ಸಿನಿಮೋದ್ಯಮದ ಕಷ್ಟ ನಷ್ಟ

7

ಸಿನಿಮೋದ್ಯಮದ ಕಷ್ಟ ನಷ್ಟ

Published:
Updated:
ಸಿನಿಮೋದ್ಯಮದ ಕಷ್ಟ ನಷ್ಟ

‘ಸಿನಿಮಾ ಎಂಬುದು ಜೂಜು ಇದ್ದಂತೆ. ವೀಕ್ಷಕರು ಯಾವಾಗ ಯಾವ ಬಗೆಯ ಸಿನಿಮಾ ಇಷ್ಟಪಡುತ್ತಾರೆ ಎಂಬುದನ್ನು ಹೇಳಲು ಸಾಧ್ಯವಿಲ್ಲ...’ ಎಂಬ ಮಾತುಗಳು ಗಾಂಧಿನಗರದ ಕಡೆಯಿಂದ ಆಗಾಗ ಕೇಳಿಬರುತ್ತ ಇರುತ್ತವೆ. ‘ಯಾವ ನಂಬಿಕೆ ಆಧರಿಸಿ ನಿರ್ಮಾಪಕರು ಸಿನಿಮಾ ಮೇಲೆ ಕೋಟಿಗಟ್ಟಲೆ ಹಣ ಸುರಿಯುತ್ತಾರೆ’ ಎಂಬ ಪ್ರಶ್ನೆ ಇಂತಹ ಮಾತುಗಳನ್ನು ಕೇಳಿದಾಗಲೆಲ್ಲ ಮೂಡುವುದು ಸಹಜ.

ಆದರೆ ಸಿನಿಮಾ ಮೇಲೆ ಹಣ ಹೂಡಿಕೆ ಮಾಡುವುದು ಜೂಜಾಡಿದಂತೆ ಅಲ್ಲ. ಸಿನಿಮಾ ಎಂಬುದು ಪಕ್ಕಾ ಉದ್ಯಮ. ಎಲ್ಲ ಉದ್ಯಮಗಳಲ್ಲಿ ಇರುವಂತೆ ಸಿನಿಮಾದಲ್ಲೂ ಲಾಭ–ನಷ್ಟ ಇರುತ್ತದೆಯಾದರೂ, ಲೆಕ್ಕಾಚಾರದಿಂದ ಹಣ ಹೂಡಿಕೆ ಮಾಡಿದರೆ ಯಶಸ್ಸು ಸಿಕ್ಕೇ ಸಿಗುತ್ತದೆ ಎಂದು ನಂಬಿರುವ ನಿರ್ಮಾಪಕರೂ ಇದ್ದಾರೆ.

‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಕಿರಿಕ್ ಪಾರ್ಟಿ’ಯಂತಹ ಹಿಟ್ ಚಿತ್ರಗಳಿಗೆ ಹಣ ಹೂಡಿಕೆ ಮಾಡಿದವರು ಪುಷ್ಕರ ಮಲ್ಲಿಕಾರ್ಜುನಯ್ಯ. ಇವರು ಕಾಲೇಜಿನಲ್ಲಿ ಓದಿದ ವಿಷಯಕ್ಕೂ, ಈಗ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿರುವುದಕ್ಕೂ ನೇರಾನೇರ ಸಂಬಂಧ ಕಾಣುವುದಿಲ್ಲ. ‘ಸಿನಿಮಾ ಎಂಬುದು ನನ್ನ ಪಾಲಿಗೆ ಪಕ್ಕಾ ಉದ್ಯಮ’ ಎನ್ನುವ ಮನಸ್ಥಿತಿ ಇವರದ್ದು.

ಪುಷ್ಕರ ನಿರ್ಮಿಸಿರುವ, ಸಾದ್ ಖಾನ್ ನಿರ್ದೇಶನದ ಸಿನಿಮಾ ‘ಹಂಬಲ್ ಪೊಲಿಟಿಷಿಯನ್ ನೊಗ್‌ರಾಜ್’ ನಿರ್ಮಾಪಕರ ಪಾಲಿಗೆ ಖುಷಿ ತಂದುಕೊಟ್ಟಿದೆ. ‘ನೀವು ಹಣ ಹೂಡಿಕೆ ಮಾಡುವ ಸಿನಿಮಾ ಹೇಗಿರಬೇಕು ಎಂದು ಬಯಸುತ್ತೀರಿ?’ ಎಂದು ‘ಚಂದನವನ’ ಮಲ್ಲಿಕಾರ್ಜುನಯ್ಯ ಅವರಲ್ಲಿ ಪ್ರಶ್ನಿಸಿತು.

‘ನಾವು ನಿರ್ಮಾಣ ಮಾಡುವ ಸಿನಿಮಾಗಳು ಉತ್ತಮ ಕಥಾಹಂದರ ಹೊಂದಿರಬೇಕು, ಅವು ಸೆನ್ಸಿಬಲ್ ಅನ್ನಿಸಬೇಕು ಎಂಬುದೇ ಬಹುದೊಡ್ಡ ಗುರಿ. ಕಮರ್ಷಿಯಲ್, ಮಾಸ್‌ ಸಿನಿಮಾ ಮಾಡಬೇಕು, ಹಣ ಮಾಡಬೇಕು ಎಂಬ ಉದ್ದೇಶ ಮಾತ್ರ ಇಟ್ಟುಕೊಂಡು ಹಣ ಹಾಕಲು ಮುಂದಾದರೆ ನಾವು ಸಿನಿಮಾ ಹೂರಣದ ಬಗ್ಗೆ ಗಮನ ನೀಡುವುದು ಕಷ್ಟವಾಗುತ್ತದೆ. ಜನರ ಅಭಿರುಚಿಯ ಬಗ್ಗೆ ತುಸು ಅಧ್ಯಯನ ನಡೆಸಿ ಹಣ ಹೂಡಿಕೆ ಮಾಡುತ್ತೇವೆ’ ಎನ್ನುತ್ತಾರೆ ಅವರು.

‘ಕೋಟಿಗಟ್ಟಲೆ ಹಣ ಹೂಡಿಕೆ ಮಾಡುತ್ತೇವೆಯಾದ ಕಾರಣ ಲಾಭ ಪಡೆಯುವುದೂ ಒಂದು ಉದ್ದೇಶ. ಸಿನಿಮಾವನ್ನು ಒಂದು ವೃತ್ತಿಯ ರೀತಿಯಲ್ಲೇ ಪರಿಗಣಿಸಬೇಕು. ಐ.ಟಿ. ವೃತ್ತಿಪರ ಏನೆಲ್ಲ ಲೆಕ್ಕಾಚಾರ ಹಾಕಿ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳುತ್ತಾನೋ ಅದೇ ರೀತಿ ಸಿನಿಮಾ ಕೂಡ. ಸೃಜನಶೀಲತೆ ಮತ್ತು ಮಾರುಕಟ್ಟೆ ತಂತ್ರಗಾರಿಕೆ ಬೆರೆಸಿದ ಹದವಾದ ಪಾಕ ಸಿದ್ಧಪಡಿಸಿದರೆ, ಫಲಿತಾಂಶ ಹೆಚ್ಚು ಉತ್ತಮವಾಗಿರುತ್ತದೆ’ ಎಂದು ವಿವರಿಸಿದರು.

ಈ ಉದ್ಯಮದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರೆ ಇಲ್ಲಿ ಬೆಳವಣಿಗೆಯನ್ನೂ ಕಾಣಬಹುದು, ಹಣಕಾಸಿನ ಸ್ಥಿರತೆಯನ್ನೂ ಸಾಧಿಸಬಹುದು ಎಂಬುದು ಮಲ್ಲಿಕಾರ್ಜುನಯ್ಯ ಅವರ ಅನುಭವ.

*

ರಕ್ಷಿತ್ ಹೇಳುವುದೇನು?

‘ಕಿರಿಕ್ ಪಾರ್ಟಿ’ ಎಂಬ ಸೂಪರ್ ಹಿಟ್ ಚಿತ್ರದ ಮೂಲಕ ರಕ್ಷಿತ್ ಶೆಟ್ಟಿ ಅವರು ನಿರ್ಮಾಪಕ ಕೂಡ ಆದರು. ‘ಸಿನಿಮಾಕ್ಕೆ ಹಣ ಹೂಡುವಾಗ ಏನೆಲ್ಲ ಪರಿಶೀಲಿಸುತ್ತೀರಿ’ ಎಂದು ಅವರಲ್ಲಿ ಕೇಳಿದಾಗ, ‘ಸಿನಿಮಾ ಚೆನ್ನಾಗಿರಬೇಕು. ಅದಕ್ಕಾಗಿ ಅದರ ಚಿತ್ರಕಥೆ, ಕಥೆ ಹೇಗಿದೆ ಎಂಬುದನ್ನು ನೋಡುತ್ತೇನೆ. ಆ ಸಿನಿಮಾದಲ್ಲಿ ಕೆಲಸ ಮಾಡಲಿರುವ ತಂತ್ರಜ್ಞರು ಯಾರು ಎಂಬುದನ್ನೂ ಗಮನಿಸುತ್ತೇನೆ. ಕಥೆ, ಚಿತ್ರಕಥೆ, ತಂತ್ರಜ್ಞರ ತಂಡ ಚೆನ್ನಾಗಿದ್ದರೆ ಸಿನಿಮಾ ಚೆನ್ನಾಗಿ ಆಗುತ್ತದೆ’ ಎನ್ನುತ್ತಾರೆ ರಕ್ಷಿತ್.

ಇಷ್ಟೇ ಅಲ್ಲ, ರಕ್ಷಿತ್ ಅವರು ಇನ್ನೂ ಕೆಲವು ಅಂಶಗಳ ಬಗ್ಗೆಯೂ ಗಮನಹರಿಸುತ್ತಾರಂತೆ. ‘ಹಣ ಹೂಡಿದ ಸಿನಿಮಾ ಎಷ್ಟು ಹಣವನ್ನು ಮರಳಿ ತಂದುಕೊಡಬಹುದು, ಒಂದು ವೇಳೆ ಲಾಭ ಆಗದಿದ್ದರೆ ನಷ್ಟ ಎಷ್ಟರಮಟ್ಟಿಗೆ ಆಗಬಹುದು’ ಎಂಬ ಬಗ್ಗೆಯೂ ಅವರು ಲೆಕ್ಕಾಚಾರ ಹಾಕುತ್ತಾರಂತೆ. ‘ಎಲ್ಲವೂ ನಾವು ಅಂದುಕೊಂಡಂತೆಯೇ ಆಗುತ್ತದೆ ಎನ್ನಲು ಸಾಧ್ಯವಿಲ್ಲ. ಯಾವುದೂ ನಾವಂದುಕೊಂಡಂತೆ ಆಗದಿದ್ದರೆ ಏನು ಮಾಡಬೇಕು ಎಂಬ ಬಗ್ಗೆಯೂ ಆಲೋಚನೆ ಮಾಡಿರುತ್ತೇನೆ.

ಹಾಗೆಯೇ, ಎಷ್ಟರಮಟ್ಟಿಗಿನ ನಷ್ಟವನ್ನು ನಾನು ತಾಳಿಕೊಳ್ಳಬಹುದು ಎಂಬುದನ್ನು ಲೆಕ್ಕಹಾಕಿಯೇ ಬಂಡವಾಳ ಹೂಡಿಕೆ ಬಗ್ಗೆ ತೀರ್ಮಾನಿಸುತ್ತೇನೆ’ ಎಂದರು ರಕ್ಷಿತ್.

*

‘ಅಧ್ಯಯನ ಬೇಕು’

‘ಪ್ರತಿ ಸಿನಿಮಾಕ್ಕೂ ಅದರದ್ದೇ ಆದ ತಂತ್ರಗಾರಿಕೆ ಬೇಕಾಗುತ್ತದೆ. ನಿರ್ದಿಷ್ಟ ನಟನೊಬ್ಬನ ಸಿನಿಮಾಕ್ಕೆ ಎಷ್ಟರಮಟ್ಟಿಗೆ ಬಂಡವಾಳ ಹೂಡಿದರೆ ಸೂಕ್ತ ಎಂಬುದು ನಮಗೆ ಗೊತ್ತಿರುತ್ತದೆ. ಏಕೆಂದರೆ ಒಬ್ಬ ನಾಯಕನ ಸಿನಿಮಾಕ್ಕೆ ಯಾವ ಮೂಲದಿಂದ ಎಷ್ಟು ಬೇಡಿಕೆ ಬರುತ್ತದೆ ಎಂಬುದನ್ನು ಅಂದಾಜಿಸಿ, ಸಿನಿಮಾ ಬಜೆಟ್ ಸಿದ್ಧಪಡಿಸುತ್ತೇವೆ. ತಾರಾ ನಟರು ಇಲ್ಲದಂತಹ ಸಿನಿಮಾ ಮಾಡುವಾಗ, ಲುಕ್ಸಾನು ಆಗದಿದ್ದರೆ ಸಾಕು ಎನ್ನುವಷ್ಟು ಮಾತ್ರ ಬಂಡವಾಳ ಹೂಡಿಕೆ ಮಾಡಬೇಕಾಗುತ್ತದೆ. ಹೊಸ ಬಗೆಯ ಸಿನಿಮಾಗಳಿಗೆ ಒಮ್ಮೆಲೇ ಮೂರು–ನಾಲ್ಕು ಕೋಟಿ ರೂಪಾಯಿ ಹೂಡಿಕೆ ಮಾಡಲು ಆಗುವುದಿಲ್ಲ’ ಎನ್ನುವುದು ಮಲ್ಲಿಕಾರ್ಜುನಯ್ಯ ಅವರ ನಿಲುವು.

ರಕ್ಷಿತ್ ಮತ್ತು ಮಲ್ಲಿಕಾರ್ಜುನಯ್ಯ ಅವರಿಗಿಂತ ತುಸು ಭಿನ್ನವಾಗಿ ಆಲೋಚಿಸುತ್ತಾರೆ ನಿರ್ಮಾಪಕ ಕೆ.ಎ. ಸುರೇಶ್. ಇವರು ಹಣ ಹೂಡಿರುವ ‘ರಾಜು ಕನ್ನಡ ಮೀಡಿಯಂ’ ಚಿತ್ರ ಶುಕ್ರವಾರ (ಜನವರಿ 19) ತೆರೆಗೆ ಬರುತ್ತಿದೆ. ಸಿನಿಮಾ ನಿರ್ಮಾಣದ ಲೆಕ್ಕಾಚಾರಗಳ ಬಗ್ಗೆ ಸುರೇಶ್ ಅವರಲ್ಲಿ ಪ್ರಶ್ನಿಸಿದಾಗ, ‘ನಾನು ಮೊದಲು ಉತ್ತಮ ಕಥೆಯನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಆ ಕಥೆ ಜನರಿಗೆ ತಾಜಾ ಅನಿಸುತ್ತದೆಯಾ ಎಂಬುದನ್ನು ಪರಿಶೀಲಿಸುತ್ತೇನೆ. ನಂತರ, ಕಥೆ ಏನು ಕೇಳುತ್ತದೆಯೋ ಅದನ್ನೆಲ್ಲ ಮಾಡುತ್ತ ಹೋಗುತ್ತೇನೆ. ನಾನು ಸಿನಿಮಾ ನಿರ್ಮಾಣಕ್ಕೆ ಸೀಮಿತ ಬಜೆಟ್ ಹಾಕಿಕೊಳ್ಳುವುದಿಲ್ಲ’ ಎಂದು ವಿವರಿಸಿದರು.

‘ಸಿನಿಮಾ ಚೆನ್ನಾಗಿದ್ದರೆ ಹಣ ಬರುತ್ತದೆ. ಇಲ್ಲದಿದ್ದರೆ ಹಣ ಬರುವುದಿಲ್ಲ. ನಾನು ಇಂತಿಷ್ಟು ಹಣ ಹೂಡುತ್ತೇನೆ. ಅದಕ್ಕೆ ಪ್ರತಿಯಾಗಿ ಇಂತಿಷ್ಟು ಹಣ ಬರುತ್ತದೆ ಎಂದು ಎಲ್ಲ ಸಿನಿಮಾಗಳಿಗೂ ಹೇಳಲಾಗದು. ಕೆಲವು ತಾರಾ ನಟರ ಸಿನಿಮಾಗಳಿಗೆ ಮಾತ್ರ ಅಂತಹ ಲೆಕ್ಕಾಚಾರ ಮಾಡಬಹುದು, ಅಷ್ಟೇ. ನಾನು ಸಿನಿಮಾ ನಿರ್ಮಾಣದ ಮೊದಲು ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳೆರಡನ್ನೂ ಪರಿಗಣಿಸಿರುತ್ತೇನೆ’ ಎಂದರು ಸುರೇಶ್.

‘ಕನ್ನಡದಲ್ಲಿ ವರ್ಷಕ್ಕೆ 150ರಿಂದ 170 ಸಿನಿಮಾಗಳು ತೆರೆಗೆ ಬರುತ್ತಿವೆ. ಆದರೆ, ಇವುಗಳ ಪೈಕಿ ಲಾಭ ಮಾಡಿಕೊಳ್ಳುವ ಸಿನಿಮಾಗಳ ಪ್ರಮಾಣ ಶೇ 10ರಷ್ಟು ಮಾತ್ರ’ ಎಂದರು ನಿರ್ಮಾಪಕರೊಬ್ಬರು.

‘ನಮ್ಮ (ನಿರ್ಮಾಪಕನ) ಮಿತಿಗಳು ಏನು ಎಂಬುದನ್ನು ಅರ್ಥ ಮಾಡಿಕೊಂಡಿರಬೇಕು’ ಎನ್ನುವುದು ಸಿನಿಮಾ ನಿರ್ಮಾಣದ ಬಗ್ಗೆ ಮಲ್ಲಿಕಾರ್ಜುನಯ್ಯ ಹೇಳುವ ಕಿವಿಮಾತು. ‘ಲಾಭ, ನಷ್ಟಗಳು ಸಿನಿಮಾ ಉದ್ಯಮದ ಭಾಗ’ ಎನ್ನುತ್ತಾರೆ ಸುರೇಶ್.

*ಇದು ಪವನ್ ಕುಮಾರ್ ಫಾರ್ಮುಲಾ!

ಯಶಸ್ವಿ ಚಿತ್ರ ‘ಒಂದು ಮೊಟ್ಟೆಯ ಕಥೆ’ಗೆ ಪವನ್ ಕುಮಾರ್ ಹಣ ಹೂಡಿಕೆ ಮಾಡಿದ್ದರು. ಸಿನಿಮಾ ನಿರ್ಮಾಣದ ಬಗ್ಗೆ ಅವರಲ್ಲಿ ಪ್ರಶ್ನಿಸಿದಾಗ, ‘ನಾನು ಮೊದಲು ಗಮನಿಸುವುದು ಸಿನಿಮಾದ ಹೂರಣವನ್ನು. ಅದು ನನಗೆ ಇಷ್ಟವಾದರೆ, ಆ ಸಿನಿಮಾ ಜನರಿಗೆ ಇಷ್ಟವಾಗುತ್ತದೆಯಾ, ಇಲ್ಲವಾ ಎಂಬುದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಸಿನಿಮಾ ನಿರ್ಮಾಣದ ಕಡೆ ಹೆಜ್ಜೆ ಇಡುತ್ತೇವೆ. ಸಿನಿಮಾ ಮಾರ್ಕೆಟಿಂಗ್ ಹೇಗೆ, ವಿತರಣೆ ಹೇಗೆ ಎಂಬುದನ್ನೂ ನಂತರ ಆಲೋಚಿಸುತ್ತೇವೆ’ ಎಂದರು.

‘ನಾವು ಮಾಡಬೇಕಿತ್ತು ಎಂಬಂತಹ ಸಿನಿಮಾಗಳ ಜೊತೆ ನಮ್ಮನ್ನು ಗುರುತಿಸಿಕೊಂಡು, ಅದರ ನಿರ್ಮಾಣದಲ್ಲಿ ಹಣ ಹೂಡಿಕೆ ಮಾಡುವುದು ನಮ್ಮ ಕಂಪನಿಯ (ಪವನ್ ಕುಮಾರ್ ಸ್ಟುಡಿಯೋಸ್) ಉದ್ದೇಶ’ ಎಂದರು ಪವನ್ ಕುಮಾರ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry