ಮುದ್ದು ಮನಸಿನ ಕೃಷ್ಣಸುಂದರಿ

7

ಮುದ್ದು ಮನಸಿನ ಕೃಷ್ಣಸುಂದರಿ

Published:
Updated:
ಮುದ್ದು ಮನಸಿನ ಕೃಷ್ಣಸುಂದರಿ

ಇದು ಗುಣಕ್ಕಿಂತ ಸೌಂದರ್ಯಕ್ಕೆ ಬೆಲೆ ಕೊಡುವ ಕಾಲ. ಹಾಗಾಗಿಯೇ, ಯುವಪೀಳಿಗೆ ಬೆಳ್ಳಗಾಗಲು ವಿಭಿನ್ನ ಕಸರತ್ತು ಮಾಡುತ್ತಾರೆ. ಆದರೆ, ಹೆಮ್ಮೆಯಿಂದಲೇ ತನ್ನ ಬಣ್ಣವನ್ನು ಸ್ವೀಕರಿಸಿ ಸ್ಫಟಿಕದಂತಹ ಗುಣಕ್ಕೆ ಆದ್ಯತೆ ನೀಡುವ ಕೃಷ್ಣಸುಂದರಿಯೇ ಮುದ್ದುಲಕ್ಷ್ಮಿ.

ಹೆಣ್ಣನ್ನು ಸೌಂದರ್ಯದಿಂದ ಅಳೆಯಲಾಗುತ್ತದೆ. ರೂಪವಿರದ ಹೆಣ್ಣಿಗೆ ಕೀಳರಿಮೆ ಕಾಡುತ್ತದೆ. ಆ ಕೀಳರಿಮೆಯನ್ನು ಮೆಟ್ಟಿನಿಂತು ಬಾಹ್ಯ ಸೌಂದರ್ಯಕ್ಕಿಂತ ಆತ್ಮ ಸೌಂದರ್ಯವೇ ಮೇಲೆಂದು ನಂಬಿ ತನ್ನವರಿಗೆಲ್ಲಾ ವಾತ್ಸಲ್ಯದ ಕಸ್ತೂರಿ ಸೂಸುತ್ತಾಳೆ ಈ ಲಕ್ಷ್ಮಿ. ಚಿಕ್ಕ ವಯಸ್ಸಿನಲ್ಲಿ ತಾಯಿ ಕಳೆದುಕೊಂಡು ಮಲತಾಯಿ, ಮಲತಂಗಿಯರ ಹಂಗಿನಲ್ಲಿ ಬೆಳೆದವಳು ಈಕೆ. ಅವಳ ತಂಗಿ ಸೌಂದರ್ಯದ ಪ್ರತೀಕ. ಆಕೆಯ ಹೆಸರು ಐಶ್ವರ್ಯ. ‘ಮಿಸ್ ಬೆಂಗಳೂರು’ ಪಟ್ಟ ಮುಡಿಗೇರಿಸಿಕೊಂಡ ಅಂದಗಾತಿ.

ತನ್ನ ಅಂದಕ್ಕೆ ಬೀಗಿ ಅಕ್ಕಳನ್ನು ಹೀಯಾಳಿಸಿದರೂ ನಗುಮೊಗದಲ್ಲಿ ಸದಾ ತಂಗಿಯ ಏಳಿಗೆ ಬಯಸುತ್ತಾಳೆ ಅಕ್ಕ. ಈ ಇಬ್ಬರ ಜೀವನದಲ್ಲಿ ಬರುವ ರಾಜಕುಮಾರನೆ ದೃವಂತ್. ಸ್ಫುರದ್ರೂಪಿಯಾದ ಈತ ಶ್ರೀಮಂತ. ಐಶ್ವರ್ಯಗೆ ಇವನನ್ನು ಪಡೆಯಬೇಕೆಂಬ ಛಲ. ಆದರೆ, ಇವನ ಪ್ರೀತಿ ಲಕ್ಷ್ಮಿಗೆ ಮೀಸಲು. ಸೌಂದರ್ಯದ ಮುಂದೆ ಮತ್ತೆಲ್ಲವೂ ಶೂನ್ಯ ಎಂಬ ನಂಬಿಕೆ ದೃವಂತ್‌ನ ತಾಯಿ ಸೌಂದರ್ಯಳದ್ದು. ಆಕೆ ಮನೆ ಕೆಲಸದಾಳನ್ನು ಆಯ್ಕೆ ಮಾಡುವುದು ಕೂಡ ಅವರ ಸೌಂದರ್ಯ ನೋಡಿ!

ದೃವಂತ್‌ ಲಕ್ಷ್ಮಿಯನ್ನು ಪ್ರೀತಿಸುತ್ತಾನೆ. ಆದರೆ, ಅವನ ತಾಯಿಗೆ ಅವಳ ಕಪ್ಪು ರೂಪ ಕಂಡರೆ ದ್ವೇಷ. ತಾಯಿ ಐಶ್ವರ್ಯಳನ್ನು ಒಪ್ಪಿದರೆ, ಮಗ ಅವಳ ಕಪ್ಪು ಗುಣವನ್ನು ತಿರಸ್ಕರಿಸುತ್ತಾನೆ. ಈ ನಾಲ್ವರ ನಡುವಿನ ಸಾಮಾಜಿಕ ಸಂಘರ್ಷವೇ ‘ಮುದ್ದುಲಕ್ಷ್ಮಿ’ ಧಾರಾವಾಹಿಯ ಕಥಾಹಂದರ.

ಮುದ್ದುಲಕ್ಷ್ಮಿ ಪಾತ್ರವನ್ನು ಅಶ್ವಿನಿ ತನ್ನದಾಗಿಸಿಕೊಂಡಿದ್ದಾಳೆ. ದೃವಂತ್ ಪಾತ್ರಕ್ಕೆ ಜೀವ ತುಂಬಲು ಚರಿತ್ ಬಾಲಣ್ಣ ಸಜ್ಜಾಗಿದ್ದಾರೆ. ಐಶ್ವರ್ಯ ಪಾತ್ರವನ್ನು ಅನು ಪೂವಮ್ಮ ನಿರ್ವಹಿಸುತ್ತಿದ್ದಾರೆ. ಐದು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವ ಅನುಭವ ಅವರ ಬೆನ್ನಿಗಿದೆ. ಈ ಧಾರಾವಾಹಿಯತ್ತ ಆಕರ್ಷಿತರಾಗಲು ಪಾತ್ರದ ಠೀವಿ, ಗತ್ತು ಮತ್ತು ನಟನೆಯ ಆಳವೇ ಕಾರಣವಂತೆ.

ಅರ್ಚನಾ ಅನಂತವೇಲು ಅವರದ್ದು ದೃವಂತ್ ತಾಯಿಯ ಪಾತ್ರ. ಲಕ್ಷ್ಮಿಯ ತಾಯಿಯಾಗಿ ವಾಣಿಶ್ರೀ ಮತ್ತು ತಂದೆಯಾಗಿ ಎನ್.ಟಿ. ರಾಮಸ್ವಾಮಿ ನಟಿಸುತ್ತಿದ್ದಾರೆ. ಧರಣಿ ಜಿ. ರಮೇಶ್ ನಿರ್ದೇಶಿಸುತ್ತಿರುವ ಈ ಧಾರಾವಾಹಿಗೆ ಸಿ. ನಾಗರಾಜ್ ಅವರ ಛಾಯಾಗ್ರಹಣವಿದೆ. ಶ್ರೀಧರ್ ವಿ. ಸಂಭ್ರಮ್ ಸಂಗೀತ ನೀಡಿದ್ದು, ಕೆ. ಕಲ್ಯಾಣ್ ಸಾಹಿತ್ಯ ಬರೆದಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಜ. 22ರಿಂದ ಸೋಮವಾರದಿಂದ ಶನಿವಾರದವರೆಗೆ ಸಂಜೆ 7.30ಕ್ಕೆ ಈ ಧಾರಾವಾಹಿ ಪ್ರಸಾರವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry