ವೇಣುಗೋಪಾಲ್‌ ಭೇಟಿಗೆ ದೌಡಾಯಿಸಿದ ಸಚಿವರು!

7

ವೇಣುಗೋಪಾಲ್‌ ಭೇಟಿಗೆ ದೌಡಾಯಿಸಿದ ಸಚಿವರು!

Published:
Updated:

ಬೆಂಗಳೂರು: ಪಕ್ಷದ ಚಟುವಟಿಕೆಯಲ್ಲಿ ಸಚಿವರು ಸಕ್ರಿಯವಾಗಿ ಭಾಗವಹಿಸುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೆ, ಬುಧವಾರ ಬೆಳಿಗ್ಗೆ ಕೆಲವು ಸಚಿವರು ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಕುಮಾರಕೃಪಾ ಅತಿಥಿಗೃಹಕ್ಕೆ ದೌಡಾಯಿಸಿದ ಸಚಿವರಾದ ಕೆ. ಆರ್‌. ರಮೇಶ್ ಕುಮಾರ್, ಪ್ರಿಯಾಂಕ ಖರ್ಗೆ, ಎಚ್. ಆಂಜನೇಯ ಪಕ್ಷ ಸಂಘಟನೆ ಮತ್ತು ಚುನಾವಣಾ ಕಾರ್ಯತಂತ್ರ ಕುರಿತು ಕೆಲಹೊತ್ತು ಚರ್ಚೆ ನಡೆಸಿದರು.

ಮಂಗಳವಾರ ನಡೆದ ಕೆಪಿಸಿಸಿ ಪದಾಧಿಕಾರಿಗಳ ಸಭೆಯಲ್ಲಿ ಪಕ್ಷದ‌ ಸಭೆ ಮತ್ತು ಕಾರ್ಯಕ್ರಮಗಳಿಗೆ ಸಚಿವರುಗಳು ಗೈರಾಗುತ್ತಿದ್ದಾರೆ ಎಂದು ಪರಮೇಶ್ವರ್ ದೂರಿದ್ದರು. ಆಗ, ಈ ಬಗ್ಗೆ ಎಚ್ಚರಿಕೆ ನೀಡುವುದಾಗಿ ವೇಣುಗೋಪಾಲ್ ಭರವಸೆ ನೀಡಿದ್ದರು.

‘ಚುನಾವಣೆಗೆ ಸಜ್ಜುಗೊಳ್ಳುವ ಉದ್ದೇಶದಿಂದ ಪದಾಧಿಕಾರಿಗಳ ಜೊತೆ ಸಭೆ ನಡೆಸಿದ್ದೇವೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಫೆ. 10 ರಿಂದ ಮೂರು ದಿನ ರಾಜ್ಯ ಪ್ರವಾಸಕ್ಕೆ ಬರಲಿದ್ದು, ಹೈದರಾಬಾದ್‌– ಕರ್ನಾಟಕ ಭಾಗದಲ್ಲಿ ಪ್ರವಾಸ ಮಾಡಲಿದ್ದಾರೆ’ ಎಂದು ವೇಣುಗೋಪಾಲ್ ತಿಳಿಸಿದರು.

ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ನೀಡಿದ ಹೇಳಿಕೆಗಳನ್ನು ಮತ್ತೆ ಖಂಡಿಸಿದ ವೇಣುಗೋಪಾಲ್‌, ‘ಈಗಾಗಲೇ ಕೆಟ್ಟ ಮಾತುಗಳನ್ನು ಆಡಿರುವ ಅನಂತಕುಮಾರ್‌, ಲೋಕಸಭೆಯಲ್ಲಿ ಕ್ಷಮೆ ಕೇಳಿದ್ದಾರೆ. ಒಬ್ಬ ಕೇಂದ್ರ ಸಚಿವರಾಗಿ ಪದೇ ಪದೇ ಇಂಥ ಹೇಳಿಕೆ ನೀಡುವುದು ಸರಿಯಲ್ಲ’ ಎಂದರು.

‘ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಬಾಯಿ ಮತ್ತು ಮನಸ್ಸು ಕೊಳಕು. ಇಂಥ ಕೊಳಕು ಮನುಷ್ಯ ದೇಶದ ಮಂತ್ರಿಯಾಗಿದ್ದೇ ದುರಂತ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ ಗುಂಡೂರಾವ್ ದೂರಿದರು.

ಪ್ರಗತಿಪರರಿಂದ ಭೇಟಿ: ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರನ್ನು ಬುಧವಾರ ಕೆಲವು ಪ್ರಗತಿಪರ ಚಿಂತಕರು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry