ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಕೇಂದ್ರದಲ್ಲಿ ಸರಣಿ ಪ್ರತಿಭಟನೆ

ಆಶಾ, ಬಿಸಿಯೂಟ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಂದ ಜಿಲ್ಲಾಧಿಕಾರಿಗೆ ಮನವಿ
Last Updated 18 ಜನವರಿ 2018, 10:16 IST
ಅಕ್ಷರ ಗಾತ್ರ

ಗದಗ: ಜಿಲ್ಲಾ ಕೇಂದ್ರ ಗದುಗಿನಲ್ಲಿ ಬುಧವಾರ ಸರಣಿ ಪ್ರತಿಭಟನೆಗಳು ನಡೆದವು. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯರ್ತೆಯರು ಮತ್ತು ಆಶಾ ಕಾರ್ಯಕರ್ತೆಯರು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು. ಉಪ್ಪಾರ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಒತ್ತಾಯಿಸಿ ರಾಜ್ಯ ಉಪ್ಪಾರ ಮೀಸಲಾತಿ ಹೋರಾಟ ಸಮಿತಿಯ ಸದಸ್ಯರು ಜಿಲ್ಲಾಡಳಿತ ಭವನದ ಎದುರು ಬುಧವಾರ ಉಪ್ಪಿನ ಸತ್ಯಾಗ್ರಹ ನಡೆಸಿದರು.

ವೇತನ ಪರಿಷ್ಕರಣೆಗೆ ಆಗ್ರಹ: ‘ವೇತನ ಪರಿಷ್ಕರಣೆ, ಮಾತೃಪೂರ್ಣ ಯೋಜನೆಯ ಲೋಪಗಳನ್ನು ಸರಿಪಡಿಸುವುದು, ಅಂಗನವಾಡಿಗೆ ಸ್ವಂತ ಕಟ್ಟಡ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯರ್ತೆಯರು ಬುಧವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಇದಕ್ಕೂ ಮುನ್ನ ನಗರದ ಗಾಂಧಿ ವೃತ್ತ, ಭೂಮರಡ್ಡಿ ವೃತ್ತ, ಹಳೆ ಡಿ.ಸಿ ಕಚೇರಿ, ಕಿತ್ತೂರು ಚನ್ನಮ್ಮ ವೃತ್ತ, ಮುಳಗುಂದ ನಾಕಾ ಮಾರ್ಗವಾಗಿ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ದಾರಿಯುದ್ದಕ್ಕೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿಳಂಬ ನೀತಿ ಖಂಡಿಸಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘42ನೇ ಅಖಿಲ ಭಾರತ ಕಾರ್ಮಿಕರ ಸಮ್ಮೇಳದ ತೀರ್ಮಾನದಂತೆ, ನೌಕರರಿಗೆ ಮಾಸಿಕ ₹18 ಸಾವಿರ ವೇತನ, ₹3 ಸಾವಿರ ಪಿಂಚಣಿ ನೀಡಬೇಕು. ಮಾತೃಪೂರ್ಣ ಯೋಜನೆಯ ಬಗ್ಗೆ ಸರ್ಕಾರ ಸಮಗ್ರವಾಗಿ ಅಧ್ಯಯನ ಹಾಗೂ ಸಮೀಕ್ಷೆ ಮಾಡಬೇಕು’ ಎಂದು ಆಗ್ರಹಿಸಿದರು.

‘ಸಾರ್ವಜನಿಕರ ಅಭಿಪ್ರಾಯಗಳನ್ನು ಸಂಗ್ರಹಿಸಿ ಹಿಂದೆ ಇದ್ದ ಟೇಕ್‌ಹೋಂ ಪದ್ಧತಿಯಡಿ ಗರ್ಭಿಣಿಯರಿಗೆ, ಬಾಣಂತಿಯರಿಗೆ ಪೌಷ್ಟಿಕ ಆಹಾರ ವಿತರಿಸಬೇಕು. ಮಾತೃಪೂರ್ಣ ಯೋಜನೆಯ ಸಮಸ್ಯೆಗಳನ್ನು ಪರಿಹರಿಸಬೇಕು. ಬಾಲ ವಿಕಾಸ ಸಮಿತಿಯನ್ನು ಪುನರ್‌ ರಚಿಸುವ ನಿಟ್ಟಿನಲ್ಲಿ ಗ್ರಾಮ, ನಗರ, ಪಟ್ಟಣ ಪಂಚಾಯ್ತಿ ಸದಸ್ಯರ ಖಾತೆ ತೆರೆಯಲು ಕಡ್ಡಾಯಗೊಳಿಸಿರುವುದನ್ನು ವಾಪಸ್‌ ಪಡೆಯಬೇಕು’ ಎಂದು ಪ್ರತಿಭಟನಾಕಾರರು ಮನವಿ ಮಾಡಿದರು.

‘ಅಂಗನವಾಡಿ ಕೇಂದ್ರಗಳ ಕೆಲಸದ ಅವಧಿಯನ್ನು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.30ರವರೆಗೆ ನಿಗದಿಪಡಿಸಬೇಕು. ಮಿನಿ ಅಂಗನವಾಡಿ ಕೇಂದ್ರಗಳಿಗೆ ಸಹಾಯಕಿಯರನ್ನು ನೇಮಕ ಮಾಡಿ, ಅದನ್ನು ಪೂರ್ಣ ಅಂಗನವಾಡಿಯಾಗಿ ಪರಿವರ್ತಿಸಬೇಕು. ಅನುಭವದ ಆಧಾರದ ಮೇಲೆ ಕಾರ್ಯಕರ್ತರಿಗೆ ಹಾಗೂ ಸಹಾಯಕಿಯರಿಗೆ ವೇತನ ಪರಿಷ್ಕರಣೆ ಮಾಡಬೇಕು’ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಂಡಳಿಯ ಸದಸ್ಯೆ ನಾಗರತ್ನಾ, ಪಿ.ಗೀತಾ, ಕೆ.ಲೀಲಾವತಿ, ಎಲ್.ಪ್ರಮೀಳಾ, ನೀಲಾಂಬಾ, ಜಿ.ಆರ್.ಶಿವಶಂಕರ, ಎ.ಜಿ.ತಾರಾಮಣಿ, ಎಚ್.ಎಂ.ಸುಮಿತ್ರಾ, ಕೆ.ಕೆ.ಶಾರದಾ, ಸಿ.ಚನ್ನಮ್ಮ ಇದ್ದರು.

ಜಿಲ್ಲಾಡಳಿತ ಭವನದ ಎದುರು ಉಪ್ಪಿನ ಸತ್ಯಾಗ್ರಹ
ಗದಗ: ‘ಹಲವು ದಶಕಗಳಿಂದ ಉಪ್ಪಾರ ಸಮುದಾಯವು ಹಿಂದುಳಿದಿದೆ. ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಈ ಸಮುದಾಯಕ್ಕೆ ಇದುವರೆಗೆ ಉನ್ನತ ಸ್ಥಾನಮಾನ ದೊರೆತಿಲ್ಲ’ ಎಂದು ರಾಜ್ಯ ಉಪ್ಪಾರ ಮೀಸಲಾತಿ ಹೋರಾಟ ಸಮಿತಿಯ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

‘ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಸಮುದಾಯದ 22 ಜನರು ಹುತಾತ್ಮರಾಗಿದ್ದಾರೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಉಪ್ಪಿನ ಸತ್ಯಾಗ್ರಹಕ್ಕೆ ಉಪ್ಪಾರ ಸಮುದಾಯದವರು ಧನ ಸಹಾಯ ಮಾಡಿದ್ದರು. ಆದರೆ, ಇತಿಹಾಸವನ್ನು ಈಗಿನ ರಾಜ್ಯ, ಕೇಂದ್ರ ಸರ್ಕಾರ ಮರೆತುಬಿಟ್ಟಿದೆ’ ಎಂದು ದೂರಿದರು.

‘ಉಪ್ಪಾರ ಸಮುದಾಯದವರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದಾರೆ. ಗಾರೆ ಕೆಲಸ, ಕಲ್ಲು ಒಡೆಯುವ ಹಾಗೂ ಚಿಕ್ಕ ಕೆಲಸಗಳನ್ನು ಮಾಡುತ್ತಾ ಬದುಕು ಕಟ್ಟಿಕೊಂಡಿದ್ದಾರೆ. ಭೋವಿ(ವಡ್ಡರ) ಹಾಗೂ ಉಪ್ಪಾರ ಸಮುದಾಯದ ಕಸುಬುಗಳು ಒಂದೇ ಆಗಿವೆ. ಹೀಗಾಗಿ ಭೋವಿ ಸಮುದಾಯದಂತೆ ಉಪ್ಪಾರ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು’ ಎಂದು ಆಗ್ರಹಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್ ಗರಗ, ಕಾರ್ಯದರ್ಶಿ ಈರಣ್ಣ ಗಡಾದ, ಉಪಾಧ್ಯಕ್ಷ ಮಾನಪ್ಪ ಬೆನ್ನಿಶೆಟ್ಟಿ ಸೇರಿದಂತೆ 100ಕ್ಕೂ ಹೆಚ್ಚು ಜನರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

ಆಶಾ ಕಾರ್ಯಕರ್ತೆಯರ ಪ್ರತಿಭಟನೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಲ್ಲಿ ಅಂದಾಜು ಒಂದು ಕೋಟಿ ಮಹಿಳೆಯರಯ ‘ಸ್ಕೀಂ ವರ್ಕರ್ಸ್’ ಆಗಿ ಕಾರ್ಯನಿರ್ವಹಿಸುತ್ತಿದ್ದು, ಇವರಿಗೆ ತಿಂಗಳಿಗೆ ಕನಿಷ್ಠ ₹18 ಸಾವಿರ ವೇತನ ನಿಗದಿಪಡಿಸಬೇಕು ಹಾಗೂ ಇವರನ್ನು ಕಾರ್ಮಿಕರೆಂದು ಪರಿಗಣಿಸುವಂತೆ ಆಶಾ ಹಾಗೂ ಅಕ್ಷರ ದಾಸೋಹ ಕಾರ್ಯಕರ್ತೆಯರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಸರ್ಕಾರ ಆರಂಭಿಸಿರುವ ಮಾತೃಪೂರ್ಣ ಯೋಜನೆ ಶೇ60 ರಷ್ಟೂ ಅನುಷ್ಠಾನಗೊಂಡಿಲ್ಲ. ಅಂಗನವಾಡಿ ಕೇಂದ್ರಗಳ ಕೊಠಡಿಗಳು ಕಿರಿದಾಗಿವೆ. ಗ್ರಾಮಾಂತರ ಪ್ರದೇಶಗಳಲ್ಲಿ ಗರ್ಭಿಣಿಯರು ಅಂಗನವಾಡಿ ಕೇಂದ್ರಕ್ಕೆ ಬರಬೇಕಾದರೆ 2ರಿಂದ 3 ಕಿ.ಮೀ. ದೂರ ನಡೆದು ಬರಬೇಕಾದ ಪರಿಸ್ಥಿತಿ ಇದೆ.ಇದರಿಂದ ಮಾತೃಪೂರ್ಣ ಯೋಜನೆ ಪ್ರಯೋಜನ ಪಡೆಯಲು ಗರ್ಭಿಣಿಯರು ಅಂಗನವಾಡಿಗೆ ಬರುತ್ತಿಲ್ಲ. ಜತೆಗೆ ಕೋಳಿಮೊಟ್ಟೆ ಬೆಲೆ ಕೆಲವೆಡೆ ಸರ್ಕಾರ ನೀಡುವ ಬೆಲೆಗಿಂತ ಹೆಚ್ಚಳವಾಗಿದ್ದು, ಈ ಯೋಜನೆ ಅನುಷ್ಠಾನ ಹಂತದಲ್ಲೇ ಹಿನ್ನಡೆಯಾಗಿದೆ’ ಎಂದು ದೂರಿದರು.

ಜಿಲ್ಲಾ ಅಧ್ಯಕ್ಷೆ ಭಾಗ್ಯಜ್ಯೋತಿ, ಜಿಲ್ಲಾ ಕಾರ್ಯದರ್ಶಿ ಸುಂದ್ರಮ್ಮ, ಉಪಾಧ್ಯಕ್ಷೆ ರೇಣುಕಾ ಪವಾರ್, ಮಂಜುಳಾ ಕಾಳಗಿ, ಲಕ್ಷ್ಮಿ ಪೂಜಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT