‘ಕಥೆ ಹೇಳಬೇಡಿ, ಕೆಲಸ ಮಾಡಿ’

7
ವಿವಿಧ ವಾರ್ಡುಗಳಿಗೆ ಶಾಸಕ ಬಾದರ್ಲಿ ಭೇಟಿ; ಜನಸಂಪರ್ಕ ಸಭೆ

‘ಕಥೆ ಹೇಳಬೇಡಿ, ಕೆಲಸ ಮಾಡಿ’

Published:
Updated:
‘ಕಥೆ ಹೇಳಬೇಡಿ, ಕೆಲಸ ಮಾಡಿ’

ಸಿಂಧನೂರು: ಯುಜಿಡಿ ಮತ್ತು 24X 7 ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದಕ್ಕೆ ಆಕ್ರೋಶಗೊಂಡ ಶಾಸಕ ಹಂಪನಗೌಡ ಬಾದರ್ಲಿ ‘ಕತೆ ಹೇಳಬೇಡಿ, ಮೊದಲು ಕೆಲಸ ಮಾಡಿ’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸ್ಥಳೀಯ ನಟರಾಜ್‌ ಕಾಲೊನಿಯಲ್ಲಿ ಬುಧವಾರ ವಿವಿಧ ಕಾಮಗಾರಿಗಳನ್ನು ವೀಕ್ಷಿಸಿದ ನಂತರ ನಡೆದ ಜನಸಂಪರ್ಕ ಸಭೆಯಲ್ಲಿ ಅವರು ಅಧಿಕಾರಿಗಳನ್ನು ತೀವ್ರ ತರಾಟೆ ತೆಗೆದುಕೊಂಡರು.

ನಿರಂತರ ಕುಡಿಯುವ ನೀರಿನ ಯೋಜನೆಯ ಕೆಲಸಗಳು ನಿಗದಿತ ಸಮಯದಲ್ಲಿ ಪೂರ್ಣಗೊಂಡಿಲ್ಲ. ಇದರಿಂದ ರಸ್ತೆ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲು ವಿಳಂಬವಾಗುತ್ತಿದೆ. ಮುಖ್ಯಮಂತ್ರಿಗಳ ಕಾರ್ಯಕ್ರಮ ಮುಂದಿನ ತಿಂಗಳು ಆಯೋಜಿಸಲಾಗಿದ್ದು, ಅಷ್ಟರೊಳಗೆ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಅದು ಬಿಟ್ಟು ರಾಮಾಯಣ, ಮಹಾಭಾರತ ಕತೆಗಳನ್ನು ಹೇಳಿ ಕಾಲಹರಣ ಮಾಡಬಾರದೆಂದು ಎಚ್ಚರಿಕೆ ನೀಡಿದರು.

ನಗರಸಭೆ ಸದಸ್ಯ ಪ್ರಭುರಾಜ್ ಮಾತನಾಡಿ, ‘ಕುಡಿಯುವ ನೀರಿನ ಪೈಪ್‌ಲೈನ್‌ಗಳು ಎಲ್ಲೆಂದರಲ್ಲಿ ಸೋರಿಕೆ ಆಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಉತ್ತರ ಕೊಡುವುದು ಕಷ್ಟವಾಗಿದೆ. ಅಧಿಕಾರಿಗಳಿಗೆ ಫೋನಾಯಿಸಿದರೂ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಕೆಲವೊಮ್ಮೆ ಕರೆ ಸ್ವೀಕರಿಸುತ್ತಿಲ್ಲ. ರಸ್ತೆ ಅಭಿವೃದ್ಧಿ ಕೆಲಸವು ಟೆಂಡರ್ ಆಗಿ ಒಂದು ವರ್ಷವಾಗಿದೆ. ಕೆಲಸ ಆರಂಭಿಸಬೇಕೆಂದರೆ ಇನ್ನೂ ಕುಡಿಯುವ ನೀರಿನ ಯೋಜನೆಯ ಕೆಲಸಗಳೇ ಪೂರ್ಣಗೊಂಡಿಲ್ಲ’ ಎಂದು ಆಪಾದಿಸಿದರು.

ಇದರಿಂದ ಮತ್ತಷ್ಟು ಸಿಡಿಮಿಡಿಗೊಂಡ ಶಾಸಕ ಬಾದರ್ಲಿ, ‘ಕೆಲಸ ಮಾಡಲು ಮನಸ್ಸಿದರೆ ಮಾಡಿ, ಇಲ್ಲದಿದ್ದರೆ ಬಿಟ್ಟು ಹೋಗಿ. ನಿಮ್ಮಂತಹ ಬೇಜವಾಬ್ದಾರಿ ಕೆಲಸಗಾರರಿಂದ ನಮಗೆ ಕೆಟ್ಟ ಹೆಸರು ಬರುತ್ತಿದೆ. ಕಾಮಗಾರಿಯ ಗುತ್ತಿಗೆದಾರರ ನಾಪತ್ತೆಯಾಗಿದ್ದು, ಅವರಿಗೆ ಹೇಳಿ ಹೇಳಿ ಸಾಕಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಂತರ ವಾರ್ಡ್‌ ನಂ.10, 11, 12, 13 ಮತ್ತು 14 ರವರೆಗೆ ಶಾಸಕ ಹಂಪನಗೌಡ ಬಾದರ್ಲಿ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿ, ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಿದರು. ಇದೇ ಸಂದರ್ಭದಲ್ಲಿ ನಿವೇಶನ ಇಲ್ಲದವರಿಗೆ ನಿವೇಶನ ಕೊಡಿರುವುದಾಗಿ ಭರವಸೆ ನೀಡಿದರು.

ನಗರಸಭೆ ಅಧ್ಯಕ್ಷೆ ಮಂಜುಳಾ ಪಾಟೀಲ, ಪೌರಾಯುಕ್ತ ವಿರೂಪಾಕ್ಷಿಮೂರ್ತಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ಕಾಳಿಂಗಪ್ಪ ವಕೀಲ, ಸದಸ್ಯ ಕನಕಪ್ಪ ನಾಯಕ, ಕೆಯುಐಡಬ್ಲ್ಯೂಎಫ್‌ಸಿ ಅಧಿಕಾರಿ ಗಿರೀಶ್‌ನಾಯಕ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಖಾಜಿಮಲಿಕ್ ವಕೀಲ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ, ನಗರಸಭೆ ಸದಸ್ಯೆ ಜಿ.ಜೆ.ದೇವಿರಮ್ಮ, ಮುಖಂಡರಾದ ಮುರ್ತುಜಾಹುಸೇನ್, ಬೋಜನಗೌಡ, ಡಾ.ಶರಭನಗೌಡ, ದೊಡ್ಡಪ್ಪ ಎಂಜಿನಿಯರ್ ಇದ್ದರು.

**

ನಗರ ಪ್ರದೇಶದಲ್ಲಿ ಗುಡಿಸಲುಗಳಲ್ಲಿ ವಾಸಿಸುತ್ತಿರುವ ಬಡವರು ಮತ್ತು ನಿರಾಶ್ರಿತರು ನಗರಸಭೆಗೆ ಅರ್ಜಿ ಸಲ್ಲಿಸಿದರೆ ವಸತಿ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ.

– ಹಂಪನಗೌಡ ಬಾದರ್ಲಿ ಶಾಸಕ, ಸಿಂಧನೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry