ಸೂಕ್ತ ಉದ್ಯೋಗ ಪಡೆಯುವುದು ಸವಾಲು

7
ಮಲೆನಾಡ ಉದ್ಯೋಗ ಮೇಳವನ್ನು ಉದ್ಘಾಟಿಸಿ ಪ್ರಮೋದ್‌ ಕುಮಾರ್‌

ಸೂಕ್ತ ಉದ್ಯೋಗ ಪಡೆಯುವುದು ಸವಾಲು

Published:
Updated:

ಶೃಂಗೇರಿ: ರಾಜ್ಯದಲ್ಲಿ ಪ್ರತಿವರ್ಷವೂ ಎಸ್ಸೆಸ್ಸೆಲ್ಸಿಯಲ್ಲಿ 4 ಲಕ್ಷ, ಪದವಿಪೂರ್ವ ಘಟ್ಟದಲ್ಲಿ 3 ಲಕ್ಷ ಹಾಗೂ ಪದವಿ ಪಡೆದು 2 ಲಕ್ಷ ಮಂದಿ ಹೊರಬರುತ್ತಿದ್ದು, ಅದಕ್ಕೆ ಸರಿಪ್ರಮಾಣದ ಉದ್ಯೋಗದ ಸೃಷ್ಟಿ ಆಗದೆ ನಿರುದ್ಯೋಗ ಹೆಚ್ಚುತ್ತಿದೆ ಎಂದು ಶೃಂಗೇರಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಪ್ರಮೋದ್ ಕುಮಾರ್ ಕಳವಳ ವ್ಯಕ್ತಪಡಿಸಿದರು.

ಶೃಂಗೇರಿ ಪಟ್ಟಣದ ಹೆಗ್ಡೆ ರೆಸಿಡೆನ್ಸಿಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯು ಹಾಗೂ ಮಂಗಳೂರಿನ ದಿಯಾ ಸಿಸ್ಟಂ ಕಂಪೆನಿ ಮತ್ತು ಮೈಸೂರಿನ ಕೈನ್ಸ್ ಟೆಕ್ನಾಲಜಿ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಿದ್ದ ಮಲೆನಾಡ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮ ದೇಶದಲ್ಲಿ ಅನಕ್ಷರತೆ ಮಾಯವಾಗುತ್ತಿದ್ದು, ವಿದ್ಯಾವಂತ ಯುವಕರಿಗೆ ಉದ್ಯೋಗದ ಕೊರತೆಯು ತೀವ್ರವಾಗಿ ಕಾಡುತ್ತಿದೆ. ನಿರುದ್ಯೋಗವು ಸಮಾಜದಲ್ಲಿ ಕೆಟ್ಟ ವಾತಾವರಣ ಸೃಷ್ಟಿಗೆ ಅವಕಾಶ ಕೊಡುತ್ತದೆ. ನೆರೆಯ ಜಿಲ್ಲೆಯ ಈ ಎರಡು ಸಂಸ್ಥೆಗಳು ಮಲೆನಾಡಿನ ಈ ಭಾಗದ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸಲು ಮುಂದೆ ಬಂದಿರುವುದು ಪ್ರಶಂಸನೀಯವಾಗಿದೆ. ಸೂಕ್ತ ಉದ್ಯೋಗ ಪಡೆಯುವುದು ಇಂದು ದೊಡ್ಡ ಸವಾಲಾಗಿದೆ’ ಎಂದರು.

ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಕ್ಕಳು ವಿದ್ಯಾವಂತರಾಗಿ, ಒಳ್ಳೆಯ ಉದ್ಯೋಗ ಪಡೆದು ತಮ್ಮ ಕಾಲ ಮೇಲೆ ತಾವು ನಿಲ್ಲುವಂತೆ ಆಗಬೇಕು ಎಂಬ ಹಂಬಲ ಇರುತ್ತದೆ. ಪೊಲೀಸ್ ಇಲಾಖೆಯು ಯಾವುದೇ ಖರ್ಚು ವೆಚ್ಚ ಇಲ್ಲದೇ ಉದ್ಯೋಗ ದೊರಕಿಸಲು ಮುಂದಾಗಿದೆ. ಇದಕ್ಕಾಗಿ ನಿಮ್ಮ ಭಾವಚಿತ್ರ, ಗುರುತಿನ ಚೀಟಿ, ವಿದ್ಯಾರ್ಹತೆಯ ಪ್ರಮಾಣಪತ್ರಗಳನ್ನು ಪೂರ್ವ ಷರತ್ತುಗಳಿಲ್ಲದೇ ಹಾಜರುಪಡಿಸಬೇಕು ಎಂದರು.

ದಿಯಾ ಸಿಸ್ಟಂ ಸಂಸ್ಥೆಯ ಅಧಿಕಾರಿ ವಿಜಯಲಕ್ಷ್ಮೀ ಮಾತನಾಡಿ, ‘ನಮ್ಮ ಸಂಸ್ಥೆಯಿಂದ 1500ಕ್ಕೂ ಅಧಿಕ ಯುವಕರಿಗೆ ಉದ್ಯೋಗ ನೀಡಲಾಗಿರುತ್ತದೆ. ಜೀವನದಲ್ಲಿ ವಿದ್ಯಾರ್ಥಿಗಳು ಕಲಿಯುವುದು ಬಹಳಷ್ಟು ಇದ್ದು, ಪದವೀಧರರಾದ ಮಾತ್ರಕ್ಕೆ ಪರಿಪೂರ್ಣರಾಗುವುದಿಲ್ಲ. ನಂತರ ಗಳಿಸುವ ಜ್ಞಾನ ಮುಖ್ಯವಾಗುತ್ತದೆ’ ಎಂದರು.

ಹೆಗ್ಡೆ ರೆಸಿಡೆನ್ಸಿ ಮಾಲೀಕ ಸುರೇಶ್ ಹೆಗ್ಡೆ ಮಾತನಾಡಿ, ‘ಒಂದು ಕಾಲದಲ್ಲಿ ಉದ್ಯೋಗವನ್ನು ನಾವೇ ಹುಡುಕಿಕೊಂಡು ಹೋಗಬೇಕಿತ್ತು. ಆದರೆ, ಈಗ ಭಾಗ್ಯಶಾಲಿಗಳಾದ ನಿಮಗೆ ಉದ್ಯೋಗವೇ ಅರಸಿ ಬಂದಿದ್ದು, ಇದನ್ನು ನೀವು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಹೇಳಿದರು.

ಎಎಸ್‌ಐ ನಾಗೇಂದ್ರ. ಹಿರಿಯ ನಾಗರಿಕ ಕೃಷ್ಣಪ್ಪಗೌಡ, ದಿಯಾ ಸಂಸ್ಥೆಯ ವಾಣಿ, ಸಂಮೃದ್ಧಿ, ಕೈನ್ಸ್‍ನ ಮೋನಿಶ್, ರಜತ್ ಮತ್ತು ಠಾಣೆ ಸಿಬ್ಬಂದಿ ಹಾಜರಿದ್ದರು.

**

ಅಭ್ಯರ್ಥಿಗಳು ಉದ್ಯೋಗಕ್ಕಾಗಿ ಯಾವುದೇ ಸ್ಥಳಕ್ಕೆ ಹೋಗಲು ತಯಾರಿಬೇಕು. ಅಲ್ಲಿಯ ಹವಾಮಾನ, ಭಾಷೆ, ನಡೆ-ನುಡಿಯ ಬಗ್ಗೆ ಆತಂಕಕ್ಕೆ ಒಳಗಾಗಬಾರದು.

ಪ್ರಮೋದ್ ಕುಮಾರ್,ಇನ್‌ಸ್ಪೆಕ್ಟರ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry