ಸೆಸ್ಕ್‌ ಕಾರ್ಯವೈಖರಿಗೆ ಅಸಮಾಧಾನ

7
ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆ

ಸೆಸ್ಕ್‌ ಕಾರ್ಯವೈಖರಿಗೆ ಅಸಮಾಧಾನ

Published:
Updated:

ಚಾಮರಾಜನಗರ: ಜಿಲ್ಲೆಯಲ್ಲಿ ಸೆಸ್ಕ್‌ ಸಂಬಂಧಿಸಿದ ಯೋಜನೆಗಳ ಪ್ರಗತಿಯಲ್ಲಿನ ಹಿನ್ನಡೆ ಮತ್ತು ಸಮಸ್ಯೆಗಳ ನಿರ್ವಹಣೆಯ ವೈಫಲ್ಯದ ಕುರಿತು ಬುಧವಾರ ನಡೆದ ಜಿಲ್ಲಾ ಪಂಚಾಯಿತಿಯ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಯಿತು.

ಯಳಂದೂರಿನಲ್ಲಿ ಮಂಗಳವಾರ ಶಾರ್ಟ್‌ ಸರ್ಕೀಟ್‌ನಿಂದ ಕಬ್ಬಿನ ಬೆಳೆ ನಾಶವಾದ ಘಟನೆಯನ್ನು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಜಿ. ಯೋಗೇಶ್‌ ಪ್ರಸ್ತಾಪಿಸಿದರು.

ಉಳುಮೆ ಮಾಡುವಾಗ ಕಂಬಗಳು ಸಡಿಲಗೊಂಡು ಈ ಅವಘಡ ಸಂಭವಿಸುತ್ತದೆ ಎಂದು ಸೆಸ್ಕ್‌ ಅಧಿಕಾರಿಗಳು ಸ್ಪಷ್ಟೀಕರಣ ನೀಡಿದರು.

ಹಳ್ಳಿಗಾಡುಗಳಲ್ಲಿ ವಿದ್ಯುತ್‌ ಮಾರ್ಗಗಳು ಸರಿಯಾಗಿಲ್ಲ. ತಂತಿಗಳು ಜೋತು ಬಿದ್ದಿವೆ. ಅವುಗಳನ್ನು ಸರಿಪಡಿಸುವಂತೆ ಎರಡು ವರ್ಷದಿಂದ ಸೂಚಿಸುತ್ತಿದ್ದರೂ ನಿರ್ಲಕ್ಷಿಸಲಾಗುತ್ತಿದೆ. ಲೈನ್‌ಮನ್‌ಗಳ ಕೆಲಸವೇನು? ಬಿಲ್‌ ಕಟ್ಟಿಲ್ಲ ಎಂದಾಗ ಸಂಪರ್ಕ ಕಿತ್ತುಹಾಕಲು ಮುಂದಾಗುತ್ತೀರಲ್ಲ? ಎಂದು ಜನಪ್ರತಿನಿಧಿಗಳು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ನಿಮ್ಮ ಇಲಾಖೆಯ ತಪ್ಪಿನಿಂದ ಆಗುವ ಬೆಳೆನಷ್ಟದಲ್ಲಿ ಅರ್ಧದಷ್ಟನ್ನು ನೀವೇ ಭರಿಸಬೇಕು ಎಂದು ಆಗ್ರಹಿಸಿದರು.

‘ಜೈಲಿಗೆ ಕಳುಹಿಸಬೇಕು’: ಗಂಗಾ ಕಲ್ಯಾಣ ಯೋಜನೆಯ ಅನುಷ್ಠಾನದಲ್ಲಿ ಜಿಲ್ಲೆ ಹಿಂದುಳಿದಿದೆ. ಕೊಳವೆಬಾವಿಗಳನ್ನು ಕೊರೆಯಿಸುವ ಕೆಲಸ ವೇಗವಾಗಿ ಸಾಗುತ್ತಿಲ್ಲ. ಕೊರೆಯಿಸಿರುವ ಕೊಳವೆ ಬಾವಿಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಕಾರ್ಯ ತೀರಾ ವಿಳಂಬವಾಗುತ್ತಿದೆ ಎಂಬ ಆರೋಪ ಕೇಳಿಬಂತು.

2015–16 ಮತ್ತು 2016–17ನೇ ಸಾಲಿನಲ್ಲಿ ಒಟ್ಟು 182 ಕಾಮಗಾರಿಗಳು ಪ್ರಗತಿಯಲ್ಲಿವೆ. 2017–18ನೇ ಸಾಲಿಗೆ ಸಂಬಂಧಿಸಿದಂತೆ 209 ಕಾಮಗಾರಿಗಳನ್ನು ಮಾರ್ಚ್‌ 31ರ ಒಳಗೆ ಪೂರ್ಣಗೊಳಿಸಲಾಗುವುದು ಎಂದು ಸೆಸ್ಕ್‌ ಅಧಿಕಾರಿಗಳು ಮಾಹಿತಿ ನೀಡಿದರು.

ಯೋಜನೆಯ ಕಾರ್ಯಾದೇಶವನ್ನು ಶೀಘ್ರವೇ ನೀಡಲಾಗುವುದು ಎಂಬ ಡಾ. ಬಿ.ಆರ್. ಅಂಬೇಡ್ಕರ್‌ ನಿಗಮದ ಅಧಿಕಾರಿಯ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‌ ಕುಮಾರ್, ಶೀಘ್ರ ಎಂದು ಹೇಳಬೇಡಿ. ಖಚಿತ ದಿನಾಂಕ ತೋರಿಸಿ ಎಂದು ನಿರ್ದೇಶಿಸಿದರು.

ಅಧಿಕಾರಿಗಳ ಉದಾಸೀನತೆಯಿಂದ ಫಲಾನುಭವಿಗಳಿಗೆ ಯೋಜನೆಗಳು ತಲುಪುತ್ತಿಲ್ಲ. ಸರ್ಕಾರ ನಿಮಗೆ ಸಂಬಳ ಕೊಡುತ್ತಿರುವುದು ಏಕೆ? ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ಒಂದಿಬ್ಬರ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದರೆ ಸರಿದಾರಿಗೆ ಬರುತ್ತಾರೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ. ರಾಮಚಂದ್ರ ಖಾರವಾಗಿ ಹೇಳಿದರು.

ಬಿಲ್‌ಗಳ ಸೃಷ್ಟಿ: ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಅನೇಕ ಕಲಾವಿದರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಇನ್ನೂ ಸಂಭಾವನೆ ಪಾವತಿಯಾಗಿಲ್ಲ ಎಂಬ ದೂರು ಬಂದಿದೆ ಎಂದು ರಾಮಚಂದ್ರ ಪ್ರಸ್ತಾಪಿಸಿದರು.

ಈ ಹಿಂದೆ ಪ್ರಭಾರಿಯಾಗಿದ್ದ ನಾಗವೇಣಿ ಅವರು ಬಿಲ್‌ಗಳಿಗೆ ಸಹಿ ಹಾಕಿಲ್ಲ. ಅಲ್ಲೇ ಉಳಿಸಿಕೊಂಡಿದ್ದಾರೆ ಎಂದು ಇಲಾಖೆಯ ಸಹಾಯಕ ನಿರ್ದೇಶಕ ಮಹದೇವಯ್ಯ ಹೇಳಿದರು.

ಕೆಲವು ಬಿಲ್‌ಗಳು ಸೃಷ್ಟಿಯಾಗಿವೆ. ಅವುಗಳಿಗೆ ಸಹಿ ಹಾಕಲು ಸಾಧ್ಯವಿಲ್ಲ. ಸಮರ್ಪಕವಾದ ಬಿಲ್‌ಗಳಿಗೆ ಮಾತ್ರ ಸಹಿಹಾಕಲಾಗಿದೆ ಎಂದು ನಾಗವೇಣಿ ಪ್ರತಿಕ್ರಿಯೆ ನೀಡಿದರು.

ಕೆಂಪನಪುರ ಗ್ರಾಮದಲ್ಲಿ ನಡೆದ ಸುಗ್ಗಿ–ಹುಗ್ಗಿ ಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳನ್ನು ಆಹ್ವಾನಿಸಿಲ್ಲ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಕೆರೆಹಳ್ಳಿ ನವೀನ್‌ ಆಕ್ರೋಶ ವ್ಯಕ್ತಪಡಿಸಿದರು.

ರಸ್ತೆ ಸುರಕ್ಷತೆಗೆ ಅಡ್ಡಿ: ಬಿಳಿಗಿರಿರಂಗನ ಬೆಟ್ಟಕ್ಕೆ ತೆರಳುವ ಮಾರ್ಗದ ತಿರುವುಗಳಲ್ಲಿ ಅಪಘಾತಗಳನ್ನು ನಿಯಂತ್ರಿಸಲು ಕಂಬಿಗಳನ್ನು ಅಳವಡಿಸಲಾಗುತ್ತಿದೆ. ಆದರೆ, ಕೆಲವೆಡೆ ಅರಣ್ಯ ಇಲಾಖೆ ಅನುಮತಿ ನೀಡದ ಕಾರಣ ಅಪಾಯಕಾರಿ ತಿರುವುಗಳಲ್ಲಿ ಕಂಬಿ ಅಳವಡಿಸಿಲ್ಲ. ಹೀಗಾಗಿ ಅಪಘಾತದ ಅಪಾಯ ಇರುವ ಸ್ಥಳ ಬಿಟ್ಟು ಬೇರೆಡೆ ಕಂಬಿ ಅಳವಡಿಸಲು ಗುತ್ತಿಗೆದಾರರು ಮುಂದಾಗಿದ್ದಾರೆ ಎಂದು ಯೋಗೇಶ್‌ ಗಮನ ಸೆಳೆದರು.

ಕಂಬಿಗಳ ಅಳವಡಿಕೆ ನಿರ್ಮಾಣ ಕಾಮಗಾರಿಯ ವ್ಯಾಪ್ತಿಗೆ ಒಳಪಡುವುದರಿಂದ ನಿಯಮಗಳ ಪ್ರಕಾರ ಅದಕ್ಕೆ ಅನುಮತಿ ಸಿಗುವುದು ಕಷ್ಟ ಎಂದು ಅರಣ್ಯಾಧಿಕಾರಿಗಳು ತಿಳಿಸಿದರು. ಈ ಸಂಬಂಧ ಬಿಆರ್‌ಟಿ ನಿರ್ದೇಶಕರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಲಾಯಿತು.

ಗೈರಾದವರಿಗೆ ತರಾಟೆ: ಕಳೆದ ಸಭೆಗೆ ಗೈರಾದ 10 ಅಧಿಕಾರಿಗಳಲ್ಲಿ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಹೊರತುಪಡಿಸಿ ಉಳಿದವರು ನೋಟಿಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಮುಖ್ಯ ಯೋಜನಾಧಿಕಾರಿ ಕೆ. ಮಾದೇಶ್ ತಿಳಿಸಿದರು.

ಸಭೆ ನಡೆಸುವುದು ಆಯಾ ಇಲಾಖೆಗಳಿಗೆ ಸಂಬಂಧಿಸಿದ ಪ್ರಗತಿ, ಸಮಸ್ಯೆಗಳ ಕುರಿತು ಜನಪ್ರತಿನಿಧಿಗಳಿಗೆ ಮಾಹಿತಿ ನೀಡಲು. ಅದಕ್ಕೆ ತಪ್ಪಿಸಿಕೊಳ್ಳಬಾರದು. ಸರ್ಕಾರಿ ಕೆಲಸದ ಮೇರೆಗೆ ಹೋದರೂ, ಮೊದಲೇ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಗಮನಕ್ಕೆ ತರಬೇಕು ಎಂದು ಸಿಇಒ ಹರೀಶ್‌ ಕುಮಾರ್‌ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ ಮತ್ತು ಬಿ.ಕೆ. ಬೊಮ್ಮಯ್ಯ ಇದ್ದರು.

**

ಕೊನೆಗೂ ಬಂದ ಡೀನ್‌!

ಎರಡು ವರ್ಷದಲ್ಲಿ ನಡೆದ ಸುಮಾರು 8 ಪ್ರಗತಿ ಪರಿಶೀಲನಾ ಸಭೆಗಳಿಗೂ ಗೈರು ಹಾಜರಾಗಿದ್ದ ವೈದ್ಯಕೀಯ ಕಾಲೇಜಿನ ಡೀನ್ ಚಂದ್ರಶೇಖರ್‌, ಮೊದಲ ಬಾರಿಗೆ ಸಭೆಗೆ ಹಾಜರಾದರು.

‘ನನಗೆ ಸಭೆ ನಡೆಯುತ್ತಿರುವುದೇ ಗೊತ್ತಿರಲಿಲ್ಲ. ಇದುವರೆಗೂ ಒಮ್ಮೆಯೂ ಆಹ್ವಾನ ಬಂದಿಲ್ಲ. ಸಂವಹನ ನಡೆಸಿದ್ದರೆ ಬರುತ್ತಿದ್ದೆ. ಇಂದಿನ ಸಭೆಗೆ ಆಹ್ವಾನ ಬಂದಿದೆ’ ಎಂದು ಡೀನ್ ಹೇಳಿದರು.

ಫೋನ್‌ ಕರೆಗಳನ್ನು ಸ್ವೀಕರಿಸುವುದಿಲ್ಲ ಎಂಬ ಆರೋಪಕ್ಕೆ, ‘ಕಾಲೇಜಿನ ಬಳಿ ನೆಟ್‌ವರ್ಕ್‌ ಸರಿಯಾಗಿ ಸಿಗುವುದಿಲ್ಲ. ಕೆಲವೊಮ್ಮೆ ತರಗತಿ, ಸಭೆಯಲ್ಲಿ ಇದ್ದರೆ ಕರೆ ಸ್ವೀಕರಿಸುವುದಿಲ್ಲ. ಬಡವರು ಫೋನ್ ಮಾಡಿದರೂ ಸ್ಪಂದಿಸುತ್ತೇನೆ. ತಾಂತ್ರಿಕ ಸಮಸ್ಯೆಯೇ ಇದಕ್ಕೆ ಕಾರಣ’ ಎಂದು ಸಮಜಾಯಿಷಿ ನೀಡಿದರು.

‘ನೀವು ಜಿಲ್ಲಾಸ್ಪತ್ರೆಯ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳುತ್ತಿಲ್ಲ. ಕಟ್ಟಡ ಸುಂದರವಾಗಿ ಕಾಣಿಸುತ್ತದೆ. ಆದರೆ ಅದರ ಆಡಳಿತದ ಮೇಲೆ ನಿಮಗೆ ಹಿಡಿತ ಇಲ್ಲ. ರೋಗಿಗಳಿಗೆ ಔಷಧ ಬರೆದುಕೊಡಲು ವೈದ್ಯರ ಬಳಿ ಡಿಸ್ಕ್ರಿಪ್ಷನ್‌ ಪ್ಯಾಡ್‌ಗಳೂ ಇಲ್ಲದಂತಹ ಸ್ಥಿತಿ ಇದೆ. ಪ್ರತಿಬಾರಿ ಸಭೆಯಲ್ಲಿಯೂ ನಿಮ್ಮ ಗುಣಗಾನ ನಡೆಯುತ್ತದೆ’ ಎಂದು ರಾಮಚಂದ್ರ ಹೇಳಿದರು.

***

ಅಡುಗೆ ಸಹಾಯಕರ ನೇಮಕ ಸುಗಮ

ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಿಗೆ ಅಡುಗೆಯವರು ಮತ್ತು ಸಹಾಯಕರ ಹುದ್ದೆಗೆ ನಡೆದ ನೇಮಕಾತಿ ಪ್ರಕ್ರಿಯೆಯನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಈ ಸಂಬಂಧ 18ರಂದು ಕೌನ್ಸೆಲಿಂಗ್‌ ನಡೆಯಲಿದೆ. 72 ಹುದ್ದೆಗಳಿಗೆ 68 ಮಂದಿ ಆಯ್ಕೆಯಾಗಿದ್ದಾರೆ. ಅವರಿಗೆ 28ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇಮಕಾತಿ ಆದೇಶ ನೀಡಲಿದ್ದಾರೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry