‘ಜೆಡಿಎಸ್‌ನಿಂದ ಮಾತ್ರ ಜನರಿಗೆ ಅನುಕೂಲ’

7
ಜೆಡಿಎಸ್‌ಗೆ ಸೇರ್ಪಡೆಗೊಂಡು ನಗರಕ್ಕೆ ವಾಪಸಾದ ಆನಂದ ಅಸ್ನೋಟಿಕ್‌

‘ಜೆಡಿಎಸ್‌ನಿಂದ ಮಾತ್ರ ಜನರಿಗೆ ಅನುಕೂಲ’

Published:
Updated:

ಕಾರವಾರ: ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರ ಬೆಂಗಳೂರಿನ ನಿವಾಸದಲ್ಲಿ ಜ.15ರಂದು ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡು ನಗರಕ್ಕೆ ವಾಪಸಾದ ಮುಖಂಡ ಆನಂದ ಅಸ್ನೋಟಿಕರ್ ಅವರನ್ನು ಬೆಂಬಲಿಗರು ಬುಧವಾರ ಅದ್ಧೂರಿಯಾಗಿ ಸ್ವಾಗತಿಸಿದರು.

ಬೆಂಗಳೂರಿನಿಂದ ವಿಮಾನದಲ್ಲಿ ಪಣಜಿಗೆ ಬಂದು ಅಲ್ಲಿಂದ ಕಾರಿನಲ್ಲಿ ಕರ್ನಾಟಕ– ಗೋವಾ ಗಡಿ ಪೋಳೆಂಗೆ ಬಂದ ಅವರಿಗೆ ಅಭಿಮಾನಿಗಳು ಮತ್ತು ಜೆಡಿಎಸ್ ಕಾರ್ಯಕರ್ತರು, ಹಾರ ಹಾಕಿ ಶುಭಾಶಯ ಕೋರಿದರು. ಪಟಾಕಿ ಸಿಡಿಸಿ ಜೈಕಾರ ಕೂಗಿದರು.

ಈ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಆನಂದ್ ಅಸ್ನೋಟಿಕರ್, ‘ಜಿಲ್ಲೆಯಲ್ಲಿ ಜೆಡಿಎಸ್ ಬಲವರ್ಧನೆ ಆಗಲಿದೆ. ವಿಧಾನಸಭೆಯ ಆರು ಕ್ಷೇತ್ರಗಳ ಪೈಕಿ ಐದರಲ್ಲಿ ಪಕ್ಷ ಗೆಲುವು ಸಾಧಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಈ ಭಾಗದ ಜನರು ಮೀನುಗಾರಿಕಾ ಉತ್ಪನ್ನಗಳ ಮಾರುಕಟ್ಟೆಗೆ ಗೋವಾ ರಾಜ್ಯವನ್ನೇ ಅವಲಂಬಿಸಬೇಕಾದ ಅನಿವಾರ್ಯ ಇದೆ. ನಮ್ಮ ರಾಜ್ಯದ ಕರಾವಳಿಯಲ್ಲಿ ಇರುವ ಸಂಪನ್ಮೂಲಗಳ ಬಳಕೆ ಮಾಡಿಕೊಂಡರೆ ಸ್ಥಳೀಯರಿಗೆ ಅನುಕೂಲವಾಗಲಿದೆ. ಇನ್ನಷ್ಟು ಬಂದರುಗಳ ನಿರ್ಮಾಣದಿಂದ ಇಲ್ಲಿನ ಜನರಿಗೆ ಪ್ರಯೋಜನವಾಗಲಿದೆ. ಈ ಬಗ್ಗೆ ಜಿಲ್ಲೆಯತ್ತ ಯಾವ ಮುಖ್ಯಮಂತ್ರಿಯೂ ಕಣ್ಣೆತ್ತಿ ನೋಡಿಲ್ಲ. ಜನರಿಗೆ ಅನುಕೂಲ ಮಾಡಿಕೊಡಲು ಪ್ರಾದೇಶಿಕ ಪಕ್ಷ ಜೆಡಿಎಸ್‌ನಿಂದ ಮಾತ್ರ ಸಾಧ್ಯ’ ಎಂದು ಹೇಳಿದರು.

‘ಜೆಡಿಎಸ್‌ನದ್ದು ಧರ್ಮಾಧಾರಿತ ರಾಜಕಾರಣವಲ್ಲ. ಅಭಿವೃದ್ಧಿ ಬಿಟ್ಟು ಬೇರೆ ವಿಚಾರ ಪಕ್ಷದ ಮುಂದೆ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪುರುಷೋತ್ತಮ ಸಾವಂತ, ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಅಜಿತ್ ಪೋಕಳೆ, ಮಹಿಳಾ ಘಟಕದ ಅಧ್ಯಕ್ಷೆ ಸ್ವಾತಿ ಕಲ್ಕುಟುಕರ್, ಮುಖಂಡರಾದ ಖಲೀಲುಲ್ಲಾ, ರಾಘು ನಾಯ್ಕ, ಪ್ರದೀಪ್ ಶೇಜವಾಡ್ಕರ್, ಆರ್.ಜಿ.ನಾಯ್ಕ ಹಾಗೂ ನೂರಾರು ಬೆಂಬಲಿಗರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry