₹ 25 ಸಾವಿರ ಠೇವಣಿ ಇರಿಸಲು ತಾಕೀತು

7

₹ 25 ಸಾವಿರ ಠೇವಣಿ ಇರಿಸಲು ತಾಕೀತು

Published:
Updated:

ಬೆಂಗಳೂರು: ‘ಹೈಕೋರ್ಟ್‌ ಜಾರಿಗೊಳಿಸಿದ ತುರ್ತು ನೋಟಿಸ್‌ಗೆ ಆರು ತಿಂಗಳಾದರೂ ಪ್ರತ್ಯುತ್ತರ ನೀಡಿಲ್ಲ’ ಎಂಬ ಕಾರಣಕ್ಕೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಜಯನಗರ ವಲಯದ ಆರೋಗ್ಯ ಅಧಿಕಾರಿ ಅವರು, ರಿಜಿಸ್ಟ್ರಾರ್ ಜನರಲ್‌ ಬಳಿ ತಲಾ ₹ 25 ಸಾವಿರ ಠೇವಣಿ ಇರಿಸಲು ಏಕಸದಸ್ಯ ನ್ಯಾಯಪೀಠ ಆದೇಶಿಸಿದೆ.

‘ಎಲೆಕ್ಟ್ರಿಕಲ್‌ ಸ್ವಿಚ್‌ಗಳನ್ನು ತಯಾರಿಸುವ 15 ಕಾರ್ಮಿಕರನ್ನು ಹೊಂದಿದ ನಮ್ಮ ಕಿರು ಕೈಗಾರಿಕಾ ಘಟಕದ ಪರವಾನಗಿಯನ್ನು ಬಿಬಿಎಂಪಿ ಏಕಾಏಕಿ ರದ್ದುಪಡಿಸಿದೆ’ ಎಂದು ಆಕ್ಷೇಪಿಸಿ ವಿಜಯನಗರದ ಚೋಳರಪಾಳ್ಯದಲ್ಲಿರುವ ನಿರ್ಮಲಾ ಮತ್ತು ಷಣ್ಮುಗಂ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿವಾದಿಗಳಾದ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬಿಬಿಎಂಪಿಗೆ ತುರ್ತು ನೋಟಿಸ್‌ ಜಾರಿಗೊಳಿಸಲು 2017ರ ಜುಲೈ 3ರಂದು ಏಕಸದಸ್ಯ ನ್ಯಾಯಪೀಠ ಆದೇಶಿಸಿತ್ತು. ಆದರೆ, ಈ ತುರ್ತು ನೋಟಿಸ್‌ಗೆ ಈತನಕ ಉತ್ತರ ನೀಡಿಲ್ಲ ಎಂದು ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಠೇವಣಿ ಇರಿಸುವಂತೆ ಬುಧವಾರ ಆದೇಶಿಸಿದೆ.

‘ಬಿಬಿಎಂಪಿ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಶಾಮೀಲಾಗಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿವೆ’ ಎಂದು ಅತೃಪ್ತಿ ವ್ಯಕ್ತಪಡಿಸಿರುವ ನ್ಯಾಯಪೀಠ, ‘ಅಧಿಕಾರಿಗಳು ಒಂದು ವಾರದ ಒಳಗೆ ಈ ಕುರಿತಂತೆ ತಮ್ಮ ಆಕ್ಷೇಪಣೆ ಸಲ್ಲಿಸಬೇಕು.ನಿಮ್ಮ ಠೇವಣಿ ಮೊತ್ತವನ್ನು ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಏಕೆ ನೀಡಬಾರದು’ ಎಂದೂ ಕೇಳಿದೆ.

ಅರ್ಜಿದಾರರ ಕೈಗಾರಿಕಾ ಘಟಕಕ್ಕೆ ಬೆಸ್ಕಾಂ ತತ್‌ಕ್ಷಣವೇ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಆದೇಶಿಸಲಾಗಿದೆ. ಕೈಗಾರಿಕಾ ಘಟಕದ ನೆರೆಯವರು ನೀಡಿದ ದೂರನ್ನು ಆಧರಿಸಿ ಬಿಬಿಎಂಪಿ ಪರವಾನಗಿ ರದ್ದುಪಡಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry