ಶುಭಾರಂಭ ಮಾಡಿದ ಭಾರತ

7
ನಾಲ್ಕು ರಾಷ್ಟ್ರಗಳ ಆಹ್ವಾನಿತ ಹಾಕಿ: ಜಪಾನ್‌ಗೆ ಸೋಲು

ಶುಭಾರಂಭ ಮಾಡಿದ ಭಾರತ

Published:
Updated:
ಶುಭಾರಂಭ ಮಾಡಿದ ಭಾರತ

ತೌರಂಗ, ನ್ಯೂಜಿಲೆಂಡ್‌: ದಿಲ್‌ ಪ್ರೀತ್ ಸಿಂಗ್‌ ಮತ್ತು ಚೊಚ್ಚಲ ಪಂದ್ಯ ಆಡಿದ ವಿವೇಕ್ ಸಾಗರ್‌ ಪ್ರಸಾದ್‌, ಅಮೋಘ ಆಟದ ಬಲದಿಂದ ಭಾರತ, ನಾಲ್ಕು ರಾಷ್ಟ್ರಗಳ ಆಹ್ವಾನಿತ ಹಾಕಿ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಬುಧವಾರ ಇಲ್ಲಿ ನಡೆದ ಪಂದ್ಯದಲ್ಲಿ ಭಾರತ 6–0 ಗೋಲುಗಳಿಂದ ಜಪಾನ್‌ ವಿರುದ್ಧ ಗೆದ್ದಿತು. ಏಳನೇ ನಿಮಿಷದಲ್ಲಿ ರೂಪಿಂದರ್‌ ಗಳಿಸಿದ ಗೋಲಿನ ಮೂಲಕ ಮುನ್ನಡೆ ಸಾಧಿಸಿದ ಭಾರತಕ್ಕೆ 12 ಮತ್ತು 28ನೇ ನಿಮಿಷದಲ್ಲಿ ವಿವೇಕ್‌ ಅವರು ಬಲ ತುಂಬಿದರು. ದಿಲ್‌ಪ್ರೀತ್‌ 35 ಮತ್ತು 45ನೇ ನಿಮಿಷದಲ್ಲಿ ಮತ್ತು ಹರ್ಮನ್‌ ಪ್ರೀತ್‌ ಸಿಂಗ್‌ 41ನೇ ನಿಮಿಷದಲ್ಲಿ ಚೆಂಡನ್ನು ಗೋಲುಪೆಟ್ಟಿಗೆ ಸೇರಿಸಿದರು.

ಆರಂಭದಲ್ಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಭಾರತ ನಿಖರ ಮತ್ತು ವೇಗದ ಪಾಸ್‌ಗಳ ಮೂಲಕ ಜಪಾನ್ ಆಟಗಾರರನ್ನು ಗೊಂದಲಕ್ಕೆ ಸಿಲುಕಿಸಿತು. ಏಳನೇ ನಿಮಿಷದಲ್ಲಿ ಭಾರತಕ್ಕೆ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತು. ಹರ್ಮನ್‌ಪ್ರೀತ್‌ ಚೆಂಡನ್ನು ಡ್ರ್ಯಾಗ್–ಫ್ಲಿಕ್ ಮಾಡಿದರು. ಈ ಸಂದರ್ಭದಲ್ಲಿ ಎದುರಾಳಿ ತಂಡ ತಪ್ಪೆಸಗಿದ್ದರಿಂದ ಪೆನಾಲ್ಟಿ ಸ್ಟ್ರೋಕ್‌ ಅವಕಾಶವನ್ನು ನೀಡಲಾಯಿತು. ರೂಪಿಂದರ್ ಸಿಂಗ್ ಚೆಂಡನ್ನು ಗೋಲುಪೆಟ್ಟಿಗೆಯೊಳಗೆ ಸೇರಿಸಿದರು.

12ನೇ ನಿಮಿಷದಲ್ಲಿ ಜಪಾನ್‌ ಗೋಲುಪೆಟ್ಟಿಗೆ ಬಳಿ ಮಿಂಚಿನ ದಾಳಿ ನಡೆಸಿದ ವಿವೇಕ್‌ ಚೊಚ್ಚಲ ಗೋಲಿನ ಸಂಭ್ರಮದಲ್ಲಿ ತೇಲಿದರು. ಎರಡನೇ ಕ್ವಾರ್ಟರ್‌ನಲ್ಲಿ ಎದುರಾಳಿ ತಂಡದ ಮೇಲೆ ಮತ್ತಷ್ಟು ಒತ್ತಡ ಹೇರುವಲ್ಲಿ ಭಾರತ ಯಶಸ್ವಿಯಾಯಿತು. 28ನೇ ನಿಮಿಷದಲ್ಲಿ ಜಪಾನ್ ರಕ್ಷಣಾ ಕೋಟೆ ಭೇದಿಸಿದ ವಿವೇಕ್‌ ತಂಡಕ್ಕೆ 3–0 ಮುನ್ನಡೆ ಗಳಿಸಿಕೊಟ್ಟರು.

‌ದ್ವಿತೀಯಾರ್ಧದಲ್ಲಿ ಭಾರತ ಪ್ರಬಲ ದಾಳಿಗೆ ಮುಂದಾಯಿತು. 35ನೇ ನಿಮಿಷದಲ್ಲಿ ಮನ್‌ದೀಪ್ ಸಿಂಗ್ ಅವರ ಬೆಂಬಲದಲ್ಲಿ ದಿಲ್‌ಪ್ರೀತ್‌ ಬಾರಿಸಿದ ಚೆಂಡನ್ನು ತಡೆದು ಜಪಾನ್‌ ಗೋಲ್‌ ಕೀಪರ್‌ ವಾಪಸ್ ಕಳುಹಿಸಿದರು. ಆದರೆ ಶರವೇಗದಲ್ಲಿ ಮುನ್ನುಗ್ಗಿದ ದಿಲ್‌ಪ್ರೀತ್‌ ಭಾರತಕ್ಕೆ ನಾಲ್ಕನೇ ಗೋಲು ತಂದುಕೊಟ್ಟರು.

ಜಪಾನ್‌ಗೆ ಪೆನಾಲ್ಟಿ ಕಾರ್ನರ್‌

ಜಪಾನ್‌ 40ನೇ ನಿಮಿಷದಲ್ಲಿ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶ ಗಳಿಸಿತು. ಅದರ ಸದುಪಯೋಗ ಪಡೆದುಕೊಳ್ಳಲು ತಂಡಕ್ಕೆ ಸಾಧ್ಯವಾಗಲಿಲ್ಲ. ಆದರೆ ಮರು ನಿಮಿಷದಲ್ಲಿ ಭಾರತಕ್ಕೆ ಲಭಿಸಿದ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಹರ್ಮನ್‌ಪ್ರೀತ್ ಸಿಂಗ್ ಗೋಲಾಗಿ ಪರಿವರ್ತಿಸಿದರು. ನಾಲ್ಕು ನಿಮಿಷಗಳ ನಂತರ ದಿಲ್‌ಪ್ರೀತ್ ಸಿಂಗ್‌ ಮನಮೋಹಕ ಗೋಲು ಗಳಿಸಿ ಎದುರಾಳಿಗಳಿಗೆ ಭಾರಿ ಪೆಟ್ಟು ನೀಡಿದರು. ಗುರುವಾರ ಭಾರತ ತಂಡ ಬೆಲ್ಜಿಯಂ ಎದುರು ಆಡಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry