ಕುಡಿಯುವ ನೀರು ಪೂರೈಕೆಗೆ ₹33 ಕೋಟಿ

7
ಮಹಾನಗರ ಪಾಲಿಕೆ ವಿಶೇಷ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ

ಕುಡಿಯುವ ನೀರು ಪೂರೈಕೆಗೆ ₹33 ಕೋಟಿ

Published:
Updated:
ಕುಡಿಯುವ ನೀರು ಪೂರೈಕೆಗೆ ₹33 ಕೋಟಿ

ಮಂಗಳೂರು: ನಗರಕ್ಕೆ ನಿರಂತರ ನೀರು ಪೂರೈಸುವ ಯೋಜನೆಯ ಭಾಗವಾಗಿ ಅಮೃತ್‌ ಯೋಜನೆಯಡಿ ₹33.25 ಕೋಟಿ ಅನುದಾನವನ್ನು ಸಗಟು ನೀರು ಸರಬರಾಜು ವ್ಯವಸ್ಥೆಯ ಅಭಿವೃದ್ಧಿಗೆ ಬಳಸಿಕೊಳ್ಳಲು ಮಹಾನಗರ ಪಾಲಿಕೆ ಸಾಮಾನ್ಯ ಸಭೆ ಒಪ್ಪಿಗೆ ನೀಡಿತು.

ಬುಧವಾರ ನಗರದ ಪಾಲಿಕೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಿದ ಸದಸ್ಯರು, ಅಂತಿಮವಾಗಿ ಅನುದಾನ ಬಳಕೆ ಮಾಡಿಕೊಳ್ಳಲು ಒಪ್ಪಿಗೆ ಸೂಚಿಸಿದರು.

ಅಮೃತ್‌ ಯೋಜನೆ ಹಾಗೂ ಎಡಿಬಿ ನೆರವಿನ 2 ನೇ ಹಂತದ ಯೋಜನೆಗಳ ಕುರಿತು ಮಾಹಿತಿ ನೀಡಿದ ಮಹಾನಗರ ಪಾಲಿಕೆ ಆಯುಕ್ತ ಎಂ. ಮುಹಮ್ಮದ್‌ ನಜೀರ್‌, ಅಮೃತ್‌ ಯೋಜನೆಯಡಿ ಒಟ್ಟು ₹185 ಕೋಟಿ ಅನುದಾನ ಮಂಜೂರಾಗಿದೆ. ಈ ಪೈಕಿ ₹2 ಕೋಟಿಯನ್ನು ಉದ್ಯಾನದ ಅಭಿವೃದ್ಧಿಗೆ, ₹4 ಕೋಟಿಯನ್ನು ಮಳೆ ನೀರು ಚರಂಡಿ ನಿರ್ಮಾಣಕ್ಕೆ ಮೀಸಲಿಡಲಾಗಿದೆ. ಇನ್ನುಳಿದ ₹179 ಕೋಟಿಯನ್ನು ಒಳಚರಂಡಿ ಯೋಜನೆಗೆ ಬಳಕೆ ಮಾಡಲಾಗುತ್ತಿದೆ. ಇದರಲ್ಲಿ ₹55 ಕೋಟಿಯಲ್ಲಿ ಸುರತ್ಕಲ್‌ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕೆಟ್ಟಿರುವ ಒಳಚರಂಡಿ ವ್ಯವಸ್ಥೆಯನ್ನು ದುರಸ್ತಿ ಮಾಡಲಾಗುತ್ತಿದೆ. ಅದಾಗ್ಯೂ ಅಮೃತ್‌ ಯೋಜನೆಯಡಿ ₹124 ಕೋಟಿ ಅನುದಾನ ಉಳಿಯಲಿದ್ದು, ಇದರಲ್ಲಿ ₹33.25 ಕೋಟಿಯನ್ನು ಸಗಟು ನೀರು ಸರಬರಾಜು ವ್ಯವಸ್ಥೆಯ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಎಡಿಬಿ ನೆರವಿನ 2 ನೇ ಹಂತದ ಯೋಜನೆಯಡಿ ನೀರು ಪೂರೈಕೆಗೆ ₹218 ಕೋಟಿ, ಒಳಚರಂಡಿಗೆ ₹195 ಕೋಟಿ ಅನುದಾನ ಮಂಜೂರಾಗಿದೆ. ನಗರಕ್ಕೆ ನಿರಂತರ ನೀರು ಪೂರೈಸುವ ಜಲಸಿರಿ ಯೋಜನೆಗೆ ಒಟ್ಟಾರೆ ₹360 ಕೋಟಿ ಮೊತ್ತದ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಎಡಿಬಿ 2 ನೇ ಹಂತದಲ್ಲಿ ₹218 ಕೋಟಿ ಅನುದಾನವಿದ್ದು, ಹೆಚ್ಚುವರಿ ಕೆಲಸಗಳಿಗೆ ಅಮೃತ್‌ ಯೋಜನೆಯ ಅನುದಾನವನ್ನು ಬಳಕೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಇದಕ್ಕೂ ಮೊದಲು ಮಾತನಾಡಿದ ಸದಸ್ಯ ಸುಧೀರ್‌ ಶೆಟ್ಟಿ, ಮೊದಲ ಹಂತದ ಯೋಜನೆಯಲ್ಲಿ ಕಳಪೆ ಕಾಮಗಾರಿ ಆಗಿದೆ. ಈ ಬಗ್ಗೆ ಸಿಒಡಿ ತನಿಖೆ ನಡೆಸುವುದಾಗಿ ನಗರಾಭಿವೃದ್ಧಿ ಸಚಿವರೇ ಹೇಳಿದ್ದಾರೆ. ಆಗಿರುವ ತಪ್ಪಿಗೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ಅಮೃತ್‌ ಯೋಜನೆಯಡಿ ಯಾವುದಾದರೂ ಒಂದು ಶಾಶ್ವತ ಕಾಮಗಾರಿ ಮಾಡುವುದು ಒಳ್ಳೆಯದು. ಈ ರೀತಿ ತುಂಡು, ತುಂಡು ಕಾಮಗಾರಿ ಮಾಡುವುದರಿಂದ ಪಾಲಿಕೆಗೆ ಯಾವುದೇ ಆಸ್ತಿಯೂ ನಿರ್ಮಾಣ ಆಗುವುದಿಲ್ಲ. ₹33 ಕೋಟಿ ಖರ್ಚು ಮಾಡಿ, 10 ಎಂಎಲ್‌ಡಿ ನೀರು ತರುವುದಾದರೆ, ಅದರಿಂದ ಪ್ರಯೋಜನವಾದರೂ ಏನು ಎಂದು ಕೇಳಿದರು.

ಪ್ರತಿಪಕ್ಷದ ನಾಯಕ ಗಣೇಶ್‌ ಹೊಸಬೆಟ್ಟು ಮಾತನಾಡಿ, ಇದೊಂದು ಗೊತ್ತು–ಗುರಿ ಇಲ್ಲದ ಪ್ರಸ್ತಾವನೆ. ಈ ಬಗ್ಗೆ ಸಮಗ್ರ ಚರ್ಚೆ ಆಗಬೇಕು. ಅಮೃತ್‌ ಯೋಜನೆಯಡಿ ಕ್ರಿಯಾ ಯೋಜನೆಗೆ ಮಂಜೂರಾತಿ ನೀಡಲು ತರಾತುರಿಯಲ್ಲಿ ಸಭೆ ಕರೆಯಲಾಗಿದೆ ಎಂದು ದೂರಿದರು.

ಪ್ರೇಮಾನಂದ ಶೆಟ್ಟಿ ಮಾತನಾಡಿ, ನೀರು ಪೂರೈಕೆಗೆ ಅಮೃತ್‌ ಯೋಜನೆಯ ಅನುದಾನ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆದರೆ, ಇದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದರು.

ಮೊದಲ ಹಂತದ ಯೋಜನೆಯಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸುವ ಬದಲು, ಎರಡನೇ ಹಂತದ ಯೋಜನೆಯ ಅನುಷ್ಠಾನಕ್ಕೆ ತರಾತುರಿಯಲ್ಲಿ ಸಿದ್ಧತೆ ಮಾಡಲಾಗುತ್ತಿದೆ. ಆಡಳಿತ ಪಕ್ಷದವರ ವಾರ್ಡ್‌ಗಳಿಗೆ ಮಾತ್ರ ಅನುದಾನ ನೀಡಲಾಗುತ್ತಿದೆ. ಇದರಲ್ಲೂ ರಾಜಕೀಯ ಮಾಡಲಾಗುತ್ತಿದೆ ಎಂದು ರೂಪಾ ಡಿ. ಬಂಗೇರಾ ಆರೋಪಿಸಿದರು.

ಆಡಳಿತ ಪಕ್ಷದ ಸದಸ್ಯ ಹರಿನಾಥ ಮಾತನಾಡಿ, ಯೋಜನೆಯನ್ನು ಕೈಗೆತ್ತಿಕೊಳ್ಳುವುದು ಸರಿ. ಆದರೆ, ಅದರ ನಿರ್ವಹಣೆ ಮಾಡುವುದರ ಬಗ್ಗೆಯೂ ಅಂದಾಜುಪಟ್ಟಿಯಲ್ಲಿ ಸೇರಿಸಬೇಕು ಎಂದು ಸಲಹೆ ನೀಡಿದರು.

ಉಪಮೇಯರ್ ರಜನೀಶ್ ಕಾಪಿಕಾಡ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಬ್ದುಲ್‌ ರವೂಫ್‌, ನಾಗವೇಣಿ, ಪ್ರತಿಭಾ ಕುಳಾಯಿ, ಸಚೇತಕ ಶಶಿಧರ್ ಹೆಗ್ಡೆ, ಸದಸ್ಯರು, ಅಧಿಕಾರಿಗಳು ಭಾಗವಹಿಸಿದ್ದರು.

**

ಮಾತಿನ ಚಕಮಕಿ

ಕುದ್ರೋಳಿಯ ಪರಿಸರದಲ್ಲಿ ಒಳಚರಂಡಿ ಅವ್ಯವಸ್ಥೆಯ ಕುರಿತು ನಡೆಯುತ್ತಿದ್ದ ಚರ್ಚೆಯ ವೇಳೆ, ಸದಸ್ಯರಾದ ಅಜೀಜ್‌ ಕುದ್ರೋಳಿ ಹಾಗೂ ರಾಧಾಕೃಷ್ಣ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.

‘ಕುದ್ರೋಳಿಯಲ್ಲಿ ವ್ಯವಸ್ಥೆ ಸರಿಪಡಿಸಲು ಸಾಧ್ಯವಾಗಲಿದೆಯೇ’ ಎಂದು ಅಜೀಜ್‌ ಕುದ್ರೋಳಿ ಪ್ರಶ್ನಿಸಿದರು. ಇದಕ್ಕೆ ರಾಧಾಕೃಷ್ಣ ಅವರು ಸ್ಪಷ್ಟನೆ ನೀಡುತ್ತಿದ್ದಂತೆಯೇ ಇಬ್ಬರ ಮಧ್ಯೆ ವಾಗ್ವಾದ ನಡೆಯಿತು.

‘ನನ್ನ ವಾರ್ಡ್ ಬಗ್ಗೆ ನಿಮಗೇನು ಗೊತ್ತು. ಅದರ ಬಗ್ಗೆ ಮಾತನಾಡಬೇಡಿ’ ಎಂದು ಅಜೀಜ್‌ ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಾಧಾಕೃಷ್ಣ, ‘ಕುದ್ರೋಳಿಯನ್ನು ಯಾರ ಹೆಸರಿಗೂ ಆರ್‌ಟಿಸಿ ಮಾಡಿಲ್ಲ’ ಎಂದು ತಿರುಗೇಟು ನೀಡಿದರು.

ಮಧ್ಯ ಪ್ರವೇಶಿಸಿದ ಮೇಯರ್‌, ‘ಸ್ಥಳಕ್ಕೆ ಭೇಟಿ ನೀಡಿ, ಸಮಸ್ಯೆ ಸರಿಪಡಿಸುವುದಾಗಿ’ ಭರವಸೆ ನೀಡುವ ಮೂಲಕ ಪರಿಸ್ಥಿತಿ ತಿಳಿಗೊಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry