ಬೈಕ್‌ ಹತ್ತಿಸಿ ಕಾನ್‌ಸ್ಟೆಬಲ್‌ ಕೊಲೆಗೆ ಯತ್ನ

7

ಬೈಕ್‌ ಹತ್ತಿಸಿ ಕಾನ್‌ಸ್ಟೆಬಲ್‌ ಕೊಲೆಗೆ ಯತ್ನ

Published:
Updated:

ಬೆಂಗಳೂರು: ಯುವತಿಯೊಬ್ಬರ ಅಪಹರಣ ಪ್ರಕರಣದ ಆರೋಪಿಯನ್ನು ಬಂಧಿಸಲು ಹೋಗಿದ್ದ ಮಹಾಲಕ್ಷ್ಮಿ ಲೇಔಟ್ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ಅನಿಲ್‌ಕುಮಾರ್‌ ಮೇಲೆ ಬೈಕ್‌ ಹತ್ತಿಸಿ ಕೊಲೆಗೆ ಯತ್ನಿಸಲಾಗಿದೆ.

ಶೆಟ್ಟಿಹಳ್ಳಿಯ ಅಂಜನಾದ್ರಿ ಬಡಾವಣೆಯಲ್ಲಿ ಜ. 15ರಂದು ಈ ಘಟನೆ ನಡೆದಿದೆ. ಗಾಯಗೊಂಡಿರುವ ಅನಿಲ್‌ಕುಮಾರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

19 ವರ್ಷದ ಮಗಳು ಕಾಣೆಯಾದ ಬಗ್ಗೆ ಕಾಮಾಕ್ಷಿಪಾಳ್ಯ ನಿವಾಸಿ ಗೋವಿಂದಪ್ಪ ಎಂಬುವರು ಮಹಾಲಕ್ಷ್ಮಿ ಲೇಔಟ್‌ ಠಾಣೆಗೆ ಜ. 14ರಂದು ದೂರು ನೀಡಿದ್ದರು. ಓಂ ಸುಮನ್‌ ಎಂಬಾತ ಮಗಳನ್ನು ಕರೆದುಕೊಂಡು ಹೋಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದರು. ತನಿಖೆ ಕೈಗೊಂಡಿದ್ದ ಪೊಲೀಸರು, ಅಂಜನಾದ್ರಿ ಬಡಾವಣೆಯಲ್ಲಿ ಆರೋಪಿ ಇರುವ ಬಗ್ಗೆ ಮಾಹಿತಿ ಕಲೆಹಾಕಿದ್ದರು.

ಅನಿಲ್‌ಕುಮಾರ್‌, ಆರೋಪಿಯನ್ನು ಬಂಧಿಸಲು ಸ್ಥಳಕ್ಕೆ ಹೋಗಿದ್ದರು. ಬೆಳಿಗ್ಗೆ 9.30 ಗಂಟೆಗೆ ಆರೋಪಿ ಪಲ್ಸರ್‌ ಬೈಕ್‌ನಲ್ಲಿ ಹೊರಟಿದ್ದನ್ನು ಗಮನಿಸಿದ್ದ ಹೆಡ್‌ ಕಾನ್‌ಸ್ಟೆಬಲ್‌, ಬೈಕ್‌ ನಿಲ್ಲಿಸಲು ಯತ್ನಿಸಿದ್ದರು. ಆಗ ಆರೋಪಿ, ಅವರಿಗೆ ಬೈಕ್‌ ಗುದ್ದಿಸಿ ಮೈ ಮೇಲೆಯೇ ಹತ್ತಿಸಿಕೊಂಡು ಹೋಗಿದ್ದ. ಕೆಳಗೆ ಬಿದ್ದ ಅನಿಲ್‌ಕುಮಾರ್ ಅವರ ಎಡಗೈ ಹಾಗೂ ಬಲಗಾಲಿಗೆ ತೀವ್ರ ಪೆಟ್ಟು ಬಿದ್ದಿತ್ತು. ಅವರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದರು ಎಂದು ಬಾಗಲಗುಂಟೆ ಪೊಲೀಸರು ಹೇಳಿದರು.

ಘಟನೆಯಲ್ಲಿ ಆರೋಪಿಗೂ ಗಾಯವಾಗಿದ್ದು, ಪೀಪಲ್‌ ಟ್ರೀ ಆಸ್ಪತ್ರೆಗೆ ದಾಖಲಿಸಲಾಗಿದೆ. ಕರ್ತವ್ಯಕ್ಕೆ ಅಡ್ಡಿ, ಕೊಲೆಗೆ ಯತ್ನ ಆರೋಪದಡಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಬಳಿಕ ವಶಕ್ಕೆ ಪಡೆದು ವಿಚಾರಣೆ ನಡೆಸುವುದಾಗಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry