ಹೊಸ ತಾಲ್ಲೂಕು ಗರಿಗೆದರಿದ ನಿರೀಕ್ಷೆಗಳು

7
ಐತಿಹಾಸಿಕ ಹಿನ್ನೆಲೆಯ ಕನಕಗಿರಿ ಕಿರೀಟಕ್ಕೊಂದು ಗರಿ, ಇಡೀ ಪ್ರದೇಶಕ್ಕೆ ಕಾಯಕಲ್ಪ, ನಿರೀಕ್ಷೆಗಳು ನೂರಾರು

ಹೊಸ ತಾಲ್ಲೂಕು ಗರಿಗೆದರಿದ ನಿರೀಕ್ಷೆಗಳು

Published:
Updated:
ಹೊಸ ತಾಲ್ಲೂಕು ಗರಿಗೆದರಿದ ನಿರೀಕ್ಷೆಗಳು

ಕನಕಗಿರಿ: 1978ರಲ್ಲಿಯೇ ಕನಕ ಗಿರಿಯು ವಿಧಾನಸಭಾ ಕ್ಷೇತ್ರದ ಸ್ಥಾನಮಾನ ಪಡೆದರೂ ತಾಲ್ಲೂಕಿನ ನೀರಾವರಿ ಪ್ರದೇಶವು ಗಂಗಾವತಿ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಕುಷ್ಟಗಿ, ಯಲಬುರ್ಗಾ ತಾಲ್ಲೂಕಿಗೆ ಸಿಗುವ ಸರ್ಕಾರದ ವಿವಿಧ ಸೌಲಭ್ಯಗಳಿಂದ ಈ ಪ್ರದೇಶವು ವಂಚಿತಗೊಂಡಿದೆ.

ಮಳೆ ಆಧರಿತ ಹಾಗೂ ಒಣಭೂಮಿ ಬೇಸಾಯ ಪ್ರದೇಶ ಹೊಂದಿರುವ ಕನಕಗಿರಿ ಜೊತೆ 80ಕ್ಕೂ ಹೆಚ್ಚು ಗ್ರಾಮಗಳು ವ್ಯಾವಹಾರಿಕ, ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ನಂಟು ಹೊಂದಿವೆ.

ಮಳೆ ನಂಬಿ ಜೀವನ ಸಾಗಿಸುವ ಈ ಪ್ರದೇಶದಲ್ಲಿ ನೀರಾವರಿ ಸೌಲಭ್ಯಗಳು ಇಲ್ಲ. ಶೇಂಗಾ, ಸೂರ್ಯಕಾಂತಿ, ನವಣೆ, ಮೆಕ್ಕೆಜೋಳ, ಹೆಸರು, ಔಡಲ, ಸಜ್ಜೆ, ಇತರ ದ್ವಿದಳ ಧಾನ್ಯಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತಿದ್ದು ಹೊರ ರಾಜ್ಯದ ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದೆ.

ಬ್ರಿಟಿಷರು ಹಾಗೂ ನಿಜಾಮನ ಕಾಲದಿಂದಲೂ ಇಲ್ಲಿ ‘ಎ’ ದರ್ಜೆಯ ಎಪಿಎಂಸಿ ಮಾರುಕಟ್ಟೆ, ಪೊಲೀಸ್ ಠಾಣೆ, ಅಂಚೆ ಕಚೇರಿ, ಪ್ರವಾಸಿ ಮಂದಿರ, ಎಸ್‌ಬಿಎಚ್‌ ಬ್ಯಾಂಕ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ, ಐತಿಹಾಸಿಕ ಸ್ಮಾರಕಗಳು ಇಲ್ಲಿವೆ. ಈ ಕಾರಣಕ್ಕಾಗಿಯೆ ತಾಲ್ಲೂಕು ಪುನರ್‌ ರಚನೆಗಾಗಿ ನೇಮಕಗೊಂಡ ವಾಸುದೇವ, ಹುಂಡೆಕಾರ ಹಾಗೂ ಗದ್ದಿಗೌಡರ ಸಮಿತಿಗಳೂ ತಮ್ಮ ಕೆಲಸ ಆರಂಭಿಸಿದಾಗಿನಿಂದ ಕನಕಗಿರಿ ನೂತನ ತಾಲ್ಲೂಕು ರಚನೆಯ ಹೋರಾಟದ ಕೂಗು ಕೇಳಿ ಬಂದಿದೆ.

1992ರಲ್ಲಿ ಆಗಿನ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ ಅವರು ಇಲ್ಲಿನ ಬಸ್‌ ನಿಲ್ದಾಣ, ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡ ಇತರ ಕಾಮಗಾರಿಗಳ ಶಂಕುಸ್ಥಾಪನೆಗೆ ಬಂದಿದ್ದರು. ಆಗಿನ ಮಂಡಲ ಪಂಚಾಯಿತಿ ಅಧ್ಯಕ್ಷ ಮತ್ತು ತಾಲ್ಲೂಕು ಹೋರಾಟ ಸಮಿತಿ ಗೌರವಾಧ್ಯಕ್ಷ ಕೆ.ಮಹಾಬಳೇಶ್ವರಸ್ವಾಮಿ ನೇತೃತ್ವದಲ್ಲಿ ಕನಕಗಿರಿ ತಾಲ್ಲೂಕು ರಚನೆಯ ಔಚಿತ್ಯ ಕುರಿತು ಬಂಗಾರಪ್ಪ ರವರಿಗೆ ವಿವರಿಸಿ ಮನವಿ ಸಲ್ಲಿಸಲಾಗಿತ್ತು.

ತಾಲ್ಲೂಕು ರಚನೆಯಾ ಗಲೇಬೇಕೆಂದು ಹಠ, ಹೋರಾಟ ಹೆಚ್ಚು ಕಾವು ಪಡೆದುಕೊಂಡಿದ್ದು 2002ರಲ್ಲಿ. ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರ ಸಚಿವ ಸಂಪುಟದಲ್ಲಿ ಕಂದಾಯ ಇಲಾಖೆಯ ಸಹಾಯಕ ಸಚಿವರಾಗಿದ್ದ ಈ ಕ್ಷೇತ್ರದ ಶಾಸಕ ಎಂ. ಮಲ್ಲಿಕಾರ್ಜುನ ನಾಗಪ್ಪ ಅವರ ಅವಧಿಯಲ್ಲಿ.

ಕನಕಗಿರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಬ್ಲಾಕ್ ಸಮಿತಿ ಅಧ್ಯಕ್ಷರಾಗಿದ್ದ ರಾಜಧರಖಾನ್ ಅಧ್ಯಕ್ಷತೆಯ ತಾಲ್ಲೂಕು ಹೋರಾಟ ಸಮಿತಿ ತಮ್ಮದೇ ಸರ್ಕಾರ ಹಾಗೂ ಸಚಿವರಾಗಿದ್ದ ಶಾಸಕ ಎಂ. ಮಲ್ಲಿಕಾರ್ಜುನ ನಾಗಪ್ಪರ ವಿರುದ್ಧ ಸತತ 52 ದಿನಗಳ ಕಾಲ ವಿಭಿನ್ನ ಹೋರಾಟ ನಡೆಸಿದರು.

ರಸ್ತೆ ತಡೆ, ಅರೆ ಬೆತ್ತಲೆ ಮೆರವಣಿಗೆ, ಉಪವಾಸ ಸತ್ಯಾಗ್ರಹ, ದೀಡ ನಮಸ್ಕಾರ, ಉರುಳು ಸೇವೆ, ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಹಿಡಿದು ಜಿಲ್ಲಾ ಪಂಚಾಯಿತಿವರೆಗಿನ ಜನಪ್ರತಿನಿಧಿಗಳ ಸಾಮೂಹಿಕ ರಾಜೀನಾಮೆ ಸಲ್ಲಿಕೆ ಪ್ರಕ್ರಿಯೆ ನಡೆದವು. ಹೀಗೆ ಹಗಲಿರುಳು ಎನ್ನದೆ ಗ್ರಾಮಸ್ಥರು ಹೋರಾಟ ನಡೆಸಿದ ಪರಿಣಾಮ ಮುಖಂಡರ ವಿರುದ್ದ ಪ್ರಕರಣ ದಾಖಲಾದವು.

ಐದಾರು ವರ್ಷಗಳ ಕಾಲ ಗಂಗಾವತಿ ನ್ಯಾಯಾಲಯಕ್ಕೆ ಅಲೆ ದಾಡ ಬೇಕಾಯಿತು. ಕೊನೆಗೆ ಎನ್‌. ಧರ್ಮಸಿಂಗ್ ಸರ್ಕಾರವು ಹೋರಾ ಟಗಾರರ ವಿರುದ್ದದ ಪ್ರಕರಣ ಗಳನ್ನು ಹಿಂಪಡೆಯಿತು. ಇದಲ್ಲದೆ ಹೋರಾಟ ನಡೆದ ವೇಳೆ ಹಲವಾರು ಕುಟುಂಬಗಳು ಕಹಿ ಘಟನೆ ಅನುಭವಿಸಿದವು.

2002ರಲ್ಲಿ ಕೊಪ್ಪಳಕ್ಕೆ ಮನವಿ ಪತ್ರ ನೀಡಲು ಹೋದಾಗ ಲಾರಿ ಪಲ್ಟಿಯಾಗಿ ಸಾಕಷ್ಟು ಜನರಿಗೆ ಗಾಯಗಳಾದವು. ತೀವ್ರವಾಗಿ ಗಾಯಗೊಂಡ ಮುರುಳಿಧರ ಅಚ್ಚಲಕರ್, ಹೊನ್ನೂರುಸಾಬ ಬೇಲ್ದಾರ ಅವರ ಕೈ, ಕಾಲು ಮುರಿದವು.

ಒಣಬೇಸಾಯ ಪ್ರದೇಶದ ಕನಕಗಿರಿಯು ತಾಲ್ಲೂಕು ಕೇಂದ್ರ ಆಗಲು ಎಲ್ಲಾ ರೀತಿಯಿಂದಲೂ ಅರ್ಹತೆ ಪಡೆದಿದೆ ಎಂದು ವಾಸ್ತವಿಕ ವರದಿ ನೀಡಿದ್ದು ಹಿರಿಯ ಐಎಎಸ್‌ ಅಧಿಕಾರಿ ಎಂ.ಬಿ.ಪ್ರಕಾಶ ಅಧ್ಯಕ್ಷತೆಯಲ್ಲಿ 2006ರಲ್ಲಿ ನೇಮಕಗೊಂಡ ತಾಲ್ಲೂಕು ಪುನರ್‌ರಚನಾ ಸಮಿತಿ.

ಈ ಸಮಿತಿಯ ಸದಸ್ಯರು ಖುದ್ದಾಗಿ ಈ ಭಾಗದ ಪ್ರತಿಯೊಂದು ಹೋಬಳಿ ಕೇಂದ್ರ, ಐತಿಹಾಸಿಕ ಸ್ಮಾರಕಗಳಿಗೆ ಭೇಟಿ ನೀಡಿ ಭೌಗೋಳಿಕ ಚಿತ್ರಣ, ಜನರ ಆರ್ಥಿಕ ಮಟ್ಟ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ ಬಳಿಕ ತಾಲ್ಲೂಕು ಘೋಷಣೆಗೆ ಜೀವ ಬಂತು ಎಂದು ತಾಲ್ಲೂಕು ಹೋರಾಟ ಸಮತಿ ಸಲಹೆಗಾರರಾದ ವಿರೂಪಾಕ್ಷಪ್ಪ ಭತ್ತದ, ದುರ್ಗಾದಾಸ ಯಾದವ ಸ್ಮರಿಸುತ್ತಾರೆ.

ಎಂ.ಬಿ. ಪ್ರಕಾಶ ವರದಿ, ಶಾಸಕ ಶಿವರಾಜ ತಂಗಡಗಿ ಹಾಗೂ ಹೋರಾಟಗಾರರ ಪರಿಶ್ರಮದಿಂದ 2013ರ ಫೆಬ್ರವರಿ ಬಜೆಟ್‌ನಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಕನಕಗಿರಿ ತಾಲ್ಲೂಕು ಕೇಂದ್ರ ಎಂದು ಘೋಷಿಸಿದರೂ ಕೆಲ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ಎದುರಾದ ಕಾರಣ ಅನುಷ್ಠಾನಕ್ಕೆ ಬರಲಿಲ್ಲ.

2013 ಮೇ ತಿಂಗಳಲ್ಲಿ ಅಸ್ತಿತ್ವಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಕೂಡ ಮೂರು ವರ್ಷಗಳವರೆಗೆ ತಾಲ್ಲೂಕು ಕೇಂದ್ರದ ಅನುಷ್ಠಾನಕ್ಕೆ ಕೈ ಹಾಕದ ಪರಿಣಾಮ ಮತ್ತೆ ನೆನಗುದಿಗೆ ಬಿತ್ತು.2017ರ ಬಜೆಟ್‌ನಲ್ಲಿ ತಲಾ ಒಂದು ತಾಲ್ಲೂಕಿಗೆ ₹ 25 ಕೋಟಿ ನೀಡುವುದಾಗಿ ಸಿದ್ದರಾಮಯ್ಯನವರು ಘೋಷಿಸಿ ಈ ಭಾಗದ ಜನತೆಯಲ್ಲಿ ಭರವಸೆ ಮೂಡಿಸಿದರು. ರಾಜ್ಯಪತ್ರದಲ್ಲಿ ಡಿ. 14ರಂದು ಘೋಷಿಸಿದಂತೆ ಕನಕಗಿರಿ ಪಟ್ಟಣ ಸೇರಿ 63 ಗ್ರಾಮಗಳನ್ನು ನೂತನ ಕನಕಗಿರಿಗೆ ಸೇರಿಸಲಾಗಿದೆ.

ರೈಸ್‌ಟೆಕ್‌ ಪಾರ್ಕ್‌ ವಿವಾದ: 2017ರ ಜುಲೈ ತಿಂಗಳಲ್ಲಿ ಹೊಸ ತಾಲ್ಲೂಕುಗಳ ಹೋಬಳಿ ಪ್ರದೇಶದ ಬಗ್ಗೆ ಸುಳಿವು ನೀಡಿದಾಗ ಕನಕಗಿರಿ ತಾಲ್ಲೂಕಿಗೆ ನವಲಿ ಹೋಬಳಿ ಸೇರಿಸಿದ ವಿಷಯ ಕುರಿತು ನವಲಿ ಗ್ರಾಮಸ್ಥರಲ್ಲಿ ಪರ ಮತ್ತು ವಿರೋಧ ವ್ಯಕ್ತವಾಗಿ ಹೋರಾಟಗಳು ನಡೆದಾಗ ಮತ್ತೆ ಆತಂಕಪಡುವಂತಾಯಿತು. ಹೋಬಳಿ ಒಡೆಯದೆ ತಾಲ್ಲೂಕು ರಚಿಸಲಾಗುವುದು ಎಂದು ಬೆಂಗಳೂರಿಗೆ ತೆರಳಿದ್ದ ಇಲ್ಲಿನ ನಿಯೋಗಕ್ಕೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪರ ಹೇಳಿಕೆ ಆತಂಕ ದೂರ ಮಾಡಿತು. ಕನಕಗಿರಿ, ಹುಲಿಹೈದರ ಹಾಗೂ ನವಲಿ ಹೋಬಳಿ ಸೇರಿಸಿ ರಾಜ್ಯ ಸರ್ಕಾರ ಕನಕಗಿರಿ ತಾಲ್ಲೂಕಿನ ಕರಡು ಅಧಿಸೂಚನೆ ಹೊರ ಡಿಸಿದ್ದು ಜನರಲ್ಲಿ ಸಂತಸ ಮೂಡಿದೆ.

***

ಚುನಾವಣೆಯಲ್ಲಿ ಭರವಸೆ ನೀಡಿದಂತೆ ಕನಕಗಿರಿ, ಕಾರಟಗಿ ಎರಡನ್ನೂ ತಾಲ್ಲೂಕು ಕೇಂದ್ರ ಮಾಡಿರುವೆ, ತಾಲ್ಲೂಕು ಹೋರಾಟಗಾರರು, ಜನರ ಹೋರಾಟಕ್ಕೆ ಸಿಕ್ಕ ಪ್ರತಿಫಲ ಇದು.

-ಶಿವರಾಜ ಎಸ್‌. ತಂಗಡಗಿ, ಶಾಸಕ

**


ಕೃಷಿ, ಶಿಕ್ಷಣ, ನೀರಾವರಿ ಇತರೆ ಕ್ಷೇತ್ರದ ಅಭಿವೃದ್ಧಿ ಜತೆಗೆ ಸೌಕರ್ಯ ಕಲ್ಪಿಸಲು ಹಾಗೂ ಆಡಳಿತಾತ್ಮಕವಾಗಿ ಹೊಸ ತಾಲ್ಲೂಕು ಕೇಂದ್ರ ಸಹಾಯಕವಾಗಲಿದೆ

ಡಾ.ಡಿ.ಎಂ.ಅರವಟಗಿಮಠ, ಗೌರವಾಧ್ಯಕ್ಷ, ಕನಕಗಿರಿ ಹೋರಾಟ ಸಮಿತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry