ನೆಲೆ ಕಳೆದುಕೊಳ್ಳುತ್ತಿರುವ ಕರಾವಳಿ

7

ನೆಲೆ ಕಳೆದುಕೊಳ್ಳುತ್ತಿರುವ ಕರಾವಳಿ

Published:
Updated:

ನಾಡಿನ ಕರಾವಳಿಯ ಸಾಮಾಜಿಕ ಪರಿಸ್ಥಿತಿ ಇಂದು ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಈ ಪ್ರದೇಶದ ಭವಿಷ್ಯದ ಚಿಂತನೆಯು ಸಮಗ್ರವಾಗಬೇಕಾದರೆ, ಈ ಪರಿಸರಸೂಕ್ಷ್ಮ ಪ್ರದೇಶದ ನೆಲ-ಜಲ ಪರಿಸ್ಥಿಯನ್ನೂ ಗಂಭೀರವಾಗಿ ಪರಿಗಣಿಸುವ ಅವಶ್ಯಕತೆಯಿದೆ.

ಕರಾವಳಿ ಪ್ರದೇಶವೇ ವಿಶಿಷ್ಟವಾದದ್ದು. ಅರಬ್ಬಿ ಸಮುದ್ರ ಹಾಗೂ ಪಶ್ಚಿಮಘಟ್ಟಗಳ ನಡುವಿನ ಕಿರಿದಾದ ಭೂಪಟ್ಟಿಯಿದು. ಇಲ್ಲಿನ ನೆಲ-ಜಲ-ಕಾಡಿನ ಸಮೃದ್ಧಿಯಲ್ಲಿ ಬಾಳಿಬದುಕಿದ ಜನ, ಇದನ್ನು ‘ಪರಶುರಾಮ ಸೃಷ್ಟಿ’ ಎಂದು ನಂಬಿದ್ದರಲ್ಲಿ ಅಚ್ಚರಿಯೇನೂ ಇಲ್ಲ. ಆದರೆ, ಇತ್ತೀಚೆಗೆ ನಿರಂತರವಾಗಿ ಜನಸಂಖ್ಯೆ ಏರುತ್ತಿದೆ ಹಾಗೂ ವೇಗದ ಅಭಿವೃದ್ಧಿಯ ಆಶಯ ಎಲ್ಲರನ್ನೂ ಆವರಿಸಿಕೊಳ್ಳುತ್ತಿದೆ. ಹೀಗಾಗಿ, ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಚಲಿಸುವ ಮೂಲಭೂತ ಸೌಕರ್ಯಾಭಿವೃದ್ಧಿ ವಿಧಾನಗಳು ಹಾಗೂ ಪರಿಸರ ನಿರ್ವಹಣೆ ನೀತಿಗಳ ನಡುವಿನ ತಿಕ್ಕಾಟ ಬಿರುಸುಗೊಂಡಿದೆ. ವಾಸಸ್ಥಳ, ಕೃಷಿ ಜಮೀನು, ನೀರು, ಗೋಮಾಳ, ಉರುವಲು... ಹೀಗೆ ಎಲ್ಲ ಬಗೆಯ ನೈಸರ್ಗಿಕ ಸಂಪನ್ಮೂಲಗಳಲ್ಲೂ ತೀವ್ರ ಕೊರತೆ ಕಾಣುತ್ತಿವೆ. ಪ್ರಸ್ತುತ ಕರಾವಳಿಯನ್ನು ಕಾಡುತ್ತಿರುವ ಮೂರು ಪ್ರಮುಖ ವಿಷಯಗಳ ಕುರಿತು ವಸ್ತುನಿಷ್ಠ ಚರ್ಚೆ ನಡೆಯುವ ಅಗತ್ಯವಿದೆ.

ಒಂದು, ತೀರಪ್ರದೇಶದ ನೆಲ–ಜಲ ನಿರ್ವಹಣೆ ಕುರಿತಾದದ್ದು. ಒಳಭೂಮಿಯಿಂದ ನೀರು ಹಾಗೂ ಫಲವತ್ತಾದ ಮಣ್ಣನ್ನು ಹೊತ್ತು ತರುವ ನದಿಗಳು ಸಮುದ್ರ ಸೇರುವ ತೀರಪ್ರದೇಶ ಬಹುಸೂಕ್ಷ್ಮವಾದದ್ದು. ಹಾಗೆಂದೇ, ಈ ಪ್ರದೇಶದ ಸುಸ್ಥಿರ ನಿರ್ವಹಣೆಗೆ ದಿಕ್ಸೂಚಿಯಾಗಬಲ್ಲ ‘ಕರಾವಳಿ ನಿರ್ವಹಣೆ ಅಧಿನಿಯಮ’ವನ್ನು ಪರಿಸರ ಸಂರಕ್ಷಣಾ ಕಾಯ್ದೆ (1986) ಅನ್ವಯ ಸರ್ಕಾರ ರೂಪಿಸಿದ್ದು. ಜನರ ಸಹಭಾಗಿತ್ವದಲ್ಲಿ ಕರಾವಳಿಯ ತೀರ, ಹಿನ್ನಿರು, ಅಳಿವೆ, ನದಿತಟ, ಜೌಗುಪ್ರದೇಶಗಳನ್ನು ಸಂರಕ್ಷಿಸುತ್ತಲೇ, ಆರ್ಥಿಕ ಪ್ರಗತಿಯನ್ನೂ ಸಾಧಿಸುವುದು ಇದರ ಉದ್ದೇಶವಾಗಿತ್ತು.

ಆದರೆ, ಅಧಿಕಾರಿಶಾಹಿಯ ಭ್ರಷ್ಟಾಚಾರ ಮತ್ತು ಜಡತ್ವಕ್ಕೆ ಲಾಭಕೋರತನದ ಉದ್ಯಮಗಳೂ ಜೊತೆಯಾಗಿ, ಈ ನಿಯಮಗಳು ಇಂದು ಹಲ್ಲಿಲ್ಲದ ಹಾವಾಗಿವೆ. ನೇತ್ರಾವತಿ, ಗಂಗೊಳ್ಳಿ, ಶರಾವತಿ, ಗಂಗಾವಳಿ, ಕಾಳಿ ಇತ್ಯಾದಿ ಬಹುತೇಕ ನದಿಗಳ ತಪ್ಪಲಿನ ಅಳಿವೆಗಳು ಅನಿಯಂತ್ರಿತ ಮರಳು ಗಣಿಗಾರಿಕೆ ಹಾಗೂ ಮಾಲಿನ್ಯಕ್ಕೆ ಬಲಿಯಾಗಿವೆ. ಹಿನ್ನೀರ ಜೌಗು ಹಾಗೂ ಗದ್ದೆಗಳಲ್ಲಿ ಮಣ್ಣು ತುಂಬುವ ಭೂವಾಣಿಜ್ಯೀಕರಣ ಎಲ್ಲೆಡೆ ಸಾಗಿದೆ. ಇದರ ಪರಿಣಾಮವಾದರೂ ಏನು? ಮೀನಿನಂಥ ಜಲಚರಗಳ ವಂಶಾಭಿವೃದ್ಧಿ ತಾಣಗಳೇ ನಾಶವಾಗುತ್ತಿವೆ. ಕಡಲು ಹಾಗೂ ಹಿನ್ನೀರ ನೀರಿನ ಗುಣಮಟ್ಟ ಕಡಿಮೆಯಾಗಿ, ಪೋಷಕಾಂಶ ಲಭ್ಯತೆ ಕುಸಿಯುತ್ತಿದೆ. ಈ ಬೆಳವಣಿಗೆಗಳಿಂದಾಗಿ ಮೀನುಗಾರಿಕಾ ಇಳುವರಿಯೇ ಕುಸಿದು, ಮೀನುಗಾರರ ಮೂಲ ಕಸುಬಿಗೇ ಭಂಗ ಬರುತ್ತಿದೆ. ಅಳಿವೆಗಳು ಹಾಗೂ ಜಲಮೂಲಗಳು ಮಾಲಿನ್ಯಕ್ಕೆ ಬಲಿಯಾಗಿ, ಮಲೇರಿಯಾ, ಚಿಕೂನ್‌ಗುನ್ಯಾದಂಥ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿವೆ. ನೈಸರ್ಗಿಕ ಕಾಂಡ್ಲಾ ಜೌಗುಗಳು ಮಾಯವಾದಂತೆಲ್ಲ, ಸಮುದ್ರದ ನೀರು ನುಗ್ಗಿ, ಇಲ್ಲಿನ ಸಿಹಿನೀರ ಬಾವಿ-ತೊರೆಗಳು ಉಪ್ಪಾಗುತ್ತಿವೆ. ಸಾಗರದ ತಟದಲ್ಲಿ ಬದುಕುವ ಜನರಿಂದು ಕುಡಿಯುವ ಹನಿನೀರಿಗಾಗಿ ಹರಸಾಹಸ ಮಾಡಬೇಕಾದ ಪರಿಸ್ಥಿತಿ!

ಎರಡನೆಯದು, ರಾಷ್ಟ್ರೀಯ ಹೆದ್ದಾರಿಯ ವಿಸ್ತರಣೆ ತಂದೊಡ್ಡಿರುವ ಸಮಸ್ಯೆಗಳು. ಕರಾವಳಿಗುಂಟ ಸಾಗಿರುವ ಎನ್.ಎಚ್. 66ರ ಚತುಶ್ಪಥ ವಿಸ್ತರಣೆ ಇದೀಗ ನಡೆಯುತ್ತಿದೆ. ಆರ್ಥಿಕತೆಗೆ ಇಂಬುಕೊಡುವ ಈ ಮೂಲಸೌಕರ್ಯ ಕಾಮಗಾರಿಯನ್ನು ಜನ ಸ್ವಾಗತಿಸಿದ್ದಾರೆ ಕೂಡ. ಆದರೆ, ಬೃಹತ್ ಅಭಿವೃದ್ಧಿ ಯೋಜನೆಯೊಂದು ಹೊತ್ತುತರುವ ಅಸಂಖ್ಯ ಅನಪೇಕ್ಷಿತ ಕೊಡುಗೆಗಳನ್ನು ಭಟ್ಕಳದಿಂದ ಕಾರವಾರದವರೆಗೆ ಒಮ್ಮೆ ಸಂಚರಿಸಿಯೇ ಅರಿಯಬೇಕು. ರಸ್ತೆಗಾಗಿ ವಶಪಡಿಸಿಕೊಂಡ ಅಗತ್ಯ ಖಾಸಗಿ ಜಮೀನಿಗೇನೋ ಸರ್ಕಾರ ಪರಿಹಾರ ನೀಡಿದೆ. ಆದರೆ, ಅಕ್ಕಪಕ್ಕದ ಬಾವಿ, ಕೆರೆ, ಹಳ್ಳ-ತೊರೆಗಳು ತ್ಯಾಜ್ಯತುಂಬಿ ನಾಶವಾಗುತ್ತಿವೆ. ಭತ್ತದ ಗದ್ದೆ, ಮಾವು–ತೆಂಗಿನ ತೋಪುಗಳು ದೂಳು ಹಾಗೂ ಕ್ವಾರಿ ಕಲ್ಲಿನಪುಡಿಯಿಂದ ತುಂಬಿ, ತನ್ನ ಉತ್ಪಾದಕತೆಯನ್ನೇ ಕಳೆದುಕೊಳ್ಳುತ್ತಿವೆ. ತಗ್ಗಿನ ಜಮೀನು, ಜೌಗುಗಳು ಅನಪೇಕ್ಷಿತ ತ್ಯಾಜ್ಯಗಳನ್ನು ಬಿಸಾಡುವ ತಾಣಗಳಾಗುತ್ತಿವೆ. ರೈತರ ಹಾಯಿನೀರಿನ ಕಾಲುವೆಗಳು, ಚಿಕ್ಕತೊರೆಗಳು ಒಣಗಿವೆ. ದನಕರುಗಳು ನೀರು-ಮೇವಿಲ್ಲದೆ ಸಾಯುತ್ತಿವೆ. ಒಂದು ಎಕರೆಗಿಂತಲೂ ಕಡಿಮೆ ಜಮೀನಿನ ಸಣ್ಣ ರೈತರೇ ತುಂಬಿರುವ ಈ ಪ್ರದೇಶದ ಜನರ ಗೋಳಿದು. ಕರಾವಳಿಯನ್ನೇ ಉದ್ದಕ್ಕೆ ಕತ್ತರಿಸಿ ಎರಡು ತುಂಡು ಮಾಡಿದ ಅನುಭವ ಇಲ್ಲಿನ ನಿವಾಸಿಗಳದ್ದು!

ಈ ಸಮಸ್ಯೆಗಳನ್ನೆಲ್ಲ ಪರಿಹರಿಸಬೇಕಾದ ಜವಾಬ್ದಾರಿ ಕಾಮಗಾರಿಯ ಗುತ್ತಿಗೆ ಪಡೆದ ಉದ್ದಿಮೆಯದು. ಇದರ ಮೇಲುಸ್ತುವಾರಿ ನೋಡಿ, ಗ್ರಾಮಮಟ್ಟದಲ್ಲಿ ಕೊರತೆಗಳನ್ನು ಪರಿಹರಿಸಬೇಕಾದ ಕರ್ತವ್ಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ್ದು. ಅರಣ್ಯ ಇಲಾಖೆ ಅಕ್ಕಪಕ್ಕ ಗಿಡ ಬೆಳೆಸಿ ಹಸಿರುಗೋಡೆ ನಿರ್ಮಿಸಬೇಕಿತ್ತು. ಎಲ್ಲವೂ ನಿಷ್ಕ್ರಿಯವಾಗಿವೆ! ಜಿಲ್ಲಾಡಳಿತ, ಜಿಲ್ಲಾ ಮತ್ತು ಗ್ರಾಮ ಪಂಚಾಯ್ತಿಗಳು ದಿನಂಪ್ರತಿ ಈ ಕುರಿತು ಮಾಡುತ್ತಿರುವ ಒತ್ತಾಯ ಅವರ ಕಿವಿಗಳಿಗೆ ತಲುಪುತ್ತಿಲ್ಲ. ಅಭಿವೃದ್ಧಿಯ ಬೃಹತ್ ಯೋಜನೆಗಳು ತೋರಿಕೆಯ ಸಾಧನೆಯಡಿಯಲ್ಲಿ, ತಮ್ಮ ಅನೇಕ ವೈಫಲ್ಯಗಳನ್ನು ಮುಚ್ಚಿಹಾಕಿಬಿಡುತ್ತವೆ. ಖಾಸಗಿ ಉದ್ದಿಮೆಗಳು ಮತ್ತು ಸರ್ಕಾರಿಯಂತ್ರ ಹೊಣೆಗಾರಿಕೆಯನ್ನು ಹೇಗೆ ಮರೆಯುತ್ತವೆ ಎನ್ನುವದಕ್ಕೆ ಉದಾಹರಣೆಯಿದು.

ಮೂರನೆಯದು, ಬಡ ಮೀನುಗಾರರ ಸಮಕಾಲೀನ ಸಮಸ್ಯೆಯೊಂದರ ಕುರಿತು. ರಾಜ್ಯದ ಮೂರು ಜಿಲ್ಲೆಗಳಲ್ಲಿ ನಾಡದೋಣಿ ಬಳಸಿ ಮೀನು ಹಿಡಿದು ಮಾರುವ ಪಾರಂಪರಿಕ ವೃತ್ತಿಯಲ್ಲಿ ಅನೇಕ ಸಹಸ್ರ ಮೀನುಗಾರರ ಕುಟುಂಬಗಳು ಜೀವನ ಸಾಗಿಸುತ್ತಿವೆ. ಆದರೆ ಕೆಲವು ವರ್ಷಗಳಿಂದ, ಭಾರಿ ಉದ್ದಿಮೆದಾರರು ಬೃಹತ್ ಯಂತ್ರಾಧಾರಿತ ದೋಣಿಗಳನ್ನು ಬಳಸಿ ಮೀನುಗಾರಿಕೆಗೆ ಇಳಿದಂತೆಲ್ಲ, ಮೂಲವೃತ್ತಿಗರಿಗೆ ಪೆಟ್ಟು ಬೀಳಲು ಆರಂಭವಾಯಿತು. ಉದಾರೀಕರಣದ ನಂತರ, ಕೇಂದ್ರ ಸರ್ಕಾರಿ ಸ್ವಾಮ್ಯದ ಸಾಗರೋತ್ಪನ್ನ ರಫ್ತು ಉತ್ತೇಜನ ಪ್ರಾಧಿಕಾರವು ವಾಣಿಜ್ಯೀಕರಣವನ್ನು ಪ್ರೋತ್ಸಾಹಿಸಿದಂತೆಲ್ಲ, ನಾಡಿನ ಮೀನಿನ ಉತ್ಪಾದನೆಯೆನೋ ಏರಿತು. ಅದರೆ, ಆಳಸಮುದ್ರ ಮತ್ತು ದೂರತೀರದ ಮೀನನ್ನು ಯಂತ್ರಗಳು ಒಮ್ಮೆಲೇ ಕಬಳಿಸತೊಡಗಿದಂತೆಲ್ಲ, ಸಮೀಪ ಸಮುದ್ರದ ಮೀನು ಇಳುವರಿ ಕಡಿಮೆಯಾಗುತ್ತಿರುವುದನ್ನು ಮೀನುಗಾರಿಕಾ ಇಲಾಖೆಯೇ ದಾಖಲಿಸಿದೆ! ಹೀಗಾಗಿ, ಇದನ್ನು ಅವಲಂಬಿಸಿದ ಮೂಲಮೀನುಗಾರರ ಸಮುದಾಯ ಸಂಕಷ್ಟ ಎದುರಿಸುತ್ತಿದೆ.

ಇದೂ ಸಾಲದೆಂಬಂತೆ, ರಾತ್ರಿ ಹೊತ್ತು ಪ್ರಖರ ವಿದ್ಯುತ್ ದೀಪಗಳನ್ನು ಬಳಸಿ ಬೃಹತ್ ಪ್ರಮಾಣದಲ್ಲಿ ಮೀನು ಹಿಡಿಯುವ ಯಾಂತ್ರೀಕೃತ ದೋಣಿಗಳಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ದೇಶದಾದ್ಯಂತ ಪಾರಂಪರಿಕ ಮೀನುಗಾರರು ಹಾಗೂ ತಜ್ಞರು ಇದನ್ನು ವೈಜ್ಞಾನಿಕ ಕಾರಣಗಳೊಂದಿಗೆ ವಿರೋಧಿಸಿದ್ದರ ಫಲವಾಗಿ, ಕಳೆದ ನವೆಂಬರ್‌ನಲ್ಲಿ  ‘ಲೈಟ್ ಫಿಶಿಂಗ್’ ಅನ್ನು ಕೇಂದ್ರ ಮೀನುಗಾರಿಕಾ ಇಲಾಖೆ ನಿಷೇಧಿಷಿಸಿದೆ. ಅದರೆ, ಕೆಲವು ಹಿತಾಸಕ್ತಿಗಳು ಈ ನಿಷೇಧವನ್ನು ಹಿಂಪಡೆಯಲು ಒತ್ತಾಯಿಸುತ್ತಿವೆ. ಸರ್ಕಾರವು ತನ್ನ ನಿಷೇಧ ಹಿಂಪಡೆದರೆ, ಬೆರಳಣಿಕೆಯಷ್ಟು ದೊಡ್ಡ ಉದ್ದಿಮೆಗಳ ಹಿತಾಸಕ್ತಿಗಾಗಿ, ಸಾವಿರಾರು ಬಡ ಮಿನುಗಾರರನ್ನು ಬಲಿ ತೆಗೆದುಕೊಂಡಂತೆಯೇ ಸರಿ!

ಕರಾವಳಿಯ ನೆಲ ಕರಗುತ್ತಿದೆ, ನೀರು ಒಣಗುತ್ತಿದೆ, ಮೀನು ಬರಿದಾಗುತ್ತಿದೆ. ಸಣ್ಣ ರೈತರು ಮತ್ತು ಮೀನುಗಾರರು ಮತ್ತಷ್ಟು ಸಂಕಷ್ಟಕ್ಕೆ ಬೀಳುತ್ತಿದ್ದಾರೆ. ಕನಿಷ್ಠ ಕುಡಿಯುವ ಸಿಹಿನೀರಿಗೂ ಸರ್ಕಾರದ ಮೊರೆ ಹೋಗುವ ದಯನೀಯ ಸ್ಥಿತಿಯಲ್ಲಿ ಜನರಿದ್ದಾರೆ. ಆಳ-ಅಂತ್ಯವರಿಯದ ವೇಗದ ಅಭಿವೃದ್ಧಿ ಆರ್ಥಿಕ ನೀತಿಯನ್ನು ಕುರುಡಾಗಿ ಪಠಿಸುವ ರಾಜಕೀಯ ಪ್ರಪಂಚಕ್ಕೆ ಚುನಾವಣಾ ಹೊಸ್ತಿಲಲ್ಲಾದರೂ ಈ ವಾಸ್ತವ ಅರಿವಾದೀತೇ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry