ಕುತೂಹಲ ಕೇಂದ್ರವಾದ ಇಂದಿರಾ ಕ್ಯಾಂಟೀನ್‌ ಕಾಮಗಾರಿ

7
ಧಾರವಾಡದ ಮಿನಿ ವಿಧಾನಸೌಧ ಆವರಣದಲ್ಲಿ ಮೂರೇ ದಿನದಲ್ಲಿ 1,600 ಚದರಡಿಯ ಕಟ್ಟಡ ನಿರ್ಮಾಣ

ಕುತೂಹಲ ಕೇಂದ್ರವಾದ ಇಂದಿರಾ ಕ್ಯಾಂಟೀನ್‌ ಕಾಮಗಾರಿ

Published:
Updated:
ಕುತೂಹಲ ಕೇಂದ್ರವಾದ ಇಂದಿರಾ ಕ್ಯಾಂಟೀನ್‌ ಕಾಮಗಾರಿ

ಧಾರವಾಡ: ಇಲ್ಲಿನ ಮಿನಿ ವಿಧಾನಸೌಧ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಇಂದಿರಾ ಕ್ಯಾಂಟೀನ್ ಕೇವಲ ಮೂರು ದಿನಗಳಲ್ಲೇ ಪೂರ್ಣಗೊಂಡಿದ್ದು, ಇದರ ತಂತ್ರಜ್ಞಾನ ಸಾರ್ವಜನಿಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಪ್ರೀಕಾಸ್ಟ್‌ ತಂತ್ರಜ್ಞಾನದಲ್ಲಿ ನಿರ್ಮಾಣಗೊಂಡಿರುವ ಈ ಕ್ಯಾಂಟೀನಿಗೆ ಕಾರ್ಖಾನೆಯಲ್ಲಿ ಮೊದಲೇ ನಿರ್ಮಾಣಗೊಂಡ ಗೋಡೆ, ಚಾವಣಿ ಹಾಗೂ ನೆಲಹಾಸು ಬಳಸಲಾಗಿದೆ.

ಜ.15 ರಂದು ಕ್ಯಾಂಟೀನ್‌ಗೆ ಕಾರ್ಮಿಕರು ಬುಧವಾರ ಅಂತಿಮ ಸ್ಪರ್ಶ ನೀಡುತ್ತಿದ್ದರು. ಇದ್ದಕ್ಕಿದ್ದಂತೆ ಎದ್ದು ನಿಂತಿರುವ ಕಟ್ಟಡ ಹಾಗೂ ತಂತ್ರಜ್ಞಾನ ವೀಕ್ಷಿಸಲು ಅಲ್ಲಿರುವ ಸರ್ಕಾರಿ ಕಚೇರಿಗಳ ನೌಕರರು ಹಾಗೂ ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ.

ಕಟ್ಟಡ ನಿರ್ಮಾಣದ ತಂತ್ರಜ್ಞಾನ ಕುರಿತು ಮಾಹಿತಿ ನೀಡಿದ ಕೆಇಎಫ್‌ ಸಂಸ್ಥೆಯ ರಮೇಶ ಪರೇಕ್, ‘ತಮಿಳುನಾಡಿನ ಕೃಷ್ಣಗಿರಿಯಲ್ಲಿರುವ ಸಂಸ್ಥೆಯ ಕಾರ್ಖಾನೆಯಲ್ಲಿ ಮನೆಯ ಬಿಡಿಭಾಗಗಳು ತಯಾರಾಗಿವೆ. 40X40 ಅಡಿ ವಿಸ್ತೀರ್ಣದ ಈ ಕಟ್ಟಡ ಕೇವಲ ಎರಡು ದಿನಗಳಲ್ಲೇ ನಿರ್ಮಾಣ ಮಾಡಬಹುದು. ಇಲ್ಲಿ ಒಂದು ದಿನ ಹೆಚ್ಚಾಗಿದೆ’ ಎಂದರು.

‘ಕೇವಲ ಐದು ಮಂದಿ ಕಾರ್ಮಿಕರು ಕಟ್ಟಡ ನಿರ್ಮಿಸಿದ್ದಾರೆ. 80 ಟನ್ ಕ್ರೇನ್ ಸಹಾಯದಿಂದ ಬೃಹತ್‌ ಕಾಂಕ್ರೀಟ್‌ ಸ್ಲ್ಯಾಬ್‌ಗಳನ್ನು ನಿಲ್ಲಿಸಲಾಗಿದೆ.  ತಳಪಾಯಕ್ಕೆ 18 ಬೃಹತ್ ಸ್ಲ್ಯಾಬ್‌ಗಳನ್ನು ಬಳಸಲಾಗಿದೆ. 120 ಮಿ.ಮೀ. ದಪ್ಪದಾದ ಗೋಡೆಗಳಿಗೆ 15 ಸ್ಲಾಬ್‌ಗಳನ್ನು ಬಳಸಲಾಗಿದೆ. ಒಂದು ಪ್ರಮುಖ ಬೀಮ್‌ ಇದೆ. 10X3ಮೀ. ವಿಸ್ತೀರ್ಣದ ದೊಡ್ಡದಾದ ಮೂರು ಕಾಂಕ್ರೀಟ್‌ ಹಾಸುಗಳನ್ನು ಚಾವಣಿಗೆ ಹಾಸಲಾಗಿದೆ. ಇವೆಲ್ಲವೂಗಳನ್ನು ಇಂಟರ್‌ಲಾಕಿಂಗ್‌ ಮೂಲಕ ಜೋಡಿಸಲಾಗಿದೆ’ ಎಂದು ವಿವರಿಸಿದರು.

‘ಕ್ಯಾಂಟೀನ್‌ ಬಳಕೆಗೆ ನೀರು ಶೇಖರಿಸಿಡಲು ಎರಡು ಬೃಹತ್ ತೊಟ್ಟಿಗಳನ್ನೂ ಅಲ್ಲಿಯೇ ನಿರ್ಮಾಣ ಮಾಡಿಕೊಂಡು ಬರಲಾಗಿದೆ. ಹೊರ ಹಾಗೂ ಒಳಭಾಗದಲ್ಲಿ 12 ಪ್ರೀಕಾಸ್ಟ್‌ ಟೇಬಲ್‌ಗಳನ್ನು ಹಾಕಲಾಗಿದೆ. ಅವಳಿ ನಗರದಲ್ಲಿ ಇಂಥದ್ದೇ 12 ಕ್ಯಾಂಟೀನ್‌ಗಳು ನಿರ್ಮಾಣವಾಗಲಿವೆ. ಎರಡು ಅಡುಗೆ ಕೋಣೆ ನಿರ್ಮಿಸಲಾಗುವುದು. ಇಲ್ಲಿಂದಲೇ ಎಲ್ಲಾ ಕ್ಯಾಂಟೀನ್‌ಗಳಿಗೂ ಸಿದ್ಧ ಆಹಾರ ಪೂರೈಕೆಯಾಗಲಿದೆ’ ಎಂದು ರಮೇಶ ತಿಳಿಸಿದರು.

‘ಕಟ್ಟಿಸಿದ ಮನೆಯಷ್ಟೇ ಬಾಳಿಕೆ ಬರುವ ಈ ಕಟ್ಟಡಕ್ಕೆ ನೀರು ಹಾಯಿಸಿ ಕ್ಯೂರಿಂಗ್ ಮಾಡುವ ಗೋಜು ಇಲ್ಲ. ವರ್ಷಗಟ್ಟಲೇ ಕಾಯುವ ಅಗತ್ಯವೂ ಇಲ್ಲ’ ಎಂದು ಹೇಳಿದರು.

**

ನಾಲ್ಕು ಕ್ಯಾಂಟೀನ್ ಪೂರ್ಣಗೊಂಡಿವೆ. ಜ.25ರ ಒಳಗಾಗಿ ಎಲ್ಲಾ ಕ್ಯಾಂಟೀನ್‌ಗಳ ನಿರ್ಮಾಣ ಪೂರ್ಣಗೊಳ್ಳಲಿವೆ

     -ಮಹೇಶ, ಸೂಪರಿಂಟೆಂಡೆಂಟ್‌ ಎಂಜಿನಿಯರ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry