‘ಸಾಂಸ್ಕೃತಿಕ ಜೀವಂತಿಕೆಯಿಂದ ಧರ್ಮದ ಉತ್ಥಾನ’

7
ಮಲ್ಲಾಡಿಹಳ್ಳಿ ನಾಟಕೋತ್ಸವದಲ್ಲಿ ಕವಿ ಚಂದ್ರಶೇಖರ ತಾಳ್ಯ ಅಭಿಮತ, ನವಿಲೂರ ನಿಲ್ದಾಣ ನಾಟಕ ಪ್ರದರ್ಶನ

‘ಸಾಂಸ್ಕೃತಿಕ ಜೀವಂತಿಕೆಯಿಂದ ಧರ್ಮದ ಉತ್ಥಾನ’

Published:
Updated:
‘ಸಾಂಸ್ಕೃತಿಕ ಜೀವಂತಿಕೆಯಿಂದ ಧರ್ಮದ ಉತ್ಥಾನ’

ಹೊಳಲ್ಕೆರೆ: ಸಾಂಸ್ಕೃತಿಕ ಜೀವಂತಿಕೆ ಇದ್ದಲ್ಲಿ ಮಾತ್ರ ಧರ್ಮದ ಉತ್ಥಾನ ಸಾಧ್ಯವಾಗುತ್ತದೆ ಎಂದು ಕವಿ ಚಂದ್ರಶೇಖರ ತಾಳ್ಯ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಮಲ್ಲಾಡಿಹಳ್ಳಿಯ ರಾಘವೇಂದ್ರ ಜ್ಞಾನಮಂಟಪದಲ್ಲಿ ರಾಘವೇಂದ್ರ ಸ್ವಾಮೀಜಿ ಹಾಗೂ ಸೂರದಾಸ್ ಸ್ವಾಮೀಜಿ ಪುಣ್ಯಾರಾಧನೆ ಅಂಗವಾಗಿ ನಡೆಯುತ್ತಿರುವ ತಿರುಕನೂರಿನಲ್ಲಿ ರಂಗದಾಸೋಹ ನಾಟಕೋತ್ಸವದ ಬುಧವಾರದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಷೇಕ್ಸ್‌ಪಿಯರ್‌ನ ‘ಕಿಂಗ್‌ಲಿಯರ್’ ನಾಟಕದ ಬಗ್ಗೆ ಉಲ್ಲೇಖಿಸಿದ ಚಂದ್ರಶೇಖರ ತಾಳ್ಯ ಅವರು, ‘ಹಸಿವು, ಬಡತನ ಇದ್ದವರು ಮಾತ್ರ ಕಲಾವಿದರಾಗುವುದಿಲ್ಲ. ಕಲೆ ಒಂದು ಹೊಟ್ಟೆಪಾಡಲ್ಲ. ವ್ಯಾಪಾರ, ಮಾರಾಟದ ಸರಕೂ ಅಲ್ಲ. ಒಬ್ಬ ಕಲಾವಿದ ಹಸಿವಿಲ್ಲದಿದ್ದರೂ, ದೊಡ್ಡ ನಟನಾಗುವ ಹಂಬಲ ಹೊಂದಿರುತ್ತಾನೆ. ಕಲೆಗೆ ಪ್ರೋತ್ಸಾಹ, ಮಾರ್ಗದರ್ಶನ ಅಗತ್ಯ. ಶೈಕ್ಷಣಿಕ ಸಂಸ್ಥೆಗಳು ಕಲೆಗೆ ಹೆಚ್ಚು ಒತ್ತು ನೀಡಬೇಕು’ ಎಂದರು.

ಪ್ರಪಂಚದಲ್ಲಿ ಜ್ಞಾನಕ್ಕೆ ಮಿಗಿಲಾದುದು ಯಾವುದೂ ಇಲ್ಲ. ನಾವು ಜ್ಞಾನ ಎಂಬ ಬಂಡವಾಳ ಹೊಂದಿದ್ದರೆ ಅದರಿಂದ ನಿರಂತರ ಬಡ್ಡಿ ಪಡೆಯಬಹುದು. ರಂಗಭೂಮಿ ಚಟುವಟಿಕೆಗಳು ಎಂದಿಗೂ ಕೊನೆಗೊಳ್ಳಬಾರದು. ಅವು ನಿರಂತರವಾಗಿ ನಡೆಯುತ್ತ, ಮುಂದಿನ ಪೀಳಿಗೆಗೂ ಸಾಗಬೇಕು. ನಾಟಕದಲ್ಲಿ ನಾವು ನವರಸಗಳನ್ನು ಕಾಣಬಹುದು. ನಮ್ಮ ನಿತ್ಯ ಜೀವನದ ಚಟುವಟಿಕೆಗಳೇ ನಾಟಕದ ವಸ್ತುಗಳಾಗುತ್ತವೆ ಎಂದು ತಾಳ್ಯ ಹೇಳಿದರು.

ಚಿತ್ರದುರ್ಗದ ಸರ್ಕಾರಿ ಶಿಕ್ಷಣ ಮಹಾ ವಿದ್ಯಾಲಯದ ಪ್ರವಾಚಕ ಎಸ್.ಕೆ.ಬಿ.ಪ್ರಸಾದ್ ಮಾತನಾಡಿದರು.

ದಾನಿಗಳು, ಆಶ್ರಮದ ಹಿರಿಯ ವಿದ್ಯಾರ್ಥಿಗಳು, ಜಮುರಾ ತಂಡದ ಕಲಾವಿದರನ್ನು ಸನ್ಮಾನಿಸಲಾಯಿತು.

ರಸ್ಕಿನ್ ಬಾಂಡ್ ರಚಿಸಿರುವ ಮಹಾಂತೇಶ ರಾಮದುರ್ಗ ನಿರ್ದೇಶನದ ಉಮೇಶ ಪತ್ತಾರ್ ಸಂಗೀತ ನೀಡಿರುವ ‘ನವಿಲೂರ ನಿಲ್ದಾಣ’ ನಾಟಕವನ್ನು ಜಮುರಾ ಕಲಾ ತಂಡದವರು ಪ್ರದರ್ಶಿಸಿದರು.

ಮಲೇಬೆನ್ನೂರಿನ ವರ್ತಕ ನಾಗೇಶಪ್ಪ, ಮಕ್ಕಳ ತಜ್ಞ ಡಾ.ಬಸಂತ್ ಕುಮಾರ್, ಎಂಜಿನಿಯರ್ ಪ್ರಶಾಂತ್, ವಿಧಾನಸೌಧದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಿರಿಯ ಅಧಿಕಾರಿ ಗಣೇಶ್‌ ರಾವ್, ಆಶ್ರಮದ ವಿಶೇಷಾಧಿಕಾರಿ ಪ್ರೊ.ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ಉಪ ಪ್ರಾಚಾರ್ಯ ಕೆ.ಎಂ.ತಿಮ್ಮರಾಜು ಸ್ವಾಗತಿಸಿದರು. ಯೋಗ ತರಬೇತುದಾರ ಸಂತೋಷ್ ಕುಮಾರ್ ನಿರೂಪಿಸಿದರು. ಐಟಿಐ ಕಾಲೇಜಿನ ಹಾಲೇಶಪ್ಪ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry