ಸರ್ಕಾರಿ ನೌಕರರೆಂದು ಪರಿಗಣಿಸಿ

7

ಸರ್ಕಾರಿ ನೌಕರರೆಂದು ಪರಿಗಣಿಸಿ

Published:
Updated:
ಸರ್ಕಾರಿ ನೌಕರರೆಂದು ಪರಿಗಣಿಸಿ

ಬೆಂಗಳೂರು: ಆಶಾ, ಬಿಸಿಯೂಟ ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಸರ್ಕಾರಿ ಕಾರ್ಮಿಕರೆಂದೇ ಪರಿಗಣಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ವತಿಯಿಂದ ಆನಂದ್ ರಾವ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.

ವಿವಿಧ ಬೇಡಿಕೆ ಮುಂದಿಟ್ಟುಕೊಂಡು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ (ಸಿಐಟಿಯು) ಸದಸ್ಯರು ಕೇಂದ್ರ ಸಚಿವರಾದ ಅನಂತಕುಮಾರ್ ಅವರ ಕಚೇರಿ ಮುಂದೆ ಹಾಗೂ ಡಿ.ವಿ.ಸದಾನಂದಗೌಡ ಅವರ ಮನೆ ಬಳಿ ಧರಣಿ ನಡೆಸಿದರು.

ರಾಜ್ಯದಲ್ಲಿ 1.30 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಅವರ ಗೌರವಧನ ಹೆಚ್ಚಿಸಬೇಕು ಎಂದು ಎಐಯುಟಿಯುಸಿ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ವಿ.ಭಟ್ ಒತ್ತಾಯಿಸಿದರು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ 2017ರ ನ.9 ರಿಂದ 11ರವರೆಗೆ ದೆಹಲಿಯಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆವು. ಕಾರ್ಯಕರ್ತೆಯರ ಗೌರವ ಧನ ಹೆಚ್ಚಿಸುವುದಿಲ್ಲ. ಅದು ಆಯಾ ರಾಜ್ಯ ಸರ್ಕಾರಗಳ ಜವಾಬ್ದಾರಿ ಎಂದು ಪ್ರಧಾನಿ ಸಂಸತ್ ಅಧಿವೇಶನದಲ್ಲಿ ಹೇಳುವ ಮೂಲಕ ಹೊಣೆಯಿಂದ ನುಣುಚಿಕೊಂಡಿದ್ದಾರೆ. ಕೇಂದ್ರದ ಮಹಿಳಾ ಹಾಗೂ ಕಾರ್ಮಿಕ ವಿರೋಧಿ ನೀತಿಗೆ ಇದು ಕನ್ನಡಿ ಎಂದು ಕಿಡಿಕಾರಿದರು.

ಆಶಾ ಹಾಗೂ ಬಿಸಿಯೂಟ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸುವುದಾಗಿ ಈ ಬಾರಿಯ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಘೋಷಿಸಬೇಕು. ‘ಆಶಾ ಸಾಫ್ಟ್‌’ ತಂತ್ರಾಂಶದ ಲೋಪಗಳನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಅನುದಾನ ಕಡಿತ ಬೇಡ: ಸಮಗ್ರ ಶಿಶು ಅಭಿವೃದ್ಧಿ ಹಾಗೂ ಬಿಸಿಯೂಟ ಯೋಜನೆಗಳಿಗೆ ಕೇಂದ್ರ ಸರ್ಕಾರವು ಅನುದಾನ ಕಡಿತಗೊಳಿಸಿದೆ. ಇದರಿಂದ ಈ ಯೊಜನೆಯ ಕಾರ್ಯಕ್ರಮಗಳು ಸಮರ್ಪಕವಾಗಿ ಜಾರಿಯಾಗಿಲ್ಲ. ಮುಂದಿನ ಬಜೆಟ್‌ನಲ್ಲಿ ಕೇಂದ್ರವು ಈ ಯೋಜನೆಗಳಿಗೆ ಹೆಚ್ಚು ಅನುದಾನ ನೀಡಬೇಕು.  ಸಚಿವರಾದ ಅನಂತ ಕುಮಾರ್, ಸದಾನಂದಗೌಡ, ರಮೇಶ್ ಜಿಗಜಿಣಗಿ, ಅನಂತಕುಮಾರ್ ಹೆಗಡೆ ಅವರು ಪ್ರಧಾನಿ ಮೇಲೆ ಒತ್ತಡ ಹೇರಬೇಕು ಎಂದು ರಾಜ್ಯ ಅಂಗನವಾಡಿ ನೌಕರರ ಸಂಘದ ಉಪಾಧ್ಯಕ್ಷೆ ಟಿ.ಲೀಲಾವತಿ ಒತ್ತಾಯಿಸಿದರು.

‘ವೈಯಕ್ತಿಕ ಕೆಲಸದ ನಿಮಿತ್ತ ಹುಟ್ಟೂರಿಗೆ ಬಂದಿದ್ದೇನೆ. ಹೀಗಾಗಿ, ನಿಮ್ಮನ್ನು ಭೇಟಿಯಾಗಲು ಸಾಧ್ಯವಿಲ್ಲ. ಗುರುವಾರ ಮಧ್ಯಾಹ್ನ ನಿಮ್ಮೊಂದಿಗೆ ಸಭೆ ನಡೆಸುತ್ತೇನೆ’ ಎಂದು ಸದಾನಂದಗೌಡರು ಪ್ರತಿಭಟನಾಕಾರರಿಗೆ ಪತ್ರದ ಮೂಲಕ ತಿಳಿಸಿದರು. ಅದಕ್ಕೆ ಒಪ್ಪಿದ ಧರಣಿನಿರತರು ಪ್ರತಿಭಟನೆ ಕೈಬಿಟ್ಟರು.

‘ಅನಂತ್‌ ಕುಮಾರ್‌ ಅವರು ಇದೇ 21ರಂದು ಸಭೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಹಾಗಾಗಿ ಧರಣಿ ಕೈಬಿಟ್ಟಿದ್ದೇವೆ’ ಎಂದು ಸಂಘದ ಮಾಲಿನಿ ಮೇಸ್ತ ತಿಳಿಸಿದರು.

ಪ್ರಮುಖ ಬೇಡಿಕೆಗಳು

* ₹18,000 ಕನಿಷ್ಠ ವೇತನ ನೀಡಬೇಕು.

* ನಿವೃತ್ತ ಕಾರ್ಯಕರ್ತೆಯರಿಗೆ ತಿಂಗಳಿಗೆ ₹3,000 ಪಿಂಚಣಿ ನೀಡಬೇಕು

* ಮಾತೃ ಪೂರ್ಣ ಯೋಜನೆಗೆ ಮೂಲಸೌಕರ್ಯ ಒದಗಿಸಿ, ₹ 2,000 ಹೆಚ್ಚುವರಿ ಭತ್ಯೆ ನೀಡಬೇಕು

* ರಾಜ್ಯದ 34,000 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ಕಲ್ಪಿಸಬೇಕು.

* ಅಂಗನವಾಡಿ ಕೇಂದ್ರಗಳ ಸಮಯವನ್ನು ಹಿಂದಿನಂತೆ ಜಾರಿ ಮಾಡಬೇಕು

* ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಹೊಣೆಯನ್ನು ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಹೇರಬಾರದು

* ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಕೇಂದ್ರ ಸರ್ಕಾರ ಅನುದಾನ ಕಡಿತ ಮಾಡಬಾರದು

* ಯೋಜನೆಗಳನ್ನು ಖಾಸಗೀಕರಣಗೊಳಿಸಬಾರದು

* ಆಶಾ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಬೇಕು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry