ಮಗಳ ಗುರುತು ಖಾತ್ರಿಪಡಿಸಿದ ಮಚ್ಚೆ!

7
ಹುಬ್ಬಳ್ಳಿಯ ಕರುಳಬಳ್ಳಿ ಹುಡುಕಿ ಬಂದ ಸ್ವೀಡನ್‌ ಮಹಿಳೆ

ಮಗಳ ಗುರುತು ಖಾತ್ರಿಪಡಿಸಿದ ಮಚ್ಚೆ!

Published:
Updated:
ಮಗಳ ಗುರುತು ಖಾತ್ರಿಪಡಿಸಿದ ಮಚ್ಚೆ!

ಹುಬ್ಬಳ್ಳಿ: ಮೂವತ್ತು ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ಹೆತ್ತವರಿಂದ ದೂರವಾಗಿ ಸ್ವೀಡನ್‌ ಸೇರಿದ್ದ ಮಗಳು, ಮತ್ತೆ ತಾಯಿಯ ಮಡಿಲು ಸೇರಿದ್ದಾರೆ. ಕರುಳ ಕುಡಿಯ ಗುರುತು ಹಿಡಿಯಲು ತಾಯಿಯ ನೆರವಿಗೆ ಬಂದಿದ್ದು, ಮಗಳ ಕಾಲಿನಲ್ಲಿದ್ದ ಮಚ್ಚೆ!

34 ವರ್ಷದ ಮಯ ಅವರೇ ಹೆತ್ತವರ ಮಡಿಲು ಸೇರಿದ ಮಹಿಳೆ. ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮದ ಸಹಾಯದಿಂದ ಹೆತ್ತವರನ್ನು ಪತ್ತೆ ಹೆಚ್ಚಿದ ಮಯ, ತನ್ನ ಕಾಲಿನಲ್ಲಿದ್ದ ಮಚ್ಚೆ ತೋರಿಸಿ, ನಾನೇ ನಿಮ್ಮ ಮಗಳೆಂದು ದೃಢಪಡಿಸಿದ್ದಾರೆ. ವೈಜ್ಞಾನಿಕವಾಗಿ ಖಚಿತಪಡಿಸಿಕೊಳ್ಳಲು ಡಿಎನ್‌ಎ ಪರೀಕ್ಷೆಗೆ ಒಳಗಾಗಿದ್ದಾರೆ.

‘ತಾನು ಸ್ವೀಡನ್‌ ದಂಪತಿಯ ದತ್ತು ಮಗಳು. ನನ್ನ ಮೂಲ ಭಾರತ ಎಂಬ ಸತ್ಯ ಮೂರು ವರ್ಷಗಳ ಹಿಂದೆ ಮಯ ಅವರಿಗೆ ತಿಳಿಯಿತಂತೆ. ಬಾಲ್ಯದ ಫೋಟೊವನ್ನು ಫೇಸ್‌ಬುಕ್‌ನಲ್ಲಿ ಹಾಕಿದ ಮಯ, ಹೆತ್ತವರನ್ನು ಹುಡುಕಿಕೊಡುವಂತೆ ಕೇಳಿಕೊಂಡಿದ್ದಾರೆ. ಕೆಲವು ಮಾಧ್ಯಮದಲ್ಲಿ ಇದು ಸುದ್ದಿಯಾದಾಗ, ಬೆಂಗಳೂರಿನಲ್ಲಿರುವ ನನ್ನಣ್ಣ ಆ ಫೋಟೊ ಗುರುತಿಸಿ, ಸಂಪರ್ಕಿಸಿದ್ದಾರೆ. ‘ನಮ್ಮ ಬಳಿ ಫೋಟೊ ಇರಲಿಲ್ಲ. ಆದರೆ, ಮಚ್ಚೆ ನೋಡಿದ ನಂತರ ಖಾತ್ರಿಯಾಯಿತು’ ಎಂದು ಮಯ ಅವರ ತಂಗಿ ಸ್ವಪನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಂದೆ ಸಾವಿನ ದಿನ ಮಗಳು ಸಿಕ್ಕಳು !: ‘ಅಣ್ಣ ಶಾನ್‌ಕುಮಾರ್‌ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಜ.15ರಂದು ನಮ್ಮ ತಂದೆ ನಿಧನರಾಗಿ ಮೂರು ವರ್ಷವಾಗಿತ್ತು. ಆ ನಿಮಿತ್ತ ಪ್ರಾರ್ಥನೆ ಸಲ್ಲಿಸಿ, ಅವರ ಆತ್ಮಕ್ಕೆ ಶಾಂತಿ ಕೋರುವ ಉದ್ದೇಶದಿಂದ ಅಣ್ಣನ ಮನೆಗೆ ಹೋಗಿದ್ದೆವು.

ಅದೇ ಸಂದರ್ಭದಲ್ಲಿ ಮಯ ಕೂಡ ನಮ್ಮನ್ನು ಹುಡುಕುತ್ತ ಬೆಂಗಳೂರಿಗೆ ಬಂದಿದ್ದಳು. ಮಾಧ್ಯಮಗಳಲ್ಲಿ ಬಂದ ಸುದ್ದಿ ನೋಡಿ, ಅವರ ಕಚೇರಿಗೆ ಹೋಗಿ ನಾವೇ ಭೇಟಿಯಾದೆವು. ತಂದೆ ತೀರಿಕೊಂಡ ದಿನವೇ ಅಕ್ಕ ಸಿಕ್ಕಳು’ ಎಂದು ಅವರು ಹೇಳಿದರು.

‘ಮಯ ಸ್ವೀಡನ್‌ನಲ್ಲಿ ಸ್ಟಾಫ್‌ ನರ್ಸ್‌ ಆಗಿದ್ದಾಳೆ. ಪತಿ ಜೋಹಾನ್‌ ಹಾಗೂ ಮೂರು ಮಕ್ಕಳ ಸಂಸಾರ ಅವಳದು. ಸದ್ಯ ಡಿಎನ್‌ಎ ಪರೀಕ್ಷೆ ಮಾಡಲಾಗಿದ್ದು, ಜ.27 ಅಥವಾ 28ಕ್ಕೆ ವರದಿ ಬರಲಿದೆ. ಬುಧವಾರ ರಾತ್ರಿ ಮಯ ಸ್ವೀಡನ್‌ಗೆ ಹಿಂದಿರುಗಿದ್ದು, ಭಾಷೆಯ ಸಮಸ್ಯೆ ಕಾರಣ ಸರಿಯಾಗಿ ಸಂವಹನ ನಡೆಸಲು ಸಾಧ್ಯವಾಗಿಲ್ಲ’ ಎಂದು ಸ್ವಪನ್‌ ಹೇಳಿದರು.

ಹುಬ್ಬಳ್ಳಿ ಹುಡುಗಿ: ‘1984ರಲ್ಲಿ ಜನಿಸಿದ್ದ ಮಯ, 1988ರವರೆಗೆ ನಮ್ಮ ಜೊತೆಯೇ ಇದ್ದಳು. ಅವಳು ನ್ಯುಮೊನಿಯಾದಿಂದ ಬಳಲುತ್ತಿದ್ದ ಸಂದರ್ಭದಲ್ಲಿ ನಮ್ಮಿಂದ ದೂರವಾಗಿದ್ದಳಂತೆ. ಅನಾಥ ಮಗು ಎಂದು ತಿಳಿದ ಕೆಲವರು, ಸರ್ಕಾರಿ ಶಿಶುಗೃಹ ಸೇರಿಸಿದ್ದಾರೆ. ಅಲ್ಲಿಂದ, ಬೆಂಗಳೂರಿನಲ್ಲಿನ ಬಸವನಗುಡಿಯ ಮಾತೃಛಾಯಾ ಶಿಶುವಿಹಾರಕ್ಕೆ ಕಳುಹಿಸಲಾಗಿತ್ತಂತೆ. 1990ರಲ್ಲಿ ಸ್ವೀಡನ್‌ನ ದಂಪತಿ ಆಕೆಯನ್ನು ದತ್ತು ಪಡೆದು ಕರೆದುಕೊಂಡು ಹೋಗಿದ್ದರಂತೆ’ ಎಂದು ಸ್ವಪನ್‌ ತಿಳಿಸಿದರು.

ಅಕ್ಕನಂತೆಯೇ, ಸ್ಟಾಫ್‌ ನರ್ಸ್‌ ಆಗಿರುವ ಸ್ವಪನ್‌, ಹುಬ್ಬಳ್ಳಿಯ ಆದಿತ್ಯ ಬೋನ್‌ಕೇರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry