ವರ್ಷಕ್ಕೊಮ್ಮೆ ಉದ್ಯೋಗ ಮೇಳ: ಸಚಿವ

7
ಎಚ್‌ಕೆಸಿಸಿಐ ಸುವರ್ಣ ಮಹೋತ್ಸವದ ಸಮಾರೋಪದಲ್ಲಿ ಅನಂತಕುಮಾರ ಹೆಗಡೆ ಭರವಸೆ

ವರ್ಷಕ್ಕೊಮ್ಮೆ ಉದ್ಯೋಗ ಮೇಳ: ಸಚಿವ

Published:
Updated:
ವರ್ಷಕ್ಕೊಮ್ಮೆ ಉದ್ಯೋಗ ಮೇಳ: ಸಚಿವ

ಕಲಬುರ್ಗಿ: ‘ಹೈದರಾಬಾದ್ ಕರ್ನಾಟಕ ಭಾಗದಲ್ಲಿ 50 ವರ್ಷಗಳಿಂದ ಕೈಗಾರಿಕೆಗಳ ಸ್ಥಾಪನೆ ಹಾಗೂ ಕೌಶಲವುಳ್ಳ ಯುವಕರನ್ನು ಸೃಷ್ಟಿಸುವ ಕೆಲಸ ಆಗಿಲ್ಲ. ಹೀಗಾಗಿ ಇಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಿದೆ. ಇಲ್ಲಿನ ಯುವಕರಿಗೆ ಉದ್ಯೋಗಾವಕಾಶಗಳನ್ನು ದೊರಕಿಸಲು ಕೇಂದ್ರ ಸರ್ಕಾರದ ಕೌಶಲಾಭಿವೃದ್ಧಿ ಇಲಾಖೆಯ ಆಶ್ರಯದಲ್ಲಿ ವರ್ಷಕ್ಕೊಮ್ಮೆ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗುವುದು’ ಎಂದು ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ತಿಳಿಸಿದರು.

ಪಿಡಿಎ ಎಂಜಿನಿಯರಿಂಗ್‌ ಕಾಲೇಜಿನ ಎಸ್‌ಎಸಿ ಸಭಾಂಗಣದಲ್ಲಿ ಹೈದರಾಬಾದ್‌ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಎಚ್‌ಕೆಸಿಸಿಐ)ಯ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಉದ್ಯೋಗ ಮೇಳ, ಸ್ಕಿಲ್ಲಾಥಾನ್, ಸ್ಕಿಲ್‌ ಆನ್‌ ವ್ಹೀಲ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಹೈ.ಕ ಭಾಗ ಒಣಪ್ರದೇಶ. ಇಲ್ಲಿನ ಜನ ಬಹಳ ಕಷ್ಟ ಪಡುತ್ತಾರೆ. ಅವರ ಕಣ್ಣೀರಿನ ಕಥೆ ನನಗೆ ಗೊತ್ತಿರಲಿಲ್ಲ. ಗೊತ್ತಿದ್ದರೆ ಇನ್ನಷ್ಟು ಕಂಪನಿಗಳನ್ನು ಇಲ್ಲಿನ ಉದ್ಯೋಗ ಮೇಳಕ್ಕೆ ಕರೆ ತರುತ್ತಿದ್ದೆ’ ಎಂದು ಅವರು ಹೇಳಿದರು.

‘ಇಸ್ರೇಲ್‌ ದೇಶದಲ್ಲಿ ನೈಸರ್ಗಿಕ ಸಂಪನ್ಮೂಲಗಳು ಬಹಳ ಕಡಿಮೆ. ಕಲಬುರ್ಗಿ ಜಿಲ್ಲೆಯಷ್ಟೂ ಅದು ವಿಸ್ತಾರವಾಗಿಲ್ಲ. ಆದರೆ, ಅಲ್ಲಿನ ಜನ ಶ್ರಮವಹಿಸಿ ದೇಶವನ್ನು ವಿಶ್ವಕ್ಕೆ ಮಾದರಿಯಾಗಿ ರೂಪಿಸಿದ್ದಾರೆ. ಕೃಷಿ, ಕೈಗಾರಿಕೆ, ಹೈನುಗಾರಿಕೆ ಕ್ಷೇತ್ರದಲ್ಲಿ ಆ ದೇಶ ಗಣನೀಯ ಸಾಧನೆ ಮಾಡಿದೆ. ನಮ್ಮಲ್ಲೂ ಅಂಥ ಸಾಧ್ಯತೆಗಳಿವೆ. ಆದರೆ ಸರ್ಕಾರಗಳು ಅಂಥ ಪ್ರಯತ್ನವನ್ನೇ ನಡೆಸಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಎಂಜಿನಿಯರಿಂಗ್‌ ಕಾಲೇಜುಗಳು ನೀಡುವ ಸರ್ಟಿಫಿಕೇಟ್‌ಗಳಿಗೆ ಯಾವುದೇ ಬೆಲೆ ಇಲ್ಲ. ದೇಶದ ಶೈಕ್ಷಣಿಕ ವಲಯದಿಂದ ಕೌಶಲವುಳ್ಳ ಯುವಜನ ಹೊರಬರುತ್ತಿಲ್ಲ. ಕೌಶಲವುಳ್ಳ ಜನರ ಪ್ರಮಾಣ ನಮ್ಮ ಶೇ 4.5ರಷ್ಟು ಮಾತ್ರ. ಆದರೆ, ಪಾಶ್ಚಾತ್ಯ ದೇಶಗಳಲ್ಲಿ ಇದರ ಪ್ರಮಾಣ ಶೇ60ರಷ್ಟಿದೆ. ಈ ಅಂತರವನ್ನು ನಾವು ತಗ್ಗಿಸಬೇಕಾಗಿದೆ. ದುರ್ಬಲರಿಗೂ ಅವರ ಯೋಗ್ಯತೆಯ ಅನುಸಾರ ಅವಕಾಶಗಳು ಸೃಷ್ಟಿಯಾಗಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

ನಿರ್ಮಾಣ ನಿಧಿ ಸ್ಥಾಪನೆ: ‘ನವೋದ್ಯಮಿಗಳಿಗೆ ನೆರವು ನೀಡಲು ಕೇಂದ್ರ ಸರ್ಕಾರ ’ನಿರ್ಮಾಣ ನಿಧಿ’ ಸ್ಥಾಪನೆ ಮಾಡಲಿದೆ. ಉದ್ಯಮಿಗಳು ಸಲ್ಲಿಸುವ ಪ್ರಸ್ತಾವವನ್ನು ನಮ್ಮ ಇಲಾಖೆಯ ಪರಿಣತರು ಪರಿಶೀಲನೆ ನಡೆಸಿ, ಆಯ್ಕೆ ಮಾಡಲಿದ್ದಾರೆ. ಆಯ್ಕೆಯಾದ ಪ್ರಸ್ತಾವಗಳಿಗೆ ‘ನಿರ್ಮಾಣ ನಿಧಿ’ಯಿಂದ ಹಣಕಾಸಿನ ನೆರವು ನೀಡಲಾಗುವುದು. ಉದ್ಯಮದಲ್ಲಿ ನಷ್ಟ ಸಂಭವಿಸಿದರೆ ಯಾರಿಗೂ ದಂಡ, ಜೈಲು ಶಿಕ್ಷೆ ಇರುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ಹೈದರಾಬಾದ್‌ ಕರ್ನಾಟಕ ಭಾಗದ ಜನರಿಗೆ ಉದ್ಯೋಗ ನೀಡುವಂತಾಗಬೇಕು. ಇದಕ್ಕಾಗಿ ಎಚ್‌ಕೆಸಿಸಿ ಕಾರ್ಯೋನ್ಮುಖವಾಗಬೇಕು. ಅಗತ್ಯ ನೆರವು ನೀಡಲು ನಾವು ಸಿದ್ಧರಿಸಿದ್ದೇವೆ. ಈ ಭಾಗದಲ್ಲಿ ಹೊಸ ಉದ್ಯಮಗಳನ್ನು ಸ್ಥಾಪಿಸುವ ಸಂಬಂಧ ‘ಐಡಿಯಾ ಕ್ಲಬ್‌’ ರಚನೆ ಮಾಡಿಕೊಳ್ಳಬೇಕು. ನವೋದ್ಯಮಿಗಳು ಹೊಸ ಯೋಜನೆಗಳನ್ನು ಸಲ್ಲಿಸಲು ಅವಕಾಶ ನೀಡಬೇಕು’ ಎಂದು ಅವರು ಸಲಹೆ ನೀಡಿದರು.

ಬೀದರ್‌ ಸಂಸದ ಭಗವಂತ ಖೂಬಾ ಮಾತನಾಡಿದರು. ಶಾಸಕರಾದ ದತ್ತಾತ್ರೇಯ ಸಿ.ಪಾಟೀಲ ರೇವೂರ, ಬಿ.ಜಿ.ಪಾಟೀಲ, ಅಮರನಾಥ ಪಾಟೀಲ, ಮಾಜಿ ಸಚಿವ ಬಾಬುರಾವ್ ಚವಾಣ, ರೇವೂನಾಯಕ ಬೆಳಮಗಿ, ಮಾಜಿ ಶಾಸಕರಾದ ಎಂ.ವೈ.ಪಾಟೀಲ, ಶಶೀಲ್‌ ಜಿ. ನಮೋಶಿ, ಬಿಜೆಪಿ ಗ್ರಾಮಾಂತರ ಘಟಕದ ಅಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಇದ್ದರು. ಎಚ್‌ಕೆಸಿಸಿಐ ಅಧ್ಯಕ್ಷ ಸೋಮಶೇಖರ ಟೆಂಗಳಿ ಸ್ವಾಗತಿಸಿದರು.

**

ವೈಜ್ಞಾನಿಕ ಶಿಕ್ಷಣ ಪದ್ಧತಿಯ ಹೆಸರಿನಲ್ಲಿ ಸಾಂಪ್ರದಾಯಿಕ ವೃತ್ತಿ ಕೌಶಲವನ್ನು ನಾಶಪಡಿಸಿದ್ದೇವೆ. ಕಮ್ಮಾರರು, ನೇಕಾರರು, ಪಾರಂಪರಿಕ ವೈದ್ಯರೂ ಕೌಶಲವುಳ್ಳವರು.

-ಅನಂತಕುಮಾರ ಹೆಗಡೆ, ಕೇಂದ್ರ ಕೌಶಲಾಭಿವೃದ್ಧಿ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry