ಅಂಗನವಾಡಿ,ಆಶಾ ಕಾರ್ಯಕರ್ತೆಯರ ಪ್ರತಿಭಟನಾ ರ‍್ಯಾಲಿ

7

ಅಂಗನವಾಡಿ,ಆಶಾ ಕಾರ್ಯಕರ್ತೆಯರ ಪ್ರತಿಭಟನಾ ರ‍್ಯಾಲಿ

Published:
Updated:
ಅಂಗನವಾಡಿ,ಆಶಾ ಕಾರ್ಯಕರ್ತೆಯರ ಪ್ರತಿಭಟನಾ ರ‍್ಯಾಲಿ

ರಾಯಚೂರು: ಆಶಾ, ಅಂಗನವಾಡಿ ಕಾರ್ಯಕರ್ತೆಯರನ್ನು ಮತ್ತು ಬಿಸಿಯೂಟ ಸಿಬ್ಬಂದಿಯನ್ನು ಕಾರ್ಮಿಕರೆಂದು ಪರಿಗಣಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಕಾರ್ಯಕರ್ತೆಯರ ಸಂಘ ಹಾಗೂ ಅಂಗನವಾಡಿ ನೌಕರರ ಸಂಘವು ಜಿಲ್ಲಾಧಿಕಾರಿ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿತು.

ಪ್ರತಿ ತಿಂಗಳು ಕನಿಷ್ಠ ಕೂಲಿ ₹18 ಸಾವಿರ ವೇತನ ಪಾವತಿಸಬೇಕು. ₹3 ಸಾವಿರ ಪಿಂಚಣಿ ಹಾಗೂ ಸಾಮಾಜಿಕ ಭದ್ರತೆ ಕಲ್ಪಿಸಬೇಕು. ಹಾಗೂ 45 ನೇ ಭಾರತ ಕಾರ್ಮಿಕರ ಸಮ್ಮೇಳನ ಮಾಡಿರುವ ಶಿಫಾರಸುಗಳನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು.

ಐಸಿಡಿಎಸ್, ಎನ್‌ಎಚ್ಎಂ, ಎಂಡಿಎಂ ಹಾಗೂ ಎಸ್ಎಸ್ಎ ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಗಳ ಗುಣಮಟ್ಟ ಮತ್ತು ಸಮರ್ಪಕ ಅನುಷ್ಠಾನಕ್ಕೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಮೀಸಲಿಡಬೇಕು. ಯಾವುದೇ ಯೋಜನೆಗಳನ್ನು ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಿಸಬಾರದು ಎಂದು ಕೋರಿದರು.

ವೀರೇಶ ಎನ್.ಎಸ್., ಮಹೇಶ, ಚೇತನಾ ಬನಾರೆ, ಫಾತಿಮಾ, ಲಕ್ಷ್ಮೀ, ಪ್ರಭಾವತಿ ಮಲ್ಲಮ್ಮ, ಲಕ್ಷ್ಮೀ, ಸಂದ್ಯಾ, ವೀಣಾ, ಇಂದಿರಾ, ಗೀತಾ, ಕಲಾವತಿ, ತಾಯಮ್ಮ, ಲಕ್ಷ್ಮೀ, ಶಾರದಾ, ಸಾಜಿದಾ, ಸುಮಿತ್ರ, ವಿಜಯ ಭಾರತಿ, ಹಫೀಜಾ ಪ್ರತಿಭಟನೆಯಲ್ಲಿ ಇದ್ದರು.

ಲಿಂಗಸುಗೂರು ವರದಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿ ಕಾರ್ಯನಿರ್ವಹಿಸುತ್ತಿರುವ ಆಶಾ, ಅಂಗನವಾಡಿ, ಬಿಸಿಯೂಟ ಸೇರಿದಂತೆ ಇತರೆ ಅಸಂಘಟಿತ ಕಾರ್ಮಿಕರಿಗೆ ಸೇವಾ ಭದ್ರತೆ,ಕನಿಷ್ಠ ವೇತನ ಮಂಜೂರು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಲ್‌ ಇಂಡಿಯಾ ಯುನೈಟೆಡ್‌ ಟ್ರೇಡ್‌ ಯೂನಿಯನ್‌ ಸೆಂಟರ್‌ (ಎಐಯುಟಿಯುಸಿ) ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಬುಧವಾರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳಡಿ ಅತ್ಯಂತ ಕಡಿಮೆ ಗೌರವಧನದಲ್ಲಿ ಕೆಲಸ ಮಾಡುತ್ತಿರುವ ಕುಟುಂಬಗಳ ಸಂರಕ್ಷಣೆಗೆ ಮುಂದಾಗದಿರುವುದನ್ನು ವಿರೋಧಿಸಿ ಧಿಕ್ಕಾರ ಕೂಗುತ್ತ ಉಪ ವಿಭಾಗಾಧಿಕಾರಿ ಕಚೇರಿಗೆ ಆಗಮಿಸಿ ಎಂ.ಪಿ. ಮಾರುತಿ ಅವರಿಗೆ ಮನವಿ ಸಲ್ಲಿಸಿದರು.

ಕಾರ್ಯತಕರ್ತೆಯರು ಮತ್ತು ನೌಕರರನ್ನು ಗೌರವಧನ ಅಥವಾ ಪ್ರೋತ್ಸಾಹಧನದ ಹೆಸರಿನಲ್ಲಿ ಸರ್ಕಾರಗಳು ಶೋಷಣೆ ಮಾಡುತ್ತಿವೆ. ನೀಡುತ್ತಿರುವ ಗೌರವ ಧನವನ್ನು ಕನಿಷ್ಠ ₹ 18ಸಾವಿರಕ್ಕೆ ಹೆಚ್ಚಿಸಬೇಕು. ನಿವೃತ್ತಿ ವೇತನ ₹ 3,000 ನೀಡಬೇಕು. ಸಾಮಾಜಿಕ ಭದ್ರತೆ ನೀಡಬೇಕು. 45ನೇ ಭಾರತ ಕಾರ್ಮಿಕ ಸಮ್ಮೇಳನ (ಐಎಲ್‌ಸಿ) ಮಾಡಿದ ಶಿಫಾರಸುಗಳನ್ನು ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.

ಬಿಸಿಯೂಟ, ಅಂಗನವಾಡಿ, ಆಶಾ ಸೇರಿದಂತೆ ಇತರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಾಯೋಜಿತ ಯೋಜನೆಗಳನ್ನು ಉತ್ತಮ ಗುಣಮಟ್ಟ, ಸಮರ್ಪಕ ಅನುಷ್ಠಾನಕ್ಕೆ ಅಗತ್ಯ ಸೌಲಭ್ಯಗಳನ್ನು ಪೂರೈಸುವ ಜೊತೆಗೆ ಖರ್ಚು–ವೆಚ್ಚ ಸರಿದೂಗುವಷ್ಟು ಹಣವನ್ನು ಬಜೆಟ್‌ನಲ್ಲಿ ಮೀಸಲಿಡಬೇಕು ಎಂದು ಆಗ್ರಹಪಡಿಸಿದರು.

ಪ್ರತಿಭಟನೆ ನೇತೃತ್ವವವನ್ನು ಎಐಯುಟಿಯುಸಿ ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ಅಪರ್ಣಾ, ತಾಲ್ಲೂಕು ಗೌರವ ಅಧ್ಯಕ್ಷ ಶರಣಪ್ಪ ಗೋನವಾರ, ತಾಲ್ಲೂಕು ಅಧ್ಯಕ್ಷೆ3 ನಗೂಮಿ, ಮುಖಂಡರಾದ ಶಿವಮ್ಮ, ಶಾಂತಾ, ಗಂಗಮ್ಮ, ಮಲ್ಲಮ್ಮ, ಶೈಲಜಾ, ಶಾರದಾ, ಸುವರ್ಣ, ಸಂಗೀತ, ಬಸಮ್ಮ, ನರಸಮ್ಮ ಸೇರಿದಂತೆ ತಾಲ್ಲೂಕಿನ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

ದೇವದುರ್ಗ ವರದಿ:ಕನಿಷ್ಠ ವೇತನ 18 ಸಾವಿರ ನಿಗದಿ ಸಾಮಾಜಿಕ ಭದ್ರತೆ ಮತ್ತು ಇತರ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸಿಐಟಿಯು ತಾಲ್ಲೂಕು ಘಟಕದ ನೇತೃತ್ವದಲ್ಲಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬುಧವಾರ ಪ್ರತಿಭಟನೆ ನಡೆಸಿದರು.

ಸಿಐಟಿಯು, ಆಶಾ ಕಾರ್ಯಕರ್ತರ ಸಂಘ ಮತ್ತು ವಿವಿಧ ಸಂಘಟನೆಗಳ ಆಶ್ರಯದಲ್ಲಿ ಬುಧವಾರ ಪಟ್ಟಣದ ಟಿಎಪಿಸಿಎಂಎಸ್‌ ಮೈದಾನದಿಂದ ಮಿನಿ ವಿಧಾನಸೌಧದವರೆಗೂ ರ್‍್ಯಾಲಿ ನಡೆಸುವ ಮೂಲಕ ಪ್ರಧಾನ ಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್‌ ಶಿವಶರಣಪ್ಪ ಕಟ್ಟೋಳಿ ಅವರಿಗೆ ಸಲ್ಲಿಸಿದರು.

ಆಶಾ ಕಾರ್ಯಕರ್ತರು, ಅಂಗನವಾಡಿ ನೌಕರರು ಮತ್ತು ಬಿಸಿ ಊಟ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಿ ಕನಿಷ್ಟ ವೇತನ ₹18 ಸಾವಿರ ರೂಪಾಯಿ ನಿಗದಿಪಡಿಸಬೇಕು, ಸೇವಾ ಭದ್ರತೆ, ಕಾರ್ಮಿಕ ಸಮ್ಮೇಳನ ಜಾರಿಗೊಳಿಸಿದ ಶಿಫಾರಸುಗಳನ್ನು ಕೂಡಲೇ ಜಾರಿಗೆ ತರಬೇಕು ಮತ್ತು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಕಾರ್ಮಿಕ ಒಕ್ಕೂಟದಿಂದ ಸಲ್ಲಿಸಲಾದ ಬೇಡಿಕೆಗಳನ್ನು ಹಂತ, ಹಂತವಾಗಿ ಈಡೇರಿಸಬೇಕು ಎಂಬ ಬೇಡಿಕೆಗಳನ್ನು ಮನವಿ ಪತ್ರವನ್ನು ಸಲ್ಲಿಸಲಾಯಿತು.

ಈರಮ್ಮ, ಗೌರಮ್ಮ, ವೈ.ಪಿ. ಸಾಗರ, ಹಾಜಬೀ, ರೇಣುಕಾ, ಬಸಲಿಂಗಮ್ಮ, ಹನುಮಂತಿ, ಲಕ್ಷ್ಮಿ, ರಂಗಮ್ಮ, ನಾಗರತ್ನ ಇದ್ದರು.

ಮಾನ್ವಿಯಲ್ಲೂ ಪ್ರತಿಭಟನೆ: ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಸುವಲ್ಲಿ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ದೇಶವ್ಯಾಪಿ ಮುಷ್ಕರವನ್ನು ಬೆಂಬಲಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಸದಸ್ಯೆಯರು ಎಐಟಿಯುಸಿ ಸಂಘಟನೆಯ ನೇತೃತ್ವದಲ್ಲಿ ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಆಶಾ, ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಿ ಮಾಸಿಕ ₹18ಸಾವಿರ ವೇತನ ನೀಡಬೇಕು. ₹3ಸಾವಿರ ನಿವೃತ್ತಿ ವೇತನದ ಜತೆಗೆ ಸಾಮಾಜಿಕ ಭದ್ರತೆ ಒದಗಿಸಬೇಕು. 45ನೇ ಭಾರತ ಕಾರ್ಮಿಕ ಸಮ್ಮೇಳನದ ಶಿಫಾರಸುಗಳನ್ನು ಜಾರಿಗೊಳಿಸಬೇಕು. ಕೇಂದ್ರ ಸರ್ಕಾರದ ಐಸಿಡಿಎಸ್‌, ಎನ್‌ಎಚ್‌ಎಂ, ಎಂಡಿಎಂ ನಂತಹ ಜನಕಲ್ಯಾಣ ಯೋಜನೆಗಳ ಅನುದಾನವನ್ನು ಹೆಚ್ಚಿಸಿ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳ ಮಾಡುವುದು ಸೇರಿದಂತೆ ಪ್ರಧಾನ ಮಂತ್ರಿಗೆ ಬರೆದ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ತಹಶೀಲ್ದಾರ್‌ ಅಮರೇಶ ಬಿರಾದಾರ ಅವರಿಗೆ ಸಲ್ಲಿಸಲಾಯಿತು.

ಆಶಾ ಕಾರ್ಯಕರ್ತೆಯರ ಸಂಘದ ಗೌರವಾಧ್ಯಕ್ಷ ಚೆನ್ನಬಸವ ಜಾನೇಕಲ್‌, ಜಿಲ್ಲಾ ಕಾರ್ಯದರ್ಶಿ ಈರಮ್ಮ, ತಾಲ್ಲೂಕು ಅಧ್ಯಕ್ಷೆ ಶ್ರೀದೇವಿ, ಇತರ ಪದಾಧಿಕಾರಿಗಳಾದ ಮಾರ್ಥಾ, ರಾಧಾ, ನರಸುಬಾಯಿ, ಸುಜಾತ ಕುರ್ಡಿ, ಶೈನಾಜ್‌, ಯಮನಮ್ಮ, ವಿಮಲಮ್ಮ, ಪಾರ್ವತಿ, ಸುಮಂಗಲಾ, ಕವಿತಾ ಭಾಗವಹಿಸಿದ್ದರು.

ಎಐಟಿಯುಸಿ ಪ್ರತಿಭಟನೆ: ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲ್ಲೂಕಿನ ಅಂಗನವಾಡಿ ಕಾರ್ಯರ್ತೆಯರು ಎಐಟಿಯುಸಿ ಸಂಘಟನೆಯ ನೇತೃತ್ವದಲ್ಲಿ ಬುಧವಾರ ಪಟ್ಟಣದಲ್ಲಿ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಇಎಸ್‌ಐ, ಭದ್ರತಾ ಠೇವಣಿ ಜತೆಗೆ ಮಾಸಿಕ ₹18ಸಾವಿರ ವೇತನ ನಿಗದಿಗೊಳಿಸಬೇಕು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ’ಸಿ ’ಮತ್ತು ’ಡಿ’ ದರ್ಜೆ ನೌಕರರೆಂದು ಘೋಷಿಸಬೇಕು. ಸೇವಾ ಅವಧಿ ಆಧರಿಸಿ ಗೌರವ ಧನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರಧಾನ ಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್‌ ಅಮರೇಶ ಬಿರಾದಾರ ಅವರಿಗೆ ಸಲ್ಲಿಸಲಾಯಿತು.

ಎಐಟಿಯುಸಿ ಸಂಘಟನೆಯ ಗೌರವಾಧ್ಯಕ್ಷ ಎಂ.ಬಿ.ಸಿದ್ರಾಮಯ್ಯ ಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಯ್ಯ ಸ್ವಾಮಿ, ತಾಲ್ಲೂಕು ಅಧ್ಯಕ್ಷೆ ಕಾಳಮ್ಮ, ಇತರ ಪದಾಧಿಕಾರಿಗಳಾದ ಚೆನ್ನಮ್ಮ, ದ್ರಾಕ್ಷಾಯಿಣಿ, ಲಕ್ಷ್ಮೀ ಕಸ್ತೂರಿ, ಸುಧಾ, ರೇಣುಕಾ, ಸಾವಿತ್ರಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry