ಸಮಯದ ಜತೆ ಸವಾಲಿನ ಕಥೆ

7

ಸಮಯದ ಜತೆ ಸವಾಲಿನ ಕಥೆ

Published:
Updated:
ಸಮಯದ ಜತೆ ಸವಾಲಿನ ಕಥೆ

‘ಶೀರ್ಷಿಕೆಯಲ್ಲಿಯಷ್ಟೇ ಅಲ್ಲ, ಕಥೆ, ಪಾತ್ರಗಳು, ನಿರೂಪಣೆ ಎಲ್ಲದರಲ್ಲಿಯೂ ಇದು ಭಿನ್ನ ಚಿತ್ರ’ ಎಂದು ಹೇಳಿಕೊಂಡೇ ಬಂದಿರುವ ‘ಮೂರು ಗಂಟೆ ಮೂವತ್‌ ದಿನ ಮೂವತ್ ಸೆಕೆಂಡ್‌’, ಈಗ ತೆರೆಯ ಮೇಲಿನ ಅಗ್ನಿಪರೀಕ್ಷೆಯನ್ನು ಹಾಯಲು ಸಜ್ಜಾಗಿದೆ. ಇದೇ ಶುಕ್ರವಾರದಂದು (ಜ. 19) ಚಿತ್ರ ಬಿಡುಗಡೆಯಾಗುತ್ತಿದೆ ಎಂಬುದನ್ನು ಹೇಳಲಿಕ್ಕಾಗಿಯೇ ಚಿತ್ರತಂಡ ಪತ್ರಿಕಾಗೋಷ್ಠಿ ಕರೆದಿತ್ತು.

ನಿರ್ದೇಶಕ ಜಿ.ಕೆ. ಮಧುಸೂಧನ್‌ ಅವರಿಗೆ ಇದು ಮೊದಲ ಸಿನಿಮಾ. ‘ಆದರೆ ನನಗೆ ಇದು ಮೊದಲ ಸಿನಿಮಾ ಎಂಬ ಭಾವನೆಯೇ ಬರದ ಹಾಗೆ ಇಡೀ ತಂಡ ಸಹಕಾರ ನೀಡಿದೆ. ಇದು ಸಾಂಪ್ರದಾಯಿಕ ಮಾದರಿಯ ಕಥೆ ಅಲ್ಲ. ಪ್ರತಿ ಪಾತ್ರ, ಪ್ರತಿ ಸನ್ನಿವೇಶಗಳೂ ಹೊಸತಾಗಿದ್ದವು, ಹೊಸ ರೀತಿಯ ಸವಾಲುಗಳನ್ನು ಕೊಡುತ್ತಿದ್ದವು. ಯಾವುದೇ ರೆಫರೆನ್ಸ್‌ ಅಥವಾ ಇಮೇಜ್‌ನ ಬೆನ್ನಿಗೆ ಬೀಳದೆ ಮಾಡಿದ ಸಿನಿಮಾ ಇದು. ಪ್ರೇಕ್ಷಕರು ಇದನ್ನು ಪ್ರೋತ್ಸಾಹಿಸುತ್ತಾರೆ ಎಂಬ ನಂಬಿಕೆ ಇದೆ’ ಎಂದರು ಮಧುಸೂಧನ್‌.

ದೇವರಾಜ್‌ ಅವರಂಥ ಹಿರಿಯ ನಟನಿಗೂ ಈ ಚಿತ್ರದಲ್ಲಿನ ಪಾತ್ರ ಸವಾಲಿನದು ಎನಿಸಿರುವುದು ವಿಶೇಷ. ‘ಒಬ್ಬ ನಟ ತನ್ನ ಬದುಕಿನಲ್ಲಿ ಸವಾಲಿನ ಪಾತ್ರಗಳಿಗಾಗಿ ಕಾಯುತ್ತಾ ಇರುತ್ತಾನೆ. ಈ ಚಿತ್ರದಲ್ಲಿ ನಾನು ನಿರ್ವಹಿಸಿರುವುದೂ ಅಂಥದ್ದೇ ಪಾತ್ರ. ಎಷ್ಟು ಹೊತ್ತು ತೆರೆಯ ಮೇಲೆ ಕಾಣಿಸಿಕೊಳ್ಳುತ್ತೇನೆ ಎನ್ನುವುದು ನನಗೆ ಮುಖ್ಯವಲ್ಲ, ಆದರೆ ಇಡೀ ಕಥೆಯಲ್ಲಿ ಆ ಪಾತ್ರಕ್ಕೆ ಇರುವ ಮಹತ್ವ ಮತ್ತು ನನ್ನೊಳಗಿನ ನಟನಿಗೆ ಯಾವ ರೀತಿಯ ಸವಾಲಿನ ಪಾತ್ರ ಅದು ಎನ್ನುವುದು ನನಗೆ ಮುಖ್ಯ. ಆದ್ದರಿಂದಲೇ ಈ ಅವಕಾಶ ಕೊಟ್ಟಿದ್ದಕ್ಕಾಗಿ ನಿರ್ದೇಶಕರಿಗೆ ಕೃತಜ್ಞನಾಗಿದ್ದೇನೆ’ ಎಂದರು ದೇವರಾಜ್‌. ದೇವರಾಜ್‌ ಅವರ ಸಂಗಾತಿಯಾಗಿ ಸುಧಾರಾಣಿ ನಟಿಸಿದ್ದಾರೆ.

ಈ ಚಿತ್ರದಲ್ಲಿ ಲಾಯರ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅರುಣ್‌ ಗೌಡ, ಈ ಪಾತ್ರಕ್ಕಾಗಿ ವಿಶೇಷ ತಯಾರಿ ನಡೆಸಿದ್ದಾರೆ. ‘ಕ್ಲಾಸ್‌, ಮಾಸ್‌, ಆರ್ಟ್‌ ಎಲ್ಲ ಅಂಶಗಳೂ ಸೇರಿ ರೂಪಿತಗೊಂಡಿರುವ ಸಿನಿಮಾ ಇದು. ನಿರ್ಮಾಪಕರು ತುಂಬ ಮುತುವರ್ಜಿ ವಹಿಸಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಸಿನಿಮಾದ ಬಗ್ಗೆ ಜನರಿಗೆ ಸುದ್ದಿ ತಲುಪಿಸುವ ಯಾವ ಸಣ್ಣ ಅವಕಾಶವನ್ನೂ ಬಿಟ್ಟಿಲ್ಲ’ ಎಂದು ಅವರು ಹೇಳಿದರು.

ಚಿತ್ರದಲ್ಲಿನ ನಾಲ್ಕು ಹಾಡುಗಳಿಗೆ ನಿರ್ದೇಶಕರೇ ಸಾಹಿತ್ಯ ಬರೆದಿದ್ದಾರೆ.

‘ಸಂತೋಷ ಮತ್ತು ಆತಂಕ ಎರಡೂ ಒಟ್ಟೊಟ್ಟಿಗೇ ಆಗುತ್ತಿದೆ. ಇಡೀ ಚಿತ್ರತಂಡದ ಜತೆಗೆ ಕೆಲಸ ಮಾಡಿದ್ದು ನನಗೆ ಅವಿಸ್ಮರಣೀಯ ಘಟನೆ’ ಎಂದು ಚುಟುಕಾಗಿ ಹೇಳಿ ಮಾತು ಮುಗಿಸಿದರು ನಾಯಕಿ ಕಾವ್ಯಾ ಶೆಟ್ಟಿ.

ಕೂದವಳ್ಳಿ ಚಂದ್ರಶೇಖರ್‌, ಜಯಲಕ್ಷ್ಮಿ ಪಾಟೀಲ, ಸುಂದರ್‌, ಯಮುನಾ, ಸುಧಾರಾಣಿ,  ಅವರಂಥ ಹಿರಿಯ ಕಲಾವಿದರು ತಾರಾಗಣದಲ್ಲಿದ್ದಾರೆ. ಶ್ರೀಧರ್‌ ವಿ. ಸಂಭ್ರಮ್‌ ಸಂಗೀತ ಸಂಯೋಜನೆ, ಶ್ರೀನಿವಾಸ ರಾಮಯ್ಯ ಛಾಯಾಗ್ರಹಣ ಈ ಚಿತ್ರಕ್ಕಿದೆ.→v

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry