ಎಲ್ಲ ವಿದ್ಯಾರ್ಥಿಗಳಿಗೂ ಸಮಾನ ಅವಕಾಶ

7
ವಿದ್ಯಾರ್ಥಿಗಳೊಂದಿಗೆ ಎಚ್.ಡಿ. ಕುಮಾರಸ್ವಾಮಿ ಸಂವಾದ

ಎಲ್ಲ ವಿದ್ಯಾರ್ಥಿಗಳಿಗೂ ಸಮಾನ ಅವಕಾಶ

Published:
Updated:
ಎಲ್ಲ ವಿದ್ಯಾರ್ಥಿಗಳಿಗೂ ಸಮಾನ ಅವಕಾಶ

ಬೀದರ್‌: ‘ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದ ತಕ್ಷಣ ಶಿಕ್ಷಣ ಕ್ಷೇತ್ರದಲ್ಲಿನ ಗೊಂದಲಗಳ ನಿವಾರಣೆಯ ಜತೆಗೆ ಎಲ್ಲ ವಿದ್ಯಾರ್ಥಿಗಳಿಗೂ ಸಮಾನ ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಲಿದೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.

ನಗರದ ಕರ್ನಾಟಕ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಶಿಕ್ಷಣ ನೀತಿಯಲ್ಲಿ ಬದಲಾವಣೆ ಆಗಬೇಕು ಎನ್ನುವುದಕ್ಕೆ ನನ್ನ ಸಹಮತವೂ ಇದೆ’ ಎಂದರು.

‘ರಾಜ್ಯದ ಎಲ್ಲ ಜಿಲ್ಲೆಗಳಿಂದ ವಿದ್ಯಾರ್ಥಿ ಪ್ರತಿನಿಧಿಗಳನ್ನು ಬೆಂಗಳೂರಿಗೆ ಕರೆಸಿಕೊಂಡು ವಿದ್ಯಾರ್ಥಿ ಸಮೂಹದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಯೋಜನೆ ರೂಪಿಸಲಾಗುವುದು. ಬಡ ವಿದ್ಯಾರ್ಥಿಗಳಿಗೆ ಉಚಿತ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲಾಗುವುದು’ ಎಂದು ಹೇಳಿದರು.

‘ಈಗಾಗಲೇ ಬೆಂಗಳೂರಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಎಂಜಿನಿಯರ್, ದಲಿತರೊಂದಿಗೆ ಸಂವಾದ, ಮೈಸೂರಲ್ಲಿ 15 ವಿಶ್ರಾಂತ ಕುಲಪತಿಗಳೊಂದಿಗೆ ಹಾಗೂ ಸಣ್ಣ ಕೈಗಾರಿಕೆಗಳ ಮಾಲೀಕರೊಂದಿಗೆ ಸಂವಾದ ನಡೆಸಲಾಗಿದೆ. ರೈತರೊಂದಿಗೂ ಸಂವಾದ ನಡೆಸಲಾಗುವುದು’ ಎಂದು ತಿಳಿಸಿದರು.

‘ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ ಅಸ್ಪೃಶ್ಯರ ಅಭಿವೃದ್ಧಿ ಸಾಧ್ಯವಾಗಿಲ್ಲ. ಮೀಸಲಾತಿ ಸೌಲಭ್ಯಗಳನ್ನು ಪಡೆದ ಕೆನೆ ಪದರ ಕುಟುಂಬಗಳೇ ಮತ್ತೆ ಸೌಲಭ್ಯಗಳನ್ನು ಪಡೆಯುತ್ತಿವೆ. ಪರಿಶಿಷ್ಟರಿಗಾಗಿ ನಾಲ್ಕುವರೆ ವರ್ಷಗಳಲ್ಲಿ ₹85 ಸಾವಿರ ಕೋಟಿ ಖರ್ಚು ಮಾಡಲಾಗಿದೆ ಎಂದು ಹೇಳಲಾದರೂ ಇದರಲ್ಲಿ ದುರ್ಬಳಕೆ ಆಗಿರುವುದೇ ಹೆಚ್ಚು’ ಎಂದು ವಿವರಿಸಿದರು.

ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರು ಸಹಕಾರ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಪಡೆದಿರುವ ₹ 51 ಸಾವಿರ ಕೋಟಿ ಸಾಲ ಮನ್ನಾ ಮಾಡಲಾಗುವುದು. ಕಾರ್ಪೋರೇಟ್‌ ಕಂಪನಿಗಳಿಗೆ ವಿಶೇಷ ಸೌಕರ್ಯ ಕೊಡುವ ವಿಷಯದಲ್ಲಿ ಯಾರೂ ಆಕ್ಷೇಪ ವ್ಯಕ್ತಪಡಿಸುವುದಿಲ್ಲ. ರೈತರ ವಿಷಯ ಬಂದಾಗ ರಾಜಕೀಯ ಮಾಡಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಅರಣ್ಯ ಇಲಾಖೆಯ ಅಂಕಿಅಂಶಗಳನ್ನು ನೋಡಿದರೆ ರಾಜ್ಯದ ತುಂಬ ಕಾಡು ಇರಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಜೆಡಿಎಸ್‌ ಅಧಿಕಾರಕ್ಕೆ ಬಂದ ನಂತರ 15 ಕೋಟಿ ಸಸಿಗಳನ್ನು ನೆಡಲಿದೆ. ಸಸಿ ನೆಡಲು ಹಾಗೂ ಅವುಗಳನ್ನು ಸಂರಕ್ಷಣೆ ಮಾಡಲು 10 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸಲಿದೆ. ಅಶಿಕ್ಷಿತರನ್ನು ನೇಮಕ ಮಾಡಿಕೊಂಡು ಮಾಸಿಕ ₹ 10 ಸಾವಿರ ಗೌರವಧನ ಕೊಡಲಿದೆ’ ಎಂದು ತಿಳಿಸಿದರು.

‘ಮತದಾರರು ಅವಕಾಶ ನೀಡಿದರೆ ಜನರ ಮಧ್ಯೆ ಇದ್ದು ಕೆಲಸ ಮಾಡುತ್ತೇನೆ ಯೇ ಹೊರತು  ಅಧಿಕಾರಿಗಳ ಮಧ್ಯೆ ಕುಳಿತು ಅಲ್ಲ’ ಎಂದು ಹೇಳಿದರು.

ಕರ್ನಾಟಕ ಪದವಿ ಕಾಲೇಜಿನ ನಾರಾಯಣ ಶೇರಿಕಾರ, ಸುಧಾರಾಣಿ, ಸುಮಯ್ಯ, ಅಂಬಿಕಾ, ಶ್ರದ್ಧಾ ಅವರು ಪರಿಶಿಷ್ಟರಿಗೆ ವಿಶೇಷ ಸೌಲಭ್ಯ ಕೊಡುತ್ತಿರುವ ಬಗೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರಲ್ಲದೇ, ಹಿಂದುಳಿದ ಸಮಾಜದ ಬಡ ವಿದ್ಯಾರ್ಥಿಗಳಿಗೂ ಶೈಕ್ಷಣಿಕ ಸೌಲಭ್ಯಗಳನ್ನು ವಿಸ್ತರಿಸಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ಕಾಲೇಜಿನ ವೈಷ್ಣವಿ ಅವರು ಭ್ರಷ್ಟಾಚಾರ, ಲಿಂಗರಾಜ ಅಪ್ಪ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿ ಪ್ರವೀಣ ಕುಡಿಯುವ ನೀರು, ಬ್ರೀಮ್ಸ್ ವಿದ್ಯಾರ್ಥಿ ಚಂದ್ರಮೌಳಿ, ಆಯುರ್ವೇದ ಕಾಲೇಜಿನ ವಿದ್ಯಾರ್ಥಿ ಶಿವಾನಂದ, ಅರುಣ, ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದರು.

ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅನಿಲ ಬೀ ಚೆ, ಬಿಬಿಬಿ ಕಾಲೇಜಿನ ಆಶಾ ಪಾಟೀಲ, ಆರ್‌.ವಿ.ಬಿಡಪ ಕಾಲೇಜಿನ ವೀರೇಶ, ಗುರುನಾನಕ ಪದವಿ ಕಾಲೇಜಿನ ಶರ್ಮಾ, ಮೋನಾ ಅಖ್ತರ್ ಸಂವಾದದಲ್ಲಿ ಪಾಲ್ಗೊಂಡಿದ್ದರು.

ಮಾಜಿ ಸಚಿವ ಬಂಡೆಪ್ಪ ಕಾಂಶೆಪುರ, ಬಸವಕಲ್ಯಾಣ ಶಾಸಕ ಮಲ್ಲಿಕಾರ್ಜುನ ಖೂಬಾ, ಅಶೋಕ ಕರಂಜಿ, ರಮೇಶ ಪಾಟೀಲ ಸೋಲಪುರ, ಅಶೋಕ ಕೋಡಗೆ, ನಬಿ ಖುರೇಶಿ ಇದ್ದರು.

***

ಐಎಎಸ್‌ ಅಧಿಕಾರಿಗಳ ಸೂಚನೆಯಂತೆ ಸರ್ಕಾರ ನಡೆಯಬಾರದು. ನೇರವಾಗಿ ಜನರಿಂದ ಸರ್ಕಾರ ನಡೆಯುವಂತಹ ವಾತಾವರಣ ನಿರ್ಮಾಣ ಮಾಡಬೇಕು.

ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry