‘ನಾವು ದಕ್ಕಲಿಗರು, ನಮಗಿನ್ನೂ ದಕ್ಕಿಲ್ಲ ಸೌಲಭ್ಯ’

7

‘ನಾವು ದಕ್ಕಲಿಗರು, ನಮಗಿನ್ನೂ ದಕ್ಕಿಲ್ಲ ಸೌಲಭ್ಯ’

Published:
Updated:
‘ನಾವು ದಕ್ಕಲಿಗರು, ನಮಗಿನ್ನೂ ದಕ್ಕಿಲ್ಲ ಸೌಲಭ್ಯ’

ಬೆಂಗಳೂರು: ‘ನಮ್ಮ ತಾತ ಭಿಕ್ಷೆ ಬೇಡುತ್ತಿದ್ದ. ನಮ್ಮಪ್ಪನೂ ಭಿಕ್ಷೆ ಬೇಡುತ್ತಿದ್ದ. ನಾನೂ ಭಿಕ್ಷೆ ಬೇಡುತ್ತೇನೆ, ಯಾರಾದರೂ ಕರೆದರೆ ಕೂಲಿಗೆ ಹೋಗುತ್ತೇನೆ. ನನ್ನ ಮಗನೂ ಕೂಲಿಯೋ, ಭಿಕ್ಷೆಯೋ ಮಾಡಿ ಒಂದಿಷ್ಟು ಹಿಟ್ಟೋ, ದುಡ್ಡೋ ತಂದರೆ ಮನೆಯ ಎಲ್ಲರ ಹೊಟ್ಟೆಯೂ ತುಂಬುವುದು. ಇಲ್ಲವಾದರೆ ಎಲ್ಲರಿಗೂ ಅರೆ ಹೊಟ್ಟೆ’

– ದಕ್ಕಲಿಗ ಸಮುದಾಯದ ರಾಮಣ್ಣ ಈ ಮಾತುಗಳನ್ನು ಹೇಳುವಾಗ ಅವರ ಕಣ್ಣಂಚಿನಲ್ಲಿ ನೀರು ಜಿನುಗುತ್ತಿತ್ತು. ವಿಧಾನಸೌಧದ ಎದುರು ಬುಧವಾರ ನಡೆದ ದಕ್ಕಲಿಗ ಸಮುದಾಯದವರಿಗೆ ಸಾಲ ಸೌಲಭ್ಯ ವಿತರಣಾ ಕಾರ್ಯಕ್ರಮಕ್ಕೆಂದು ದೂರದ ಬಾಗಲಕೋಟೆ ಜಿಲ್ಲೆಯ ಬಾದಾಮಿಯಿಂದ ಬಂದಿದ್ದವರಲ್ಲಿ ಇವರೂ ಒಬ್ಬರು.

‘ನಾವು ದಕ್ಕಲಿಗರು. ನಮಗಿನ್ನೂ ಸರ್ಕಾರದ ಸೌಲಭ್ಯಗಳು ದಕ್ಕಿಲ್ಲ. ಸಮಾಜದಲ್ಲಿ ನಾವು ತೀರಾ ತಳಮಟ್ಟದವರು. ಭಿಕ್ಷೆ, ಸಣ್ಣ ಪುಟ್ಟ ವ್ಯಾಪಾರ, ಕೂಲಿ ಬಿಟ್ಟರೆ ನಮಗೆ ಬೇರೆ ಕೆಲಸ ಗೊತ್ತಿಲ್ಲ. ನಮಗೆ ಇರಲು ಮನೆಯಿಲ್ಲ, ಸ್ವಂತ ಜಾಗವಿಲ್ಲ. ರಸ್ತೆ ಪಕ್ಕದಲ್ಲೋ, ಖಾಲಿ ಜಾಗದಲ್ಲೋ ಜೋಪಡಿ ಹಾಕಿಕೊಂಡು ಬದುಕುತ್ತಿದ್ದೇವೆ. ಅಲ್ಲಿಂದ ಯಾರಾದರೂ ನಮ್ಮನ್ನು ಎತ್ತಿಸಿದರೆ ಬೇರೆ ಕಡೆ ಜೋಪಡಿ ಹಾಕಿಕೊಳ್ಳುತ್ತೇವೆ. ಹೀಗೇ ಬದುಕಿನ ಅಲೆದಾಟ ನಡೆಯುತ್ತಿದೆ’ ಎಂದರು ರಾಮಣ್ಣ.

‘ನಮ್ಮ ಜೋಪಡಿಯಲ್ಲಿ ಹೆಂಗಸರು, ಮಕ್ಕಳೆಲ್ಲ ಸೇರಿ ಎಂಟು ಜನರಿದ್ದೇವೆ. ಎಂಟೂ ಜನರೂ ಕೂಲಿಯೋ, ಭಿಕ್ಷೆಯೋ ಮಾಡಿದರೆ ಮಾತ್ರ ನಮ್ಮ ಬದುಕಿನ ಬಂಡಿ ನಡೆಯುತ್ತದೆ. ನಮ್ಮಲ್ಲಿ ದೊಡ್ಡವರೂ ದುಡಿಯಬೇಕು, ಸಣ್ಣ ಮಕ್ಕಳೂ ದುಡಿಯಬೇಕು. ಪರಿಸ್ಥಿತಿ ಹೀಗಿರುವಾಗ ನಮ್ಮ ಮಕ್ಕಳು ಶಾಲೆಗೆ ಹೋಗುವುದು, ಅಕ್ಷರ ಕಲಿಯುವುದು ದೂರದ ಮಾತು’ ಎಂದರು ಅವರು.

‘ನಮ್ಮ ಸಮುದಾಯವರಿಗಾಗಿ ಸರ್ಕಾರದ ಸಾಕಷ್ಟು ಯೋಜನೆಗಳಿವೆ ಎಂದು ಹೇಳುತ್ತಿದ್ದಾರೆ. ಆದರೆ, ಅದನ್ನು ಹೇಗೆ ಪಡೆಯಬೇಕು ಎಂಬುದೇ ನಮಗೆ ಗೊತ್ತಿಲ್ಲ. ಶಾಲೆ ಕಲಿತ ನಮ್ಮೂರಿನ ಒಬ್ಬ ಹುಡುಗನಿಗೆ ಇಂದು ಸಬ್ಸಿಡಿ ಸಾಲದಲ್ಲಿ ಕಾರ್ ಕೊಟ್ಟಿದ್ದಾರೆ. ಅಷ್ಟೋ ಇಷ್ಟೋ ಅಕ್ಷರ ಕಲಿತಿದ್ದರೆ ಸಾಲ ಸೌಲಭ್ಯಗಳನ್ನು ಪಡೆಯುವುದು ಹೇಗೆ ಎಂಬುದಾದರೂ ನಮಗೆ ಗೊತ್ತಾಗುತ್ತಿತ್ತು’ ಎಂದು ನೊಂದು ನುಡಿದರು ರಾಮಣ್ಣ.

‘ದಕ್ಕಲಿಗ ಹೆಣ್ಣು ಮಕ್ಕಳಿಗೆ ₹ 40,000 ಸಬ್ಸಿಡಿ ಸಾಲದ ಚೆಕ್‌ ಕೊಡುವುದಾಗಿ ಹೇಳಿ ನಮ್ಮನ್ನು ಕರೆದುಕೊಂಡು ಬಂದಿದ್ದಾರೆ. ಚೆಕ್ ಇನ್ನೂ ಕೈಗೆ ಬಂದಿಲ್ಲ. ನಮ್ಮ ಊರಿನಲ್ಲೇ ಚೆಕ್ ಕೊಡುತ್ತೇವೆ ಎಂದು ಈಗ ಹೇಳುತ್ತಿದ್ದಾರೆ. ಚೆಕ್‌ ಕೈಗೆ ಬಂದಿದ್ದರೆ ಒಂದಿಷ್ಟು ಸಮಾಧಾನವಾಗುತ್ತಿತ್ತು. ಊರಿಗೆ ಹೋದಮೇಲೂ ಅದು ಕೈಗೆ ಬರುತ್ತದೋ ಹೇಗೋ ಗೊತ್ತಿಲ್ಲ’ ಎಂದವರು ಬಾದಾಮಿಯವರೇ ಆದ ಮರಿಯಮ್ಮ.

‘ರಾಜ್ಯದಲ್ಲಿ ದಕ್ಕಲಿಗ ಸಮುದಾಯದ 298 ಕುಟುಂಬಗಳನ್ನು ಗುರುತಿಸಲಾಗಿದೆ. ಮೊದಲ ಹಂತದಲ್ಲಿ 260 ಕುಟುಂಬಗಳಿಗೆ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ. ಸಾಂಕೇತಿಕವಾಗಿ 8 ಮಂದಿಗೆ ವಾಹನಗಳನ್ನು ವಿತರಿಸಲಾಗಿದೆ. ₹ 4.17 ಲಕ್ಷ ವಾಹನ ಸಾಲಕ್ಕೆ ಶೇ 50ರಷ್ಟು ಸಬ್ಸಿಡಿ ಇದೆ. ಹಂತ ಹಂತವಾಗಿ ಎಲ್ಲಾ ದಕ್ಕಲಿಗ ಹಾಗೂ ಅಲೆಮಾರಿ ಸಮುದಾಯದವರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುತ್ತೇವೆ’ ಎಂದು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಗಳ ಅಭಿವೃದ್ದಿ ಕೋಶದ ರಾಜ್ಯ ನೋಡಲ್ ಅಧಿಕಾರಿ ಡಾ.ಬಾಲಗುರುಮೂರ್ತಿ ತಿಳಿಸಿದರು.

ಬೆಂಗಳೂರು ನೋಡಿದ್ದು ಇದೇ ಮೊದಲು

‘ಬಾಚಣಿಗೆ, ಬಟ್ಟೆ ಪಿನ್ನು, ಬಳೆ ಮಾರಿಕೊಂಡು ಜೀವನ ಮಾಡುತ್ತಿದ್ದೇವೆ. ನಾನೂ ಸೇರಿದಂತೆ ನಮ್ಮಲ್ಲಿ ಎಷ್ಟೋ ಜನ ಬೆಂಗಳೂರು ನೋಡಿದ್ದು ಇದೇ ಮೊದಲು. ವಿಧಾನಸೌಧದ ಮುಂದೆ ಕುಳಿತಿದ್ದೇ ದೊಡ್ಡ ಸಂಭ್ರಮ ಎನಿಸುತ್ತಿದೆ. ₹ 40,000ದ ಸಬ್ಸಿಡಿ ಸಾಲ ಸಿಕ್ಕರೆ ನಮ್ಮ ಸಣ್ಣ ವ್ಯಾಪಾರಕ್ಕೆ ಒಂದಿಷ್ಟು ಬಂಡವಾಳ ಸಿಕ್ಕಂತಾಗುತ್ತದೆ’ ಎಂದವರು ರಾಯಚೂರು ಜಿಲ್ಲೆ ಸಿಂದಗಿಯ ಭೀಮವ್ವ.

ವ್ಯಾಪಾರ ಬೆಳೆಸುತ್ತೇನೆ

‘ಮೊದಲು ಸೈಕಲ್‌ನಲ್ಲಿ ಪ್ಲಾಸ್ಟಿಕ್‌ ಸಾಮಾನು ವ್ಯಾಪಾರ ಮಾಡುತ್ತಿದ್ದೆ. ಬಳಿಕ ಸ್ಕೂಟರ್‌ನಲ್ಲಿ ವ್ಯಾಪಾರ ಮುಂದುವರಿಸಿದೆ. ಸರ್ಕಾರದಿಂದ ಈಗ ವಾಹನ ಸಿಕ್ಕಿದೆ. ಈ ವಾಹನದಲ್ಲಿ ಕನಿಷ್ಠ ₹ 5,000ದ ಪ್ಲಾಸ್ಟಿಕ್‌ ಸಾಮಾನುಗಳನ್ನು ವ್ಯಾಪಾರಕ್ಕೆ ತೆಗೆದುಕೊಂಡು ಹೋಗಬಹುದು. ವಾಹನದಿಂದ ನನ್ನ ಸಣ್ಣ ವ್ಯಾಪಾರವನ್ನು ದೊಡ್ಡದಾಗಿ ಬೆಳೆಸುವ ಕನಸಿದೆ’ ಎಂದು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಡಿ. ಶಾಂತರಾಜು ಹೇಳಿದರು. ವಾಹನ ಸಾಲ ಯೋಜನೆಯಡಿ ಅವರಿಗೆ ಬೊಲೆರೊ ಮ್ಯಾಕ್ಸಿ ಟ್ರಕ್‌ ವಿತರಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry