ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರೂ ಅಂಗಗಳಿಗಿಂತ ಮಾಧ್ಯಮ ಶಕ್ತಿಶಾಲಿ

Last Updated 17 ಜನವರಿ 2018, 19:57 IST
ಅಕ್ಷರ ಗಾತ್ರ

ಬೆಂಗಳೂರು: ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳಿಗಿಂತ ಮಾಧ್ಯಮ ಶಕ್ತಿಶಾಲಿ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎನ್‌.ಕುಮಾರ್‌ ಅಭಿಪ್ರಾಯಪಟ್ಟರು.

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ ವತಿಯಿಂದ ನಗರದಲ್ಲಿ ಬುಧವಾರ ಏರ್ಪಡಿಸಿದ್ದ ಕೆ.ಪಿ.ರಾವ್‌ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಮಾಧ್ಯಮ ಹಾಗೂ ನ್ಯಾಯಾಂಗದ ಪಾತ್ರ’ ಕುರಿತು ಅವರು ಮಾತನಾಡಿದರು.

ನಾಲ್ಕು ಅಂಗಗಳು ಸಮರ್ಥವಾಗಿ ಕೆಲಸ ಮಾಡಬೇಕು. ಆದರೆ, ಶಾಸಕಾಂಗ ಹಾಗೂ ಕಾರ್ಯಾಂಗಗಳು ವಿಫಲವಾಗಿವೆ. ನ್ಯಾಯಾಂಗ ಹಾಗೂ ಮಾಧ್ಯಮ ವಿಫಲವಾಗಿಲ್ಲ. ಈ ಎರಡೂ ಅಂಗಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದರೆ ಪ್ರಜಾಪ್ರಭುತ್ವವನ್ನು ಸಂರಕ್ಷಿಸಲು ಸಾಧ್ಯ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ಮತ ಹಾಕಿ ನಿದ್ದೆ ಮಾಡುತ್ತಾರೆ. ಜನಪ್ರತಿನಿಧಿಗಳು 5 ವರ್ಷಗಳವರೆಗೆ ರಾಜರ ರೀತಿ ಮೆರೆಯುತ್ತಾರೆ. ಆದರೆ, ಮಾಧ್ಯಮ ಕಾವಲುನಾಯಿಯಂತೆ ಕಾರ್ಯನಿರ್ವಹಿಸುತ್ತಿದೆ. ಜನಪ್ರತಿನಿಧಿಗಳ ತಪ್ಪುಗಳನ್ನು ಜಗತ್ತಿಗೆ ತೋರಿಸುತ್ತಿದೆ ಎಂದು ಹೇಳಿದರು.

ಮಾಧ್ಯಮಗಳು ಸತ್ಯವನ್ನು ಹೇಳಬೇಕು. ಆದರೆ, ಸತ್ಯ ಹೇಳುವ ಪ್ರಮಾಣ ದಿನೇದಿನೇ ಕುಸಿಯುತ್ತಿದೆ. ದುಡ್ಡು ಕೊಟ್ಟು ಪತ್ರಿಕೆ ಖರೀದಿಸುವ ಓದು
ಗರು ಕೂಡಾ ಉತ್ತರದಾಯಿತ್ವ ಹೊಂದಿರಬೇಕು. ಪತ್ರಿಕೆ ಅಥವಾ ವಿದ್ಯುನ್ಮಾನ ಮಾಧ್ಯಮ ತಪ್ಪು ಮಾಹಿತಿ ನೀಡಿದರೆ, ಅದನ್ನು ಪ್ರಶ್ನಿಸಬೇಕು ಎಂದು ಸಲಹೆ ನೀಡಿದರು.

ಕಾನೂನು ತಜ್ಞರು ಎಂದು ಹೇಳಿಕೊಳ್ಳುವ ಕೆಲವರು ಕೋರ್ಟ್‌ಗಳಲ್ಲಿ ಕಾಣಿಸಿಕೊಳ್ಳುವುದೇ ಇಲ್ಲ. ಅವರ ವಾದವನ್ನು ಕೋರ್ಟ್‌ ಒಪ್ಪುವುದೂ ಇಲ್ಲ. ಅಂತಹ ವ್ಯಕ್ತಿಗಳನ್ನು ಸುದ್ದಿ ವಾಹಿನಿಗಳಲ್ಲಿ ಚರ್ಚೆಗೆ ಕರೆಯುತ್ತಾರೆ. ಅವರ ವಾದ ನಿರೂಪಕರಿಗಷ್ಟೇ ಹಿಡಿಸುತ್ತದೆ ಎಂದರು.

‘ಮೊದಲು ತೀರ್ಪು, ನಂತರ ತನಿಖೆ’

ಇಂದಿನ ಮಾಧ್ಯಮಗಳು ಮೊದಲು ತೀರ್ಪು ನೀಡುತ್ತವೆ, ಬಳಿಕ ತನಿಖೆ ನಡೆಸುತ್ತವೆ ಎಂದು ಎನ್‌.ಕುಮಾರ್‌ ಟೀಕಿಸಿದರು.

ಐಎಎಸ್‌ ಅಧಿಕಾರಿ ಡಿ.ಕೆ.ರವಿ ಆತ್ಮಹತ್ಯೆ ಪ್ರಕರಣದ ಸುದ್ದಿಗಳನ್ನು ಎಲ್ಲ ಪತ್ರಿಕೆಗಳು ಮುಖಪುಟದಲ್ಲೇ ಪ್ರಕಟಿಸಿದ್ದವು. ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ರಾಜಕೀಯ ವ್ಯಕ್ತಿಗಳು ಆರೋಪ ಮಾಡಿದ್ದರು. ಪ್ರಕರಣವನ್ನು ಸಿಬಿಐಗೆ ವಹಿಸಲಾಯಿತು. ಸಿಬಿಐ ನೀಡಿದ ವರದಿಯಲ್ಲಿ ಏನಿತ್ತು? ಈ ಪ್ರಕರಣಕ್ಕಾಗಿ ಮೀಸಲಿಟ್ಟ ಸಮಯ, ಹಣ ವ್ಯರ್ಥವಾದಂತಲ್ಲವೆ. ಈ ಪ್ರಕರಣದಲ್ಲಿ ಜನರನ್ನು ದಿಕ್ಕು ತಪ್ಪಿಸಿದಂತಾಗಲಿಲ್ಲವೆ ಎಂದು ಪ್ರಶ್ನಿಸಿದರು.

‘ಪ್ರಮಾಣ ಮಾಡಿ ಬಿಟ್ಟು ಸುಳ್ಳು ನುಡಿಯುತ್ತಾರೆ’

ಕಟಕಟೆಯಲ್ಲಿ ನಿಲ್ಲುವ ಪ್ರತಿಯೊಬ್ಬರೂ ಸತ್ಯವನ್ನೇ ಹೇಳುತ್ತೇನೆ ಎಂದು ಪ್ರಮಾಣ ಮಾಡುತ್ತಾರೆ. ಆದರೆ, ಸತ್ಯವನ್ನು ಬಿಟ್ಟು ಬೇರೆಲ್ಲವನ್ನು ಹೇಳುತ್ತಾರೆ. ಸತ್ಯ ಹೇಳಿದರೆ ಕೇಸು ಗೆಲ್ಲಲು ಆಗುವುದಿಲ್ಲ ಎಂದೇ ಅವರು ತಿಳಿದಿದ್ದಾರೆ. ಇದು ನಮ್ಮ ಸಂಸ್ಕೃತಿ ಎಂದು ಎನ್‌.ಕುಮಾರ್‌ ವಿಷಾದ ವ್ಯಕ್ತಪಡಿಸಿದರು.

ದೇಶದ ವಿವಿಧ ನ್ಯಾಯಾಲಯಗಳಲ್ಲಿ ಲಕ್ಷಾಂತರ ಪ್ರಕರಣಗಳು ಬಾಕಿ ಇವೆ. ಇದಕ್ಕೆ ಅನೇಕ ಕಾರಣಗಳಿವೆ. ಕೋರ್ಟ್‌ ಮೊರೆ ಹೋಗುವ ಬಹಳಷ್ಟು ಮಂದಿ ನಂತರ ಅತ್ತ ತಲೆ ಹಾಕುವುದಿಲ್ಲ. ಬಹುತೇಕ ವಕೀಲರು ನ್ಯಾಯಾಮೂರ್ತಿಗಳನ್ನು ಮೂರ್ಖರನ್ನಾಗಿ ಮಾಡಲು ಪ್ರಯತ್ನಿಸುತ್ತಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT