ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೇ ತಿಂಗಳಲ್ಲಿ ಪೂರ್ಣಗೊಂಡ 30 ಕಂಬಗಳ ನಿರ್ಮಾಣ

Last Updated 17 ಜನವರಿ 2018, 19:48 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಬೈಯಪ್ಪನಹಳ್ಳಿ–ವೈಟ್‌ಫೀಲ್ಡ್‌ ಮಾರ್ಗದ (ರೀಚ್‌1) ವಿಸ್ತರಣೆ ಕಾಮಗಾರಿ ಪ್ರಗತಿಯಲ್ಲಿದೆ. 2017ರ ಜೂನ್‌ನಲ್ಲಿ ಇದರ ಕೆಲಸ ಆರಂಭವಾಗಿದ್ದು, ಈ ಎತ್ತರಿಸಿದ ಮಾರ್ಗದ 30 ಕಾಂಕ್ರೀಟ್‌ ಕಂಬಗಳು ಆರೇ ತಿಂಗಳಲ್ಲಿ ಪೂರ್ಣಗೊಂಡಿವೆ.

ಬೈಯಪ್ಪನಹಳ್ಳಿಯಿಂದ ವಿಶ್ವೇಶ್ವರಯ್ಯ ಕೈಗಾರಿಕಾ ಪ್ರದೇಶದವರೆಗಿನ ಕಾಮಗಾರಿಯನ್ನು ರೀಚ್‌ 1ಎ ಹಾಗೂ ವಿಶ್ವೇಶ್ವರಯ್ಯ ಕೈಗಾರಿಕಾ ಪ್ರದೇಶ ನಿಲ್ದಾಣದಿಂದ ವೈಟ್‌ಫೀಲ್ಡ್‌ವರೆಗಿನ ಕಾಮಗಾರಿಯನ್ನು ರೀಚ್‌ 1ಬಿ ಎಂದು ವಿಂಗಡಿಸಲಾಗಿದೆ. ಈ ಎರಡೂ ಪ್ಯಾಕೇಜ್‌ಗಳನ್ನೂ ಐಟಿಡಿ ಸಿಮೆಂಟೇಷನ್‌ ಇಂಡಿಯಾ ಕಂಪನಿಗೆ ವಹಿಸಲಾಗಿದೆ.

ಈ ಮಾರ್ಗದಲ್ಲಿ ಒಟ್ಟು 579 ಕಾಂಕ್ರೀಟ್‌ ಪಿಲ್ಲರ್‌ಗಳು ಬರಲಿದ್ದು ಬೈಯಪ್ಪನಹಳ್ಳಿಯಿಂದ ವಿಶ್ವೇಶ್ವಯ್ಯ ಕೈಗಾರಿಕಾ ಪ್ರದೇಶ ನಿಲ್ದಾಣದವರೆಗೆ 18 ಕಂಬಗಳು ಹಾಗೂ ಅಲ್ಲಿಂದ ವೈಟ್‌ಫೀಲ್ಡ್‌ವರೆಗೆ 12 ಕಂಬಗಳು ಪೂರ್ಣಗೊಂಡಿವೆ.

ಈ ಮಾರ್ಗದಲ್ಲಿ ಒಟ್ಟು 3,600 ಕಡೆ ತಳಪಾಯ (ಪೈಲ್‌ ಮತ್ತು ಪೈಲ್‌ ಕ್ಯಾಪ್‌) ನಿರ್ಮಿಸಬೇಕಿದ್ದು, ಈ ಪೈಕಿ 1,100 ಕಡೆ ಇದರ ಕೆಲಸ ಮುಗಿದಿದೆ.

ಬೈಯಪ್ಪನಹಳ್ಳಿ–ವೈಟ್‌ಫೀಲ್ಡ್‌ ರಸ್ತೆಯ ಪಕ್ಕದಲ್ಲೇ ಮೆಟ್ರೊ ಮಾರ್ಗ ಹಾದುಹೋಗುತ್ತದೆ. ಲಾರೆನ್ಸ್‌ ಸ್ಕೂಲ್‌, ಮಹದೇವಪುರ, ಹೂಡಿ, ಐಟಿಪಿಲ್‌, ಹೋಪ್‌ ಫಾರ್ಮ್‌ ಬಳಿ ಕಾಂಕ್ರೀಟ್‌ ಕಂಬಗಳನ್ನು ಅಳವಡಿಸುವ ಕೆಲಸ ಪ್ರಗತಿಯಲ್ಲಿದೆ. ಹೆಚ್ಚಿನ ಕಡೆ ತಳಪಾಯದ ಕೆಲಸವೂ ಶುರುವಾಗಿದೆ ಎಂದು ನಿಗಮದ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಮಗಾರಿ ಪೂರ್ಣಗೊಳಿಸಲು 27 ತಿಂಗಳು ಕಾಲಾವಕಾಶ ನೀಡಲಾಗಿತ್ತು. ಆ ಪ್ರಕಾರ 2020ರ ಒಳಗೆ ಎಲ್ಲ ಕೆಲಸಗಳು ಮುಗಿಯಬೇಕಿದೆ. ಈಗಿನ ವೇಗದಲ್ಲೇ ಕೆಲಸ ಮುಂದುವರಿದರೆ ಗಡುವಿನ ಒಳಗೆ ಈ ಮಾರ್ಗವು ಸಿದ್ಧವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕುಡಿಯುವ ನೀರು ಪೂರೈಸುವ ಕೊಳವೆಗಳು ಹಾಗೂ ಒಳಚರಂಡಿ ಸ್ಥಳಾಂತರ ಕಾರ್ಯವೂ ಕೆಲವು ಕಡೆ ನಡೆಯುತ್ತಿದೆ. ಸಾಧ್ಯವಿರುವ ಕಡೆಗಳಲ್ಲೆಲ್ಲ ರಸ್ತೆ ವಿಸ್ತರಣೆ ಮಾಡಿಕೊಂಡು, ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಕಾಮಗಾರಿ ಆರಂಭಿಸಿದ್ದೇವೆ ಎಂದು ಅವರು ವಿವರಿಸಿದರು.

ಕಟ್ಟಡ ನೆಲಸಮ ಮಾಡುವ ಕಾರ್ಯ ನಡೆಯುತ್ತಿದೆ. ಈಗಾಗಲೇ 102 ಕಟ್ಟಡಗಳನ್ನು ಕೆಡವಲಾಗಿದೆ. ಇನ್ನೂ 20 ಕಟ್ಟಡಗಳನ್ನು ಕೆಡವಲು ಬಾಕಿ ಇದೆ.

ವಾಹನ ಸಂಚಾರ ನಿಯಂತ್ರಣಕ್ಕೆ ಮಾರ್ಷಲ್‌ಗಳ ನೆರವು

ಬೈಯಪ್ಪನಹಳ್ಳಿ–ವೈಟ್‌ಫೀಲ್ಡ್‌ ರಸ್ತೆ ದಿನವಿಡೀ ವಾಹನ ಸಂಚಾರ ದಟ್ಟಣೆಯಿಂದ ಕೂಡಿರುತ್ತದೆ. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಇಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದೆ. ಸಂಚಾರ ದಟ್ಟಣೆ ಆಗದಂತೆ ತಡೆಯುವುದು ದೊಡ್ಡ ಸವಾಲು.

‘ವಾಹನ ಸಂಚಾರಕ್ಕೆ ಧಕ್ಕೆ ಉಂಟಾಗದಂತೆ ನೋಡಿಕೊಳ್ಳಲು ಗುತ್ತಿಗೆದಾರರು ಟ್ರಾಫಿಕ್‌ ಮಾರ್ಷಲ್‌ಗಳನ್ನು ನೇಮಿಸಿಕೊಂಡು ಕೆಲಸ ನಿರ್ವಹಿಸುತ್ತಿದ್ದಾರೆ. ಕಾಮಗಾರಿಯ ಸಂದರ್ಭದಲ್ಲೂ ಅವರು ವಾಹನಗಳು ಸುಗಮವಾಗಿ ಸಂಚರಿಸುವುದಕ್ಕೆ ಅನುವು ಮಾಡಿಕೊಡುತ್ತಿದ್ದಾರೆ’ ಎಂದು ನಿಗಮದ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು. ಕಾಮಗಾರಿಯಿಂದಾಗಿ ಈ ಪ್ರದೇಶದಲ್ಲಿ ಶಬ್ದ ಮಾಲಿನ್ಯ ಪ್ರಮಾಣ ಹೆಚ್ಚಾಗದಂತೆಯೂ ನಿಗಾ ವಹಿಸಲಾಗಿದೆ ಎಂದರು.

220 ಕೆ.ವಿ ವಿದ್ಯುತ್‌ ಮಾರ್ಗ ಸ್ಥಳಾಂತರಕ್ಕೆ ಬಾಕಿ‌

ಮೆಟ್ರೊ ಕಾಮಗಾರಿಗಾಗಿ ಕುಂದಲಹಳ್ಳಿ ನಿಲ್ದಾಣದಿಂದ ಸತ್ಯಸಾಯಿ ಆಸ್ಪತ್ರೆ ನಿಲ್ದಾಣದವರೆಗೆ ಸುಮಾರು 3 ಕಿ.ಮೀ.ನಷ್ಟು ದೂರ 220 ಕಿಲೊ ವಾಟ್‌ ವಿದ್ಯುತ್‌ ಮಾರ್ಗವನ್ನು ಸ್ಥಳಾಂತರಿಸಿ ಅಲ್ಲಿ ನೆಲದಡಿಯಲ್ಲಿ ಕೇಬಲ್‌ ಅಳವಡಿಸಬೇಕಿದೆ. ಈ ಸಲುವಾಗಿ ಕೆಪಿಟಿಸಿಎಲ್‌ಗೆ ಮೆಟ್ರೊ ನಿಗಮ ₹ 64 ಕೋಟಿ ಪಾವತಿಸಿದೆ. ಸ್ಥಳಾಂತರ ಕಾರ್ಯ ಆಗದ ಕಾರಣ ಈ ಪ್ರದೇಶದಲ್ಲಿ ಮಾತ್ರ ಇನ್ನೂ ಕಾಮಗಾರಿ ಆರಂಭವಾಗಿಲ್ಲ.

ಸಂಚಾರ ನಿಯಂತ್ರಣಕ್ಕೆ ಮಾರ್ಷಲ್‌ಗಳ ನೆರವು

ಬೈಯಪ್ಪನಹಳ್ಳಿ–ವೈಟ್‌ಫೀಲ್ಡ್‌ ರಸ್ತೆ ದಿನವಿಡೀ ವಾಹನ ಸಂಚಾರ ದಟ್ಟಣೆಯಿಂದ ಕೂಡಿರುತ್ತದೆ. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಇಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದೆ. ಸಂಚಾರ ದಟ್ಟಣೆ ಆಗದಂತೆ  ತಡೆಯುವುದು ದೊಡ್ಡ ಸವಾಲು.

‘ವಾಹನ ಸಂಚಾರಕ್ಕೆ ಧಕ್ಕೆ ಉಂಟಾಗದಂತೆ ನೋಡಿಕೊಳ್ಳಲು ಗುತ್ತಿಗೆದಾರರು ಟ್ರಾಫಿಕ್‌ ಮಾರ್ಷಲ್‌ಗಳನ್ನು ನೇಮಿಸಿಕೊಂಡು ಕೆಲಸ ನಿರ್ವಹಿಸುತ್ತಿದ್ದಾರೆ. ಕಾಮಗಾರಿಯ ಸಂದರ್ಭದಲ್ಲೂ ಅವರು ವಾಹನಗಳು ಸುಗಮವಾಗಿ ಸಂಚರಿಸುವುದಕ್ಕೆ ಅನುವು ಮಾಡಿಕೊಡುತ್ತಿದ್ದಾರೆ’ ಎಂದು ನಿಗಮದ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

ಕಾಮಗಾರಿಯಿಂದಾಗಿ ಈ ಪ್ರದೇಶದಲ್ಲಿ ಶಬ್ದ ಮಾಲಿನ್ಯ ಪ್ರಮಾಣ ಹೆಚ್ಚಾಗದಂತೆಯೂ ನಿಗಾ ವಹಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT