ನಕ್ಸಲ್: 5 ವರ್ಷಗಳಿಂದ ನಿರಂತರ ಭೇಟಿ

7
ಶಿಶಿಲಕ್ಕೆ 2 ಬಾರಿ, ಇದೀಗ ಮಿತ್ತಮಜಲು

ನಕ್ಸಲ್: 5 ವರ್ಷಗಳಿಂದ ನಿರಂತರ ಭೇಟಿ

Published:
Updated:
ನಕ್ಸಲ್: 5 ವರ್ಷಗಳಿಂದ ನಿರಂತರ ಭೇಟಿ

ಉಪ್ಪಿನಂಗಡಿ: ಶಿರಾಡಿ, ಶಿಶಿಲ ಗ್ರಾಮದ ಜನರ ಪಾಲಿಗೆ ನಕ್ಸಲರ ಗ್ರಾಮ ಭೇಟಿ, ಅವರ ನಡೆ ಹೊಸದೇನೂ ಅಲ್ಲ, ಕಳೆದ 6 ವರ್ಷಗಳಿಂದ ಪಶ್ಚಿಮ ಘಟ್ಟದ ದಟ್ಟ ಅರಣ್ಯದ ಅಂಚಿನಲ್ಲಿರುವ ಶಿಶಿಲ, ಶಿರಾಡಿ, ಶಿಬಾಜೆ ಗ್ರಾಮ ವ್ಯಾಪ್ತಿಯೊಳಗೆ ನಕ್ಸಲರು ಸುಮಾರು 4 ಬಾರಿ ಭೇಟಿ ನೀಡಿದ್ದಾರೆ. ಇದೀಗ ಶಿರಾಡಿ ಗ್ರಾಮದ ಮಿತ್ತಮಜಲು ದಲಿತ ಕುಟುಂಬದ ಮನೆ ಭೇಟಿ ಮಾಡುವ ಮೂಲಕ ಮತ್ತೆ ಸುದ್ದಿ ಮಾಡಿದ್ದಾರೆ.

‘ಇದೇ 14ರಂದು ಮೂವರು ನಕ್ಸಲರು ಶಿರಾಡಿ ಗ್ರಾಮದ ಮಿತ್ತಮಜಲುನಲ್ಲಿ 3 ದಲಿತ ಕುಟುಂಬದ ಮನೆ ಪ್ರವೇಶ ಮಾಡುವ ಮೂಲಕ ಕಳೆದ 6 ವರ್ಷಗಳಿಂದ 5 ಬಾರಿ ನಕ್ಸಲರು ಭೇಟಿ ನೀಡಿದಂತಾಗಿದೆ. ಇಬ್ಬರು ಪುರುಷರು ಮತ್ತು ಒಬ್ಬ ಮಹಿಳೆ ಇದ್ದ ನಕ್ಸಲ್ ತಂಡ ಅಕ್ಕಿ, ಅಡುಗೆ ಸಾಮಗ್ರಿ ತೆಗೆದುಕೊಂಡು ಮತ್ತೆ ಕಾಡು ಪ್ರವೇಶ ಮಾಡಿದೆ’ ಎಂಬುದಾಗಿ ಸ್ಥಳೀಯರು ಮಾಹಿತಿ ನೀಡಿದ್ದರು.

2012ರಿಂದ ಸಂಪರ್ಕ: 2012 ಜುಲೈ 10ರಂದು ಸಂಜೆ 5 ಗಂಟೆಯ ಹೊತ್ತಿಗೆ ಶಿಶಿಲದಲ್ಲಿ 4 ಮಂದಿಯ ನಕ್ಸಲ್ ತಂಡ ಪ್ರಥಮವಾಗಿ ಪ್ರತ್ಯಕ್ಷವಾಗಿತ್ತು. ಪಶ್ಚಿಮಘಟ್ಟದ ತಪ್ಪಲು, ಶಿರಾಡಿ ಘಾಟ್‍ಗೆ ತಾಗಿಕೊಂಡಿರುವ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಶಿಶಿಲ ಗ್ರಾಮದ ಮೀಯಾರು ಮೀಸಲು ಅರಣ್ಯ ಪ್ರದೇಶದ ಅಂಚಿನಲ್ಲಿರುವ ಅಮ್ಮುಡಂಗೆ ಮುಚ್ಚಿರಡ್ಕ ಎಂಬಲ್ಲಿನ ಪರಿಶಿಷ್ಟ ಜಾತಿಯ ಕಾಲೋನಿಗೆ ತಂಡ ಭೇಟಿ ನೀಡಿತ್ತು.

ಅಂದು ಸಂಜೆ ಕಾಲೋನಿಯ ಯುವಕನೊಬ್ಬ ಕಾಡಿನ ಬದಿಯಲ್ಲಿ ಹರಿಯುವ ತೋಡಿನಲ್ಲಿ ಬಟ್ಟೆ ತೊಳೆಯುತ್ತಿದ್ದರು. ಕಾಡಿನ ಕಡೆಯಿಂದ ಬಂದೂಕು ಹಿಡಿದುಕೊಂಡು 3 ಯುವಕರು ಮತ್ತು ಒಬ್ಬ ಯುವತಿ ನೇರವಾಗಿ ಯುವಕನ ಬಳಿ ಬಂದಿದ್ದರು. ‘ಹೆದರಬೇಡಿ, ನಾವು ನಕ್ಸಲರು ನಿಮಗೇನೂ ಮಾಡುವುದಿಲ್ಲ’ ಎಂದು ಮಾತು ಆರಂಭಿಸಿದ್ದ ತಂಡ, ‘ಮನೆಯಲ್ಲಿ ಎಷ್ಟು ಮಂದಿ ಇದ್ದೀರಿ? ಎಷ್ಟು ಎಕ್ರೆ ಜಾಗ ಇದೆ, ನಿಮಗೆ ಏನು ಸಮಸ್ಯೆ ಇದೆ’ ಎಂದು ಕೇಳಿದ್ದರು. ಆದರೆ ಉತ್ತರಿಸದ ಯುವಕ ಓಡೋಡಿ ನೇರ ಮನೆಗೆ ಬಂದಿದ್ದು, ನಕ್ಸಲರು ಯುವಕನನ್ನು ಹಿಂಬಾಲಿಸಿ ಮನೆಗೆ ಬಂದಿದ್ದರು.

ಯುವಕ ತೋಡಿನಲ್ಲಿ ಬಿಟ್ಟು ಬಂದಿದ್ದ ಬಟ್ಟೆಗಳನ್ನು ಇವರೇ ಮನೆಗೆ ತಂದು ಕೊಟ್ಟಿದ್ದರು. ತಂಡದಲ್ಲಿದ್ದ ಯುವತಿ ತುಳುವಿನಲ್ಲಿ ಮಾತನಾಡಿದ್ದು, ಆದರೆ ಮನೆಯವರು ಮರು ಮಾತನಾಡದ ಕಾರಣ ತಂಡ ಬಂದ ಹಾದಿಯಲ್ಲೆ ಮತ್ತೆ ಕಾಡು ಸೇರಿತ್ತು.

2ನೇ ಭೇಟಿ: ಇದೇ ತಂಡ ಮತ್ತೆ 12 ದಿನಗಳ ಬಳಿಕ ಈ ಹಿಂದೆ ಭೇಟಿ ನೀಡಿದ್ದ ಕೇವಲ 1 ಕಿ.ಮೀ. ಅಂತರದಲ್ಲಿ ಶಿಶಿಲ ಗ್ರಾಮದ ಹೊಳೆಗಂಡಿ ಎಂಬಲ್ಲಿ ಮತ್ತೆ ಪ್ರತ್ಯಕ್ಷವಾಗಿತ್ತು. ಇದೇ ಮೀಯಾರು ಮೀಸಲು ಅರಣ್ಯ ಪ್ರದೇಶದಿಂದ ಹೊಳೆಗುಂಡಿ ಮೂಲಕ ಹೊಳೆ ದಾಟಿ ಬಂದ ನಕ್ಸಲ್ ತಂಡ ಇಲ್ಲಿನ ರೈತರೊಬ್ಬರ ಮನೆಗೆ ಬಂದಿದ್ದು, ಅಡುಗೆ ಸಾಮಗ್ರಿಗಳನ್ನು ಪಡೆದು ತೆರಳಿತ್ತು. ಅಂದು ಅವರ ಶೋಧಕ್ಕೆ ಕಮಾಂಡೆಂಟ್ ಖುದ್ದು ಕಾರ್ಯಾಚರಣೆ ನಡೆಸಿದ್ದರು.

ಇಲ್ಲಿ ಎರಡು ಬಾರಿ ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಅಂದು ನಕ್ಸಲ್ ನಿಗ್ರಹ ಪಡೆಯ ಕಮಾಂಡೆಂಟ್ ಆಗಿದ್ದ ಅಲೋಕ್ ಕುಮಾರ್, ಇನ್‌ಸ್ಪೆಕ್ಟರ್ ಪ್ರಸನ್ನ ಕುಮಾರ್ ನೇತೃತ್ವದಲ್ಲಿ 5 ತಂಡಗಳು ವಾರಗಳ ಕಾಲ ಕಾಡಿನಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದವು. ನಕ್ಸಲರು ಕಾಡಿನಲ್ಲಿ ಹಾಕಿದ್ದ ಟೆಂಟ್ ಪತ್ತೆ ಆಗಿತ್ತು.

ಶಿರಾಡಿಯ ಪೇರಮಜಲು: 2014ರಲ್ಲಿ ಶಿರಾಡಿ ಗ್ರಾಮದ ಅಡ್ಡಹೊಳೆ ಸಮೀಪದ ಪೇರಮಜಲು ಎಂಬಲ್ಲಿ ಭೇಟಿ ನೀಡಿದ್ದ ತಂಡ ಮೊಬೈಲ್, ಲ್ಯಾಪ್‍ಟಾಪ್ ಚಾರ್ಜ್ ಮಾಡಿಕೊಂಡು ಹೋಗಿತ್ತು. ಇದೀಗ 4ನೇ ಬಾರಿ ಬಂದಾಗ ಶಿರಾಡಿ ಗ್ರಾಮದ ಮಿತ್ತಮಜಲಿನ 3 ದಲಿತರ ಮನೆಗಳಿಗೆ ಭೇಟಿ ನೀಡಿ ಸುದ್ದಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry