ಕಾಯ್ದಿರಿಸಿದ ಟಿಕೆಟ್ ಕೇಂದ್ರದಲ್ಲಿಲ್ಲ ಸವಲತ್ತು

7

ಕಾಯ್ದಿರಿಸಿದ ಟಿಕೆಟ್ ಕೇಂದ್ರದಲ್ಲಿಲ್ಲ ಸವಲತ್ತು

Published:
Updated:

ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲು ನಿಲ್ದಾಣದಲ್ಲಿನ 5ನೇ ಪ್ಲಾಟ್‌ಫಾರಂ ಬಳಿ ಕಾಯ್ದಿರಿಸಿದ ಟಿಕೆಟ್‌ ಕೇಂದ್ರದಲ್ಲಿ ಪ್ರತ್ಯೇಕವಾದ ಕೌಂಟರ್‌ ಇಲ್ಲದೆ ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ ತೊಂದರೆಯಾಗಿದೆ.

ಕಾಯ್ದಿರಿಸಿದ ಟಿಕೆಟ್‌ ಪಡೆಯುವ ಕೇಂದ್ರದಲ್ಲಿ 12 ಕೌಂಟರ್‌ಗಳಿವೆ. ವೃದ್ಧರು, ಗರ್ಭಿಣಿಯರು ಸರತಿಯಲ್ಲಿ ತಾಸುಗಟ್ಟೆಲೆ ಕಾದು ಟಿಕೆಟ್‌ ಪಡೆಯುವ ಸ್ಥಿತಿ ಇದೆ.

‘ನನಗೀಗ 75 ವರ್ಷ ವಯಸ್ಸು. 20 ನಿಮಿಷ ಸಾಲಿನಲ್ಲಿ ನಿಂತು ಟಿಕೆಟ್‌ ಪಡೆಯಬೇಕಾಯಿತು. ಸರತಿಯಲ್ಲಿ ನಿಂತವರು ವಯಸ್ಸಾದವರಿಗೆ ಅವಕಾಶ ನೀಡುವುದಿಲ್ಲ. ಟಿಕೆಟ್‌ ಕೌಂಟರ್‌ಗಳಲ್ಲಿ ವಯಸ್ಸಾದವರಿಗೆ ಆದ್ಯತೆ ಕೊಡುವಂತೆ ಸಿಬ್ಬಂದಿಯೂ ಸೂಚನೆ ಕೊಡುವುದಿಲ್ಲ’ ಎಂದು ಜಯನಗರ ನಿವಾಸಿ ಶಂಭುಲಿಂಗ ಸಮಸ್ಯೆ ವಿವರಿಸಿದರು.

‘ಟಿಕೆಟ್‌ ಪಡೆಯುವಾಗ ಉಂಟಾಗುವ ನೂಕುನುಗ್ಗಲಿನಿಂದ ಮಹಿಳೆಯರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಇದನ್ನು ತಪ್ಪಿಸಲು ಮಹಿಳೆಯರಿಗಾಗಿ ಒಂದು ಕೌಂಟರ್‌ ಮೀಸಲಿಡಬೇಕು. ಮಹಿಳೆಯರಿಲ್ಲದಿದ್ದಾಗ ಉಳಿದವರು ಅದನ್ನು ಬಳಸುವಂತೆ ಇರಲಿ’ ಎಂದು ಕೋರಮಂಗಲದ ನಿವಾಸಿ ಸುನಿತಾ ಸಲಹೆ ನೀಡಿದರು.

ರೈಲು ನಿಲ್ದಾಣದ ಮುಂಭಾಗದಲ್ಲಿರುವ ಸಾಮಾನ್ಯ ಟಿಕೆಟ್‌ ಪಡೆಯುವ ಕೇಂದ್ರದಲ್ಲಿ ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ ಹಾಗೂ ಮಹಿಳೆಯರಿಗೆ ವಿಶೇಷ ಕೌಂಟರ್‌ ವ್ಯವಸ್ಥೆ ಇದೆ.

‘ಹೊಸದಾಗಿ ಕೌಂಟರ್‌ ಪ್ರಾರಂಭಿಸಲು 1,200 ಟಿಕೆಟ್‌ ನೀಡುವಷ್ಟು ಜನಸಾಂದ್ರತೆ ಇರಬೇಕು. ಇಲ್ಲದಿದ್ದರೆ, ನಿರ್ವಹಣೆ ಕಷ್ಟ’ ಎಂದು ವಿಭಾಗೀಯ ಹಿರಿಯ ವ್ಯವಸ್ಥಾಪಕ ಶ್ರೀಧರ್‌ ಮೂರ್ತಿ ಪ್ರತಿಕ್ರಿಯಿಸಿದರು.

‘ಬಹುತೇಕರು ಆನ್‌ಲೈನ್‌ ಮೂಲಕವೇ ಟಿಕೆಟ್‌ ಪಡೆಯುತ್ತಾರೆ. ಕಾಯ್ದಿರಿಸಿದ ಟಿಕೆಟ್‌ ಪಡೆಯುವ ಕೇಂದ್ರದಲ್ಲಿ ಜನದಟ್ಟಣೆ ಕಾಣುವುದಿಲ್ಲ. ಹಿರಿಯ ನಾಗರಿಕರು, ಮಹಿಳೆಯರು ಸೇರಿ ದಿನಕ್ಕೆ 50 ಜನ ಇರುತ್ತಾರೆ. ಅದಕ್ಕಾಗಿ ಹೊಸ ಕೌಂಟರ್‌ ತೆರೆಯಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ಸಿಟಿ ರೈಲು ನಿಲ್ದಾಣದ ಮುಖ್ಯ ಪ್ರವೇಶದ್ವಾರದ ಬಳಿಯ ಟಿಕೆಟ್‌ ಕೇಂದ್ರದಲ್ಲಿ ಹಿರಿಯ ನಾಗರಿಕರಿಗೆ ಮತ್ತು ಮಹಿಳೆಯರಿಗೆ ವಿಶೇಷ ಕೌಂಟರ್‌ಗಳಿವೆ. ಒಂದು ಕಡೆ ಇಂತಹ ಸೌಲಭ್ಯ ಕಲ್ಪಿಸಬಹುದೇ ಹೊರತು, ಎಲ್ಲ ಕಡೆಯೂ ಆಗುವುದಿಲ್ಲ. ಈಗ ಒದಗಿಸಿರುವ ಸೌಲಭ್ಯವನ್ನೇ ಹಿರಿಯ ನಾಗರಿಕರು ಬಳಸಿಕೊಳ್ಳಬೇಕು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry