ನೀರಾವರಿ ಯೋಜನೆ ನಿರ್ಲಕ್ಷಿಸಿದ್ದೆ ಸಾಧನೆ

7
ಕುಷ್ಟಗಿ: ರಾಜ್ಯ ಸರ್ಕಾರದ ವಿರುದ್ಧ ಸಂಸದ ಪ್ರತಾಪ ಸಿಂಹ ಆರೋಪ

ನೀರಾವರಿ ಯೋಜನೆ ನಿರ್ಲಕ್ಷಿಸಿದ್ದೆ ಸಾಧನೆ

Published:
Updated:
ನೀರಾವರಿ ಯೋಜನೆ ನಿರ್ಲಕ್ಷಿಸಿದ್ದೆ ಸಾಧನೆ

ಕುಷ್ಟಗಿ: ಕೊಪ್ಪಳ ಏತ ನೀರಾವರಿ ಅನುಷ್ಠಾನಕ್ಕೆ ಸ್ಪಂದಿಸಿಲ್ಲ ಎಂದು ಆರೋಪಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿರುವ ಕಲಾಲಬಂಡಿಯಿಂದ ಕೊಪ್ಪಳದವರೆಗಿನ ‘ಜನಜಾಗೃತಿ ಪಾದಯಾತ್ರೆ’ಗೆ ಬುಧವಾರ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷ ಪ್ರತಾಪ ಸಿಂಹ ಚಾಲನೆ ನೀಡಿದರು.

ಕಲಾಲಬಂಡಿ ಗ್ರಾಮದ ಬಳಿ ನಿರ್ಮಿಸಲಾಗಿರುವ ಏತ ನೀರಾವರಿ ಯೋಜನೆಯ ಡೆಲೆವರಿ ಚೇಂಬರ್‌ಗೆ ಪೂಜೆ ಸಲ್ಲಿಸಿ ಜಲಾಭಿಷೇಕ ನೆರವೇರಿಸಿದ ನಂತರ ಅವರು ರೈತರು, ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಹೇಳಿಕೊಳ್ಳುವಂಥ ಸಾಧನೆ ಏನೂ ಇಲ್ಲ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯಕ್ಕೆ ಗ್ರಹಣ ಹಿಡಿದಂತಾಗಿದೆ, ಕಳೆದ ನಾಲ್ಕೂ ಮುಕ್ಕಾಲು ವರ್ಷಗಳ ಅವಧಿಯಲ್ಲಿ ಜನರು ವನವಾಸ ಅನುಭವಿಸಿದ್ದಾರೆ. ಈ ಸಲ ಜನರು ಕಾಂಗ್ರೆಸ್‌ಗೆ ತಕ್ಕಪಾಠ ಕಲಿಸುವರು’ ಎಂದು ತಿಳಿಸಿದರು.

‘ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ರಾಜ್ಯ ಸರ್ಕಾರವು ಕೃಷ್ಣಾ, ಕಾವೇರಿ, ಮಹದಾಯಿ ಇತರೆ ನೀರಾವರಿ ಯೋಜನೆಗಳನ್ನು ಸಂಪೂರ್ಣ ನಿರ್ಲಕ್ಷಿದೆ. ಕಾಂಗ್ರೆಸ್‌ ಸರ್ಕಾರ ಮೋಸ ಎಸಗಿರುವುದು ಮತ್ತು ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಯೋಜನೆಗಳಿಗೆ ಪುನರ್‌ಚಾಲನೆ ನೀಡಲಾಗುವುದು ಎಂಬುದನ್ನು ತಿಳಿಸಲು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ’ ಎಂದರು.

‘2013ರಲ್ಲಿ ಬಿಜೆಪಿ ಅವಧಿಯಲ್ಲಿ ನೀಡಲಾಗಿದ್ದ ₹ 1,110 ಕೋಟಿ ಹಣದಲ್ಲಿ ಚಾಲನೆ ನೀಡಲಾಗಿದ್ದ ಕೊಪ್ಪಳ ಏತ ನೀರಾವರಿಗೆ ಕಾಂಗ್ರೆಸ್‌ ಹಣ ನೀಡಲಿಲ್ಲ. ಮೂರನೇ ಹಂತದ ಕಾಮಗಾರಿಗಳು ಇನ್ನೂ ಆರಂಭಗೊಂಡಿಲ್ಲ. ಟೆಂಡರ್‌ ಪ್ರಕ್ರಿಯೆ ನಡೆದಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಮಹದಾಯ ಯೋಜನೆಯ ಕಳಸಾ ನಾಲೆಗೆ ₹ 100 ಕೋಟಿ ಅನುದಾನ ನೀಡಿದ್ದರೂ ಕಾಂಗ್ರೆಸ್‌ ಅಪಪ್ರಚಾರ ನಡೆಸುತ್ತಿದೆ’ ಎಂದು ಅವರು ಟೀಕಿಸಿದರು.

‘ಕೃಷ್ಣೆಯ ಕಡೆಗೆ ಪಾದಯಾತ್ರೆ ವೇಳೆ ಪ್ರತಿ ವರ್ಷ ಕೃಷ್ಣಾ ಕೊಳ್ಳದ ಯೋಜನೆಗಳಿಗೆ ₹ 10,000 ಕೋಟಿ ನೀಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನಂತರ ಮಾತು ಬದಲಿಸಿದರು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ಕೂಡ ಬಾಯಿಮುಚ್ಚಿ ಕುಳಿತುಕೊಂಡರು’ ಎಂದು ದೂರಿದರು.

ಸಂಸದ ಸಂಗಣ್ಣ ಕರಡಿ ಮಾತನಾಡಿ, ಆಂತರಿಕ ಒಡಕಿನಿಂದ ಬಿಜೆಪಿ ಅಧಿಕಾರಕ್ಕೆ ಬರಲಿಲ್ಲ ಆದರೆ ಹೋರಾಟ ನಡೆಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಕೊಪ್ಪಳ ಏತ ನೀರಾವರಿಗೆ ಬಿಡಿಗಾಸು ಕೊಡಲಿಲ್ಲ. ಸರ್ಕಾರದ ಕಣ್ಣು ತೆರೆಸಲು ಬಿಜೆಪಿ ಹೋರಾಟಕ್ಕಿಳಿದಿದೆ ಎಂದರು. ಮಾಜಿ ಸಂಸದ ಶಿವರಾಮೇಗೌಡ, ಶಾಸಕ ದೊಡ್ಡನಗೌಡ ಪಾಟೀಲ, ಮಾಜಿ ಶಾಸಕರಾದ ಕೆ.ಶರಣಪ್ಪ, ಹಾಲಪ್ಪ ಆಚಾರ, ಪರಣ್ಣ ಮನವಳ್ಳಿ ಇತರರು ಇದ್ದರು.

ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಸಂಸದ ಪ್ರತಾಪ ಸಿಂಹ ಮಾತನಾಡಿ, ‘ಒಂದು ತಿಂಗಳಿನಿಂದ ಊರೂರು ಸುತ್ತಿ ಸರ್ಕಾರದ ಹಣದಲ್ಲಿ ಸಾಧನಾ ಸಮಾವೇಶದ ನೆಪದಲ್ಲಿ ಬಿಜೆಪಿ ಮುಖಂಡರನ್ನು ಏಕ ವಚನದಲ್ಲಿ ಸಂಬೋಧಿಸುವುದನ್ನು ಬಿಟ್ಟರೆ ಸಿದ್ದರಾಮಯ್ಯ ಅವರ ಬಳಿ ಯಾವುದೇ ಸಾಧನೆಗಳೇ ಇಲ್ಲ’ ಎಂದರು.

‘ನಾನು ಯಾವತ್ತೂ ಅಸಂವಿಧಾನಾತ್ಮಕ ಪದ ಬಳಸಿಲ್ಲ. ಜೆಡಿಎಸ್‌ನಲ್ಲಿದ್ದಾಗ ಸೋನಾಯಿ ಗಾಂಧಿಯವರನ್ನೇ ಅವಳು ಇವಳು ಎಂದು ಸಂಬೋಧಿಸಿದ್ದ ಸಿದ್ದರಾಮಯ್ಯ ಅದೇ ಚಾಳಿ ಮುಂದುವರೆಸಿದ್ದು ಈಚೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನೂ ಏಕ ವಚನದಲ್ಲಿಯೇ ಟೀಕಿಸಿದ್ದು ಅವರ ಜಾಯಮಾನ’ ಎಂದು ವ್ಯಂಗ್ಯವಾಡಿದರು.

ಬೆಂಕಿ ಹಚ್ಚುವ ಪಾಟೀಲ: ‘ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲರಿಗೆ ಧರ್ಮಗಳಲ್ಲಿ ಬೆಂಕಿ ಹಚ್ಚುವ ಕೆಲಸ ಬಿಟ್ಟರೆ ಹೇಳಿಕೊಳ್ಳುವಂಥದ್ದೇನೂ ಮಾಡಿಲ್ಲ. ನೀರಾವರಿ ಮತ್ತು ಕೊಪ್ಪಳ ಏತ ನೀರಾವರಿಗೆ ನೀಡಿದ ಹಣ ಎಷ್ಟು ಎಂಬುದನ್ನು ವಿವರಿಸಬೇಕು’ ಎಂದು ಅವರು ಸವಾಲು ಹಾಕಿದರು.

‘ಮೋಸದ ಪರ್ಯಾಯ ಪದವೇ ಕಾಂಗ್ರೆಸ್‌. ಮುಂದಿನ ಮೂರು ತಿಂಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಅವರು ತಿಳಿಸಿದರು.

**

ಗ್ರಾಮಗಳಲ್ಲಿ ಸಾಗಿದ ಪಾದಯಾತ್ರೆ

ಕುಷ್ಟಗಿ: ಕಲಾಲಬಂಡಿಯಿಂದ ಆರಂಭಗೊಂಡ ಪಾದಯಾತ್ರೆ ಬುಧವಾರ ಸಂಜೆ ಪಟ್ಟಣಕ್ಕೆ ಬಂತು. ಸುಮಾರು 20 ಕಿ.ಮೀ. ದೂರವನ್ನು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಕ್ರಮಿಸಿದರು. ಲಂಬಾಣಿ ಜನಾಂಗದವವರು, ಮಹಿಳೆಯರು ಸೇರಿದಂತೆ ವಿವಿಧ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಸಂಸದ ಪ್ರತಾಪ ಸಿಂಹ ಅವರೊಂದಿಗೆ ಕೊಪ್ಪಳ ಸಂಸದ ಸಂಗಣ್ಣ ಕರಡಿ, ಶಾಸಕರಾದ ದೊಡ್ಡನಗೌಡ ಪಾಟೀಲ, ಶಿವನಗೌಡ ನಾಯಕ, ರಾಜ್ಯ ಎಸ್‌ಟಿ ಮೋರ್ಚಾ ಅಧ್ಯಕ್ಷ ರಾಜುಗೌಡ, ಮಾಜಿ ಶಾಸಕರಾದ ಕೆ.ಶರಣಪ್ಪ, ಹಾಲಪ್ಪ ಆಚಾರ, ಪರಣ್ಣ ಮುನವಳ್ಳಿ ಹೆಜ್ಜೆ ಹಾಕಿದರು.

ಪ್ರಮುಖರಾದ ತಿಪ್ಪೇರುದ್ರಸ್ವಾಮಿ, ವಿರುಪಾಕ್ಷಪ್ಪ ಸಿಂಗನಾಳ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶರಣು ತಳ್ಳಿಕೇರಿ, ಪ್ರಮುಖರಾದ ವಿಠ್ಠಲಶ್ರೇಷ್ಟಿ ನಾಗೂರು ಬಸವರಾಜ ಹಳ್ಳೂರು, ಮಲ್ಲಣ್ಣ ಪಲ್ಲೇದ, ಎಪಿಎಂಸಿ ಅಧ್ಯಕ್ಷ ಬಾಲಪ್ಪ ಚಾಕ್ರಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಮಹೇಶ್‌, ವಿಜಯನಾಯಕ, ಮಾಜಿ ಸದಸ್ಯ ವಿನಯಕುಮಾರ ಮೇಲಿನಮನಿ ಇದ್ದರು.

ಗುರುವಾರ ಬೆಳಿಗ್ಗೆ ಕುಷ್ಟಗಿಯಿಂದ ಕೊಪ್ಪಳ ಮಾರ್ಗದಲ್ಲಿ ಪಾದಯಾತ್ರೆ ಹೊರಟು ಬೇವೂರಿನಲ್ಲಿ ವಾಸ್ತವ್ಯ ಮಾಡಲಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry