ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಐ ಅಮಾನತಿಗೆ ವಕೀಲರ ಧರಣಿ

ನ್ಯಾಯಾಲಯ ಕಲಾಪ ಬಹಿಷ್ಕಾರ: ಇಲಾಖೆ ವಿರುದ್ಧ ಆಕ್ರೋಶ
Last Updated 18 ಜನವರಿ 2018, 11:11 IST
ಅಕ್ಷರ ಗಾತ್ರ

ಕೋಲಾರ: ಪ್ರಕರಣವೊಂದರ ಆರೋಪಿಗಳನ್ನು ನ್ಯಾಯಾಲಯ ಆವರಣದಿಂದ ಎಳೆದೊಯ್ದು ದೌರ್ಜನ್ಯ ಎಸಗಿದ ಜಿಲ್ಲೆಯ ಗೌನಿಪಲ್ಲಿ ಠಾಣೆ ಎಸ್‌ಐ ವಿಕಾಸ್‌ಗೌಡ ಅವರನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿ ಜಿಲ್ಲಾ ವಕೀಲರ ಸಂಘದ ಸದಸ್ಯರು ಕಲಾಪ ಬಹಿಷ್ಕರಿಸಿ ನಗರದಲ್ಲಿ ಬುಧವಾರ ಧರಣಿ ನಡೆಸಿದರು.

ಜಿಲ್ಲಾ ನ್ಯಾಯಾಲಯ ಸಮುಚ್ಚಯದಿಂದ ಮೆಕ್ಕೆ ವೃತ್ತದವರೆಗೆ ಮೆರವಣಿಗೆ ಬಂದ ವಕೀಲರು ಮಾನವ ಸರಪಳಿ ರಚಿಸಿ ವಿಕಾಸ್‌ಗೌಡ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಪ್ರಕರಣವೊಂದರ ಆರೋಪಿಗಳಾದ ಸೀನಮ್ಮ ಮತ್ತು ಬಚ್ಚನ್ನ ಎಂಬುವರು ಜಾಮೀನು ಪಡೆಯಲು ವಕೀಲರೊಂದಿಗೆ ಇತ್ತೀಚೆಗೆ ಶ್ರೀನಿವಾಸಪುರದ ನ್ಯಾಯಾಲಯಕ್ಕೆ ಬಂದಿದ್ದರು. ಆಗ ಅಲ್ಲಿ ಮಫ್ತಿಯಲ್ಲಿದ್ದ ಎಸ್‌ಐ ವಿಕಾಸ್‌ಗೌಡ ಆ ಆರೋಪಿಗಳನ್ನು ಬಲವಂತವಾಗಿ ಖಾಸಗಿ ವಾಹನದಲ್ಲಿ ಎಳೆದೊಯ್ದು ಹಲ್ಲೆ ನಡೆಸಿದ್ದಾರೆ. ಅಲ್ಲದೇ, ಈ ದೌರ್ಜನ್ಯ ಪ್ರಶ್ನಿಸಿದ ವಕೀಲರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ’ ಎಂದು ಸಂಘದ ಅಧ್ಯಕ್ಷ ಟಿ.ಆರ್.ಜಯರಾಮ್‌ ದೂರಿದರು.

ಇತ್ತೀಚಿನ ದಿನಗಳಲ್ಲಿ ಪೊಲೀಸರು ದರ್ಪ ಹೆಚ್ಚುತ್ತಿದೆ. ಕಾನೂನು ರಕ್ಷಕರಾದ ಪೊಲೀಸರೇ ಕಾನೂನು ಉಲ್ಲಂಘಿಸುತ್ತಿದ್ದಾರೆ. ಸರ್ವಾಧಿಕಾರಿಗಳಂತೆ ವರ್ತಿಸುತ್ತಿರುವ ಪೊಲೀಸರು ಕರ್ತವ್ಯದ ಸೋಗಿನಲ್ಲಿ ಅಮಾಯಕರನ್ನು ಶೋಷಿಸುತ್ತಿದ್ದಾರೆ. ಈ ಬಗ್ಗೆ ನ್ಯಾಯಾಲಯಕ್ಕೆ ಸಾಕಷ್ಟು ದೂರು ಬಂದಿವೆ ಎಂದು ಹೇಳಿದರು.

ರಕ್ಷಿಸುವ ಯತ್ನ: ವಿಕಾಸ್‌ಗೌಡ ಅವರ ದೌರ್ಜನ್ಯದ ಸಂಬಂಧ ಶ್ರೀನಿವಾಸಪುರ ತಾಲ್ಲೂಕು ವಕೀಲರ ಸಂಘದ ಸದಸ್ಯರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಹಿರಿಯ ಅಧಿಕಾರಿಗಳು ತಪ್ಪಿತಸ್ಥ ವಿಕಾಸ್‌ಗೌಡ ಅವರನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆ ಎಂದು ಧರಣಿನಿರತರು ಆರೋಪಿಸಿದರು.

ಪೊಲೀಸ್‌ ಸಿಬ್ಬಂದಿಗೆ ಕಾನೂನು ತರಬೇತಿ ನೀಡಬೇಕು. ವಿಕಾಸ್‌ಗೌಡರನ್ನು ಅಮಾನತು ಮಾಡಬೇಕು. ಜತೆಗೆ ಪ್ರಕರಣದ ಬಗ್ಗೆ ಹಿರಿಯ ಅಧಿಕಾರಿಗಳಿಂದ ತನಿಖೆ ಮಾಡಿಸಬೇಕು. ಇಲ್ಲದಿದ್ದರೆ ಅನಿರ್ದಿಷ್ಟಾವಧಿವರೆಗೆ ನ್ಯಾಯಾಲಯ ಕಲಾಪ ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಧರಣಿನಿರತರನ್ನು ಭೇಟಿಯಾದ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎ.ರಾಜೀವ್, ‘ಘಟನೆಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇವೆ. ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಖಂಡಿತ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಭರವಸೆ ನೀಡಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಚಂದ್ರಶೇಖರ್ ರೆಡ್ಡಿ, ಕಾರ್ಯದರ್ಶಿ ಎನ್.ಡಿ.ಶ್ರೀನಿವಾಸ್, ವಕೀಲರಾದ ಪಿ.ನಾರಾಯಣಸ್ವಾಮಿ, ಶಿವಣ್ಣ, ಎ.ವಿ.ಆನಂದ್, ವೆಂಕಟರಾಮ್, ಬೈರೇಗೌಡ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT