ಬೆಳೆ ವಿಮೆ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

6
ಕುಸುಗಲ್ ಬಳಿ ಜೆಡಿಎಸ್ ಕಾರ್ಯಕರ್ತರಿಂದ ರಸ್ತೆ ತಡೆ

ಬೆಳೆ ವಿಮೆ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

Published:
Updated:
ಬೆಳೆ ವಿಮೆ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

ಹುಬ್ಬಳ್ಳಿ: ಬೆಳೆ ವಿಮೆ ಬಿಡುಗಡೆ ಮತ್ತು ಕಡಲೆ ಖರೀದಿ ಕೇಂದ್ರ ತೆರೆಯಲು ಒತ್ತಾಯಿಸಿ ಜೆಡಿಎಸ್ ಕಾರ್ಯಕರ್ತರು ನವಲಗುಂದ ಶಾಸಕ ಎನ್‌.ಎಚ್. ಕೋನರಡ್ಡಿ ನೇತೃತ್ವದಲ್ಲಿ ತಾಲ್ಲೂಕಿನ ಕುಸುಗಲ್ ಬಳಿ ಒಂದೂವರೆ ಗಂಟೆ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ರೈತರು ತಮ್ಮ ಪಾಲಿನ ಮೊತ್ತ ತುಂಬಿದ್ದರೂ ವಿಮೆ ಹಣ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದ ಕಾರ್ಯಕರ್ತರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಕೋನರಡ್ಡಿ, ‘ಬೆಳೆ ವಿಮೆ ಬಿಡುಗಡೆಗೆ ಸಂಬಂಧಿಸಿದಂತೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಆರೋಪ– ಪ್ರತ್ಯಾರೋಪ ಮಾಡುವುದನ್ನು ಬಿಟ್ಟು, ವಿಮೆ ಹಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ, ಹೋರಾಟ ತೀವ್ರಗೊಳಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಕಡಲೆಗೆ ಸೂಕ್ತ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ. ಖರೀದಿ ಕೇಂದ್ರ ತೆರೆಯುವಂತೆ ಸರ್ಕಾರಕ್ಕೆ ಮನವಿ ಮಾಡಿದಾಗ ಸಂಕ್ರಾಂತಿ ಹಬ್ಬದ ಹೊತ್ತಿಗೆ ತೆರೆಯುವ ಭರವಸೆ ಸಿಕ್ಕಿತ್ತು. ಈಗ ಸಂಕ್ರಾಂತಿ ಮುಗಿದರೂ ತೆರೆದಿಲ್ಲ. ಕಡಲೆಯನ್ನು ದಲ್ಲಾಳಿಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ಸರ್ಕಾರವೇ ಸೃಷ್ಟಿಸುತ್ತಿದೆ’ ಎಂದು ಆರೋಪಿಸಿದರು.

‘ಪ್ರತಿ ವರ್ಷ ಈ ವೇಳೆಗೆ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲಾಗುತ್ತಿತ್ತು. ಆದರೆ, ಈ ವರ್ಷ ಮಾತ್ರ ತೆರೆದಿಲ್ಲ. ರೈತರ ಬದುಕಿನ ಜತೆ ಆಟವಾಡುವುದನ್ನು ಬಿಟ್ಟು ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಜೆಡಿಎಸ್‌ ರೈತ ಘಟಕದ ರಾಜ್ಯ ಅಧ್ಯಕ್ಷ ಗಂಗಾಧರ ಪಾಟೀಲ ಕುಲಕರ್ಣಿ ಮಾತನಾಡಿ, ‘ಈ ಭಾಗದ ಪ್ರಮುಖ ಬೆಳೆಯಾದ ಹತ್ತಿ ಮತ್ತು ಮೆಣಸಿನಕಾಯಿಯನ್ನು ಮೂರು ಬಾರಿ ಕಟಾವು ಮಾಡದೆ ಕೇವಲ ಒಂದು ಸಲ ಮಾತ್ರ ಮಾಡಲಾಗಿದೆ ಎಂಬ ಕಾರಣ ನೀಡಿ, ವಿಮಾ ಕಂಪನಿಗಳು ಹಣ ಬಿಡುಗಡೆಗೆ ನಿರಾಕರಿಸಿವೆ. ಈ ಬಗ್ಗೆ ಸರ್ಕಾರ ನೇಮಿಸಿದ್ದ ತಜ್ಞರ ಸಮಿತಿ, ರೈತರ ಪರವಾಗಿ ವರದಿ ನೀಡಿದೆ. ಅದಕ್ಕೂ ವಿಮಾ ಕಂಪನಿಗಳು ಕ್ಯಾರೇ ಎನ್ನುತ್ತಿಲ್ಲ’ ಎಂದು ದೂರಿದರು.

ಹುಬ್ಬಳ್ಳಿ ತಹಶೀಲ್ದಾರ್ ಶಶಿಧರ ಮಾಡ್ಯಾಳ ಅವರು ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದ ಬಳಿಕ ಪ್ರತಿಭಟನೆ ವಾಪಸ್ ಪಡೆಯಲಾಯಿತು.

ಜೆಡಿಎಸ್ ಮುಖಂಡರಾದ ಶಿವಣ್ಣ ಹುಬ್ಬಳ್ಳಿ, ವೀರನಗೌಡರ, ಮರಿಗೌಡರ ರಾಮನಾಥ ಶೆಣೈ, ಗಿರೀಶ ಹಂಗರಕಿ, ಬಿ.ಬಿ. ಗಂಗಾಧರಮಠ, ರಾಜಣ್ಣ ಸಂಕರಡ್ಡಿ, ವೀರಣ್ಣ, ಪರಮೇಶ ಯಡ್ರಾವಿ,  ಫಕ್ರು ಯಡ್ರಾವಿ, ದಾವಲ್‌ಸಾಬ್ ಅಣ್ಣಿಗೇರಿ ಹಾಗೂ ರಾಜು ದ್ಯಾವನಗೌಡರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry