ಮೈಸೂರಿಗೊಂದು ಲಾಂಛನ, ಸ್ವಾಗತ ಕಮಾನು

7
‘ಬ್ರ್ಯಾಂಡ್‌ ಮೈಸೂರು’ ನಿರ್ಮಾಣಕ್ಕೆ ಜಿಲ್ಲಾಡಳಿತ ಹೊಸ ಯೋಜನೆ

ಮೈಸೂರಿಗೊಂದು ಲಾಂಛನ, ಸ್ವಾಗತ ಕಮಾನು

Published:
Updated:
ಮೈಸೂರಿಗೊಂದು ಲಾಂಛನ, ಸ್ವಾಗತ ಕಮಾನು

ಮೈಸೂರು: ಪ್ರವಾಸಿ ನಗರಿಯನ್ನು ‘ಬ್ರ್ಯಾಂಡ್‌ ಮೈಸೂರು’ ಆಗಿಸಲು ಸಿದ್ಧತೆ ನಡೆಸುತ್ತಿರುವ ಜಿಲ್ಲಾಡಳಿತ ಅದಕ್ಕಾಗಿ ₹ 10 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಿದೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಜಿಲ್ಲಾಧಿಕಾರಿ ಡಿ.ರಂದೀಪ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಗರವನ್ನು ಮತ್ತಷ್ಟು ಸುಂದರವಾಗಿಸಲು ಹಲವು ತೀರ್ಮಾನ ಕೈಗೊಳ್ಳಲಾಗಿದೆ.

ಮೈಸೂರು–ಬೆಂಗಳೂರು ರಸ್ತೆಯ ಮೈಸೂರು ಪ್ರವೇಶದ್ವಾರದಲ್ಲಿ ಪಾರಂಪರಿಕ ಸ್ವಾಗತ ಕಮಾನು ನಿರ್ಮಿಸಲು ನಿರ್ಧರಿಸಲಾಗಿದೆ. ‘ಬ್ರ್ಯಾಂಡ್‌ ಮೈಸೂರು’ಗೊಂದು ಅಡಿಬರಹ ಇರುವ ಲಾಂಛನ ತಯಾರಿಸಲು ತೀರ್ಮಾನಿಸಲಾಗಿದೆ. ಈ ಸಂಬಂಧ ಜಿಲ್ಲಾಡಳಿತ ಸ್ಪರ್ಧೆ ಏರ್ಪಡಿಸಲಿದ್ದು, ಸದ್ಯದಲ್ಲೇ ಪ್ರಕಟಣೆ ಹೊರಡಿಸಲಿದೆ.

‘ಉತ್ತಮ ಲಾಂಛನ, ಅಡಿ ಬರಹಕ್ಕೆ ₹ 50 ಸಾವಿರ ಬಹುಮಾನ ಇರಲಿದೆ. ಅಡಿಬರಹ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಇರಬೇಕು. ಅಲ್ಲದೆ, ಯಾವ ಪರಿಕಲ್ಪನೆ ಇಟ್ಟುಕೊಂಡು ರಚಿಸಲಾಗಿದೆ ಎಂಬುದರ ಬಗ್ಗೆ ವಿವರಣೆ ನೀಡಬೇಕು’ ಎಂದು ರಂದೀಪ್‌ ತಿಳಿಸಿದರು.

ಅಲ್ಲದೆ, ಪ್ರವಾಸಿ ತಾಣಗಳ ಬಳಿ ಶೌಚಾಲಯ ನಿರ್ಮಿಸಲು ನಿರ್ಧರಿಸಲಾಗಿದೆ. ಮಾರ್ಗಸೂಚಿ ಫಲಕಗಳನ್ನು ಅಳವಡಿಸಲು ಯೋಜನೆ ರೂಪಿಸಲಾಗಿದೆ. ವರ್ಚುವಲ್‌ ಟೂರ್‌ ಎಂಬ ಪ್ರಯೋಗವನ್ನು ನಗರದಲ್ಲಿ ಜಾರಿಗೆ ತರಲಾಗುತ್ತಿದೆ. ಜೊತೆಗೆ ಪ್ರವಾಸಿ ತಾಣಗಳ ಮಾಹಿತಿ ಒಳಗೊಂಡ ಆ್ಯಪ್‌ ಅಭಿವೃದ್ಧಿಪಡಿಸಲಾಗುತ್ತಿದೆ.

ವರುಣಾ ಕೆರೆಯಲ್ಲಿ ಜಲಸಾಹಸ ಕ್ರೀಡೆಗಳನ್ನು ಶಾಶ್ವತವಾಗಿ ಆಯೋಜಿಸಲು ಸಿದ್ಧತೆ ನಡೆಸಿದೆ. ಜೆಟ್‌ಸ್ಕೀ, ಸ್ಪೀಡ್‌ ಬೋಟ್‌, ಬನಾನ ರೈಡ್‌ನಂಥ ಜಲಸಾಹಸ ಕ್ರೀಡೆಗಳ ವೈಭವವೂ ಇರಲಿದೆ. ಈ ಮೂಲಕ ಪ್ರವಾಸಿಗರನ್ನು ಆಕರ್ಷಿಸಲು ಜಿಲ್ಲಾಡಳಿತ ಮುಂದಾಗಿದೆ. ಈ ಪ್ರದೇಶದಲ್ಲಿ ಈಗಾಗಲೇ ಕ್ರೀಡಾ ಇಲಾಖೆ ವತಿಯಿಂದ ಜಲಸಾಹಸ ಕ್ರೀಡಾ ತರಬೇತಿ ಕೇಂದ್ರ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.

ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಜನಾರ್ದನ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚೆನ್ನಪ್ಪ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಸುರೇಶ್‌, ಮಂಜುನಾಥ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry