ನೀರು ಹರಿಸಲು ಕಾಲುವೆ ಸ್ವಚ್ಛತೆ ಕಡೆಗಣನೆ

7
ಬೆಣ್ಣೆತೊರಾ ಯೋಜನೆ ಅಧಿಕಾರಿಗಳ ನಿರ್ಲಕ್ಷ್ಯ ಆರೋಪ

ನೀರು ಹರಿಸಲು ಕಾಲುವೆ ಸ್ವಚ್ಛತೆ ಕಡೆಗಣನೆ

Published:
Updated:
ನೀರು ಹರಿಸಲು ಕಾಲುವೆ ಸ್ವಚ್ಛತೆ ಕಡೆಗಣನೆ

ಚಿತ್ತಾಪುರ: ‘ತಾಲ್ಲೂಕಿನ ಹೇರೂರ್ ನೀರಾವರಿ ಯೋಜನೆಯ ಬೆಣ್ಣೆತೊರಾ ಜಲಾಶಯದಿಂದ ರೈತರ ಹೊಲಗಳಿಗೆ ಬಲದಂಡೆ ಕಾಲುವೆಯ ಡಿ.ಪಿ.ಒ ಮೂಲಕ ನೀರು ಹರಿಸಲು ಕಾಲುವೆ (ನೇರ ತೂಗು) ಸ್ವಚ್ಛತೆ ಮಾಡಿಸಲು ಬೆಣ್ಣೆತೊರಾ ಅಧಿಕಾರಿಗಳು ತೀವ್ರ ಕಡೆಗಣಿಸಿದ್ದಾರೆ’ ಎಂದು ಬೆಣ್ಣೆತೊರಾ ಯೋಜನಾಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳ ಅಧ್ಯಕ್ಷ ಮಸ್ತಾನಸಾಬ ಇಬ್ರಾಹಿಂ ಸಾಬ ಕೊರವಿ ಆರೋಪಿಸಿದ್ದಾರೆ.

ಈ ಕುರಿತು ಈಚೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ‘ಡಿ.ಪಿ.ಒ ನಂ. 1ರಿಂದ 9ರವರೆಗೆ ರೈತರ ಹೊಲಗಳಿಗೆ ನೀರು ಹರಿಸುವ ಒಂದೂ ನೇರ ತೂಗು ಕಾಲುವೆ ಸರಿಯಾಗಿ ಮಾಡಿಲ್ಲ. ಈ ಬಗ್ಗೆ ಯೋಜನೆ ಎಇಇ ಗೌತಮ ಕಾಂಬಳೆ ಅವರನ್ನು ಕೇಳಿದರೆ ಉಡಾಫೆ ಮತ್ತು ಹಾರಿಕೆ ಉತ್ತರ ನೀಡುತ್ತಿದ್ದಾರೆ’ ಎಂದು ಅವರು ದೂರಿದ್ದಾರೆ.

‘ಜ. 3ರಂದು ಕರ್ನಾಟಕ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬೆಣ್ಣೆತೊರಾ ಯೋಜನೆಯಡಿ ರೈತರ ಹೊಲಗಳಿಗೆ ನೀರು ಸೌಲಭ್ಯ ಒದಗಿಸಲು ನೇರ ತೂಗು ವ್ಯವಸ್ಥೆಯನ್ನು ಸಂಪೂರ್ಣ ಸ್ವಚ್ಛ ಮಾಡಿಸುವುದಾಗಿ ಹೇಳಲಾಗಿತ್ತು. ಜ. 15 ರಂದು ಜಲಾಶಯದಿಂದ ನೀರು ಬಿಡಬೇಕಾಗಿತ್ತು. ಆದರೆ, ಕೆಲಸವೇ ಆಗಿಲ್ಲ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನೇರ ತೂಗು ಮೂಲಕ ರೈತರಿಗೆ ಸೌಲಭ್ಯ ಒದಗಿಸಿದರೆ ಬೇಸಿಗೆಯಲ್ಲಿ ಮೆಕ್ಕೆ ಜೋಳ, ಗೋಧಿ, ಹೆಸರು, ಉದ್ದು, ಸೂರ್ಯಕಾಂತಿ ಬೆಳೆಯಲು ಅನುಕೂಲ ವಾಗುತ್ತದೆ. ಆದರೆ, ಅಧಿಕಾರಿಗಳು ರೈತರ ಬಗ್ಗೆ ಕಳಕಳಿ, ಕಾಳಜಿ ತೋರುತ್ತಿಲ್ಲ. ನೀರು ಬಿಡು ತ್ತಾರೆ ಎನ್ನುವ ಭರವಸೆಯನ್ನೆ ರೈತರು ಕಳೆದು ಕೊಂಡಿದ್ದಾರೆ’ ಎಂದು ದೂರಿದ್ದಾರೆ.

ಬೆಣ್ಣೆತೊರಾ ಯೋಜನೆಯ ಸೌಲಭ್ಯ ರೈತರಿಗೆ ತಲುಪಿಸುವುದಕ್ಕಿಂತ ಅಧಿಕ ಕಾಮಗಾರಿ ನಿರಂತರ ನಡೆಯುವಂತೆ ಮಾಡುವುದೇ ಅಧಿಕಾರಿಗಳ ಉದ್ದೇಶವಾಗಿದೆ. ನೇರ ತೂಗು ಕಾಲುವೆ ಸರಿಯಾಗಿ ಮಾಡಿಸಿ ಎಂದು ಹೇಳಿದರೆ ಯಾವ ರೈತರು ನೀರು ಪಡೆದು ನೀರಾವರಿ ಬೆಳೆ ಬೆಳೆಯುವುದಿಲ್ಲ. ಯಾಕೆ ಸುಮ್ಮನೆ ನೀರು ಬಿಡುವಂತೆ ಒತ್ತಾಯಿಸುತ್ತೀರಿ ಎಂದು ನಮ್ಮನ್ನೆ ಪ್ರಶ್ನಿಸುತ್ತಿದ್ದಾರೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಈ ಕುರಿತು ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಬೆಣ್ಣೆತೊರಾ ಯೋಜನೆಯ ಕಾಲುವೆಗಳ ಸ್ಥಿತಿಗತಿ ಹಾಗೂ ಮುಖ್ಯ ಕಾಲುವೆ, ಹೊಲಗಾಲುವೆ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಬೇಸಿಗೆಯಲ್ಲಿ ರೈತರಿಗೆ ನೀರಾವರಿ ಬೆಳೆ ಬೆಳೆಯಲು ಅನುಕೂಲ ಆಗುವಂತೆ ತಕ್ಷಣ ನೇರ ತೂಗು ಸರಿಪಡಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry