ಬುಳ್ಳಾಪುರ: ಗೋಮಾಳ ಜಮೀನಿನಲ್ಲಿ ಮನೆ ತೆರವಿಗೆ ತಾಲ್ಲೂಕು ಆಡಳಿತ ಯತ್ನ; ಗ್ರಾಮಸ್ಥರ ವಿರೋಧ

7

ಬುಳ್ಳಾಪುರ: ಗೋಮಾಳ ಜಮೀನಿನಲ್ಲಿ ಮನೆ ತೆರವಿಗೆ ತಾಲ್ಲೂಕು ಆಡಳಿತ ಯತ್ನ; ಗ್ರಾಮಸ್ಥರ ವಿರೋಧ

Published:
Updated:
ಬುಳ್ಳಾಪುರ: ಗೋಮಾಳ ಜಮೀನಿನಲ್ಲಿ ಮನೆ ತೆರವಿಗೆ ತಾಲ್ಲೂಕು ಆಡಳಿತ ಯತ್ನ; ಗ್ರಾಮಸ್ಥರ ವಿರೋಧ

ಹರಿಹರ: ತಾಲ್ಲೂಕಿನ ಬುಳ್ಳಾಪುರ ಗ್ರಾಮದ ಗೋಮಾಳ ಜಮೀನಿನಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಗಳನ್ನು ತೆರವು ವಿಚಾರಕ್ಕೆ ಸಂಬಂಧಿಸಿದಂತೆ ತಾಲೂಕು ಆಡಳಿತ ಹಾಗೂ ಗ್ರಾಮಸ್ಥರ ಮಧ್ಯೆ ವಾಗ್ವಾದ ನಡೆದು ಮನೆ ಮಾಲೀಕರಿಂದ ವಿಷ ಸೇವಿಸುವ ಪ್ರಯತ್ನದ ನಂತರ ತಾಲ್ಲೂಕು ಆಡಳಿತದಿಂದ ತೆರವಿಗೆ ನಾಲ್ಕು ದಿನಗಳ ಅವಕಾಶ ನೀಡಿದ ಘಟನೆ ಬುಧವಾರ ನಡೆದಿದೆ.

ಗ್ರಾಮದಲ್ಲಿರುವ ಗೋಮಾಳ ಜಮೀನನ್ನು ಅಕ್ಕಪಕ್ಕ ಗ್ರಾಮದ ನಿವಾಸಿಗಳು ಅಕ್ರಮವಾಗಿ ಅಕ್ರಮಿಸಿಕೊಳ್ಳುತ್ತಿದ್ದಾರೆ. ಅಂಥವರಿಗೆ ಸರ್ಕಾರಿ ಅಧಿಕಾರಿಗಳು, ಒಂದು ತಿಂಗಳಲ್ಲಿ ಮತದಾರರ ಗುರುತಿನ ಚೀಟಿ, ಮೂರು ತಿಂಗಳಲ್ಲಿ ಆಧಾರ ಕಾರ್ಡ್ ಹಾಗೂ ಆರು ತಿಂಗಳಲ್ಲಿ ಪಡಿತರ ಕಾರ್ಡ್ ನೀಡುತ್ತಿದ್ದಾರೆ. ಹತ್ತಾರು ಎಕರೆ ಜಮೀನು ಹೊಂದಿದವರೂ, ನಿರಾಶ್ರಿತ ಎಂಬಂತೆ ನಾಟಕವಾಗಿ ಸರ್ಕಾರಿ ಸ್ವತ್ತನ್ನು ಕಬಳಿಸುತ್ತಿದ್ದಾರೆ ಎಂದು ಗ್ರಾಮಸ್ಥ ಪ್ರದೀಪ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ಡಾ.ವೈ. ನಾಗಪ್ಪ ಅವರ ಅಧಿಕಾರಾವಧಿಯಲ್ಲಿ ೧೯ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಿದ್ದರು. ಅವರನ್ನು ಹೊರತುಪಡಿಸಿ ಹಲವಾರು ಜನ ಅಕ್ರಮವಾಗಿ ಇನ್ನು ಕೆಲವರು ಸುಳ್ಳು ದಾಖಲೆಗಳನ್ನು ನೀಡಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಸುಳ್ಳು ದಾಖಲೆ ನೀಡಿ ಸರ್ಕಾರಿ ನಿವೇಶನ ಕಬಳಿಸಿದ ವ್ಯಕ್ತಿಗಳ ಆಸ್ತಿ ಹಾಗೂ ಜಮೀನು ವಿವರಗಳನ್ನು ತಾಲ್ಲೂಕು ಕಚೇರಿಗೆ ಸಲ್ಲಿಸಿದರೂ, ಅಧಿಕಾರಿಗಳ ಅವರ ವಿರುದ್ಧ ಯಾವುದೇ ಕ್ರಮಕೈಗೊಳ್ಳದಿರುವುದು ಭ್ರಷ್ಟಾಚಾರದ ಅನುಮಾನ ಮೂಡಿಸಿದೆ ಎಂದು ಆರೋಪಿಸಿದರು.

ಗ್ರಾಮದಲಿ ಅತಿವೃಷ್ಟಿಯಿಂದಾಗಿ ಹಲವಾರು ಮನೆಗಳು ಮುಳಗಡೆಯಾಗಿ ಜನರು ಶಾಲೆ ಹಾಗೂ ದೇವಸ್ಥಾನದಲ್ಲಿ ಆಶ್ರಯ ಪಡೆದಿದ್ದರು. ಗ್ರಾಮದ ಹಿರಿಯರ ತೀರ್ಮಾನದಂತೆ ಸೂರು ಕಳೆದುಕೊಂಡ ನಿರಾಶ್ರಿತರಿಗೆ ಮನೆ ಕಟ್ಟಿಕೊಳ್ಳಲು ಅನುವು ಮಾಡಿಕೊಟ್ಟಿದ್ದರು. ಆದರೆ ಅಧಿಕಾರಿಗಳು ಮನೆ ತೆರವುಗೊಳಿಸಲು ಬಂದಿರಿವುದು ಮತ್ತೆ ನಮ್ಮ ಬದುಕನ್ನು ಬೀದಿಗೆ ತಳ್ಳಿದಂತಾಗಿದೆ ಎಂದು ನಿರಾಶ್ರಿತ ಮಹಿಳೆ ಆಶಾ ಅಳಲು ತೋಡಿಕೊಂಡರು.

ಗ್ರಾಮದ 95 ಜನ ನಿರಾಶ್ರಿತರಿಗೆ 2009ರಲ್ಲಿ ಈ ಜಮೀನಿನನಲ್ಲಿ ನಿವೇಶನ ಮಂಜೂರಾಗಿತ್ತು. 2010ರಿಂದ ಗ್ರಾಮ ಪಂಚಾಯ್ತಿಯಲ್ಲಿ ಕಂದಾಯ ಕಟ್ಟುತ್ತಿದ್ದೇವೆ. ಮನೆ ನಿರ್ಮಿಸಿಕೊಡಲು ಸರ್ಕಾರಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆ ಫಲಾನುಭವಿಗಳು ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ಗ್ರಾಮಸ್ಥ ಎಚ್.ಆರ್. ಹನುಮಂತಪ್ಪ ಮಾಹಿತಿ ನೀಡಿದರು.

ಗ್ರೇಡ್-೨ ತಹಶೀಲ್ದಾರ್ ವೆಂಕಟಮ್ಮ ಮಾತನಾಡಿ, ಗ್ರಾಮ ವ್ಯಾಪ್ತಿಯ 21ಎಕರೆ ಗೋಮಾಳ ಜಮೀನಿನಲ್ಲಿ 10ಎಕರೆ ತೋಟಗಾರಿ ಇಲಾಖೆ, 2ಎಕರೆ ಆಶ್ರಯ ಕಾಲೊನಿ ಹಾಗೂ ಶಾಲೆಗೆ ನೀಡಿಲಾಗಿದೆ. ಗ್ರಾಮದ ಜೌಗು ಪ್ರದೇಶದ ನಿವಾಸಿಗಳು, ಉಳಿದ ಜಮೀನಿನಲ್ಲಿ 90ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದರು. ಇದರ ವಿರುದ್ಧ ಜಿಲ್ಲಾಧಿಕಾರಿಗೆ ದೂರು ಹೋಗಿದ್ದು, ಅವರ ಮೌಕಿಕ ಆದೇಶಾನ್ವಯ ತೆರವು ಕಾರ್ಯಕ್ಕಾಗಿ ಜೆಸಿಬಿ ಯಂತ್ರಗಳೊಂದಿಗೆ ಆಗಮಿಸಿದ್ದೇವೆ ಎಂದು ತಿಳಿಸಿದರು.

ಅಕ್ರಮ ಮನೆಗಳನ್ನು ಜೆಸಿಬಿ ಯಂತ್ರಗಳ ಮೂಲಕ ತೆರವುಗೊಳಿಸಲು ಅಧಿಕಾರಿಗಳು ಯತ್ನಿಸಿದಾಗ, ಸ್ಥಳೀಯರು ಜೆಸಿಬಿ ಯಂತ್ರಗಳಿಗೆ ಅಡ್ಡಗಟ್ಟಿ ತಡೆದರು. ಮನೆಗಳನ್ನು ಸ್ವತಃ ತೆರವುಗೊಳಿಸಿಕೊಳ್ಳಲು ನಾಲ್ಕು ದಿನಗಳ ಕಾಲವಕಾಶ ನೀಡಲಾಗಿದೆ ಎಂದರು.

ಗ್ರಾಮಸ್ಥರಾದ ಬಿ. ಸೋಮಶೇಖರ್, ಉಷಾ, ಗಿರೀಶ್, ಗೌರಮ್ಮ, ಎಚ್. ಮಹಾದೇವಪ್ಪ, ಜಿ. ಪ್ರಕಾಶ್, ಲಲಿತಮ್ಮ, ಆನಂದ್, ಹಾಲಪ್ಪ, ಸಿದ್ದಲಿಂಗಪ್ಪ, ರೇವಣಸಿದ್ದಪ್ಪ, ಮಲ್ಲಿಕಾರ್ಜುನ್, ಕೆಂಚಪ್ಪ, ಸಿದ್ದಪ್ಪ ಹಾಗೂ ಗ್ರಾಮಸ್ಥರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry