ರಸ್ತೆ ಅವ್ಯವಸ್ಥೆಗೆ ಸದಸ್ಯರ ಅಸಮಾಧಾನ

7
ನಗರಸಭೆ ಸಾಮಾನ್ಯ ಸಭೆಯಲ್ಲಿ ಗದ್ದಲ, ಕೋಲಾಹಲ

ರಸ್ತೆ ಅವ್ಯವಸ್ಥೆಗೆ ಸದಸ್ಯರ ಅಸಮಾಧಾನ

Published:
Updated:
ರಸ್ತೆ ಅವ್ಯವಸ್ಥೆಗೆ ಸದಸ್ಯರ ಅಸಮಾಧಾನ

ಚಾಮರಾಜನಗರ: ಸದಸ್ಯರ ಗದ್ದಲ, ಕೋಲಾಹಲಗಳ ನಡುವೆ ಬುಧವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಹಲವು ಸಮಸ್ಯೆಗಳು ಪ್ರಸ್ತಾಪಗೊಂಡವು.

ಸಭೆ ಪ್ರಾರಂಭವಾಗುತ್ತಿದ್ದಂತೆಯೇ ಸದಸ್ಯರಾದ ರಾಜೇಶ್‌, ನಾರಾಯಣಸ್ವಾಮಿ, ಗೋಪಾಲಕೃಷ್ಣ, ಶಿವಕುಮಾರ್‌ ಮುಂತಾದವರು, ನಗರಸಭೆ ವ್ಯಾಪ್ತಿಯಲ್ಲಿ ಅವೈಜ್ಞಾನಿಕವಾಗಿ ರಸ್ತೆಗಳ ಕಾಮಗಾರಿ ಮಾಡಲಾಗುತ್ತಿದೆ. ಸಾರ್ವಜನಿಕರು ದಿನನಿತ್ಯ ದೂಳಿನಿಂದ ಮತ್ತು ಸರಿಯಾದ ಮಾರ್ಗಸೂಚಿಯಿಲ್ಲದೆ ಪರದಾಡುತ್ತಿದ್ದಾರೆ ಎಂದು ಆರೋಪಿಸಿದರು.

ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿಯ ರಸ್ತೆ ವಿಸ್ತರಣೆಯಲ್ಲಿ ತಾರತಮ್ಯ ಮಾಡಲಾಗಿದೆ. ಸದಸ್ಯರಿಗೆ ನಗರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಮಾಹಿತಿಯೇ ಇಲ್ಲ. ಕೂಡಲೇ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.

ಸದಸ್ಯ ಗೋಪಾಲಕೃಷ್ಣ ಮಾತನಾಡಿ, ನಗರದ ಸಂಪಿಗೆ ರಸ್ತೆಯಲ್ಲಿ ನಡೆಯುತ್ತಿರುವ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿ ಕಳಪೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಚರಂಡಿಯನ್ನು ಎತ್ತರವಾಗಿ ನಿರ್ಮಿಸಲಾಗಿದೆ. ಇದರಿಂದ ವಾರ್ಡ್‌ಗಳ ಚರಂಡಿ ನೀರು ಹಿಂದಕ್ಕೆ ಬರುತ್ತಿದೆ. ಮಳೆ ಬಂದಾಗ ಕೊಳಚೆ ನೀರು ಮನೆಗಳಿಗೆ ನುಗ್ಗುತ್ತಿದೆ ಎಂದು ದೂರಿದರು.

ಪ್ರಭಾರಿ ಪೌರಾಯುಕ್ತೆ ಬಿ. ಫೌಜಿಯಾ ತರನ್ನುಮ್‌ ಮಾತನಾಡಿ, ಎರಡು ದಿನಗಳೊಳಗೆ ಎಲ್ಲ ಸದಸ್ಯರಿಗೂ ನಗರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ವಿವರ ನೀಡಲಾಗುವುದು. 15 ದಿನಗಳೊಳಗೆ ಕಾಮಗಾರಿ ಕುರಿತು ವಿಶೇಷ ಅಧಿಕಾರಿಗಳ ಸಭೆ ನಡೆಸಲಾಗುವುದು. ಕಳಪೆ ಕಾಮಗಾರಿ ನಡೆದಿದ್ದರೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಸದಸ್ಯ ರಾಜಶೇಖರ್‌ ಮಾತನಾಡಿ, ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿ ನಿಧಾನವಾಗಿ ಸಾಗುತ್ತಿದೆ. ಈ ವೇಳೆ ದೊರೆತ ಸುಮಾರು ₹ 70 ಲಕ್ಷ ಬೆಲೆಬಾಳುವ ಕಲ್ಲುಗಳ ಬಗ್ಗೆ ಮಾಹಿತಿಯೇ ಇಲ್ಲ ಎಂದು ದೂರಿದರು.

ಎಇಇ ಸತ್ಯಮೂರ್ತಿ ಮಾತನಾಡಿ, ನಗರಸಭೆಯಿಂದ ನಡೆಯುತ್ತಿರುವ ಕಾಮಗಾರಿ ವೇಳೆ ದೊರೆತ ಕಲ್ಲುಗಳನ್ನು ರಾಮಸಮುದ್ರದ ಬಳಿಯ ಪಂಪ್‌ಹೌಸ್‌ ಬಳಿ ಸಂಗ್ರಹಿಸಲಾಗಿದೆ. ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿರುವ ಕಾಮಗಾರಿಯಲ್ಲಿ ದೊರೆತ ಕಲ್ಲುಗಳನ್ನು ನಮಗೆ ಒಪ್ಪಿಸಲಾಗಿಲ್ಲ. ಅಂಗಡಿಬೀದಿ ರಸ್ತೆ ವಿಸ್ತರಣೆ ವಿಚಾರದಲ್ಲಿ ಯಾವುದೇ ರಾಜಿಯಾಗಿಲ್ಲ ಎಂದು ವಿವರಣೆ ನೀಡಿದರು.

ಸಭೆಯಲ್ಲಿ ಅಧ್ಯಕ್ಷೆ ಶೋಭಾ, ಉಪಾಧ್ಯಕ್ಷ ಆರ್.ಎಂ. ರಾಜಪ್ಪ ಹಾಜರಿದ್ದರು.

**

ರಸ್ತೆ ಅಭಿವೃದ್ಧಿಗೆ ಹಣವೇ ಇಲ್ಲ?

ಅಂಗಡಿ ಬೀದಿಯಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಪೂರ್ಣಗೊಳಿಸುವಷ್ಟು ಹಣ ನಗರಸಭೆಯ ಬಳಿ ಇಲ್ಲ. ಆದರೂ, ಕಾಮಗಾರಿ ಪ್ರಾರಂಭಿಸಲಾಗಿದೆ ಎಂದು ಸದಸ್ಯ ನಾರಾಯಣಸ್ವಾಮಿ ಆರೋಪಿಸಿದರು.

ಇದಕ್ಕೆ ಉತ್ತರಿಸಿದ ಎಇಇ ಸತ್ಯಮೂರ್ತಿ, ಜಿಲ್ಲಾಧಿಕಾರಿ ಹಾಗೂ ಉಸ್ತುವಾರಿ ಸಚಿವರು ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ. ಅದಕ್ಕೆ ಬೇಕಾದಷ್ಟು ಅನುದಾನ ಲಭ್ಯವಿದೆ ಎಂದು ತಿಳಿಸಿದರು.

***

ಪರ್ಯಾಯ ಸ್ಥಳ ಸೂಚಿಸಿ

ನಗರದಲ್ಲಿ ಮಾರುಕಟ್ಟೆ ಅಭಿವೃದ್ಧಿ ಆರಂಭಿಸುವ ಮೊದಲು ವ್ಯಾಪಾರಿಗಳಿಗೆ ಪರ್ಯಾಯ ಸ್ಥಳ ಒದಗಿಸಿ ಎಂದು ಸದಸ್ಯರು ಆಗ್ರಹಿಸಿದರು.

ತರಕಾರಿ ವ್ಯಾಪಾರಿಗಳಿಗೆ ಮಾರುಕಟ್ಟೆ ಖಾಲಿ ಮಾಡಿ ಎಂದು ಸೂಚನೆ ನೀಡಲಾಗಿದೆ. ಆದರೆ, ಅವರಿಗೆ ಸೂಕ್ತ ಸ್ಥಳ ನೀಡಿಲ್ಲ. ಈ ಬಗ್ಗೆ ಕ್ರಮವಹಿಸಬೇಕು. ಇಲ್ಲದಿದ್ದರೆ ನಗರಸಭೆ ವಿರುದ್ಧ ಜನಾಂದೋಲನ ಮಾಡಬೇಕಾಗುತ್ತದೆ ಎಂದು ಬಿಜೆಪಿ ಸದಸ್ಯರು ಎಚ್ಚರಿಸಿದರು.

‘ಸಂತೇಮರಹಳ್ಳಿ ವೃತ್ತದ ಬಳಿ 30ರಿಂದ 40 ಅಡಿಯಿರುವ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲಾಗುತ್ತಿದೆ. ಇದು ಅವೈಜ್ಞಾನಿಕವಾಗಿದೆ’ ಎಂದು ದೂರಿದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry