ವಂಚನೆ: ಜಿಎಸ್‌ಟಿ ಮಂಡಳಿ ಶಂಕೆ

7
ರಾಜಿ ತೆರಿಗೆ ದುರ್ಬಳಕೆ ಸಾಧ್ಯತೆ: ಸುಶೀಲ್‌ ಕುಮಾರ್‌ ಮೋದಿ

ವಂಚನೆ: ಜಿಎಸ್‌ಟಿ ಮಂಡಳಿ ಶಂಕೆ

Published:
Updated:
ವಂಚನೆ: ಜಿಎಸ್‌ಟಿ ಮಂಡಳಿ ಶಂಕೆ

ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಸರಳಗೊಳಿಸಿರುವ ರಾಜಿ ತೆರಿಗೆ (ಕಂಪೋಸಿಷನ್‌ ಸ್ಕೀಮ್‌) ದುರ್ಬಳಕೆ ಮಾಡಿಕೊಂಡಿರುವ ಅನೇಕ ವರ್ತಕರು ಕಡಿಮೆ ವಹಿವಾಟು ದಾಖಲಿಸಿ ಸರ್ಕಾರದ ಬೊಕ್ಕಸಕ್ಕೆ ವಂಚನೆ ಎಸಗುತ್ತಿದ್ದಾರೆ ಎಂದು ಜಿಎಸ್‌ಟಿ ಮಂಡಳಿಯು ಶಂಕಿಸಿದೆ.

‘ರಾಜಿ ತೆರಿಗೆಯಡಿ ಸಲ್ಲಿಸಲಾಗಿರುವ ರಿಟರ್ನ್ಸ್‌ಗಳನ್ನು ರಾಜ್ಯ ಸರ್ಕಾರಗಳು ಪರಿಶೀಲಿಸುತ್ತಿದ್ದು, ನಮ್ಮ ಅನುಮಾನ ದೃಢಪಡುವಂತಹ ಸಾಕ್ಷ್ಯಾಧಾರಗಳು ಕಂಡು ಬಂದರೆ ವಂಚಕ ವರ್ತಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಮಂಡಳಿಯ ಸದಸ್ಯರಾಗಿರುವ ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್‌ ಕುಮಾರ್  ಮೋದಿ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ರಾಜಿ ತೆರಿಗೆಯಡಿ ಸಲ್ಲಿಸಲಾಗಿರುವ ಬಹುತೇಕ ರಿಟರ್ನ್ಸ್‌ಗಳಲ್ಲಿ ವಹಿವಾಟನ್ನು ₹ 20 ಲಕ್ಷಕ್ಕಿಂತ ಕಡಿಮೆ ದಾಖಲಿಸಲಾಗಿದೆ. ಇದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.  ಒಂದು ವೇಳೆ ವರ್ತಕರ ವಹಿವಾಟು ₹ 20 ಲಕ್ಷಕ್ಕಿಂತ ಕಡಿಮೆ ಇದ್ದರೆ ಅಂತಹವರು ಜಿಎಸ್‌ಟಿಯಡಿ ನೋಂದಣಿ ಮಾಡಿಕೊಳ್ಳುವ ಅಗತ್ಯವೇ ಇಲ್ಲ’ ಎಂದು ಮೋದಿ ಹೇಳಿದ್ದಾರೆ.

ಹಿಂದಿನ ತ್ರೈಮಾಸಿಕದಲ್ಲಿ  7.5 ಲಕ್ಷ ವರ್ತಕರು ‘ಕಂಪೋಸಿಷನ್‌ ಸ್ಕೀಮ್‌’ನಡಿ ರಿಟರ್ನ್ಸ್‌ ಸಲ್ಲಿಸಿದ್ದಾರೆ. ಈ ಯೋಜನೆಯಡಿ, ₹ 1.5 ಕೋಟಿಗಿಂತ ಕಡಿಮೆ ವಹಿವಾಟು ಹೊಂದಿರುವವರು ಮೂರು ತಿಂಗಳಿಗೊಮ್ಮೆ ಮಾತ್ರ ರಿಟರ್ನ್ಸ್‌ ಸಲ್ಲಿಸಬಹುದಾಗಿದೆ. ಕ್ಲಿಷ್ಟಕರ ಜಿಎಸ್‌ಟಿ ನಿಯಮಗಳನ್ನು ಪಾಲಿಸುವ ಬದಲಿಗೆ ವಹಿವಾಟಿನ ಮೇಲೆ ಶೇ 0.5 ರಿಂದ ಶೇ 2.5ರಷ್ಟು ತೆರಿಗೆ ಸಲ್ಲಿಸಲು ಇದರಡಿ ಅವಕಾಶ ಇದೆ.

ಮೋದಿ ಅವರು ‘ಜಿಎಸ್‌ಟಿಎನ್‌’ನಲ್ಲಿ ಕಂಡು ಬಂದಿರುವ ತಾಂತ್ರಿಕ ದೋಷಗಳನ್ನು ಸರಿಪಡಿಸಲು ರಚಿಸಲಾಗಿರುವ ಸಚಿವರ ತಂಡದ ಮುಖ್ಯಸ್ಥರೂ ಆಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry