ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಸಂತಿ ಅಮರ್‌ಗೆ ಮತ್ತೆ ಹೈಕೋರ್ಟ್‌ ಚಾಟಿ

Last Updated 17 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ರಮ ಖಾತೆ ಬದಲಾವಣೆ ಆರೋಪದಲ್ಲಿ ಮಂಗಳವಾರವಷ್ಟೇ (ಜ.16) ಹೈಕೋರ್ಟ್‌ ಏಕಸದಸ್ಯ ನ್ಯಾಯಪೀಠದಿಂದ ಅಮಾನತು ಆದೇಶಕ್ಕೆ ಗುರಿಯಾಗಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮಹದೇವಪುರ ವಲಯದ ಜಂಟಿ ಆಯುಕ್ತೆ ಬಿ.ವಿ.ವಾಸಂತಿ ಅಮರ್ ಅವರಿಗೆ ಮತ್ತೊಂದು ಪ್ರಕರಣದಲ್ಲಿ ಹೈಕೋರ್ಟ್‌ ಚಾಟಿ ಬೀಸಿದೆ.

‘ಖಾತೆ ಬದಲಾವಣೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪ್ರದೇಶ ಮಹಿಳಾ ಕಾಂಗ್ರೆಸ್‌ ಸಮಿತಿ ರಾಜ್ಯ ಸಂಘಟನಾ ಕಾರ್ಯದರ್ಶಿ ಪಾರ್ವತಿ ರೆಡ್ಡಿ ಅರ್ಜಿಯನ್ನು ವಾಸಂತಿ ಅಮರ್ ಕಾನೂನು ಬಾಹಿರವಾಗಿ ಮಾನ್ಯ ಮಾಡಿದ್ದಾರೆ’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಕಿಡಿ ಕಾರಿದೆ.

ಕುಂದಣಹಳ್ಳಿಯ ‘ಹ್ಯಾಬಿಟ್ಯಾಟ್‌ ಓನರ್ಸ್‌ ಅಸೋಸಿಯೇಷನ್‌’ ಅಧ್ಯಕ್ಷ ಅಜಿತ್ ಕಾರ್ನಾಡ್‌ ಪರ ವಾದ ಮಂಡಿಸಿದ ವಕೀಲ ಧನಂಜಯ ಜೋಷಿ, ‘ಅರ್ಜಿದಾರರು ಅಪಾರ್ಟ್‌ಮೆಂಟ್‌ ಮಾಲೀಕರು. ಇವರ ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ಅಧೀನ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದೆ. ಈ ಪ್ರಕರಣದಲ್ಲಿ ಬಿಬಿಎಂಪಿ ಅರ್ಜಿದಾರರ ವಿರುದ್ಧ ಕ್ರಮಕ್ಕೆ ಮುಂದಾಗದಂತೆ ನ್ಯಾಯಾಲಯದ ತಡೆಯಾಜ್ಞೆಯೂ ಇದೆ’ ಎಂದರು.

‘ಪಾರ್ವತಿ ರೆಡ್ಡಿ ಅವರಿಗೆ ಈ ಪ್ರಕರಣದಲ್ಲಿ ಮೂಗು ತೂರಿಸಲು ಯಾವುದೇ ಅಧಿಕಾರವಿಲ್ಲ. ಆದರೂ ಜಂಟಿ ಆಯುಕ್ತರು ಪಾರ್ವತಿ ರೆಡ್ಡಿಯವರ ಅರ್ಜಿಯನ್ನು ಕಾನೂನು ಬಾಹಿರವಾಗಿ ಮಾನ್ಯ ಮಾಡಿದ್ದಾರೆ’ ಎಂದು ಜೋಷಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಕೋಪೋದ್ರಿಕ್ತರಾದ ನ್ಯಾಯಮೂರ್ತಿ, ‘ಜಂಟಿ ಆಯುಕ್ತರಿಗೆ ಅಷ್ಟೂ ಕಾನೂನು ಗೊತ್ತಿಲ್ಲವೇ, ಯಾರವರು, ಅವರ ಹೆಸರೇನು’ ಎಂದು ಜೋಷಿ ಅವರನ್ನು ಪ್ರಶ್ನಿಸಿದರು.

‘ಹೆಸರು ಗೊತ್ತಿಲ್ಲ’ ಎಂದು ಜೋಷಿ ಹೇಳುತ್ತಿದ್ದಂತೆಯೇ ಆದೇಶದ ಉಕ್ತಲೇಖನ ನೀಡಿದ ನ್ಯಾಯಮೂರ್ತಿಗಳು, ‘ಇದೊಂದು ಗಂಭೀರ ಪ್ರಕರಣ. ಇದರಲ್ಲಿ ಜಂಟಿ ಆಯುಕ್ತರನ್ನೂ (ವಾಸಂತಿ) ಪ್ರತಿವಾದಿಯನ್ನಾಗಿ ಸೇರ್ಪಡೆ ಮಾಡಿ. ನ್ಯಾಯಾಲಯದ ಆದೇಶಗಳಿದ್ದರೂ ಒಂದೇ ಸಮನೆ ತಮ್ಮ ಅಧಿಕಾರ ಚಲಾಯಿಸಿ ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ಅವರ ವಿರುದ್ಧ ನೋಟಿಸ್ ಜಾರಿಗೆ ಆದೇಶಿಸಿದರು.

‘ಈ ಪ್ರಕರಣದಲ್ಲಿ ಜಂಟಿ ಆಯುಕ್ತರು ಯಾವುದೇ ಕ್ರಮಕ್ಕೆ ಮುಂದಾಗಬಾರದು ಮತ್ತು ಮುಂದಿನ ವಿಚಾರಣೆ ವೇಳೆಗೆ ಅವರು, ವೈಯಕ್ತಿಕವಾಗಿ ತಮ್ಮ ಪ್ರಮಾಣ ಪತ್ರ ಸಲ್ಲಿಸಬೇಕು’ ಎಂದೂ ಆದೇಶಿಸಿದರು.

‘ಈ ಆದೇಶದ ಪ್ರತಿಯನ್ನು ರಾಜ್ಯ ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿ ಹಾಗೂ ಬಿಬಿಎಂಪಿ ಆಯುಕ್ತರಿಗೆ ರವಾನಿಸಿ. ಜಂಟಿ ಆಯುಕ್ತರ ನಡೆ ಕುರಿತಂತೆ ಸೂಕ್ತ ವರದಿ ತರಿಸಿಕೊಳ್ಳಿ. ಅಂತೆಯೇ ಪಾರ್ವತಿ ರೆಡ್ಡಿ ಅವರಿಗೆ ಎಚ್ಚರಿಕೆ ರೂಪದಲ್ಲಿ ಏಕೆ ದಂಡ ವಿಧಿಸಬಾರದು ಮತ್ತು ಶಿಸ್ತು ಕ್ರಮ ಕೈಗೊಳ್ಳಬಾರದು’ ಎಂದೂ ನ್ಯಾಯಪೀಠ ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT