ಸಸ್ಯಕಾಶಿಯಲ್ಲೂ ಮಹಾಮಸ್ತಕಾಭಿಷೇಕ!

7

ಸಸ್ಯಕಾಶಿಯಲ್ಲೂ ಮಹಾಮಸ್ತಕಾಭಿಷೇಕ!

Published:
Updated:
ಸಸ್ಯಕಾಶಿಯಲ್ಲೂ ಮಹಾಮಸ್ತಕಾಭಿಷೇಕ!

ಬೆಂಗಳೂರು: ಲಾಲ್‌ಬಾಗ್‌ ಉದ್ಯಾನದಲ್ಲಿ ‌ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ಇದೇ 19ರಿಂದ 28ರವರೆಗೆ ನಡೆಯಲಿದೆ. ಶ್ರವಣಬೆಳಗೊಳದಲ್ಲಿ ನಡೆಯುವ ಮಹಾಮಸ್ತಕಾಭಿಷೇಕವನ್ನು ಆಧರಿಸಿದ ಪ್ರದರ್ಶನ ಈ ಬಾರಿಯ ವಿಶೇಷ ಆಕರ್ಷಣೆ.

207ನೇ ಫಲಪುಷ್ಪ ಪ್ರದರ್ಶನದ ಸಿದ್ಧತೆ ಕುರಿತು ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದ ತೋಟಗಾರಿಕಾ ಇಲಾಖೆಯ ಆಯುಕ್ತ ಪ್ರಭಾಷ್ ಚಂದ್ರ ರೇ, ‘ಶ್ರವಣಬೆಳಗೊಳ ಬಾಹುಬಲಿ ಮೂರ್ತಿಗೆ ಫೆಬ್ರುವರಿಯಲ್ಲಿ 88ನೇ ಮಹಾಮಸ್ತಕಾಭಿಷೇಕ ನಡೆಯಲಿದೆ. ಅದರ ಸ್ಮರಣಾರ್ಥ ಗಾಜಿನ ಮನೆಯಲ್ಲಿ ಅಲ್ಲಿನ ಗೊಮ್ಮಟಗಿರಿಯ ಪ್ರತಿಕೃತಿ ನಿರ್ಮಿಸುತ್ತಿದ್ದೇವೆ. ಇದನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸುವರು. ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ,  ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅತಿಥಿಗಳಾಗಿ ಭಾಗವಹಿಸುವರು’ ಎಂದು ಮಾಹಿತಿ ನೀಡಿದರು.

‘ಶ್ರವಣಬೆಳಗೊಳವನ್ನು ದೂರದಿಂದ ನೋಡಿದಾಗ ಕಾಣುವ ದೃಶ್ಯವನ್ನು ಗಾಜಿನ ಮನೆಯಲ್ಲಿ ರೂಪಿಸುತ್ತಿ

ದ್ದೇವೆ. 30 ಅಡಿ ಎತ್ತರದ ಇಂದ್ರಗಿರಿಯ ಮೇಲೆ 11 ಅಡಿಯ ಗೊಮ್ಮಟೇಶ್ವರ ಮೂರ್ತಿಯನ್ನು (ಪುತ್ಥಳಿ ಸ್ವರೂಪದ ಮೂರ್ತಿ) ನಿರ್ಮಿಸಲಾಗುತ್ತದೆ. ಇದನ್ನು ಸುತ್ತುವರಿದ ಕೋಟೆ, ಬಂಡೆ, ಹಸಿರು ಪರಿಸರ ಇಲ್ಲಿ ಅನಾವರಣಗೊಳ್ಳುತ್ತದೆ. ಈ ಬಾಹುಬಲಿ ಮೂರ್ತಿಗೂ ಕುಂಕುಮ, ಅರಸಿನ, ಹಾಲಿನಿಂದ ಮಹಾಮಸ್ತಾಕಾಭಿಷೇಕ ನಡೆಸಲಾಗುತ್ತದೆ’ ಎಂದರು.

ಗೊಮ್ಮಟ ಮೂರ್ತಿಯನ್ನು ಹೂವುಗಳಿಂದ ನಿರ್ಮಿಸುವುದಿಲ್ಲ. ಬದಲಿಗೆ ಇಂದ್ರಗಿರಿಯ ಪ್ರತಿಕೃತಿಯನ್ನು ಹಸಿರು ಪ್ರದೇಶದಲ್ಲಿ ಅಲ್ಲಲ್ಲಿ ಏಷ್ಯಾಟಿಕ್‌ ಹಾಗೂ ಒರಿಯಂಟಲ್‌ ಲಿಲ್ಲಿಗಳು, ಲ್ಯೂಕೋಡೆಂಡ್ರಾನ್‌, ಕಾರ್ನೇಷನ್‌, ಬ್ರೋಮಿಲಿಯಾಡ್‌, ಭಕ್ಷಿಯಾ, ವ್ಯಾಕ್ಸ್‌ ಹೂವುಗಳಿಂದ ಅಲಂಕರಿಸುತ್ತೇವೆ. ಕಲಾವಿದ ರಂಜನ್‌ ನೇತೃತ್ವದಲ್ಲಿ ಈ ಪ್ರತಿಕೃತಿ ರೂಪಿಸಲಾಗುತ್ತಿದೆ ಎಂದರು.

ಗಾಜಿನ ಮನೆಯ ಎಡಭಾಗದಲ್ಲಿ ಬಾಹುಬಲಿಯ ಪಾದಗಳ ಪ್ರತಿರೂಪ, 18 ಅಡಿ ಎತ್ತರ ಹಾಗೂ 20 ಅಡಿ ಅಗಲದಲ್ಲಿ ಮಹಾಮಸ್ತಕಾಭಿಷೇಕ ಮಹೋತ್ಸವ–2018ರ ಲಾಂಛನ ನಿರ್ಮಾಣವಾಗಲಿದೆ. ಇನ್ನು ಗಾಜಿನ ಮನೆಯ ಹಿಂಭಾಗದಲ್ಲಿ ಭರತ–ಬಾಹುಬಲಿ ನಡುವೆ ನಡೆದ ದೃಷ್ಟಿಯುದ್ಧ, ಜಲಯುದ್ಧ, ಮಲ್ಲಯುದ್ಧ, ಚಕ್ರರತ್ನ ಪ್ರಯೋಗ, ವೈರಾಗ್ಯವನ್ನು ತಾಳಿ ತಪಸ್ಸಿಗೆ ನಿಂತರ ಬಾಹುಬಲಿ ಪ್ರತಿರೂಪಗಳನ್ನು ನಿರ್ಮಿಸಲಾಗುತ್ತಿದೆ.  ಬಾಹುಬಲಿಯ ಉಬ್ಬು ಶಿಲ್ಪಗಳು, ತ್ಯಾಗಮೂರ್ತಿಯ ಕುರಿತ ಸೂಕ್ತಿಗಳು ಇಲ್ಲಿರಲಿವೆ.

ಹೊರಾಂಗಣದ ಹುಲ್ಲುಹಾಸಿನ ಮೇಲೆ ಜಿರೇನಿಯಂ, ಬಿಗೋನಿಯಾ ಹೂಗಳ ಜಲಪಾತದ ಆಕೃತಿ, ಪುಷ್ಪಗಳಿಂದ ರೂಪಿಸಲಾದ ನವಿಲು, ಹೃದಯಾಕಾರದ ಹೂವಿನ ಕಮಾನುಗಳು, ತೂಗುವ ಹೂಗಳ ಬಾಗುವ ಚೆಲವು ಕಾಣಬಹುದು.

ಉತ್ತರಕರ್ನಾಟಕ ಕಲಾವಿದ ಶಿವಲಿಂಗಪ್ಪ ಎಸ್.ಬಡಿಗೇರ್‌ ಅವರು ಸಿರಿಧಾನ್ಯಗಳಿಂದ ಬಾಹುಬಲಿ ಕಲಾಕೃತಿಯನ್ನು ರೂಪಿಸಲಿದ್ದಾರೆ. ಬಣ್ಣದ ಕಿತ್ತಳೆ ಹಣ್ಣುಗಳ ಬಾಹುಬಲಿ, ಬಣ್ಣದ ರಂಗೋಲಿ ಬಾಹುಬಲಿ, ಫೋಟೊ ಗ್ಯಾಲರಿ, ಸಾಹಿತ್ಯ ವೇದಿಕೆ, ಬಾಹುಬಲಿ ಕುರಿತ ಪುಸ್ತಕ ಮಾರಾಟ, ಸಸ್ಯ ಸಂತೆ ಪ್ರವಾಸಿಗರನ್ನು ಆಕರ್ಷಿಸಲಿದೆ.

ಭದ್ರತೆ: 100 ಸಿ.ಸಿ.ಟಿ.ವಿ ಕ್ಯಾಮೆರಾ

ಗಳನ್ನು ಅಳವಡಿಸಲಾಗುತ್ತದೆ. ಇದರಲ್ಲಿ 85 ಶಾಶ್ವತ ಹಾಗೂ 15 ತಾತ್ಕಾಲಿಕ ಸಿ.ಸಿ.ಟಿ.ವಿ ಕ್ಯಾಮೆರಾಗಳಿವೆ. ಗಾಜಿನಮನೆ ಬಳಿ ಪೊಲೀಸ್‌ ಹೊರಠಾಣೆ ನಿರ್ಮಿಸಲಿದ್ದು, ಅಲ್ಲಿಂದಲೇ ಪ್ರವಾಸಿಗರ ಚಲನವಲನಗಳ ಮೇಲೆ ನಿಗಾ ವಹಿಸಲಾಗುತ್ತದೆ ಎಂದು ಆಯುಕ್ತರು ಹೇಳಿದರು.

‘ಯಾವುದೇ ಅನಾಹುತ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ. ಗೆದ್ದಲು ಹಿಡಿದು ಟೊಳ್ಳಾಗಿದ್ದ 10 ಮರಗಳನ್ನು ತೆರವು ಮಾಡಿದ್ದೇವೆ’ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಜಗದೀಶ್‌ ತಿಳಿಸಿದರು.

₹1.63 ಕೋಟಿ ಖರ್ಚು: ‘ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ ₹1.63 ಕೋಟಿ ವೆಚ್ಚ ಮಾಡುತ್ತಿದ್ದೇವೆ. ಗಾಜಿನ ಮನೆಯಲ್ಲಿ ನಿರ್ಮಿಸುತ್ತಿರುವ ಪ್ರತಿಕೃತಿಗೆ ಸುಮಾರು ₹30 ಲಕ್ಷ ಖರ್ಚಾಗಲಿದೆ. 3 ಲಕ್ಷದಿಂದ 4 ಲಕ್ಷ ಮಂದಿ ಭೇಟಿ ನೀಡುವ ನಿರೀಕ್ಷೆ ಇದೆ. ₹2 ಕೋಟಿ ಆದಾಯ ಬರುತ್ತದೆ ಎಂದು ಅಂದಾಜಿಸಲಾಗಿದೆ’ ಎಂದು ಆಯುಕ್ತರು ತಿಳಿಸಿದರು.

ಗ್ರಂಥಾಲಯ ಉದ್ಘಾಟನೆ: ಲಾಲ್‌

ಬಾಗ್‌ನಲ್ಲಿರುವ ಎಂ.ಎಚ್‌. ಮರಿಗೌಡ ಗ್ರಂಥಾಲಯ ಪುನಶ್ಚೇತನ ಕೆಲಸ ಪೂರ್ಣಗೊಂಡಿದ್ದು, ಫಲಪುಷ್ಪ ಪ್ರದರ್ಶನದ ವೇಳೆ ಉದ್ಘಾಟಿಸಲಾ

ಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry