ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ನಿಲ್ದಾಣಕ್ಕಿಲ್ಲ ಹೊಸ ಕಟ್ಟಡ ಭಾಗ್ಯ

ಸಂಸದ ಜಿ.ಎಂ.ಸಿದ್ದೇಶ್ವರಗೆ ಪತ್ರ ಬರೆದ ರೈಲ್ವೆ ಇಲಾಖೆ ಅಧಿಕಾರಿಗಳು
Last Updated 18 ಜನವರಿ 2018, 10:08 IST
ಅಕ್ಷರ ಗಾತ್ರ

ದಾವಣಗೆರೆ: ‘ರೈಲು ನಿಲ್ದಾಣದಲ್ಲಿ ಹೊಸ ಕಟ್ಟಡ ನಿರ್ಮಿಸುವ ಅಗತ್ಯವಿಲ್ಲ; ಈ ಬಗ್ಗೆ ಪ್ರಸ್ತಾವನೆಯೂ ಇಲಾಖೆ ಮುಂದಿಲ್ಲ’ ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು, ಸಂಸದ ಜಿ.ಎಂ.ಸಿದ್ದೇಶ್ವರ ಅವರಿಗೆ ಈಚೆಗೆ ಬರೆದ ಪತ್ರ ಈಗ ಚರ್ಚೆಗೆ ಗ್ರಾಸವಾಗಿದೆ.

‘ದಾವಣಗೆರೆ ರೈಲು ನಿಲ್ದಾಣದಿಂದ ನಿತ್ಯ ಪ್ರಯಾಣಿಸುವವರ ಸಂಖ್ಯೆಗೆ ಅನುಗುಣವಾಗಿ ಸೌಲಭ್ಯಗಳಿವೆ. ಈಗಾಗಲೇ ಇದನ್ನು ‘ಎ’ ಗ್ರೇಡ್ ನಿಲ್ದಾಣ ಎಂದು ಇಲಾಖೆ ಘೋಷಿಸಿದೆ. ಜನರಿಗೆ ಕುಳಿತುಕೊಳ್ಳಲು ಪ್ಲಾಟ್‌ಫಾರಂನಲ್ಲಿ ಸಾಕಷ್ಟು ಕುರ್ಚಿಗಳಿವೆ. ಕುಡಿಯಲು ನೀರು, ವಿಶಾಲ ಪಾರ್ಕಿಂಗ್‌ ಸ್ಥಳ, ಸಾಕಷ್ಟು ಟಿಕೆಟ್ ಕೌಂಟರ್, ಕ್ಯಾಂಟೀನ್‌, ಲಗೇಜ್‌ ರೂಂ ಮತ್ತಿತರ ಸೌಲಭ್ಯಗಳಿವೆ. ನಿಲ್ದಾಣದ ಕಟ್ಟಡ ಗಟ್ಟಿಮುಟ್ಟಾಗಿದೆ. ಹೊಸ ಕಟ್ಟಡದ ಅವಶ್ಯಕತೆ ಸದ್ಯಕ್ಕಿಲ್ಲ’ –ಇದಿಷ್ಟು ರೈಲು ಇಲಾಖೆಯ ನಿಲ್ದಾಣ ಅಭಿವೃದ್ಧಿ ಕಾರ್ಯಪಾಲಕ ನಿರ್ದೇಶಕ ವಿವೇಕ್ ಸಕ್ಸೇನ ಬರೆದ ಪತ್ರದ ಸಾರಾಂಶ.

ಕೊರತೆಗಳ ಪಟ್ಟಿ:ಪ್ರಸ್ತುತ ರೈಲು ನಿಲ್ದಾಣ ಮೂಲ ಸೌಕರ್ಯಗಳ ಕೊರತೆಯಿಂದ ನಲುಗುತ್ತಿದೆ. ಪ್ಲಾಟ್‌ಫಾರಂನಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಕುರ್ಚಿಗಳು ಸಾಲುತ್ತಿಲ್ಲ. ಸೂಚನಾ ಫಲಕಗಳಿಲ್ಲ, ದರಪಟ್ಟಿ ಇಲ್ಲವೇ ಇಲ್ಲ. ಟಿಕೆಟ್‌ ಕೌಂಟರ್ ಸಂಖ್ಯೆ ಹೆಚ್ಚು ಮಾಡಬೇಕಾಗಿದೆ. ಎರಡು ಸ್ವಯಂಚಾಲಿತ ಟಿಕೆಟ್‌ ವಿತರಿಸುವ (ಎಟಿವಿಎಂ) ಯಂತ್ರಗಳಲ್ಲಿ ಒಂದು ದುರಸ್ತಿಯಲ್ಲಿದೆ ಎಂದು ಕೊರತೆಗಳ ಪಟ್ಟಿ ಮಾಡುತ್ತಾರೆ ಇದೇ ನಿಲ್ದಾಣದಿಂದ ಚಿತ್ರದುರ್ಗದ ಚಿಕ್ಕಜಾಜೂರಿಗೆ ನಿತ್ಯ ಪ್ರಯಾಣಿಸುವ ಶಿಕ್ಷಕ ರಾಮಚಂದ್ರ.

ಪ್ರತಿ ದಿನ 22 ಎಕ್ಸ್‌ಪ್ರೆಸ್‌, 20 ಸರಕು ಸಾಗಣೆ ರೈಲುಗಳು ಈ ನಿಲ್ದಾಣವನ್ನು ಹೊಕ್ಕು ಹೊರಡುತ್ತವೆ. ಆದರೆ, ಇದಕ್ಕೆ ತಕ್ಕದಾಗಿ ಸೌಕರ್ಯಗಳಿಲ್ಲ. ನಿಲ್ದಾಣದ ಕಟ್ಟಡ ಬಹಳ ಹಳೆಯದಾಗಿದೆ. ಕಟ್ಟಡ ಅಲ್ಲಲ್ಲಿ ಬಿರುಕು ಬಿಟ್ಟಿದೆ ಎಂದು ಒತ್ತಾಯಿಸುತ್ತಾರೆ ರೈಲು ಪ್ರಯಾಣಿಕ ಮಾಯಕೊಂಡದ ತಿಪ್ಪೇಸ್ವಾಮಿ.

ಹೌಹಾರಿದ ಸಂಸದ:ರೈಲ್ವೆ ಇಲಾಖೆಯ ಈ ಪತ್ರ ಓದಿದ ಸಂಸದ ಜಿ.ಎಂ.ಸಿದ್ದೇಶ್ವರ ಹೌಹಾರಿದ್ದಾರೆ. ರೈಲು ನಿಲ್ದಾಣದಲ್ಲಿನ ಸೌಕರ್ಯಗಳ ಪರಿಶೀಲನೆಗಾಗಿ ಈಚೆಗೆ ಅಲ್ಲಿಗೆ ಭೇಟಿ ನೀಡಿದ್ದರು. ಅಲ್ಲಿ ಅವರಿಗೆ ಕಂಡಿದ್ದು ಕುರ್ಚಿ ಇಲ್ಲದೆ ನೆಲದಲ್ಲಿ ಕುಳಿತಿದ್ದ ಪ್ರಯಾಣಿಕರು, ದುಬಾರಿ ದರದ ಕ್ಯಾಂಟೀನ್‌ ತಿಂಡಿ, ಚಾವಣಿ ಇಲ್ಲದ ಪಾರ್ಕಿಂಗ್‌ ಸ್ಥಳ, ಬಿರುಕು ಬಿಟ್ಟ ಲಗೇಜ್‌ ರೂಂ. ಈ ಬಗ್ಗೆ ನೇರವಾಗಿ ರೈಲ್ವೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

‘ರೈಲ್ವೆ ಅಧಿಕಾರಿಗಳು ಬರೆದ ಪತ್ರ ನೋಡಿ ಪರಿಶೀಲನೆಗೆ ನಡೆಸಿದಾಗ ವಾಸ್ತವ ಸ್ಥಿತಿ ಬೇರೆ ಇರುವುದು ಕಂಡುಬಂದಿದೆ. ಈ ಬಗ್ಗೆ ರೈಲ್ವೆ ಸಚಿವರೊಂದಿಗೆ ಚರ್ಚಿಸಲಾಗುವುದು. ನಗರದ ಡಿ.ಸಿ.ಎಂ.ಟೌನ್‌ಷಿಫ್‌ ಬಳಿ ರೈಲ್ವೆ ಗೇಟ್ ನಂ.197ಕ್ಕೆ ನಿರ್ಮಾಣವಾಗಿರುವ ರೈಲ್ವೆ ಸೇತುವೆ ಅವೈಜ್ಞಾನಿಕವಾಗಿದ್ದು, ಈ ಸ್ಥಳದಲ್ಲಿಯೇ ಈಗಿರುವ ಕೆಳಸೇತುವೆಯನ್ನು ಉಳಿಸಿಕೊಂಡು ಇನ್ನೊಂದು ಫ್ಲೈಓವರ್‌ನ್ನು ಹುಬ್ಬಳ್ಳಿ-ಚಿಕ್ಕಜಾಜೂರು ರೈಲ್ವೆ ಲೈನ್ ಡಬ್ಲಿಂಗ್ ಯೋಜನೆಯಲ್ಲಿ ಕೈಗೆತ್ತಿಕೊಳ್ಳಲು ಒತ್ತಾಯಿಸಲಾಗುವುದು’ ಎಂದು ಸಿದ್ದೇಶ್ವರ ತಿಳಿಸಿದ್ದಾರೆ.

ಬಜೆಟ್‌ನಲ್ಲೂ ಘೋಷಣೆ ಅನುಮಾನ:
ಫೆ. 1ರಂದು ಕೇಂದ್ರ ಸರ್ಕಾರದ ಬಜೆಟ್‌ ಮಂಡನೆಯಾಗಲಿದ್ದು, ರೈಲುಗಳ ಹೊಸ ಮಾರ್ಗ, ಅನುದಾನ ಕುರಿತ ಪ್ರಸ್ತಾವನೆಗಳು ಈಗಾಗಲೇ ಸಲ್ಲಿಕೆಯಾಗಿರುತ್ತವೆ. ಇಲಾಖೆಯೇ ಹೀಗೆ ಪತ್ರ ಬರೆದಿರುವುದರಿಂದ ಈ ಬಾರಿಯ ಬಜೆಟ್‌ನಲ್ಲಿ ದಾವಣಗೆರೆ ನಿಲ್ದಾಣಕ್ಕೆ ಹೊಸ ಕಟ್ಟಡ ನಿರ್ಮಾಣ ಘೋಷಣೆ ಸಾಧ್ಯತೆ ಕಡಿಮೆ ಎನ್ನುತ್ತವೆ ರೈಲು ಇಲಾಖೆ ಮೂಲಗಳು.
***
ಪ್ರತಿ ದಿನ ಸರಾಸರಿ 6ರಿಂದ 7 ಸಾವಿರ ಜನ ಈ ನಿಲ್ದಾಣದಿಂದ ಪ್ರಯಾಣ ಮಾಡುತ್ತಾರೆ. ಪ್ರತಿ ದಿನ ಸರಾಸರಿ ₹ 6.80 ಲಕ್ಷ ಆದಾಯವಿದೆ. ಪ್ರತಿ ತಿಂಗಳು ಸುಮಾರು ₹ 2 ಕೋಟಿ ಆದಾಯವಿದೆ ಎಂದು ಮಾಹಿತಿ ನೀಡಿದರು ರೈಲು ನಿಲ್ದಾಣ ಸ್ಟೇಷನ್ ಮಾಸ್ಟರ್ ಪಿ.ಜಿ.ಹಾದಿಮನಿ.

ರೈಲು ನಿಲ್ದಾಣಕ್ಕೆ ಹೊಸ ಕಟ್ಟಡವನ್ನು ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೈಗೆತ್ತಿಗೊಳ್ಳಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದರಿಂದ ಇಲಾಖೆ ಈ ಬಗ್ಗೆ ಮುತುರ್ವಜಿ ವಹಿಸಿಲ್ಲ. ಅಲ್ಲದೇ, ಹಳೆಯ ವರ್ಷಗಳ ಪ್ರಯಾಣಿಕರ ಲೆಕ್ಕಾಚಾರ ಹಾಕಿ ಇಲಾಖೆ ಈಗ ಈ ನಿಲ್ದಾಣಕ್ಕೆ ಸೌಕರ್ಯಗಳ ಅಗತ್ಯ ಇಲ್ಲ ಎಂದು ಪರಿಗಣಿಸಿರಬೇಕು. ಜನರ ಬೇಡಿಕೆಗಳ ಬಗ್ಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
**
ಕಾಣದ ಸ್ವಚ್ಛತೆ: ಸಂಸದ ಆಕ್ಷೇಪ

ಇಕ್ಸಿಗೊ ಸಂಸ್ಥೆ ನಡೆಸಿದ ಸರ್ವೆಯಲ್ಲಿ ನೈರುತ್ಯ ರೈಲ್ವೆ ವಲಯದ ದಾವಣಗೆರೆ ರೈಲು ನಿಲ್ದಾಣ ಸ್ವಚ್ಛತಾ ಪಟ್ಟಿಯಲ್ಲಿ ಉತ್ತಮ ನಿಲ್ದಾಣ ಎಂಬ ಸ್ಥಾನ ಪಡೆದಿದೆ. ಆದರೆ, ವಾಸ್ತವದಲ್ಲಿ ಸ್ವಚ್ಛತೆ ಕಾಣುತ್ತಿಲ್ಲ. ಸರ್ವೆ ಹೇಗೆ ನಡೆಯಿತು? ಎಲ್ಲಿ ನಡೆಯಿತು? ಎಂದು ಸಂಸದರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
**
ಚಿಕ್ಕಜಾಜೂರು–ಹುಬ್ಬಳ್ಳಿ ನಡುವೆ ಡಬ್ಲಿಂಗ್ ಕಾಮಗಾರಿ ನಡೆಯುತ್ತಿದ್ದು, ಇದರಲ್ಲೇ ರೈಲು ನಿಲ್ದಾಣಕ್ಕೆ ಹೊಸ ಕಟ್ಟಡ ನಿರ್ಮಾಣಕ್ಕೆ ರೈಲ್ವೆ ಸಚಿವರಿಗೆ ಮನವಿ ಮಾಡಲಾಗಿದೆ.
–ಜಿ.ಎಂ.ಸಿದ್ದೇಶ್ವರ, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT