ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಮತಿ ಪ್ರಕ್ರಿಯೆ ಚುರುಕುಗೊಳಿಸಿ: ಡಿ.ಸಿ

ಆನೆ ಕಾರ್ಯಪಡೆ ಸಮಿತಿ ಸಭೆ: ಉಪಟಳ ನೀಡುತ್ತಿರುವ ಕಾಡಾನೆಗಳ ಸ್ಥಳಾಂತರದ ಬಗ್ಗೆ ಚರ್ಚೆ
Last Updated 18 ಜನವರಿ 2018, 10:31 IST
ಅಕ್ಷರ ಗಾತ್ರ

ಹಾಸನ: ಆನೆಗಳನ್ನು ಸ್ಥಳಾಂತರ ಮಾಡಲು ಶೀಘ್ರ ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯುವ ಪ್ರಕ್ರಿಯೆಯನ್ನು ಚುರುಕುಗೊಳಿಸುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಥಮ ಆನೆ ಕಾರ್ಯಪಡೆ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಇನ್ನಷ್ಟು ಜೀವ ಹಾನಿಗಳು ಸಂಭವಿಸಬಾರದು. ಅದಕ್ಕೆ ವ್ಯವಸ್ಥಿತ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕಾಗಿದ್ದು, ಇದರಲ್ಲಿ ಅರಣ್ಯ ಇಲಾಖೆ ಜವಾಬ್ದಾರಿ ಬಲು ದೊಡ್ಡದು’ ಎಂದು ಹೇಳಿದರು.

‘ಹಾಲಿ ಆನೆ ಹಾವಳಿ ಸಮಸ್ಯೆಗೆ ಮೂರು ಹಂತಗಳಲ್ಲಿ ಪರಿಹಾರ ಕ್ರಮ ಕೈಗೊಳ್ಳಬೇಕಿದೆ. ಜಿಲ್ಲಾ ಹಂತದಲ್ಲಿ ತಕ್ಷಣದ ನಿಯಂತ್ರಣ ಹಾಗೂ ಪರಿಹಾರ ಕ್ರಮಗಳು, ರಾಜ್ಯ ಹಂತದಲ್ಲಿ ಯೋಜನೆಗಳ ತಯಾರಿ ಮತ್ತು ಅನುದಾನ ಬಿಡುಗಡೆ, ಕೇಂದ್ರ ಸರ್ಕಾರದ ಹಂತದಲ್ಲಿ ಆನೆಗಳ ಸೆರೆಗೆ ಅನುಮತಿ, ಆನೆ ಕಾರಿಡಾರ್ ಯೋಜನೆ ಅನುಷ್ಠಾನವಾಗಬೇಕು’ ಎಂದು ತಿಳಿಸಿದರು.

ರಾಜ್ಯ ಸರ್ಕಾರದಿಂದ ಅನುಮತಿ ಪಡೆದು ಶೀಘ್ರವೇ ಎರಡು ಪುಂಡಾನೆಗಳನ್ನು ಹಿಡಿಯಲು ಕ್ರಮವಹಿಸಿ, ಜಿಲ್ಲೆಯ ಇತರೆ ತಾಲ್ಲೂಕುಗಳಲ್ಲಿ ಇರುವ ಹೆಚ್ಚುವರಿ ಅರಣ್ಯ ಅಧಿಕಾರಿ, ಸಿಬ್ಬಂದಿಯನ್ನು ಸಮಸ್ಯೆ ಇರುವ ಮಲೆನಾಡು ಸ್ಥಳಗಳಿಗೆ ನಿಯೋಜನೆ ಮಾಡುವಂತೆ ರೋಹಿಣಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ನಿರ್ದೇಶನ ನೀಡಿದರು.

ಶಾಸಕ ಎಚ್.ಕೆ. ಕುಮಾರಸ್ವಾಮಿ ಮಾತನಾಡಿ, ‘ಜಿಲ್ಲೆಯ ಮಲೆನಾಡು ಪ್ರದೇಶಕ್ಕೆ ಅರಣ್ಯ ಇಲಾಖೆಯ ಪ್ರತ್ಯೇಕ ವನ್ಯಜೀವಿ ಉಪ ವಿಭಾಗ ಪ್ರಾರಂಭವಾಗಬೇಕು. ಹೆಚ್ಚಿನ ಸಿಬ್ಬಂದಿ ನಿಯೋಜಿಸಬೇಕು. ಆನೆ ಹಾವಳಿ ಸಂದರ್ಭ ತಕ್ಷಣ ಸ್ಥಳಕ್ಕೆ ಧಾವಿಸಿ ಬರುವಂತಾಗಬೇಕು’ ಎಂದರು.

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಹೆಮ್ಮಿಗೆ ಮೋಹನ್ ಮಾತನಾಡಿ, ‘ಆಲೂರು, ಸಕಲೇಶಪುರ ಭಾಗದಲ್ಲಿನ ಆನೆ ಹಾವಳಿ ಸ್ವರೂಪ, ಉಂಟಾಗುತ್ತಿರುವ ನಷ್ಟ, ಆನೆಗಳ ಜೀವನ ಶೈಲಿ, ಗುಣ-ಸ್ವಭಾವಗಳ ಬಗ್ಗೆ ವಿವರಿಸಿ, ಆನೆಗಳ ಸಂಪೂರ್ಣ ಸ್ಥಳಾಂತರದಿಂದ ಮಾತ್ರ ಸಮಸ್ಯೆಗೆ ಶಾಶ್ವತ ಪರಿಹಾರ ಸಾಧ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳ ಪಾತ್ರ ಹೆಚ್ಚಾಗಿ ಅಗತ್ಯವಿದೆ’ ಎಂದರು.

ಮಾಜಿ ಶಾಸಕ ವಿಶ್ವನಾಥ್, ‘ರಕ್ಷಿತಾರಣ್ಯಗಳ ವ್ಯಾಪ್ತಿಯಲ್ಲಿ ರೆಸಾರ್ಟ್ ಗಳ ನಿರ್ಮಾಣಕ್ಕೆ ಅವಕಾಶ ನೀಡಬಾರದು. ಇತ್ತೀಚಿನ ವರ್ಷಗಳಲ್ಲಿ ಆನೆ ಸಂತತಿ ಹೆಚ್ಚಿದ್ದು ಹಾವಳಿ ಪ್ರಮಾಣ ಅತಿಯಾಗಿದೆ. ಸುಮಾರು 40 ಆನೆಗಳು ಇವೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು’ ಎಂದು ಮನವಿ ಮಾಡಿದರು.

ಪರಿಸರ ಪ್ರೇಮಿಗಳಾದ ಗೊದ್ದು ಉಮೇಶ್, ಕೆ ಅಶೋಕ್ ಕುಮಾರ್, ಬೆಳೆಗಾರರಾದ ಹೆತ್ತೂರು ತಮ್ಮೇಗೌಡ ಕಾಫಿ ಮಂಡಳಿ ಸದಸ್ಯರಾದ ಉದಯ್ ಕುಮಾರ್, ಎ.ಎಸ್. ಪರಮೇಶ್, ಅರ್ಜುನ್, ಪ್ರಗತಿಪರ ಚಿಂತಕ ಆರ್.ಪಿ.ವೆಂಕಟೇಶ್ ಮೂರ್ತಿ ಅವರು ಆನೆ ಹಾವಳಿಯಿಂದ ಉಂಟಾಗಿರುವ ಪರಿಸ್ಥಿತಿ, ಪ್ರಭಾವ ಕೈಗೊಳ್ಳಬೇಕಾದ ನಿಯಂತ್ರಣ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಪ್ರತ್ಯೇಕ ವನ್ಯಜೀವಿ ಉಪವಿಭಾಗ ಸ್ಥಾಪನೆ, ಆನೆಗಳಿಗೆ ರೇಡಿಯೊ ಕಾಲರ್‌ಗಳ ಅಳವಡಿಕೆ ಮೂಲಕ ಆನೆಗಳ ಚಲನ ವಲನದ ಬಗ್ಗೆ ದಿನನಿತ್ಯ ಮಾಹಿತಿ ಬಿತ್ತರಿಸುವುದು ಬಸ್‍ಗಳ ಓಡಾಟ, ವಿದ್ಯುತ್ ದೀಪಗಳ ಅಳವಡಿಕೆ, ಸೋಲಾರ್ ಬೇಲಿ ನಿರ್ಮಾಣ ಮತ್ತಿತರ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಆಲೂರು ವಲಯ ವ್ಯಾಪ್ತಿಯ ದೊಡ್ಡಬೆಟ್ಟ ಅರಣ್ಯ ಪ್ರದೇಶದ ನಾಗಾವರ ಗ್ರಾಮ ವ್ಯಾಪ್ತಿಯಲ್ಲಿ ಆನೆ ಶಿಬಿರ ನಿರ್ಮಾಣ ಮಾಡುವಂತೆ ಸಭೆಯಲ್ಲಿದ್ದ ಕಾರ್ಯಪಡೆ ಸದಸ್ಯರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು.

ಹಾಸನ ಅರಣ್ಯ ವಿಭಾಗದ ಯಳಸೂರು ವಲಯ ವ್ಯಾಪ್ತಿಯಲ್ಲಿ ಆನೆ ಕಾರಿಡಾರ್ ನಿರ್ಮಿಸಬೇಕೆನ್ನುವುದು ಬಹುದಿನಗಳ ಬೇಡಿಕೆ ಆಗಿದ್ದು, ಈ ಸಂಬಂಧ ರಾಜ್ಯ ಮತ್ತು ಕೇಂದ್ರ ಸರ್ಕಾರದ ಜೊತೆಗೆ ನಿರಂತರ ಸಂವಹನ ಕಾಯ್ದುಕೊಳ್ಳುವ ಮೂಲಕ ಯೋಜನೆ ಅನುಷ್ಠಾನಕ್ಕೆ ತ್ವರಿತವಾಗಿ ಕ್ರಮ ವಹಿಸಿಬೇಕು ಎಂದು ಜಿಲ್ಲಾ ಕಾರ್ಯಪಡೆ ಸದಸ್ಯರು ಒತ್ತಾಯಿಸಿದರು.

ಸರ್ಕಾರದ ಅಂತದಲ್ಲಿ ಇದು ನಿರ್ಧರವಾಗಬೇಕಾದ್ದು ಮತ್ತೊಮ್ಮೆ ಪ್ರಸ್ತಾವ ಸಲ್ಲಿಸಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಸಕಲೇಶಪುರ ಉಪ ವಿಭಾಗಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್, ಸಕಲೇಶಪುರ ಮತ್ತು ಆಲೂರು ತಹಶೀಲ್ದಾರರು ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
**
ಆನೆ ಶಿಬಿರ ನಿರ್ಮಾಣ

‘ದುಬಾರೆ ಆನೆ ಧಾಮ ಮಾದರಿಯಲ್ಲಿ ನಾಗಾವರದಲ್ಲಿ ಶಾಶ್ವತವಾಗಿ ಆನೆ ಶಿಬಿರ ನಿರ್ಮಾಣ ಮಾಡಲಾಗುವುದು. ಈ ಶಿಬಿರದಲ್ಲಿ ಆನೆಗಳನ್ನು ಬಳಸಿಕೊಂಡು ಕಾಡಾನೆಗಳಿಂದ ಸಂಭವಿಸಬಹುದಾದ ಅವಘಡ ತಡೆಯಲು ಅನುಕೂಲವಾಗುವಂತೆ ಕ್ರಮವಹಿಸಲಾಗುವುದು. ಪ್ರವಾಸೋದ್ಯಮಕ್ಕೂ ಈ ಸ್ಥಳ ಪ್ರಶಸ್ತವಾಗಿರುವುದರಿಂದ ಈ ನಿಟ್ಟಿನಲ್ಲಿ ಸೂಕ್ತ ಕ್ರಮವಹಿಸಲಾಗುವುದು’ ಎಂದು ರೋಹಿಣಿ ಸಿಂಧೂರಿ ಹೇಳಿದರು.
**
ಪರಿಹಾರ ಮೊತ್ತ ಹೆಚ್ಚಿಸಿ
ಬೆಳೆ ಪರಿಹಾರ ಮೊತ್ತ ಹೆಚ್ಚು ಮಾಡಬೇಕು. ಆನೆ ಹಾವಳಿಯಿಂದ ಮೃತಪಟ್ಟ ಕುಟುಂಬದವರಿಗೆ ಉದ್ಯೋಗ, ಪರಿಹಾರ ಮೊತ್ತ ₹ 5 ರಿಂದ 10 ಲಕ್ಷ ನೀಡುವುದು ಹಾಗೂ ಅವರ ಮಕ್ಕಳಿಗೆ ಉಚಿತ ಶಿಕ್ಷಣದ ವ್ಯವಸ್ಥೆ ಮಾಡಿಕೊಡಬೇಕು ಎಂದು ಸಭೆಯಲ್ಲಿ ಮನವಿಗಳು ಕೇಳಿ ಬಂದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT