಾರ್ಹ

7

ಹಜ್ ಯಾತ್ರೆ ಸಬ್ಸಿಡಿ ರದ್ದು: ಕೋರ್ಟ್ ಆದೇಶದ ಪಾಲನೆ ಸ್ವಾಗತಾರ್ಹ

Published:
Updated:
ಹಜ್ ಯಾತ್ರೆ ಸಬ್ಸಿಡಿ ರದ್ದು: ಕೋರ್ಟ್ ಆದೇಶದ ಪಾಲನೆ ಸ್ವಾಗತಾರ್ಹ

ಹಜ್ ಯಾತ್ರೆಗೆ ನೀಡುವ ಸಹಾಯಧನವನ್ನು ಈ ವರ್ಷದಿಂದ ರದ್ದು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ. ಇದರಿಂದ ಉಳಿತಾಯವಾಗುವ ಹಣವನ್ನು ಅಲ್ಪಸಂಖ್ಯಾತರ ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ವಿನಿಯೋಗಿಸಲಾಗುವುದು ಎಂದು ಸರ್ಕಾರ ಹೇಳಿರುವುದು ಸ್ವಾಗತಾರ್ಹ. ಈ ಬಗ್ಗೆ 2012ರಲ್ಲಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ‘ಇನ್ನು ಹತ್ತು ವರ್ಷಗಳಲ್ಲಿ ಸಹಾಯಧನ ನೀಡುವುದನ್ನು ನಿಲ್ಲಿಸಬೇಕು’ ಎಂದು ಹೇಳಿತ್ತು. ಮುಸ್ಲಿಮರ ಪವಿತ್ರ ಗ್ರಂಥ ಕುರಾನ್ ಪ್ರಕಾರವೂ ಪ್ರಯಾಣ, ಆಹಾರ, ವಸತಿ ವೆಚ್ಚ ನೋಡಿಕೊಳ್ಳಲು ಸಾಧ್ಯವಿರುವವರು ಮಾತ್ರ ಹಜ್ ಯಾತ್ರೆ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ನೋಡಿದಾಗ ಹಜ್ ಯಾತ್ರೆ ಸಬ್ಸಿಡಿ ರದ್ದು ಮಾಡಿರುವುದು ಸರಿಯಾದುದು. ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯ ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಪ್ರಗತಿ ಸಾಧಿಸಬೇಕಾಗಿರುವುದು ತಕ್ಷಣದ ಆದ್ಯತೆ ಆಗಬೇಕು. ಹೀಗಾಗಿ ಇದೇ ಹಣ ಮುಸ್ಲಿಂ ಹೆಣ್ಣುಮಕ್ಕಳ ಶೈಕ್ಷಣಿಕ ಸಬಲೀಕರಣಕ್ಕೆ ಬಳಕೆಯಾದಲ್ಲಿ ಅದು ಒಳ್ಳೆಯದೇ.

ಹಜ್ ಸಹಾಯಧನ ವಿಚಾರಕ್ಕೆ ಅನೇಕ ಪದರಗಳಿವೆ. ಇದು, ನಷ್ಟದಲ್ಲೇ ಇರುವ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾಗೆ ಅನುಕೂಲ ಮಾಡಿಕೊಡುವ ಕಣ್ಣೊರೆಸುವ ತಂತ್ರ ಎಂಬಂತಹ ಮಾತುಗಳಿದ್ದವು. ಏಕೆಂದರೆ ಸಹಾಯಧನ ಸೌಲಭ್ಯ ಪಡೆದವರು ಏರ್ ಇಂಡಿಯಾ ವಿಮಾನದಲ್ಲೇ ಪ್ರಯಾಣಿಸಬೇಕಿತ್ತು. ಆದರೆ ಹಜ್ ಯಾತ್ರೆ ಸಂದರ್ಭದಲ್ಲಿ ಈ ಟಿಕೆಟ್ ದರವನ್ನು ಅಪಾರ ಪ್ರಮಾಣದಲ್ಲಿ ಹೆಚ್ಚಿಸಲಾಗುತ್ತಿತ್ತು.

ಅಷ್ಟೇ ಅಲ್ಲ, ಸಬ್ಸಿಡಿ ನೀಡುವ ಕ್ರಮದ ಬಗ್ಗೆಯೂ ಪ್ರಶ್ನೆಗಳಿದ್ದವು. ಜೊತೆಗೆ ಇವು ರಾಜಕೀಯವಾಗಿ ಬಳಕೆಯಾಗುತ್ತವೆ ಎಂಬೆಲ್ಲಾ ಆರೋಪಗಳೂ ಇದ್ದವು. ಈ ಮಧ್ಯೆ, ಅಫ್ಜಲ್ ಅಮಾನುಲ್ಲಾ ನೇತೃತ್ವದ ಆರು ಸದಸ್ಯರ ಸಮಿತಿಯೂ ಸಹಾಯ ಧನ ನೀಡುವ ಪದ್ಧತಿಯನ್ನು ತಕ್ಷಣದಿಂದಲೇ ನಿಲ್ಲಿಸಬೇಕೆಂದು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಶಿಫಾರಸು ಮಾಡಿತ್ತು. ಜೊತೆಗೆ ಸುಪ್ರೀಂ ಕೋರ್ಟ್ ಆದೇಶದ ನಂತರ ಪ್ರತಿ ವರ್ಷ  ಹಜ್ ಯಾತ್ರೆಯ ಸಬ್ಸಿಡಿ ಮೊತ್ತವನ್ನು ಕ್ರಮೇಣ ಕಡಿಮೆ ಮಾಡಿಕೊಂಡೇ ಬರಲಾಗಿತ್ತು. 2011ರಲ್ಲಿ ₹ 685 ಕೋಟಿಯಷ್ಟಿದ್ದ ಸಬ್ಸಿಡಿ ಪ್ರಮಾಣ 2017ರಲ್ಲಿ

₹ 200 ಕೋಟಿಗೆ ಇಳಿದಿತ್ತು.

ಈ ಎಲ್ಲಾ ಬೆಳವಣಿಗೆಗಳ ಮಧ್ಯೆಯೂ ಈ ವರ್ಷ 1.75 ಲಕ್ಷ ಮುಸ್ಲಿಮರು ಹಜ್ ಯಾತ್ರೆಗೆ ಹೋಗಲಿದ್ದಾರೆ. ಪ್ರತಿವರ್ಷ, ಪ್ರತಿ ದೇಶದ ಯಾತ್ರಾರ್ಥಿಗಳ ಪ್ರಮಾಣವನ್ನು ಸೌದಿ ಅರೇಬಿಯಾ ಹೆಚ್ಚಿಸುತ್ತದೆ. ಭಾರತದ ಯಾತ್ರಾರ್ಥಿಗಳ ಪ್ರಮಾಣ ಇತ್ತೀಚೆಗಷ್ಟೇ ಮತ್ತೆ ಏರಿಕೆ ಆಗಿದೆ. 1994ರಲ್ಲಿ ಹಜ್ ಯಾತ್ರಾರ್ಥಿಗಳ ಪ್ರಮಾಣ ಕೇವಲ 21,035 ಇತ್ತು .

ನಂತರ 2011ರಲ್ಲಿ ಇದು 1.25ಲಕ್ಷ ಇತ್ತು. ಈಗ, ಭಾರತದಿಂದ ಹಡುಗುಗಳಲ್ಲೂ ಹಜ್ ಯಾತ್ರೆಗೆ ತೆರಳಬಹುದಾದ ಅವಕಾಶದ ಬಗ್ಗೆ ಸೌದಿ ಅರೇಬಿಯಾ ತತ್ವಶಃ ಒಪ್ಪಿಕೊಂಡಿದೆ ಎಂದು ಸರ್ಕಾರ ಹೇಳಿದ್ದು ಈ ಬಗೆಗಿನ ವಿವರಗಳನ್ನು ಪರಿಶೀಲಿಸಲಾಗುತ್ತಿದೆ. ಈ ಮಧ್ಯೆ ಹಿಂದೂ ಹಬ್ಬಗಳು ಹಾಗೂ ಯಾತ್ರೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋಟ್ಯಂತರ ಹಣ ವ್ಯಯಿಸುವುದು ಮುಂದುವರಿಸಿರುವುದನ್ನು ನಾವು ಮರೆಯುವಂತಿಲ್ಲ. ನೇರವಾಗಿ ಅಥವಾ ಪರೋಕ್ಷವಾಗಿ ಅನೇಕ ಬಗೆಯ ಯಾತ್ರೆಗಳಿಗೆ ಸರ್ಕಾರಗಳು  ಹಣ ವ್ಯಯಿಸುತ್ತಿವೆ. ಇದರ ಬದಲಿಗೆ ಘನತೆಯ ಬದುಕಿಗೆ ಅನುವು ಮಾಡಿಕೊಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry