ಜೆಡಿಎಸ್ ಶಾಸಕರಾದ ಮಾನಪ್ಪ ವಜ್ಜಲ್, ಶಿವರಾಜ್ ಪಾಟೀಲ್ ಬಿಜೆಪಿಗೆ ಸೇರ್ಪಡೆ

7

ಜೆಡಿಎಸ್ ಶಾಸಕರಾದ ಮಾನಪ್ಪ ವಜ್ಜಲ್, ಶಿವರಾಜ್ ಪಾಟೀಲ್ ಬಿಜೆಪಿಗೆ ಸೇರ್ಪಡೆ

Published:
Updated:
ಜೆಡಿಎಸ್ ಶಾಸಕರಾದ ಮಾನಪ್ಪ ವಜ್ಜಲ್, ಶಿವರಾಜ್ ಪಾಟೀಲ್ ಬಿಜೆಪಿಗೆ ಸೇರ್ಪಡೆ

ಬೆಂಗಳೂರು: ಜೆಡಿಎಸ್‌ ಶಾಸಕರಾದ ಮಾನಪ್ಪ ವಜ್ಜಲ(ಲಿಂಗಸುಗೂರು) ಮತ್ತು ಡಾ. ಶಿವರಾಜ ಪಾಟೀಲ (ರಾಯಚೂರು ನಗರ) ಗುರುವಾರ ಬಿಜೆಪಿಗೆ ಸೇರ್ಪಡೆಯಾದರು.

ಬಿಜೆಪಿ ಕಚೇರಿಯಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತಕುಮಾರ್, ಪೀಯೂಷ್ ಗೋಯಲ್, ಪಕ್ಷದ ರಾಜ್ಯ ಉಸ್ತುವಾರಿ ಮುರುಳೀಧರ ರಾವ್, ಶಾಸಕ ಆರ್. ಅಶೋಕ್ ಸಮ್ಮುಖದಲ್ಲಿ ಬಿಜೆಪಿ ಸೇರಿಕೊಂಡರು.

2013ರ ಚುನಾವಣೆಯಲ್ಲಿ ಗೌರಿ ಬೀದನೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ ಜೈಪಾಲರೆಡ್ಡಿ, ಅಲ್ಲಿನ ಬ್ಯಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್‌ಕುಮಾರ್, ಕೆಪಿಸಿಸಿ ಸದಸ್ಯ ಶಂಕರಪ್ಪ ಕೂಡ ಬಿಜೆಪಿ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಮಾತನಾಡಿ ಬಿ.ಎಸ್. ಯಡಿಯೂರಪ್ಪ, ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಇರುವುದಕ್ಕೆ ಇದು ಸಾಕ್ಷಿ. ಕಾಂಗ್ರೆಸ್ ಮತ್ತು ಜೆಡಿಎಸ್‌ ಬಿಟ್ಟು ಬಿಜೆಪಿ ಸೇರಲು ಇಚ್ಛಿಸಿರುವ ಶಾಸಕರ ದೊಡ್ಡ ಪಟ್ಟಿಯೇ ಇದೆ. ಪ್ರಾರಂಭಿಕವಾಗಿ ಇಬ್ಬರು ಶಾಸಕರು ಪಕ್ಷ ಸೇರಿದ್ದಾರೆ ಎಂದರು.

ಕೇಂದ್ರ ಸಚಿವ ಪೀಯೂಷ್ ಗೋಯಲ್ ಮಾತನಾಡಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡರನ್ನು ಭೇಟಿ ಮಾಡಿದ್ದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದರು.

‘ರೈಲ್ವೆ ಯೋಜನೆಗಳ ಬಗ್ಗೆ ಮನವಿ ಸಲ್ಲಿಸಲು ದೇವೇಗೌಡರು ಬಂದಿದ್ದರು. ದೇಶದ ಪ್ರಧಾನಿಯಾಗಿದ್ದವರು ಮತ್ತು ಹಿರಿಯ ರಾಜಕಾರಣಿ ಎಂಬ ಕಾರಣಕ್ಕೆ ನಾನೇ ಅವರನ್ನು ಭೇಟಿ ಮಾಡಿ ಮನವಿ ಸ್ವೀಕರಿಸಿದ್ದೇನೆ. ಇದು ನಮ್ಮ ಸಂಸ್ಕೃತಿ ಮತ್ತು ಹಿರಿಯರಿಗೆ ನೀಡುವ ಗೌರವ’ ಎಂದು ಹೇಳಿದರು.

ಜೆಡಿಎಸ್‌ ಅಸ್ತಿತ್ವ ಒಂದು ಪ್ರದೇಶಕ್ಕೆ ಸೀಮಿತವಾಗಿದೆ. ಬಿಜೆಪಿ ವಿಶ್ವದಲ್ಲೆ ದೊಡ್ಡ ಪಕ್ಷವಾಗಿದ್ದು, ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಳ್ಳವ ಉದ್ದೇಶ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ: ಮಾನಪ್ಪ ವಜ್ಜಲ ಮತ್ತು ಡಾ. ಶಿವರಾಜ ಪಾಟೀಲ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ರಾಜೀನಾಮೆ ನೀಡಲು ಬಂದಾಗ ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ತಮ್ಮ ಕಚೇರಿಯಲ್ಲಿ ಇರಲಿಲ್ಲ. ಹೀಗಾಗಿ ವಿಧಾನಸಭೆ ಕಾರ್ಯದರ್ಶಿ ಎನ್. ಮೂರ್ತಿಗೆ ರಾಜೀನಾಮೆ ಪತ್ರ ನೀಡಿದರು.

‘ನಿಯಮಾವಳಿ ಪ್ರಕಾರ ಶಾಸಕರು ನೇರವಾಗಿ ಸಭಾಧ್ಯಕ್ಷರಿಗೆ ರಾಜೀನಾಮೆ ನೀಡಬೇಕು. ಆದರೆ, ಸಭಾಧ್ಯಕ್ಷರೇ ನನ್ನ ಬಳಿ ಕೊಟ್ಟು ಹೋಗುವಂತೆ ತಿಳಿಸಿದ್ದಾಗಿ ಶಾಸಕರು ಹೇಳಿದ್ದರಿಂದ ರಾಜೀನಾಮೆ ಪತ್ರಗಳನ್ನು ಪಡೆದಿದ್ದೇನೆ’ ಎಂದು ಮೂರ್ತಿ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾನಪ್ಪ ವಜ್ಜಲ, ‘ಕಳೆದ ಒಂದು ವರ್ಷದಿಂದ ಸಾಕಷ್ಟು ನೋವು ಅನುಭವಿಸಿದ್ದೇವೆ. ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿ ಎಂದು ಈಗಾಗಲೇ ಕೆಲವರು ಘೋಷಿಸಿಕೊಂಡಿದ್ದಾರೆ. ಈ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹೀಗಾಗಿ ಶಾಸಕ ಸ್ಥಾನ ಹಾಗೂ ಜೆಡಿಎಸ್‍ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತೇನೆ’ ಎಂದರು.

ಶಿವರಾಜ ಪಾಟೀಲ ಮಾತನಾಡಿ, ‘ಜೆಡಿಎಸ್‍ನಲ್ಲಿ ನಮ್ಮ ಮಾತಿಗೆ ಮನ್ನಣೆ ಇರಲಿಲ್ಲ. ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಗಮನಕ್ಕೆ ತಂದರೂ ಯಾವುದೇ ಬದಲಾವಣೆ ಆಗಲಿಲ್ಲ. ಇದರಿಂದ ಬೇಸತ್ತು ಪಕ್ಷ ತೊರೆದಿದ್ದೇವೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry