ಆಲೂಗೆಡ್ಡೆ ಖರೀದಿಗೆ ಒಪ್ಪಂದ

6
15 ವರ್ತಕರ ಸಹಿ

ಆಲೂಗೆಡ್ಡೆ ಖರೀದಿಗೆ ಒಪ್ಪಂದ

Published:
Updated:
ಆಲೂಗೆಡ್ಡೆ ಖರೀದಿಗೆ ಒಪ್ಪಂದ

ಬೆಂಗಳೂರು: ಉತ್ತರ ಪ್ರದೇಶದಿಂದ 25,000 ಟನ್‌ ಆಲೂಗೆಡ್ಡೆಯನ್ನು ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಗೆ ಆವಕ ಮಾಡಿಕೊಳ್ಳಲು ನಗರದ ವರ್ತಕರು ಅಲ್ಲಿನ ಬೆಳೆಗಾರರ ಜತೆ ಬುಧವಾರ ಇಲ್ಲಿ ಒಪ್ಪಂದ ಮಾಡಿಕೊಂಡರು.

ಎರಡೂ ರಾಜ್ಯ ಸರ್ಕಾರಗಳ ತೋಟಗಾರಿಕೆ ಇಲಾಖೆ, ಉತ್ತರ ಪ್ರದೇಶದ ತೋಟಗಾರಿಕೆ ಸಹಕಾರ ಮಾರುಕಟ್ಟೆ ಒಕ್ಕೂಟ (ಹೊಫೆಡ್), ಕರ್ನಾಟಕ ರಾಜ್ಯ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಪ್ತು ಪ್ರಾಧಿಕಾರ (ಅಪೆಡಾ) ಹಾಗೂ ಕೃಷಿ ಮಾರುಕಟ್ಟೆ ಮಂಡಳಿ ಅಧಿಕಾರಿಗಳ ಸಮ್ಮುಖದಲ್ಲಿ ಉತ್ತರ ಪ್ರದೇಶದ 10 ಬೆಳೆಗಾರರು ಮತ್ತು ಇಲ್ಲಿನ 15 ವರ್ತಕರು ಒಪ್ಪಂದಕ್ಕೆ ಸಹಿ ಹಾಕಿದರು.

ಉತ್ತರ ಪ್ರದೇಶದಲ್ಲಿ ಆಲೂಗೆಡ್ಡೆ ಕೊಯ್ಲು ಫೆಬ್ರುವರಿಯಿಂದ ಆರಂಭವಾಗಲಿದೆ. ಜೂನ್‌ನಿಂದ ಜುಲೈವರೆಗೆ  ರಾಜ್ಯಕ್ಕೆ ಪೂರೈಕೆಯಾಗಲಿದೆ. ವರ್ತಕ ಚಂದ್ರಪ್ರಕಾಶ್‌ 5,000 ಟನ್‌, ಕನಕ ಟ್ರೇಡರ್ಸ್‌ ಮತ್ತು ಸನಾವುಲ್ಲಾ ಟ್ರೇಡರ್ಸ್‌ನವರು ತಲಾ 1,000 ಮೆಟ್ರಿಕ್‌ ಟನ್‌ ಖರೀದಿಸಲಿದ್ದಾರೆ.

ರಫ್ತು ಉದ್ದೇಶದಿಂದ ಸುಮುಖ ಇಂಡಸ್ಟ್ರಿ 600 ಟನ್‌ ಮತ್ತು ವಾಸುದೇವ್‌ ರಸ್ರೀಲ ಕ್ರಿಯೇಟಿವ್‌ ಕಂಪನಿ 600 ಟನ್‌ ಆಲೂಗೆಡ್ಡೆಯನ್ನು ಇಲ್ಲಿಗೆ ತರಿಸಿಕೊಳ್ಳಲಿವೆ.

‘ದೇಶದಲ್ಲಿ ಆಲೂಗೆಡ್ಡೆ ಉತ್ಪಾದನೆಯಲ್ಲಿ ಶೇ 60ರಿಂದ 70ರಷ್ಟು ಪಾಲು ನಮ್ಮ ರಾಜ್ಯದ್ದೇ ಇದೆ. ನಮ್ಮ ರಾಜ್ಯದಲ್ಲಿ ಆಂತರಿಕ ಬೇಡಿಕೆಗಿಂತ ಮೂರುಪಟ್ಟು ಹೆಚ್ಚು ಬೆಳೆಯಲಾಗುತ್ತಿದೆ. ಇಲ್ಲಿಂದ ನೆರೆಯ ದೇಶಗಳಿಗೆ ರಫ್ತು ಮಾಡಲು ಮತ್ತು ಅಂತರರಾಜ್ಯ ಮಾರುಕಟ್ಟೆ ವಿಸ್ತರಿಸಲು ರಾಜ್ಯ ಸರ್ಕಾರ ಉತ್ತೇಜನ ನೀಡುತ್ತಿದೆ. ಸಿಲಿಕಾನ್‌ ಸಿಟಿಗೆ ಕನಿಷ್ಠ 2 ಲಕ್ಷ ಟನ್‌ ಪೂರೈಸುವ ಗುರಿ ಇದೆ’ ಎಂದು ಹೊಫೆಡ್ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಕಾಂತ್‌ ಸೈನಿ ತಿಳಿಸಿದರು.

‘ಸದ್ಯಕ್ಕೆ 15 ವರ್ತಕರು ಒಪ್ಪಂದ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವ್ಯಾಪಾರಿಗಳು ಒಪ್ಪಂದಕ್ಕೆ ಆಸಕ್ತಿ ತೋರುವ ನಿರೀಕ್ಷೆ ಇದೆ. ಕುಫ್ರಿ ಜ್ಯೋತಿ ತಳಿಗೆ ನಮ್ಮ ರಾಜ್ಯದ ಮಾರುಕಟ್ಟೆಗಳಲ್ಲಿ ಹೆಚ್ಚು ಬೇಡಿಕೆ ಇದೆ. ಉತ್ತರ ಪ್ರದೇಶದಿಂದ ಪೂರೈಕೆ ಆಗುವ ಆಲೂಗೆಡ್ಡೆಯಲ್ಲಿ ಗ್ರೇಡಿಂಗ್‌ ದೋಷ ಇದೆ. ಇದನ್ನು ಸರಿಪಡಿಸಿಕೊಳ್ಳುವಂತೆ ಪೂರೈಕೆದಾರರಿಗೂ ಸಲಹೆ ನೀಡಿದ್ದೇವೆ’ ಎಂದು ಹಾಪ್‌ಕಾಮ್ಸ್‌ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ವಿಶ್ವನಾಥ್‌ ತಿಳಿಸಿದರು.

ಬೆಂಬಲ ಬೆಲೆಗೆ ಮನವಿ

‘ಆಲೂಗೆಡ್ಡೆ ಉತ್ಪಾದನಾ ವೆಚ್ಚ ಕ್ವಿಂಟಲ್‌ಗೆ ₹800ರಿಂದ ₹900 ಇದೆ. ಆದರೆ, ಉತ್ತರ ಪ್ರದೇಶದಲ್ಲಿ ಸದ್ಯ ಕ್ವಿಂಟಲ್‌ಗೆ ₹500ರಷ್ಟು ಬೆಲೆ ಸಿಗುತ್ತಿದೆ. ಬೆಳೆಗಾರರ ನೆರವಿಗೆ ಧಾವಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಾವು ಮನವಿ ಸಲ್ಲಿಸಿದ್ದೇವೆ. ಕ್ವಿಂಟಲ್‌ಗೆ ಕನಿಷ್ಠ ₹1,500 ಬೆಂಬಲ ಬೆಲೆ ನಿಗದಿಪಡಿಸಲು ಒತ್ತಾಯಿಸಿದ್ದೇವೆ’ ಎಂದು ಉತ್ತರ ಪ್ರದೇಶದ ಭಾರತೀಯ ಕಿಸಾನ್‌ ಯೂನಿಯನ್‌ ರಾಷ್ಟ್ರೀಯ ಅಧ್ಯಕ್ಷ ಸಿ.ಹರ್ಪಾಲ್‌ ಸಿಂಗ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry