ಭಿನ್ನ ಕಥೆಯ ‘ಬ್ರಹ್ಮಾಸ್ತ್ರ’

7

ಭಿನ್ನ ಕಥೆಯ ‘ಬ್ರಹ್ಮಾಸ್ತ್ರ’

Published:
Updated:
ಭಿನ್ನ ಕಥೆಯ ‘ಬ್ರಹ್ಮಾಸ್ತ್ರ’

ಕನ್ನಡದ ಹುಡುಗ ಮತ್ತು ತೆಲುಗು ಹುಡುಗಿಯ ಮಧ್ಯೆ ನಡೆಯುವ ಹೊಸ ಪ್ರೇಮಕಥೆಯೇ ‘ಬ್ರಹ್ಮಾಸ್ತ್ರ’ ಧಾರಾವಾಹಿ. ಉದಯ ಟಿವಿಯಲ್ಲಿ ಜನವರಿ 22ರಿಂದ ಸೋಮವಾರದಿಂದ ಶುಕ್ರವಾರ ದವರೆಗೆ ರಾತ್ರಿ 8ಕ್ಕೆ ಪ್ರಸಾರವಾಗಲಿದೆ. 

ಅತ್ತೆ– ಸೊಸೆ ಕಲಹ, ತಾಯಿ- ಮಗಳ ಅನುಬಂಧ, ತ್ರಿಕೋನ ಪ್ರೇಮಕಥೆ, ಸವತಿ- ನಾದಿನಿ ಮತ್ಸರ ಧಾರಾವಾಹಿಯ ಸಿದ್ಧಸೂತ್ರವಾಗಿವೆ. ಈ ನಡುವೆ ವಿಭಿನ್ನ ಕಥೆಗಳನ್ನು ಜನರಿಗೆ ತಲುಪಿಸಲು ಆರ್.ಜಿ. ಮೀಡಿಯಾ ಸ್ಟಫ್ ಸಂಸ್ಥೆ ಮುಂದಾಗಿದೆ. ನಾಯಕ ತನ್ನ ಪ್ರೀತಿಯ ಅಸ್ತ್ರದಿಂದ ಕಟು ಹೃದಯಗಳನ್ನು ಗೆಲ್ಲುವ ಘಟನೆಗಳ ಸಾಹಸಪೂರ್ಣ, ಸ್ವಾರಸ್ಯಕರ ಮನರಂಜನೆ ನೀಡುವುದೇ ಈ ಧಾರಾವಾಹಿಯ ವೈಶಿಷ್ಟ್ಯ.

ನಿರ್ದೇಶಕ ರವಿ ಆರ್. ಗರಣಿ ಸಾರಥ್ಯದಲ್ಲಿ ಈ ಧಾರಾವಾಹಿ ಮೂಡಿಬರಲಿದೆ.

ಮಾಮೂಲಿ ಧಾರಾವಾಹಿಗಳನ್ನು ಮೀರಿದ ಹೊಸ ಪ್ರಯತ್ನಕ್ಕಾಗಿನ ತುಡಿತದ ಫಲವೇ ಬ್ರಹ್ಮಾಸ್ತ್ರ. ಬಹಳ ಶ್ರಮವಹಿಸಿ ಈ ಧಾರಾವಾಹಿಯ ಚಿತ್ರೀಕರಣ ಮಾಡಲಾಗಿದೆ. ವೀಕ್ಷಕರಿಗೆ ಇದು ಇಷ್ಟವಾಗುತ್ತದೆ ಎಂಬ ನಂಬಿಕೆ ರವಿ ಗರಣಿ ಅವರದ್ದು.

ಭಾರತೀಯ ಪುರಾಣಗಳಲ್ಲಿ ಬ್ರಹ್ಮಾಸ್ತ್ರವು ಅಸ್ತ್ರಸಂಕುಲದಲ್ಲಿಯೇ ಅತ್ಯಂತ ಬಲಿಷ್ಠ ಮತ್ತು ಕೊನೆಯ ಅಸ್ತ್ರ ಎಂದು ಪರಿಗಣಿಸಲಾಗಿದೆ. ಇದೇ ರೀತಿ ಕಥಾ ನಾಯಕಿ ತೆಲುಗು ಹುಡುಗಿ ಶಿವರಂಜನಿ ಮನೆಯವರು ಪ್ರೀತಿಯ ಬದ್ಧ ವೈರಿಗಳಾಗಿರುತ್ತಾರೆ. ಪ್ರೀತಿಸುವ ಪ್ರೇಮಿಗಳಿಗೆ ಬ್ರಹ್ಮಾಸ್ತ್ರ ಹೂಡುವ ಕಟುಕರಂತಿರುತ್ತಾರೆ. ನಾಯಕ ಕನ್ನಡದ ಹುಡುಗ ಸಂತೋಷನ ಮನೆಯವರದ್ದು ಪ್ರೀತಿಯಿಂದಲೇ ಎಲ್ಲರ ಮನಗೆಲ್ಲುವ ಗುಣ. ಪ್ರೀತಿಸುವ ಪ್ರೇಮಿಗಳಿಗೆ ಆಶ್ರಯ ನೀಡುತ್ತಾರೆ.

ಈಗಾಗಲೇ ಮೂವತ್ತಕ್ಕೂ ಹೆಚ್ಚು ಸಂಚಿಕೆಗಳನ್ನು ಚಿತ್ರೀಕರಿಸಲಾಗಿದೆ. ನಿರೀಕ್ಷಿತ ಫಲಿತಾಂಶವೇ ಬಂದಿದ್ದು, ಕಿರುತೆರೆ ಮಾರುಕಟ್ಟೆಯಲ್ಲಿ ಹೊಸ ಮೈಲುಗಲ್ಲಾಗಲಿದೆ ಎಂಬ ವಿಶ್ವಾಸ ಧಾರಾವಾಹಿ ತಂಡದ್ದು.

ಪ್ರಮೋದ್, ದೀಪಾ ಹಿರೇಮಠ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ತ್ರಿವೇಣಿ, ಶೈಲಶ್ರೀ, ಶಂಕರ್ ಅಶ್ವಥ್, ಸುದರ್ಶನ್, ಅಶೋಕ್ ಹೆಗ್ಗಡೆ, ವಿಜಯ್ ಕೌಂಡಿನ್ಯ, ಮೈಸೂರು ಹರಿ, ಸಿದ್ದೇಶ್ವರ್, ರಶ್ಮಿತಾ, ಪಲ್ಲವಿ, ಪವನ್, ರಜನಿಕಾಂತ ತಾರಾಬಳಗದಲ್ಲಿದ್ದಾರೆ. ಗರಣಿ ಪ್ರೊಡಕ್ಷನ್‌ನಿಂದ ಲತಾ ಆರ್. ಗರಣಿ ನಿರ್ಮಿಸುತ್ತಿರುವ ಈ ಧಾರಾವಾಹಿಗೆ ಕಿರಣ್ ಅವರ ಛಾಯಾಗ್ರಹಣವಿದೆ. ತಿಲಕ್ ಆ್ಯಕ್ಷನ್‍ ಕಟ್ ಹೇಳುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry