ಬಿಜೆಪಿ ಗೆಲ್ಲಿಸಿದರೆ ವಿಜಯಪುರ ತಾಲ್ಲೂಕು

7
ದೇವನಹಳ್ಳಿಯ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಯಡಿಯೂರಪ್ಪ ಭರವಸೆ

ಬಿಜೆಪಿ ಗೆಲ್ಲಿಸಿದರೆ ವಿಜಯಪುರ ತಾಲ್ಲೂಕು

Published:
Updated:

ದೇವನಹಳ್ಳಿ: ಜನ ಆಶೀರ್ವಾದದಿಂದ ಬಿಜೆಪಿ ಅಧಿಕಾರಕ್ಕೆ ಬಂದರೆ ವಿಜಯಪುರ ಹೋಬಳಿಯನ್ನು ತಾಲ್ಲೂಕು ಕೇಂದ್ರವಾಗಿ ಘೋಷಣೆ ಮಾಡಲಾಗುವುದು ಎಂದು ಬಿಜಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಸರ್ಕಾರಿ ಕಿರಿಯ ಕಾಲೇಜು ಮೈದಾನದಲ್ಲಿ ಮಂಗಳವಾರ ನಡೆದ ಬಿಜೆಪಿ ಪರಿವರ್ತನಾ ಯಾತ್ರೆ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ 193 ಕ್ಷೇತ್ರಗಳಲ್ಲಿ ಪರಿವರ್ತನಾ ಯಾತ್ರೆ ಮುಗಿದಿದೆ. 224 ಕ್ಷೇತ್ರಗಳಲ್ಲಿ ಗುರಿ ಇಟ್ಟುಕೊಂಡು ಈಗಾಗಲೇ 75 ದಿನ ಪ್ರವಾಸ ಆಗಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಅನ್ನ, ಬಟ್ಟೆ, ವಸತಿ ಅರ್ಹರಿಗೆ ತಲುಪಿಲ್ಲ. ದುಡಿಯುವ ಕೈಗಳಿಗೆ ಕೆಲಸ ಇಲ್ಲ. ರೈತರ 2 ರಿಂದ 3 ಎಕರೆ ತುಂಡು ಭೂಮಿಗಳಿಗೆ ಹಕ್ಕು ಪತ್ರ ಸಿಕ್ಕಿಲ್ಲ, ಪೋಡಿಯಾಗಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೆ ಸಮಸ್ಯೆ ನಿವಾರಣೆ ಆಗಲಿದೆ ಎಂದರು.

ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿದ್ದಾಗ ವಾಲ್ಮೀಕಿ ಜಯಂತಿಗೆ ಅವಕಾಶ ನೀಡಿ, ನೂರಾರು ಕೋಟಿ ಅನುದಾನ ಸಮುದಾಯಕ್ಕೆ ಮೀಸಲಿಟ್ಟಿದ್ದೆವು. ಕನಕದಾಸರ ಕಾಗಿಲೆನೆಯಲ್ಲಿ ₹40 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿದ್ದೇನೆ. ನಾನು ಜಾರಿಗೆ ತಂದ ಭಾಗ್ಯಲಕ್ಷ್ಮಿ ಯೋಜನೆ ಅರ್ಹರಿಗೆ ತಲುಪಿಲ್ಲ ಎಂದರು.

ಡಾ.ಅಂಬೇಡ್ಕರ್‌ ಅವರನ್ನು ಎರಡು ಬಾರಿ ಸೋಲಿಸಿದ ಅಂದಿನ ನೆಹರು ಸರ್ಕಾರ ಅಂತಿಮವಾಗಿ ಮೃತದೇಹ ದಫನ ಮಾಡಲು ದೆಹಲಿಯಲ್ಲಿ ಜಾಗ ನೀಡಲಿಲ್ಲ. ಇಡೀ ರಾಜ್ಯದಲ್ಲಿರುವ ಕ್ಷೇತ್ರದಲ್ಲಿ ಪರಿವರ್ತನಾ ಯಾತ್ರೆ ಮೂಲಕ ಜನಸಂಕಷ್ಟ ಸಮಸ್ಯೆಗಳನ್ನು ಅರಿತಿದ್ದು, ಸ್ವಚ್ಛ ದಕ್ಷ ಪ್ರಮಾಣಿಕವಾಗಿ ಆಡಳಿತ ನಡೆಸಲು ಕನಿಷ್ಠ 150ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲೇಬೇಕಾದ ಅನಿವಾರ್ಯತೆ ಈ ಬಾರಿ ಬಿಜೆಪಿಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.

ಶಾಸಕ ಗೋವಿಂದ ಕಾರಜೋಳ ಮಾತನಾಡಿ, ಸ್ವಾತಂತ್ರ ಬಂದು 70 ವರ್ಷದಲ್ಲಿ 57 ವರ್ಷ ಕಾಂಗ್ರೆಸ್ ಆಡಳಿತ ನಡೆಸಿದೆ. 37 ವರ್ಷ ಗಾಂಧಿ ಕುಟುಂಬ ದೇಶವನ್ನಾಳಿದೆ. ಗಾಂಧಿ ಕನಸು ಈಡೇರಲಿಲ್ಲ. ಇಂದಿರಾ ಗಾಂಧಿ ಗರೀಬಿ ಹಟಾವೊ ಆಗಲಿಲ್ಲ. ಕಾಂಗ್ರೆಸ್ ಮುಖಂಡರ ಗರೀಬಿ ಹಟಾವೊ ಆಯಿತು ಎಂದರು.

ರಾಜ್ಯದ ಸಿದ್ದರಾಮಯ್ಯ ಸರ್ಕಾರದಲ್ಲಿ ಸಾಮಾಜಿಕ ನ್ಯಾಯ ಸಿಗಲಿಲ್ಲ. 1,318 ಹೆಣ್ಣು ಮಕ್ಕಳು ರಾಜ್ಯದಲ್ಲಿ ಕಣ್ಮೆರೆಯಾಗಿದ್ದಾರೆ. ನಾಲ್ಕು ವರ್ಷದ ಆಡಳಿತಾವಧಿಯಲ್ಲಿ 3,600 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 10,210 ದಲಿತರ ಪ್ರಕರಣದಲ್ಲಿ 37 ಪ್ರಕರಣ ಹೊರತು ಪಡಿಸಿ ಉಳಿಕೆಗೆ ಎಫ್‌ಐಆರ್ ಆಗಿಲ್ಲ. ದಲಿತರಿಗೆ ಮೀಸಲಿಟ್ಟ ₹86 ಸಾವಿರ ಕೋಟಿ ಅನುದಾನ ದುರುಪಯೋಗವಾಗಿದೆ ಎಂದು ಆರೋಪಿಸಿದರು.

ಶಾಸಕ ಆರ್.ಆಶೋಕ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸ್ತುತ ‘ಬೆಂಕಿರಾಮಯ್ಯ’ ಆಗಿದ್ದಾರೆ. ಜಾತಿಗಳ ನಡುವೆ ಬೆಂಕಿ ಹಚ್ಚುವ ಕೆಲಸ ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ ಭಾರಿ ಅವ್ಯವಹಾರವಾಗಿದೆ. ಕಟ್ಟಡಗಳು ಯೋಗ್ಯವಲ್ಲ ಊಟದಲ್ಲೂ ಗುಣಮಟ್ಟ ಇಲ್ಲ. ನಿದ್ರೆ ಮಾಡೋ ಸಿದ್ದರಾಮಯ್ಯರನ್ನು ಎಷ್ಟದಿನ ನೋಡುತ್ತಿರಾ ಎಂದು ಲೇವಡಿ ಮಾಡಿದರು.

ಮುಖಂಡ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಶಾಸಕ ಮುನಿರಾಜು ಗೌಡ, ಬೆಂಗಳೂರು ವಿಭಾಗೀಯ ಬಿಜೆಪಿ ಸಹ ಪ್ರಭಾರಿ ಸಚ್ಚಿದಾನಂದ ಮೂರ್ತಿ ಮಾತನಾಡಿದರು.

ಶಾಸಕ ಹೇಮಚಂದ್ರ ಸಾಗರ್‌, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಅಲ್ಪಸಂಖ್ಯಾತ ಘಟಕದ ರಾಜ್ಯ ಘಟಕದ ಅಧ್ಯಕ್ಷ ಅಬ್ದುಲ್ ಅಜೀಂ, ಶಾಸಕ ಎಚ್.ವಿಶ್ವನಾಥ್, ಮುಖಂಡ ರೇಣುಕಾಚಾರ್ಯ, ನರೇಂದ್ರ ಬಾಬು, ಬಚ್ಚೇಗೌಡಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry