ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತೃಪೂರ್ಣ ಯೋಜನೆ ಮಾರ್ಪಾಡಿಗೆ ಆಗ್ರಹ

ಜಿಲ್ಲಾಡಳಿತ ಭವನದ ಎದುರು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಪ್ರತಿಭಟನೆ, ಹಿಂದಿನ ಪದ್ಧತಿಯನ್ನೇ ಮುಂದುವರಿಸಲು ಒತ್ತಾಯ
Last Updated 18 ಜನವರಿ 2018, 9:45 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಅಂಗನವಾಡಿ ನೌಕರರ ಮೇಲೆ ಒತ್ತಡ ಉಂಟು ಮಾಡುತ್ತಿರುವ ಮಾತೃಪೂರ್ಣ ಯೋಜನೆಯನ್ನು ಮಾರ್ಪಾಡು ಮಾಡಬೇಕು ಎಂದು ಆಗ್ರಹಿಸಿ ಬುಧವಾರ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿಯ ಜಿಲ್ಲಾ ಘಟಕದ ಪದಾಧಿಕಾರಿಗಳು, ಈ ಹಿಂದೆ ಇದ್ದ ಗರ್ಭಿಣಿ ಮತ್ತು ಬಾಣಂತಿಯರ ಮನೆಗಳಿಗೆ ಪೌಷ್ಟಿಕಾಂಶ ಆಹಾರ ಪದಾರ್ಥಗಳನ್ನು ತಲುಪಿಸುವ ಪದ್ಧತಿಯನ್ನೇ ಮುಂದುವರಿಸುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಘಟಕದ ಅಧ್ಯಕ್ಷ ಸುಂದರ್‌ ರಾಜ್‌, ‘ಈ ಯೋಜನೆಯಿಂದಾಗಿ ಅಂಗನವಾಡಿ ಕಾರ್ಯಕರ್ತೆಯರ ಕೆಲಸದ ಒತ್ತಡ ಹೆಚ್ಚಾಗುತ್ತಿದೆ, ಜತೆಗೆ ಫಲಾನುಭವಿಗಳಿಗೆ ಸಹ ಕಷ್ಟವಾಗುತ್ತಿದೆ. ಈವರೆಗೆ ಯೋಜನೆ ಶೇ 60 ರಷ್ಟು ಕೂಡ ಅನುಷ್ಠಾನಗೊಂಡಿಲ್ಲ. ವಿವಿಧ ಹಂತಗಳಲ್ಲಿ ಶೇ 40 ರಷ್ಟು ಪೌಷ್ಟಿಕ ಆಹಾರದ ದುರುಪಯೋಗವಾಗುತ್ತಿದೆ’ ಎಂದು ಆರೋಪಿಸಿದರು.

‘ಹಲವು ಗ್ರಾಮಗಳಲ್ಲಿ ಅಂಗನವಾಡಿ ಕೇಂದ್ರಗಳು ಮನೆಗಳಿಂದ 2 ಕಿ.ಮೀ. ದೂರದಲ್ಲಿವೆ. ಅಲ್ಲಿನ ಬಾಣಂತಿ ಮತ್ತು ಗರ್ಭಿಣಿಯರು ನಿತ್ಯ ನಡೆದುಕೊಂಡು ಬಂದು ಅಂಗನವಾಡಿ ಕೇಂದ್ರಗಳಲ್ಲಿ ಊಟ ಮಾಡುವುದು ಕಷ್ಟ. ಹೀಗಾಗಿ ಅವರು ಬರುತ್ತಿಲ್ಲ. ನಿತ್ಯ ಕೆಲಸಕ್ಕೆ ಹೋಗುವ ಗರ್ಭಿಣಿಯರ ಸಂಖ್ಯೆ ದೊಡ್ಡದಿದೆ. ಆ ಮಹಿಳೆಯರು ಮಧ್ಯಾಹ್ನದ ಊಟಕ್ಕಾಗಿ ಅಂಗನವಾಡಿ ಕೇಂದ್ರಗಳತ್ತ ಮುಖ ಮಾಡುತ್ತಿಲ್ಲ’ ಎಂದು ಹೇಳಿದರು.

‘ರಾಜ್ಯದಲ್ಲಿ ಒಟ್ಟು 65 ಸಾವಿರ ಅಂಗನವಾಡಿ ಕೇಂದ್ರಗಳಿವೆ. ಅವುಗಳಲ್ಲಿ 34 ಸಾವಿರ ಅಂಗನವಾಡಿಗಳು ಮಾತ್ರ ಸ್ವಂತ ಕಟ್ಟಡಗಳಲ್ಲಿ ನಡೆಯುತ್ತಿವೆ. 26 ಸಾವಿರ ಕಟ್ಟಡಗಳು ಬಾಡಿಗೆ ಕಟ್ಟಡದಲ್ಲಿವೆ. ಬಹುಪಾಲು ಅಂಗನವಾಡಿ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯ ಹಾಗೂ ಪೀಠೋಪಕರಣಗಳ ವ್ಯವಸ್ಥೆ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳ ಪೋಷಣೆ ಮಾಡುವುದೇ ಕಷ್ಟವಾಗುತ್ತಿದೆ’ ಎಂದು ತಿಳಿಸಿದರು.

‘ಅಂಗನವಾಡಿಯ ಮಾತೃಭೋಜನಕ್ಕೆ ಫಲಾನುಭವಿಗಳೇ ಬರದ ಕಾರಣಕ್ಕೆ ಬಹುತೇಕ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರ ಸಿದ್ಧಪಡಿಸಿ ಬಿಸಾಡುವ ಪರಿಸ್ಥಿತಿ ಬಂದಿದೆ. ಸಮಗ್ರ ಅಧ್ಯಯನ ನಡೆಸದೆ ಸರ್ಕಾರ ತರಾತುರಿಯಲ್ಲಿ ಯೋಜನೆ ಜಾರಿಗೆ ತಂದ ಫಲವಾಗಿ ಇವತ್ತು ಯೋಜನೆ ವಿಫಲಗೊಂಡಿದೆ. ತಕ್ಷಣವೇ ಈ ಯೋಜನೆಯನ್ನು ಮಾರ್ಪಡಿಸುವುದೇ ಉತ್ತಮ ಮದ್ದು’ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಘಟಕದ ಕಾರ್ಯದರ್ಶಿ ಬಿ. ನಾಗರತ್ನಮ್ಮ ಮಾತನಾಡಿ, ‘42ನೇ ಭಾರತೀಯ ಕಾರ್ಮಿಕರ ಸಮ್ಮೇಳನದ ತೀರ್ಮಾನದಂತೆ ಯಾವುದೇ ಯೋಜನೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ತಿಂಗಳಿಗೆ ₹ 18 ಸಾವಿರ ವೇತನ ನೀಡಬೇಕು. ₹ 3 ಸಾವಿರ ಪಿಂಚಣಿ ಜಾರಿಗೆ ತರಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಗ್ರ ಬಾಲ ವಿಕಾಸ ಯೋಜನೆಯನ್ನು ಖಾಸಗೀಕರಣ ಮಾಡಬಾರದು’ ಎಂದು ಆಗ್ರಹಿಸಿದರು.

‘ಬಾಲ ವಿಕಾಸ ಸಮಿತಿಯ ಪುನರ್ ರಚಿಸುವಲ್ಲಿ ಗ್ರಾಮ, ನಗರ, ಪಟ್ಟಣ ಪಂಚಾಯಿತಿ ಸದಸ್ಯರನ್ನು ಖಾತೆ ತೆರೆಯಲು ಕಡ್ಡಾಯ ಮಾಡಿರುವುದು ಕೂಡಲೇ ವಾಪಸ್ ಪಡೆಯಬೇಕು. ಅಂಗನವಾಡಿ ಕೇಂದ್ರಗಳ ಕೆಲಸದ ಸಮಯನ್ನು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1.30ಕ್ಕೆ ಬದಲಾಯಿಸಬೇಕು’ ಎಂದು ಹೇಳಿದರು.

‘ಮಿನಿ ಅಂಗನವಾಡಿ ಕೇಂದ್ರಗಳಿಗೆ ಸಹಾಯಕಿಯನ್ನು ನೇಮಕ ಮಾಡಿ ಪೂರ್ಣ ಪ್ರಮಾಣದ ಅಂಗನವಾಡಿಯನ್ನಾಗಿ ಪರಿವರ್ತಿಸಬೇಕು. ಅನುಭವದ ಆಧಾರದ ಮೇಲೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರಿಗೆ ವೇತನ ಹೆಚ್ಚಳ ಮಾಡಬೇಕು’ ಎಂದು ತಿಳಿಸಿದರು.

ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿಯ ಪದಾಧಿಕಾರಿಗಳಾದ ಗಾಯತ್ರಿ, ತಿಮ್ಮಕ್ಕ, ಕಸ್ತೂರಿ, ಮುನಿರತ್ನ, ಗಿರಿಜಾ, ಲಲಿತಾ, ಅನಿತಾ, ಮಂಜುಳಾ, ರಾಜಲಕ್ಷ್ಮೀ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
**
ಅಂಗನವಾಡಿಯಲ್ಲಿ ಊಟ ಹಾಕುವ ಬದಲು ಪೌಷ್ಟಿಕ ಪದಾರ್ಥ ನೀಡಬೇಕು ಎಂಬುದು ರಾಜ್ಯದಲ್ಲಿ ಶೇ 92ರಷ್ಟು ಫಲಾನುಭವಿಗಳ ಅಭಿಪ್ರಾಯ

ಸುಂದರ್‌ ರಾಜ್‌, ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT